Saturday, June 15, 2024

ಸತ್ಯ | ನ್ಯಾಯ |ಧರ್ಮ

ಚಂಡೀಗಢ ವಿವಿಯಲ್ಲಿ ಆಕ್ಷೇಪಾರ್ಹ ವಿಡಿಯೋ ಸೆರೆಹಿಡಿದ ಬಗ್ಗೆ ಬುಗಿಲೆದ್ದ ಆಕ್ರೋಶ

ಹಾಸ್ಟೆಲ್ ವಿದ್ಯಾರ್ಥಿಗಳ ಆಕ್ಷೇಪಾರ್ಹ ವೀಡಿಯೋಗಳನ್ನು ಸಾರ್ವಜನಿಕಗೊಳಿಸಿದ ಆರೋಪದ ಮೇಲೆ ಚಂಡೀಗಢ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿನಿಯನ್ನು ಪಂಜಾಬ್ ಪೊಲೀಸರು ಸೆಪ್ಟೆಂಬರ್ 18 ರಂದು ಬಂಧಿಸಿದ್ದಾರೆ. ಹಾಸ್ಟೆಲ್‌ ವಿದ್ಯಾರ್ಥಿಗಳು ತಮ್ಮ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ ಎಂದು ದೂರು ಕೊಟ್ಟ ನಂತರ ವಿದ್ಯಾರ್ಥಿನಿಯ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಪ್ರತಿಭಟನೆಗಳು ಭುಗಿಲೆದ್ದಿದ್ದು, ತನಿಖೆಗೂ ಆದೇಶಿಸಲಾಗಿದೆ.

ವಿದ್ಯಾರ್ಥಿನಿಯೊಬ್ಬಳು ತನ್ನ ಮೊಬೈಲ್ ಬಳಸಿ ವಿದ್ಯಾರ್ಥಿಗಳು ಸ್ನಾನ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಸೋರಿಕೆಯಾದ ವೀಡಿಯೊಗಳ ಬಗ್ಗೆ ಗಲಾಟೆ ಭುಗಿಲೆದ್ದಂತೆ, ಪೊಲೀಸರು ಕಾರ್ಯಾಚರಣೆಗೆ ಇಳಿದು ಹುಡುಗಿಯನ್ನು ಬಂಧಿಸಿದರು. ಆರೋಪಿಯನ್ನು ಬಂಧಿಸಿದ ಕೂಡಲೇ ಪಂಜಾಬ್‌ನ ಉನ್ನತ ಶಿಕ್ಷಣ ಸಚಿವ ಗುರ್ಮೀತ್‌ ಸಿಂಗ್‌ ಮೀತ್‌ ಹೇಯರ್‌ ಅವರು ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಇನ್ನು ಹಾಸ್ಟೆಲ್ ನಲ್ಲಿ ಈ ರೀತಿಯ ಅವ್ಯವಸ್ಥೆ ಇರುವ ಬಗ್ಗೆ ಸಾರ್ವಜನಿಕವಾಗಿ ತೀವ್ರ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಪೋಷಕರು ಮತ್ತು ಸಾರ್ವಜನಿಕರ ಜೊತೆಗೂಡಿ ಚಂಡೀಗಢ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶಾದ್ಯಂತ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ.

ಶನಿವಾರ ರಾತ್ರಿಯಿಂದಲೇ ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಆವರಣದಲ್ಲಿ ಸೋರಿಕೆಯಾದ ಕ್ಲಿಪ್‌ಗಳ ಕುರಿತು ಬೃಹತ್ ಪ್ರತಿಭಟನೆ ಭುಗಿಲೆದ್ದಿತು. ಈ ನಡುವೆ ಸೋರಿಕೆಯಾದ ವಿಡಿಯೋದಲ್ಲಿ ಇರುವ ವಿದ್ಯಾರ್ಥಿಗಳು ಆತ್ಮಹತ್ಯೆ ಯತ್ನಕ್ಕೆ ಕೈಹಾಕಿದ ಬಗ್ಗೆ ಸುದ್ದಿಗಳು ಹರಿದಾಡಿತ್ತು. ಆದರೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಆತ್ಮಹತ್ಯೆ ಯತ್ನದ ಹೇಳಿಕೆಯನ್ನು ಪೊಲೀಸರು ಅಲ್ಲಗಳೆದಿದ್ದಾರೆ.

ಈ ನಡುವೆ ಬಾಲಿವುಡ್ ಚಿತ್ರನಟ ಸೋನು ಸೂದ್ ಸಂತ್ರಸ್ತ ವಿದ್ಯಾರ್ಥಿಗಳ ಪರವಾಗಿ ನಿಲ್ಲುವಂತೆ ಟ್ವಿಟ್ ಮಾಡಿ ನೆಟ್ಟಿಗರನ್ನು ಒತ್ತಾಯಿಸಿದ್ದಾರೆ. “ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ದುರ್ಘಟನೆ ತುಂಬಾ ದುರದೃಷ್ಟಕರ. ನಾವು ನಮ್ಮ ಸಹೋದರಿಯರೊಂದಿಗೆ ನಿಂತು ಜವಾಬ್ದಾರಿಯುತ ಸಮಾಜಕ್ಕೆ ಮಾದರಿಯಾಗಬೇಕಿದೆ. ಇದು ನಮಗೆ ಪರೀಕ್ಷೆಯ ಸಮಯವಾಗಿದೆ. ನಾವೆಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳೋಣ” ಎಂದು ಟ್ವಿಟ್ ಮಾಡಿದ್ದಾರೆ.

ಈಗಾಗಲೇ ಆರೋಪಿಗಳ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾದ ಬಗ್ಗೆ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಸ್ವತಃ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರತಿಕ್ರಯಿಸಿದ್ದು ಈ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತದೆ. ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡುವುದಿಲ್ಲ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ವರ್ತಿಸಬೇಕೆಂದು ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು