Monday, May 26, 2025

ಸತ್ಯ | ನ್ಯಾಯ |ಧರ್ಮ

ಮಲೆನಾಡಿನಲ್ಲಿ ವರುಣನ ಆರ್ಭಟ: ಭೂಕುಸಿತ, ಶಿರಾಡಿ ವಾಹನ ಸಂಚಾರ ಅಸ್ತವ್ಯಸ್ತ

ಹಾಸನ : ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.ಸಕಲೇಶಪುರ, ಆಲೂರು, ಬೇಲೂರು ಮತ್ತು ಹಾಸನ ತಾಲ್ಲೂಕುಗಳಲ್ಲಿ ವರುಣನ ಅಬ್ಬರದಿಂದಾಗಿ ರೈತರು, ವಾಹನ ಸವಾರರು ತತ್ತರಿಸಿದ್ದಾರೆ.ಬೇಲೂರು ತಾಲ್ಲೂಕಿನ ಕುಪ್ಲೋಡು ಗ್ರಾಮದಲ್ಲಿ ಕೆರೆ ಕೋಡಿ ಹೊಡೆದ ಪರಿಣಾಮ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ಸುಮಾರು 60 ಎಕರೆಗೂ ಅಧಿಕ ಗದ್ದೆ ಮತ್ತು ತೆಂಗಿನ ತೋಟಗಳಿಗೆ ನೀರು ನುಗ್ಗಿ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ರೈತರು ತೀವ್ರ ನಷ್ಟ ಅನುಭವಿಸಿದ್ದು, ಕೃಷಿ ಇಲಾಖೆಯಿಂದ ಸಹಾಯಕ್ಕಾಗಿ ಕಾಯುತ್ತಿದ್ದಾರೆ.

ಬಿರುಗಾಳಿ, ವಿದ್ಯುತ್ ಸಂಪರ್ಕ ಕಡಿತ:ಬಿರುಗಾಳಿಯೊಂದಿಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಕಲೇಶಪುರ ಮತ್ತು ಬೇಲೂರು ತಾಲ್ಲೂಕುಗಳ ಹಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿವೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು, ಜನರು ಮನೆಯಿಂದ ಹೊರಬರಲಾಗದ ದುಸ್ಥಿತಿಯಲ್ಲಿದ್ದಾರೆ. ರಸ್ತೆಯಲ್ಲಿ ಚಾಲಕರಿಗೆ ದಾರಿ ಕಾಣಿದಂತೆ ಸುರಿಯುತ್ತಿರುವ ಮಳೆಯಿಂದ ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ : ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎರಡು ಕಡೆ ಭೂಕುಸಿತ ಉಂಟಾಗಿದೆ. ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ತಡೆಗೋಡೆ ಇದ್ದರೂ ಮಣ್ಣು ಕುಸಿಯುತ್ತಿದ್ದು, ಒಂದು ಬದಿ ವಾಹನ ಸಂಚಾರ ಸ್ಥಗಿತಗೊಂಡಿದ್ದು ವಾಹನ ದಟ್ಟಣೆಯಿಂದ ನೂರಾರು ವಾಹನಗಳು ನಿಂತಲ್ಲೆ ನಿಂತಿವೆ. ಡಿವೈಎಸ್ಪಿ ಪ್ರಮೋದ್ ಜೈನ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಂಚಾರ ಸುಗಮಗೊಳಿಸಲು ಯತ್ನಿಸುತ್ತಿದ್ದಾರೆ.

ಜನಜೀವನ ಅಸ್ತವ್ಯಸ್ತ: ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಕ್ಷೀಣಿಸಿದೆ. ಮಳೆಯ ತೀವ್ರತೆಯಿಂದಾಗಿ ಸ್ಥಳೀಯ ಆಡಳಿತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಪರಿಹಾರ ಮತ್ತು ಸಂತ್ರಸ್ತರಿಗೆ ಸಹಾಯದ ವಿಷಯದಲ್ಲಿ ತುರ್ತು ಕ್ರಮಕ್ಕೆ ಮುಂದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page