Friday, June 14, 2024

ಸತ್ಯ | ನ್ಯಾಯ |ಧರ್ಮ

ಕರ್ನಾಟಕ ಲೇಖಕಿಯರ ಸಂಘಕ್ಕೆ ಹೊಸ ಅಧ್ಯಕ್ಷರಾಗಿ ಡಾ. ಎಚ್. ಎಲ್.‌ ಪುಷ್ಪಾ ಆಯ್ಕೆ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಪದವಿಗಾಗಿ ನಡೆದ ಚುನಾವಣೆಯಲ್ಲಿ ಎಚ್‌ ಎಲ್‌ ಪುಷ್ಪಾ ಅವರು ಗೆಲುವು ಸಾಧಿಸಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಇವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಕರ್ನಾಟಕ ಲೇಖಕಿಯರ ಸಂಘವನ್ನು 1979ರಲ್ಲಿ ಮಹಿಳಾ ಲೇಖಕಿಯರಿಗೆ ಬೆಂಬಲವಾಗಿ ನಿಲ್ಲುವ ಉದ್ದೇಶದಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸ್ಥಾಪಿಸಲಾಗಿತ್ತು. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಚುನಾವಣೆಯಲ್ಲಿ ಈ ಬಾರಿ ಎಚ್‌ ಎಲ್‌ ಪುಷ್ಪಾ ಜಯಗಳಿಸಿದ್ದಾರೆ. ಅವರು ನಿಕಟಪೂರ್ವ ಅಧ್ಯಕ್ಷರಾದ ವನಮಾಲ ಸಂಪನ್ನಕುಮಾರ್‌ ಇವರಿಂದ ಅಧಿಕಾರವನ್ನು ಪಡೆಯಲಿದ್ದಾರೆ.

ಮೂಲತಃ ದೊಡ್ಡಬಳ್ಳಾಪುರದ ಹೊಸಹಳ್ಳಿ ಉಜ್ಜನಿಯವರಾದ ಎಚ್‌ ಎಲ್‌ ಪುಷ್ಪಾ ಅವರು ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯನ್ನು ಗಂಭೀರವಾಗಿ ಪರಿಗಣಿಸಿದ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.

ಅಮೃತಮತಿಯ ಸ್ವಗತ, ಗಾಜುಗೋಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಯಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ (ವಿಮರ್ಶೆ) ಶ್ರೀಯುತರ ಕೆಲವು ರಚನೆಗಳಾಗಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪು.ತಿ.ನ.ಕಾವ್ಯ ಪುರಸ್ಕಾರ, ಸಾರಂಗಮಠ ಪಾಟೀಲ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳು ಸಂದಿವೆ.

Related Articles

ಇತ್ತೀಚಿನ ಸುದ್ದಿಗಳು