Wednesday, July 2, 2025

ಸತ್ಯ | ನ್ಯಾಯ |ಧರ್ಮ

ಮತ್ತೆ ನಾಲಿಗೆ ಹರಿಬಿಟ್ಟ ಬಿಜೆಪಿ ಎಂಎಲ್ಸಿ ರವಿಕುಮಾರ್; ಶಾಲಿನಿ ರಜನೀಶ್ ಬಗ್ಗೆ ಮಾನಹಾನಿಕರವಾಗಿ ಹೇಳಿಕೆ

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿಯೇ ಸುದ್ದಿಯಲ್ಲಿರುವ ಕರ್ನಾಟಕ ಬಿಜೆಪಿ ಎಂಎಲ್‌ಸಿ ಎನ್ ರವಿ ಕುಮಾರ್ ಅವರು ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ತೀವ್ರ ಅವಹೇಳನಕಾರಿಯಾಗಿ ಟೀಕಿಸಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

“ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ” ಎಂದು ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಂಎಲ್ಸಿ ರವಿಕುಮಾರ್ ವಿವಾದ ಹುಟ್ಟುವ ರೀತಿಯಲ್ಲಿ ಅಸಭ್ಯವಾಗಿ ಹೇಳಿದ್ದಾರೆ.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಉಪ ಪೊಲೀಸ್ ಆಯುಕ್ತ (ವಿಧಾನಸೌಧ ಭದ್ರತೆ) ಎಂ.ಎನ್. ಕರಿಬಸವನಗೌಡ ಅವರೊಂದಿಗೆ ಮಾತನಾಡುತ್ತಿರುವಾಗ ಈ ಹೇಳಿಕೆ ನೀಡಿದ್ದು ಕಂಡುಬಂದಿದೆ. ವಿಡಿಯೋದಲ್ಲಿ, ಎಂಎಲ್‌ಸಿ ರವಿಕುಮಾರ್ ಈ ಹೇಳಿಕೆ ನೀಡುತ್ತಿರುವಾಗ ಡಿಸಿಪಿ ಗೌಡ ನಗುತ್ತಿರುವಂತೆ ಕಾಣುತ್ತಿದೆ.

ರವಿಕುಮಾರ್ ಈ ಹಿಂದೆಯೂ ಕಲಬುರ್ಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿ ಮಾತನಾಡಿ ವಿವಾದ ಎಳೆದುಕೊಂಡಿದ್ದರು. ಅದೊಂದು ದೊಡ್ಡ ವಿವಾದ ಆದ ಹಿನ್ನೆಲೆ ಮತ್ತು ನ್ಯಾಯಾಲಯದ ಮೆಟ್ಟಿಲು ಏರಿದ ಹಿನ್ನೆಲೆಯಲ್ಲಿ ರವಿಕುಮಾರ್ ಬಹಿರಂಗವಾಗಿ ಕ್ಷಮೆ ಯಾಚಿಸಬೇಕಾಗಿ ಬಂದಿತ್ತು. ಇಂದೂ ಸಹ ಇದೇ ವ್ಯಕ್ತಿ ಸರ್ಕಾರಿ ಅಧಿಕಾರಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ನಾಲಿಗೆ ಹರಿಬಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ “ಇದು ವಿಚಿತ್ರವಲ್ಲ, ಅದು ಅವರ ಮನಸ್ಥಿತಿ ಮತ್ತು ಯೋಚನೆಯೇ ಹಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಶಾಖೆಗಳಲ್ಲಿ ಇದನ್ನೇ ಕಲಿಸಲಾಗುತ್ತದೆ. ಅವರು ಆರೆಸ್ಸೆಸ್ ವ್ಯಕ್ತಿ. ಈ ಜನರು ಸ್ವಂತವಾಗಿ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಿಲ್ಲ. ಅವರು ಜನರ ಜನಪ್ರಿಯ ಆಯ್ಕೆಯಲ್ಲ, ಅವರನ್ನು ಆರೆಸ್ಸೆಸ್ ಬಿಜೆಪಿಗೆ ತಳ್ಳುತ್ತದೆ. ಮನುಸ್ಮೃತಿಯಿಂದ ಪ್ರೇರಿತವಾದ ಈ ಸಿದ್ಧಾಂತವನ್ನು ಆರೆಸ್ಸೆಸ್ ಶಾಖೆಗಳಲ್ಲಿ ಅವರಿಗೆ ಕಲಿಸಲಾಗುತ್ತದೆ” ಎಂದು ಕಿಡಿ ಕಾರಿದ್ದಾರೆ.

ಶಾಲಿನಿ ರಜನೀಶ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿರುವ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾ‌ರ್ ವಿರುದ್ಧ ಎಪ್‌ಐಆ‌ರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮೈಸೂರಿನ ‘ಒಡನಾಡಿ’ ಸಂಸ್ಥೆಯ ಪರಶುರಾಮ್ ಎಂ ಎಲ್ ಮತ್ತು ಸ್ಪಾನ್ಸಿ ಕೆ ವಿ ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page