Monday, May 26, 2025

ಸತ್ಯ | ನ್ಯಾಯ |ಧರ್ಮ

ಹಿಂದೂ ರಾಷ್ಟ್ರ ಬಹಳ ದೂರವಿಲ್ಲವೆಂಬ ಎಚ್ಚರಿಕೆಯ ಗಂಟೆ

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಸುಳ್ಳು ಆರೋಪ ಹೊರಿಸಲ್ಪಟ್ಟು, ಕಾನೂನು ಹೋರಾಟಗಳಲ್ಲಿ ಗೆದ್ದು ಬಂದವರ ಸರಣಿ ವರದಿಗಳಲ್ಲಿ ಒಂಬತ್ತನೇ ಲೇಖನ.

ಭಾಗ 1 | ಭಾಗ 2 | ಭಾಗ 3 | ಭಾಗ 4 | ಭಾಗ 5 | ಭಾಗ 6 | ಭಾಗ 7 | ಭಾಗ 8

ಒಂದು ವೇಳೆ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೂಡ, ಅದು ಹಿಂದುತ್ವಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡುವುದಿಲ್ಲ. ಏಕೆಂದರೆ ಅದು ಹಿಂದುತ್ವವನ್ನು ತಡೆದು ನಿಲ್ಲಿಸಬಹುದೇ ಹೊರತು, ಅದನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ.

ಕಳೆದ ತಿಂಗಳ ಕೊನೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿ, ಅದರ ಸ್ಥಾಪಕ ಕೆ.ಬಿ. ಹೆಡ್ಗೆವಾರ್ ಮತ್ತು ಅದರ ಎರಡನೇ ಸರಸಂಘಚಾಲಕ ಎಂ.ಎಸ್. ಗೋಲ್ವಾಲ್ಕರ್ ಅವರಿಗೆ ಗೌರವ ಸಲ್ಲಿಸಿದರು. ಜೊತೆಗೆ ಕಳೆದ ವಾರ, ಬಿಜೆಪಿಯು “ಜಾತ್ಯತೀತ” ಪಕ್ಷವಾದ ಜನತಾದಳ (ಸಂಯುಕ್ತ) ಮತ್ತು ತೆಲುಗು ದೇಶಂ ಪಕ್ಷಗಳು ಸೇರಿದಂತೆ ತನ್ನ ಎಲ್ಲಾ ಮಿತ್ರಪಕ್ಷಗಳ ಬೆಂಬಲದೊಂದಿಗೆ ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತು. ಈ ಎರಡೂ ಘಟನೆಗಳು ಮೇಲ್ನೋಟಕ್ಕೆ ಪರಸ್ಪರ ಸಂಬಂಧವಿಲ್ಲದವೆಂದು ಅನಿಸುತ್ತವೆಯಾದರೂ, ವಾಸ್ತವದಲ್ಲಿ ಅವು ಬಹಳ ಆಳವಾದ ಸಂಬಂಧ ಹೊಂದಿವೆ. ಅವು ಭಾರತ ಮುಂದೆ ಎದುರಿಸಲಿರುವ ಒಂದು ಕಠೋರ ಸಾಧ್ಯತೆಯ ಸೂಚನೆಗಳಾಗಿವೆ.

ಮೋದಿಯ ನಾಗ್ಪುರ ಭೇಟಿಯು ಮೋದಿ ಮತ್ತು ಆರ್‌ಎಸ್‌ಎಸ್ ನಡುವಿನ ಶೀತಲ ಸಮರದ ಕದನ ವಿರಾಮದಂತೆ ಭಾಸವಾದರೆ, ವಕ್ಫ್ ಮಸೂದೆಗೆ ಜೆಡಿಯು ಮತ್ತು ಟಿಡಿಪಿ ನೀಡಿದ ಪ್ರಶ್ನಾತೀತ ಬೆಂಬಲವು ಬಿಜೆಪಿಗೆ ಸಂಸತ್ತಿನಲ್ಲಿ ಬಹುಮತವಿಲ್ಲದಿದ್ದರೂ ತನ್ನ ಹಿಂದುತ್ವ ಅಜೆಂಡಾವನ್ನು ಮುಂದುವರಿಸಲು ಅದಕ್ಕೆ ಮುಕ್ತ ಅವಕಾಶವಿದೆ ಎಂಬುದನ್ನು ಸೂಚಿಸುತ್ತದೆ. ಬಿಜೆಪಿಯು ಈಗ ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಿರುವುದರಿಂದ ಅದರ ಹಿಂದುತ್ವ ಅಜೆಂಡಾಕ್ಕೆ ಕಡಿವಾಣ ಬೀಳುತ್ತದೆ ಎಂದು ನಂಬಿದ್ದವರು ತಮ್ಮ ನಂಬಿಕೆ ತಪ್ಪು ಎಂಬುದನ್ನು ಮನಗಂಡರು. ಜೊತೆಗೆ ಮೋದಿ ಮತ್ತು ಆರ್‌ಎಸ್‌ಎಸ್ ನಡುವಿನ ವಿರಸವನ್ನು ಸಂಘಪರಿವಾರದ ಅವನತಿಯೆಂದು ಭಾವಿಸಿದವರ ಕಥೆಯೂ ಇದೇ ಆಯಿತು. ಆರ್‌ಎಸ್‌ಎಸ್ ತನ್ನ ಗುರಿ ಮುಟ್ಟಲು ತನ್ನದೇ ಆದ ದಾರಿಗಳನ್ನು ಹೊಂದಿದೆ.

ಹಾಗಾಗಿ ದೇಶದಲ್ಲಿ ಯಾರು ಅಧಿಕಾರಕ್ಕೆ ಬಂದರೂ ಕೂಡ, ಭಾರತದ ಸಾಮಾಜಿಕ-ರಾಜಕೀಯ ಸ್ವರೂಪವನ್ನು ಹಿಂದುತ್ವಕ್ಕೆ ಅನುಕೂಲವಾಗುವಂತೆ ಬದಲಾಯಿಸುವ ಸಾಧ್ಯತೆ ಸದಾ ಅದರ ಮುಂದೆ ಇದೆ.

ಭಾರತದ ರಾಜಕೀಯ ವ್ಯವಸ್ಥೆಯನ್ನು ಉದಾರವಾದಿ ಜಾತ್ಯತೀತ ಕಲ್ಪನೆಯಿಂದ ಧರ್ಮ ಆಧಾರಿತ ಬಹುಸಂಖ್ಯಾತ ರಾಜಕೀಯಕ್ಕೆ ಪರಿವರ್ತಿಸುವ ಪ್ರಯತ್ನಗಳು ಬಿಜೆಪಿಯ ಕಳೆದ ಹನ್ನೊಂದು ವರ್ಷಗಳ ಆಡಳಿತದಲ್ಲಿ ವ್ಯಾಪಕವಾಗಿ ನಡೆಯುತ್ತಿವೆ. ಮೋದಿ ಮತ್ತು ಅವರ ದ್ವಿತೀಯ ನಾಯಕರಾದ ಗೃಹ ಸಚಿವ ಅಮಿತ್ ಶಾ ನೇತೃತ್ವದ ಬಿಜೆಪಿ ಸರ್ಕಾರವು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಸಂಘದ ಅಂತಿಮ ಗುರಿಯನ್ನು ಆಕ್ರಮಣಕಾರಿಯಾಗಿ ಸಾಕಾರಗೊಳಿಸುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಹಿಂದೂಗಳಿಂದ, ಹಿಂದೂಗಳಿಗಾಗಿ ಮತ್ತು ಹಿಂದೂಗಳ ರಾಷ್ಟ್ರ ಎಂಬುದು ಸಂಘದ ಅಂತಿಮ ಗುರಿ.

ಮೋದಿ ಸರ್ಕಾರವು ಸಾಂವಿಧಾನಿಕ, ಶಾಸಕಾಂಗ ಮತ್ತು ನ್ಯಾಯಾಂಗ ಮಾರ್ಗಗಳ ಮೂಲಕ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿತು, ತ್ರಿವಳಿ ತಲಾಖ್‌ ನಿಷೇಧಿಸಿತು, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸ್ಥಾಪಿಸಿತು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದಿತು ಮತ್ತು ವಕ್ಫ್ ಮಸೂದೆಯನ್ನು ಮಂಡಿಸಿತು. ಇನ್ನು ಏಕರೂಪ ನಾಗರಿಕ ಸಂಹಿತೆಯ ಹಿಂದೆ ಬೀಳುತ್ತದೆ.

ಈ ಮೂಲಕ ಬಜರಂಗದಳ, ವಿಶ್ವ ಹಿಂದೂ ಪರಿಷತ್ ತರದ ಕಿಡಿಗೇಡಿ ಸಂಘಟನೆಗಳು ದೇಶದಲ್ಲಿ ಬಹುಸಂಖ್ಯಾತ ಸಂಸ್ಕೃತಿಯನ್ನು ಹೇರಲು ಯಾವುದೇ ನಾಚಿಕೆಯಿಲ್ಲದೆ ಅವಕಾಶ ಮಾಡಿಕೊಟ್ಟಿತು. ಇದರ ಪರಿಣಾಮವಾಗಿ ಗೋರಕ್ಷಣೆಯ ಹೆಸರಿನಲ್ಲಿ ಗುಂಪು ಹಲ್ಲೆಗಳು, ಮುಸ್ಲಿಂ ಸಂಸ್ಥೆಗಳನ್ನು ಬಲವಂತವಾಗಿ ಮುಚ್ಚಿಸುವುದು, ಉದಾರವಾದಿ–ಜಾತ್ಯತೀತ ನಾಯಕರ ಮೇಲೆ ದೈಹಿಕ ಹಲ್ಲೆ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ದಾಳಿಗಳು ಮತ್ತು ದ್ವೇಷ ಭಾಷಣಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇತಿಹಾಸದ ಸುಳ್ಳು ವ್ಯಾಖ್ಯಾನವನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಹಿಂದೂಗಳನ್ನು ಬಲಿಪಶು ಎಂಬಂತೆ ಚಿತ್ರಿಸಿ ಪೀಡಕರ ಸ್ಥಾನದಲ್ಲಿ ಮುಸ್ಲಿಮರನ್ನು ಕೂರಿಸಿ ಅವರ ರಕ್ತಕ್ಕಾಗಿ ತಹತಹಿಸುವಂತೆ ಮಾಡಲಾಗುತ್ತಿದೆ.

ವಿವಿಧ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು ಸುಪ್ರೀಂ ಕೋರ್ಟ್ ಆದೇಶಗಳನ್ನೂ ಧಿಕ್ಕರಿಸಿ ಬುಲ್ಡೋಜರ್‌ಗಳನ್ನು ಬಳಸಿಕೊಂಡು ಮುಸ್ಲಿಮರ ಮನೆಗಳನ್ನು ಅಕ್ರಮವಾಗಿ ಕೆಡವುತ್ತಿವೆ. ಪ್ರಜಾಪ್ರಭುತ್ವವಾದಿ ಪ್ರತಿಭಟನಾಕಾರರಿಗೆ ರಾಷ್ಟ್ರವಿರೋಧಿಗಳೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಬಿಜೆಪಿಯ ಮುಖ್ಯಮಂತ್ರಿಗಳು, ಸಚಿವರು, ಸಂಸದರು, ಶಾಸಕರು ಮತ್ತು ಇತರ ಪದಾಧಿಕಾರಿಗಳು ಅಲ್ಪಸಂಖ್ಯಾತರ ಮೇಲೆ ಆರೋಪ ಹೊರಿಸುವ ಕಾಯಕದ ನಾಯಕತ್ವ ವಹಿಸುತ್ತಿದ್ದಾರೆ.

ಆದಾಯ ತೆರಿಗೆ ಕಾಯ್ದೆ, ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ ಮತ್ತು ವಿದೇಶಾಂಗ ಕಾಯ್ದೆಗಳಲ್ಲಿ ಬದಲಾವಣೆಗಳನ್ನು ತರಲಾಗುತ್ತಿದೆ.

2014ರಿಂದ ಮೋದಿ ನೇತೃತ್ವದಲ್ಲಿ ಬಿಜೆಪಿಯು ಹಾಕಿಕೊಟ್ಟಿರುವ ವರ್ಗೀಯ ಮತ್ತು ಕೋಮುವಾದಿ ಪಥವು ಈಗ ಒಂದು ನಿರ್ಣಾಯಕ ಹಂತಕ್ಕೆ ಬಂದಿರುವಂತೆ ಅನಿಸುತ್ತಿದೆ. ಆ ಹಂತ ಮರಳಿ ನಡೆಯಲಾಗದ ಹಿಂದೂ ರಾಷ್ಟ್ರವೆಂಬ ಆರ್‌ಎಸ್‌ಎಸ್‌ನ ಗುರಿ. ಅಲ್ಲಿ, ಹಿಂದೂ ಸ್ವರ ಮಾತ್ರ ಕೆಲಸ ಮಾಡುತ್ತದೆ. ಸ್ವಾತಂತ್ರ್ಯ ಹೋರಾಟದ ಮಹಾನಾಯಕರುಗಳು ಶ್ರಮವಹಿಸಿ ಬೆಳೆಸಿದ ಮತ್ತು ನಂತರದಲ್ಲಿ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾದ ಮೌಲ್ಯಗಳ ಕಡೆಗೆ ಭಾರತವನ್ನು ಮರಳಿ ಕೊಂಡೊಯ್ಯುವ ಸಾಧ್ಯತೆಗಳು ಬಹಳ ಕಡಿಮೆಯಾಗುತ್ತಿವೆ.

ಈ ಮೌಲ್ಯಗಳ ಬಗ್ಗೆ ಕಾಳಜಿ ವಹಿಸುವವರು ಈಗ ಸಮಯಕ್ಕೆ ಸರಿಯಾಗಿ ಎದ್ದು ನಿಲ್ಲದಿದ್ದರೆ, ಮುಂದೆ ಭಾರತದಲ್ಲಿ ಯಾರೇ ಆಡಳಿತ ನಡೆಸಿದರೂ ಆರ್‌ಎಸ್‌ಎಸ್‌ನ ಏಕವರ್ಣ ಮತ್ತು ಏಕಸಂಸ್ಕೃತಿಯ ಹಿಂದೂ ರಾಷ್ಟ್ರವು ಒಂದು ಅನಿವಾರ್ಯ ಸ್ಥಿತಿಯಾಗಿ ಬದಲಾಗುತ್ತದೆ. ಹಿಂದೂ ರಾಷ್ಟ್ರವನ್ನು ಸಾಕಾರಗೊಳಿಸಲು ಆರ್‌ಎಸ್‌ಎಸ್ ಒಟ್ಟು ವ್ಯಯಸ್ಥೆಯು ಬಿಜೆಪಿಯಿಂದಲೂ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ. ಅದು ಕಳೆದ ನೂರು ವರ್ಷಗಳಿಂದಲೂ ಅದರ ಕೈಯಲ್ಲಿದೆ. ಅಧಿಕಾರದ ನಿಯಂತ್ರಣವನ್ನು ತೆಕ್ಕೆಗೆ ತೆಗೆದುಕೊಳ್ಳಲು ತನ್ನ ಸರದಿಗಾಗಿ ಅದು ತಾಳ್ಮೆಯಿಂದ ಕಾಯುತ್ತಿದೆ. 2014ರ ಮೊದಲು, ಅದು ನಿಗೂಢವಾಗಿ ಕಾರ್ಯನಿರ್ವಹಿಸುತ್ತಿತ್ತು. ಹಿಂದೂಗಳೊಳಗೆ ಸಹಜವಾಗಿ ಅಂತರ್ಗತವಾಗಿರುವ ಜಾತ್ಯತೀತತೆಯನ್ನು ಇಲ್ಲವಾಗಿಸಲು ನಿಧಾನವಾಗಿ ಕೋಮುದ್ವೇಷವೆಂಬ ವಿಷವನ್ನು ತುರುಕಿಸುವ ಕಾರ್ಯಕ್ರಮವನ್ನು ಅದು ಹಾಕಿಕೊಂಡಿತ್ತು.

ತಮ್ಮನ್ನು ತಾವು ಜಾತ್ಯತೀತರು ಎಂದು ಕರೆದುಕೊಳ್ಳುವವರು, ವಿಶೇಷವಾಗಿ ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್‌, ಈ ಅವಧಿಯಲ್ಲಿ ನಿದ್ರೆ ಮಾಡುತ್ತಿದ್ದರು. ಆ ಮೂಲಕ ಆರ್‌ಎಸ್‌ಎಸ್‌ಗೆ ಅಗತ್ಯವಾಗಿ ಬೇಕಾಗಿದ್ದ ನಿರ್ಣಾಯಕ ಜನ ಸಮೂಹವನ್ನು ಎರಡು ಹಂತಗಳಲ್ಲಿ ಕ್ರೋಢೀಕರಿಸಲು ಅವರೆಲ್ಲ ಅವಕಾಶ ಮಾಡಿಕೊಟ್ಟರು.

ಇದರ ಮೊದಲ ಹಂತವು ಅರವಿಂದ್ ಕೇಜ್ರಿವಾಲ್ ತರದ ಅನುಯಾಯಿಗಳನ್ನು ಮುಂದಿಟ್ಟುಕೊಂಡು ಅಣ್ಣಾ ಹಜಾರೆ ನಡೆಸಿದ ಭ್ರಷ್ಟಾಚಾರದ ವಿರುದ್ಧದ ಚಳುವಳಿಯೆಂಬ ಪ್ರಹಸನದಿಂದ ಶುರುವಾಯಿತು. ಆರ್‌ಎಸ್‌ಎಸ್ ಅಲ್ಲಿ ಅದೃಶ್ಯ ನಾಯಕತ್ವವನ್ನು ವಹಿಸಿತ್ತು. ಎರಡನೆ ಹಂತವು ಕೊನೆಗೊಳ್ಳುವುದು ನರೇಂದ್ರ ಮೋದಿಯನ್ನು ಭಾರತದ ದಿಕ್ಕು ಬದಲಾಯಿಸಬಲ್ಲ ಮಹಾನ್ ಹಿಂದೂ ನಾಯಕ ಎಂದು ಬಿಂಬಿಸುವ ಮೂಲಕ. ಜನರು ಇದಕ್ಕೆ ಬಲಿಯಾಗಿ ಭಾರತವನ್ನು ಆರ್‌ಎಸ್‌ಎಸ್‌ನ ಮಡಿಲಿಗೆ ಹಾಕಿ ಬಿಟ್ಟರು.

ಅಧಿಕಾರಕ್ಕೆ ಬಂದ ನಂತರ, ಆರ್‌ಎಸ್‌ಎಸ್ ತನ್ನ ರಾಜಕೀಯ ಅಂಗವಾದ ಬಿಜೆಪಿಯ ಮೂಲಕ ತನ್ನ ಹಿಂದೂ ರಾಷ್ಟ್ರ ಯೋಜನೆಯನ್ನು ಮತ್ತೆ ಚಲಾವಣೆಗೆ ತಂದು ಬಿಟ್ಟಿತು. ಭಯೋತ್ಪಾದಕರ ದಾಳಿ ನಡೆದ ದಿನ ಹಲವು ಬಾರಿ ಬಟ್ಟೆ ಬದಲಾಯಿಸಿದರೆಂಬ ಕಾರಣಕ್ಕೆ ಕೇಂದ್ರ ಸಚಿವರು ರಾಜಿನಾಮೆ ನೀಡಬೇಕೆಂಬ ಒತ್ತಾಯಿದ ಕೂಗು ಎದ್ದಿದ್ದ ದೇಶದಲ್ಲಿ, ಮಹಾತ್ಮ ಗಾಂಧಿಯ ಹಂತಕ, ಭಾರತದ ಮೊದಲ ಭಯೋತ್ಪಾದಕ ನಾಥುರಾಮ್ ಗೋಡ್ಸೆಯ ಅನುಯಾಯಿಯೊಬ್ಬನನ್ನು ದೇಶದ ಸಂಸತ್ತಿಗೆ ಆರಿಸಿ ಕಳುಹಿಸಲಾಯಿತು. ಪ್ರಧಾನಮಂತ್ರಿ ಕೂಡ, ಭಾರತದ ಮುಸ್ಲಿಮರ ಬಗ್ಗೆ ಅಪಹಾಸ್ಯ ಮತ್ತು ವ್ಯಂಗ್ಯೋಕ್ತಿಗಳನ್ನು ಬಳಸಿ ಅಣಕಿಸುವ ರೀತಿಯಲ್ಲಿ ಮಾತನಾಡಲು ಶುರು ಮಾಡಿಬಿಟ್ಟರು.

ಮುಸ್ಲಿಮರ ಮೇಲಿನ ಹಿಂಸಾಚಾರ ಮತ್ತು ಹತ್ಯೆಗಳಿಗೆ ನೀಡುವ ಬಹಿರಂಗ ಪ್ರಚೋದನೆಗಳು ಮತ್ತು ಆಹ್ವಾನಗಳಿಗೆ ಶಿಕ್ಷೆಯೆಂಬುದು ಇಲ್ಲವೇ ಇಲ್ಲವಾಗಿದೆ. ಬದಲಾಗಿ ಇಂತಹ ಆಹ್ವಾನಗಳ ವಿರುದ್ಧ ಮತ್ತು ಪ್ರಜಾಪ್ರಭುತ್ವಕ್ಕಾಗಿ ಧ್ವನಿ ಎತ್ತುವವರನ್ನು ಬಲವಂತವಾಗಿ ಮತ್ತು ದಮನದ ಮೂಲಕ ಸದ್ದಡಗಿಸಲು ಪ್ರಯತ್ನಿಸಲಾಗುತ್ತಿದೆ. ಬಿಜೆಪಿ ಸಂಸದನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಕ್ಕಾಗಿ ದೆಹಲಿಯ ಬೀದಿಗಳಲ್ಲಿ ಪೊಲೀಸರು ಭಾರತದ ಅತ್ಯುತ್ತಮ ಮಹಿಳಾ ಕುಸ್ತಿಪಟುಗಳನ್ನು ಎಳೆದೊಯ್ದರು. ಆ ಮೂಲಕ ತನ್ನ ಬೆದರಿಸುವ ಆಡಳಿತವನ್ನು ಸಾರ್ವಜನಿಕವಾಗಿ ತೋರ್ಪಡಿಸಿದರು. ಒಂದು ದಶಕದ ಹಿಂದೆ ನಡೆದ ನಿರ್ಭಯಾ ಪ್ರಕರಣದ ವಿರುದ್ಧ ಭಾರಿ ಪ್ರತಿಭಟನೆಗಳನ್ನು ಕಂಡ ಅದೇ ದೇಶದಲ್ಲಿ ಇದೂ ಕೂಡ ಸಂಭವಿಸಿತು.

ಹಾಗಾದರೆ, ಒಂದು ದಶಕದೊಳಗೆ ನಡೆದ ಈ ಬದಲಾವಣೆಗೆ ಕಾರಣವೇನು?

ಇದಕ್ಕಿರುವ ಒಂದೇ ವಿವರಣೆಯೆಂದರೆ, ಆರೆಸ್ಸೆಸ್ ಪರಿವಾರವು ಭಾರತದ ನಾಗರಿಕತೆಯ ಬೇರುಗಳನ್ನು ಅದಾಗಲೇ ಕೊರೆದು ಅದರ ಮೇಲೆ ತನ್ನದೇ ಆದ ನಿರ್ಮಿತಿಯನ್ನು ರೂಪಿಸಿಕೊಂಡಿದೆ. ಹಾಗಾಗಿ, ಆರ್‌ಎಸ್‌ಎಸ್‌ನ ಧ್ವನಿವರ್ಧಕಗಳಾಗಿ ಕೆಲಸ ಮಾಡಲು ನಮ್ಮದೇ ನೆರೆಮನೆಯ ಗೆಳೆಯರೂ ಸೇರಿದಂತೆ ಒಂದು ಸಮೂಹವೇ ತಯಾರಾಗಿ ನಿಂತಿತ್ತು. ಅವರೆಲ್ಲ ಈಗ ದ್ವೇಷ ರಾಜಕಾರಣವನ್ನು ಮುಕ್ತವಾಗಿ ಬೆಂಬಲಿಸುತ್ತಿದ್ದಾರೆ.

ಹಣ, ಬಲ ಮತ್ತು ಪ್ರಚಾರಗಳನ್ನು ಬಳಸಿಕೊಂಡು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಅಡಿಪಾಯವಕ್ಕೇ ಕೊಳ್ಳಿಯಿಡುವ ಮೂಲಕ ಅತ್ಯಂತ ಅಸಹ್ಯಕರ ಸಂಗತಿಗಳನ್ನೂ ಕೂಡ ಸಾಮಾನ್ಯೀಕರಿಸಿದರು. ವಿರೋಧ ಪಕ್ಷಗಳು ಕೂಡ ತಾವು ಜೈಲುಪಾಲಾಗದಿರಲು ಅಥವಾ ತಮ್ಮ ಹಿಂದೂ ಓಟ್‌ಬ್ಯಾಂಕ್‌ ಕೈ ತಪ್ಪಿ ಹೋಗದಿರಲು ಎಚ್ಚರಿಕೆಯಿಂದ ಹೆಜ್ಜೆ ಹಾಕಲು ನಿರ್ಧರಿಸಿದವು.

ವಿಷಯದ ತಿರುಳು ಇಲ್ಲೇ ಇರುವುದು. ಆರ್‌ಎಸ್‌ಎಸ್ ಪರಿವಾರವು ದೇಶವನ್ನು ಯಾವ ಸ್ಥಿತಿಗೆ ತಂದು ನಿಲ್ಲಿಸಿದೆಯೆಂದರೆ, ಅಲ್ಲಿ ಬಹುತೇಕ ವಿರೋಧ ಪಕ್ಷಗಳು ಈ ಹಿಂದುತ್ವದ ಗೂಳಿಯನ್ನು ಹಿಡಿದು ನಿಲ್ಲಿಸಲು ಸಿದ್ಧರಿಲ್ಲ. ಇದು ಬಿಜೆಪಿಯ ಮಿತ್ರಪಕ್ಷಗಳ ಬಗ್ಗೆ ಹೇಳುತ್ತಿರುವ ಮಾತಲ್ಲ. ಹಿಂದುತ್ವದ ಪ್ರಭಾವದಲ್ಲಿದೆ ಎಂದು ತಾವು ಅಂದುಕೊಂಡಿರುವ ಹಿಂದೂ ಮತಗಳನ್ನು ಕಳೆದುಕೊಳ್ಳುವ ಭಯದಿಂದಲೇ ಬಹುತೇಕ ವಿರೋಧ ಪಕ್ಷಗಳು ಮುಸ್ಲಿಮರ ಪರವಾಗಿ ನಿಲ್ಲಲು ಸಿದ್ಧರಿಲ್ಲ. ಆದರೆ ಈ ಲೆಕ್ಕಾಚಾರ ಕೂಡ ತಪ್ಪು. ಬಹುಸಂಖ್ಯೆಯ ಹಿಂದೂಗಳು ಈಗಲೂ ಬಿಜೆಪಿಗೆ ಮತ ಹಾಕುತ್ತಿಲ್ಲ. ಹಾಗಾಗಿಯೇ ಅದರ ಶೇಕಡಾವಾರು ಮತಗಳಿಕೆ ಇನ್ನೂ 38% ದಾಟಿಲ್ಲ.

ಆದರೆ ವಿರೋಧ ಪಕ್ಷಗಳು, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್, ತನ್ನ ಜಾತ್ಯತೀತತೆಯನ್ನು ಬಹಿರಂಗವಾಗಿ ಪ್ರದರ್ಶಿಸಿದರೆ ಆ ಮತಗಳನ್ನೂ ಉಳಿಸಿಕೊಳ್ಳುವ ಬಗ್ಗೆ ಅದಕ್ಕೆ ಖಚಿತವಿಲ್ಲ. ಅದಕ್ಕಾಗಿಯೇ ಅದು ಯಾವಾಗಲೂ ಹಿಂದೆ ಸರಿಯುತ್ತದೆ. ಬಿಜೆಪಿಯ ಕೋಮುವಾದಿ ಎಸೆತಗಳನ್ನು ಸುರಕ್ಷಿತವಾಗಿ ಆಡಲು ಆದ್ಯತೆ ನೀಡುತ್ತದೆ. ಒಮ್ಮೆಯೂ ಎತ್ತಿ ಬೀಸಿ ಬೌಂಡರಿಯ ಆಚೆಗೆ ಹೊಡೆಯಲು ಅದು ಪ್ರಯತ್ನಿಸುವುದಿಲ್ಲ. ಅದಕ್ಕೆ ಯಾವಾಗಲೂ ಕ್ಯಾಚ್ ಔಟ್ ಆಗುವ ಭಯ. ಈ ತಂತ್ರದ ಮೂಲಕ, ವಿರೋಧ ಪಕ್ಷಗಳು ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದು. ಆದರೆ ಗೆಲ್ಲುವುದು ಮಾತ್ರ ಎಂದಿಗೂ ಸಾಧ್ಯವಿಲ್ಲ. ಆರ್‌ಎಸ್‌ಎಸ್ ಬಯಸುವುದು ಕೂಡ ಇದನ್ನೇ. ಅದು ವಿರೋಧ ಪಕ್ಷದ ಮಾನಸಿಕ ಬಲವನ್ನು ಕುಗ್ಗಿಸಿದೆ ಎಂಬುದು ಇಲ್ಲಿ ಬಹಳ ಸ್ಪಷ್ಟ.

ಒಂದು ವೇಳೆ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೂಡ, ಅದು ಹಿಂದುತ್ವಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡುವುದಿಲ್ಲ. ಏಕೆಂದರೆ ಅದು ಹಿಂದುತ್ವವನ್ನು ತಡೆದು ನಿಲ್ಲಿಸಬಹುದೇ ಹೊರತು, ಅದನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಆರ್‌ಎಸ್‌ಎಸ್ ಪರಿವಾರವು ಅದನ್ನು ಮುಂದಕ್ಕೆ ಕೊಂಡೊಯ್ಯಲು ಇನ್ನೊಂದು ದಿನ ಗೊತ್ತು ಮಾಡಿಕೊಂಡಿರುತ್ತದೆ. ಪರಿಸ್ಥಿತಿ ಇನ್ನೂ ಬಿಗಡಾಯಿಸಿದರೆ ಏಬಾಗಬಹುದು? ವಿರೋಧ ಪಕ್ಷಗಳ ನಾಯಕರೇ ಸ್ವತಃ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಹಿಂದುತ್ವದ ಜಾಗವನ್ನು ಆಕ್ರಮಿಸಿಕೊಳ್ಳಬಹುದು. ಇದರಿಂದ ಆರ್‌ಎಸ್‌ಎಸ್‌ಗೆ ಲಾಭವೇ ಹೊರತು ನಷ್ಟವಿಲ್ಲ.

“ಜೋ ಹಿಂದೂ ಹಿತ್ ಕಿ ಬಾತ್ ಕರೇಗಾ, ವೋ ಭಾರತ್ ಪರ್ ರಾಜ್ ಕರೇಗಾ (ಹಿಂದೂಗಳ ಹಿತವನ್ನು ಕಾಯುವವರು ಭಾರತವನ್ನು ಆಳುತ್ತಾರೆ)” ಎಂಬ ಘೋಷಣೆಯನ್ನು ಅವರು ಸುಮ್ಮನೆ ಕಟ್ಟಿಕೊಂಡಿರುವುದಲ್ಲ.

ಸ್ಪಷ್ಟವಾಗಿ ಹೇಳಬೇಕೆಂದರೆ, ವಿರೋಧ ಪಕ್ಷಗಳು ಇದನ್ನು ಸೈದ್ಧಾಂತಿಕ ಹೋರಾಟವೆಂದು ಪರಿಗಣಿಸವುದೇ ಆದರೆ, ತಮ್ಮ ಎಲ್ಲ ಪ್ರಯತ್ನಗಳನ್ನು ಒಟ್ಟುಗೂಡಿಸಬೇಕಾದ ತುರ್ತು ಸಮಯ ಈಗಲ್ಲದೆ ಇನ್ನೊಮ್ಮೆ ಸಿಗದು. ಭಾರತವನ್ನು ಶಾಶ್ವತವಾಗಿ ಕೋಮುವಾದೀಕರಣಗೊಳ್ಳದಂತೆ ಉಳಿಸಿಕೊಳ್ಳಬೇಕಾದರೆ, ಅದಕ್ಕೆ ಮಾಡಬೇಕಾದ ಕೆಲಸಗಳನ್ನು ಮಾಡಲು ಇನ್ನು ಬಹಳ ಸಮಯ ಇಲ್ಲವೇ ಇಲ್ಲ. ಒಂದೆರಡು ವರ್ಷಗಳು ಕೂಡ ತೆಗೆದುಕೊಳ್ಳಬಾರದು. ರಾಹುಲ್ ಗಾಂಧಿ 50 ವರ್ಷಗಳ ಹೋರಾಟದ ಬಗ್ಗೆ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಅನ್ನು ನಿರ್ಲಕ್ಷಿಸುವ ಮೂಲಕ 2014ಕ್ಕಿಂತ ಮೊದಲು 50ಕ್ಕೂ ಹೆಚ್ಚು ವರ್ಷಗಳನ್ನು ನಾವು ಕಳೆದುಕೊಂಡು ಆಗಿದೆ ಎಂಬುದನ್ನು ಅವರು ಮೊದಲು ಅರಿತುಕೊಳ್ಳಬೇಕು. ವಿರೋಧ ಪಕ್ಷಗಳು ಮತ್ತು ಇತರ ಪ್ರಜಾಪ್ರಭುತ್ವ ಶಕ್ತಿಗಳು ಆರ್‌ಎಸ್‌ಎಸ್ ಅನ್ನು ಅದರ ಶತಮಾನೋತ್ಸವದ ಸಂದರ್ಭದಲ್ಲಾದರೂ ನಿರ್ಣಾಯಕವಾಗಿ ಎದುರಿಸಲು ಪ್ರಾರಂಭಿಸದಿದ್ದರೆ, 50 ವರ್ಷಗಳ ನಂತರ 150 ವರ್ಷಗಳನ್ನು ಆಚರಿಸಲು ಸಂಘವು ಇಲ್ಲಿ ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಉಳಿದಿರುತ್ತದೆ. ಬಹುಶಃ ಆ ಹೊತ್ತಿಗೆ ಹಿಂದುತ್ವ ವಾಯೇಜರ್ ತನ್ನ ಗುರಿ ತಲುಪಿ ಅನಶ್ವರತೆಯನ್ನು ಸಾಧಿಸಿಕೊಂಡು ಬಿಟ್ಟಿರಬಹುದೇನೋ!

ವಿವೇಕ್ ದೇಶಪಾಂಡೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ನಿವೃತ್ತ ಸಹಾಯಕ ಸಂಪಾದಕರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page