Monday, June 9, 2025

ಸತ್ಯ | ನ್ಯಾಯ |ಧರ್ಮ

ನ್ಯೂನ್ಯತೆಗಳ ನಡುವೆಯೂ ಕೊಲಿಜಿಯಂ ವ್ಯವಸ್ಥೆ ನ್ಯಾಯಾಂಗದ ಸ್ವಾಯತ್ತತೆಯನ್ನು ರಕ್ಷಿಸುತ್ತಿದೆ: ಜಸ್ಟೀಸ್ ಸೂರ್ಯಕಾಂತ್‌

ನವದೆಹಲಿ: ನ್ಯಾಯಾಧೀಶರ ನೇಮಕಾತಿಯನ್ನು ನಿರ್ವಹಿಸುವ ಕೊಲಿಜಿಯಂ ವ್ಯವಸ್ಥೆಯು ನ್ಯಾಯವ್ಯವಸ್ಥೆಯ ಸ್ವಾಯತ್ತತೆಯನ್ನು ರಕ್ಷಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜಸ್ಟೀಸ್ ಸೂರ್ಯಕಾಂತ್‌ ಹೇಳಿದ್ದಾರೆ.

ಎಷ್ಟೇ ದೋಷಗಳು ಮತ್ತು ಕೊರತೆಗಳಿದ್ದರೂ, ಈ ವ್ಯವಸ್ಥೆಯು ಪ್ರಮುಖ ಸಾಂಸ್ಥಿಕ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಶನಿವಾರ ಸಿಯಾಟಲ್ ವಿಶ್ವವಿದ್ಯಾಲಯದಲ್ಲಿ “ನಿಶ್ಶಬ್ದ ಕಾವಲುಗಾರ: ನ್ಯಾಯಾಲಯಗಳು, ಪ್ರಜಾಪ್ರಭುತ್ವ ಮತ್ತು ಗಡಿರೇಖೆಗಳ ನಡುವಿನ ಚರ್ಚೆಗಳು” ಎಂಬ ವಿಷಯದ ಕುರಿತು ಜಸ್ಟೀಸ್ ಸೂರ್ಯಕಾಂತ್‌ ಭಾಷಣ ಮಾಡಿದರು.

ಕೊಲಿಜಿಯಂ ವ್ಯವಸ್ಥೆಯು ಸರ್ಕಾರ ಮತ್ತು ಶಾಸನಸಭೆಯ ಹಸ್ತಕ್ಷೇಪವನ್ನು ಗಣನೀಯವಾಗಿ ಮಿತಿಗೊಳಿಸುತ್ತಿದೆ, ಇದರಿಂದ ನ್ಯಾಯವ್ಯವಸ್ಥೆಯ ಸ್ವಾತಂತ್ರ್ಯವನ್ನು ಕಾಪಾಡುತ್ತಿದೆ ಎಂದು ಅವರು ಹೇಳಿದರು. ನ್ಯಾಯಾಧೀಶರ ನಿಷ್ಪಕ್ಷತೆಗೆ ಧಕ್ಕೆ ತರುವಂತೆ ಬಾಹ್ಯ ಒತ್ತಡಗಳು ಕಾರ್ಯನಿರ್ವಹಿಸದಂತೆ ಇದು ರಕ್ಷಣೆ ಒದಗಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಸುಪ್ರೀಂ ಕೋರ್ಟ್‌ನ ಇತ್ತೀಚಿನ ಪ್ರಯತ್ನಗಳು ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಜನರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಅದಕ್ಕೆ ಇರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು. ಕೆಲವೊಮ್ಮೆ ನ್ಯಾಯಾಂಗ ಸಕ್ರಿಯತೆ ಮತ್ತು ನ್ಯಾಯಾಂಗ ಅತಿಕ್ರಮಣದ ನಡುವಿನ ಸೂಕ್ಷ್ಮ ರೇಖೆಯನ್ನು ಉಲ್ಲಂಘಿಸುತ್ತಿದೆ ಎಂಬ ಟೀಕೆಗಳಿಗೆ ನ್ಯಾಯಾಂಗವು ಯಾವುದೇ ರೀತಿಯಲ್ಲಿ ಹೊರತಲ್ಲ ಎಂದು ಅವರು ಒಪ್ಪಿಕೊಂಡರು.

ನ್ಯಾಯಾಂಗವ್ಯವಸ್ಥೆಯು ಸಂವಿಧಾನಾತ್ಮಕ ನೈತಿಕತೆಯ ಕಾವಲುಗಾರನಾಗಿದೆ ಎಂದು ಅವರು ವಿವರಿಸಿದರು. ಪ್ರಜಾಪ್ರಭುತ್ವದ ನೈತಿಕತೆಯನ್ನು ರೂಪಿಸುವಲ್ಲಿ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯಗಳ ಪಾತ್ರದ ಬಗ್ಗೆ ಮಾತನಾಡುತ್ತಾ, “ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ, ಬಹುಸಂಖ್ಯಾತರು ಪರೀಕ್ಷೆಗೆ ಒಳಪಡುವ, ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುವ ವ್ಯವಸ್ಥೆ ಇರುತ್ತದೆ. ಜನಪ್ರಿಯತೆಯ ಹೆಸರಿನಲ್ಲಿ ತತ್ವಗಳನ್ನು ಮತ್ತು ಸಿದ್ಧಾಂತಗಳನ್ನು ತ್ಯಾಗ ಮಾಡಲಾಗದು. ಅಂತಹ ವ್ಯವಸ್ಥೆಯಲ್ಲಿ ನ್ಯಾಯಾಲಯಗಳು ಕೇವಲ ರೆಫರಿಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ” ಎಂದು ಅವರು ವಿವರಿಸಿದರು.

ಭಾರತದಂತಹ ವಿಶಾಲವಾದ, ವೈವಿಧ್ಯಮಯ ಪ್ರಜಾಪ್ರಭುತ್ವದಲ್ಲಿ, ನ್ಯಾಯವ್ಯವಸ್ಥೆಯು ತನ್ನ ಅಧಿಕಾರಗಳನ್ನು ವಿಪರೀತವಾಗಿ ಬಳಸದೆ, ಸ್ಪಷ್ಟವಾದ ಆತ್ಮಸಾಕ್ಷಿಯನ್ನು ಹೊಂದಿದಾಗ ಮಾತ್ರ, ನಮ್ಮ ಸಾಮೂಹಿಕ ಪ್ರಜಾಪ್ರಭುತ್ವದ ಪಯಣದಲ್ಲಿ ವಿಶ್ವಾಸಾರ್ಹ ಧ್ವನಿಯಾಗಿ ಕೇಳಿಬರುತ್ತದೆ ಎಂದು ಜಸ್ಟೀಸ್ ಸೂರ್ಯಕಾಂತ್‌ ಒತ್ತಿಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page