Saturday, July 5, 2025

ಸತ್ಯ | ನ್ಯಾಯ |ಧರ್ಮ

ಮೂರು ತಿಂಗಳಿಗೆ 767 ಸಾವು: ಮಹಾರಾಷ್ಟ್ರದಲ್ಲಿ ಪ್ರತಿ ಮೂರು ಗಂಟೆಗೆ ಒಬ್ಬ ರೈತ ಸಾವಿಗೆ ಶರಣು

ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಧಿಕೃತವಾಗಿ ರಾಜ್ಯದಲ್ಲಿ 767 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಮಂಗಳವಾರ ಘೋಷಿಸಿದೆ. ಇದರರ್ಥ ಸರಾಸರಿ, ಇಳುವರಿ ಕೊರತೆ ಮತ್ತು ಸಾಲದ ಒತ್ತಡದಿಂದಾಗಿ ಪ್ರತಿ ಮೂರು ಗಂಟೆಗಳಿಗೊಮ್ಮೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಹೆಚ್ಚುತ್ತಿರುವ ಸಾಲಗಳು, ಕನಿಷ್ಠ ಬೆಂಬಲ ಬೆಲೆಯ ಕೊರತೆ, ಸಾಲ ಮನ್ನಾ ಕೊರತೆ ಮತ್ತು ಸರಿಯಾದ ನೀರಿನ ಸೌಲಭ್ಯಗಳ ಕೊರತೆಯು ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣಗಳೆಂದು ಹೇಳಲಾಗಿದೆ. 2024 ರ ಚುನಾವಣೆಯ ಸಮಯದಲ್ಲಿ ಬಿಡುಗಡೆಯಾದ ತನ್ನ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಸ್ಪಷ್ಟವಾಗಿ ಭರವಸೆ ನೀಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದನ್ನು ಮರೆತಿದೆ ಎಂದು ರೈತರು ಮತ್ತು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

ಕೇವಲ 327 ಕುಟುಂಬಗಳಿಗೆ ಪರಿಹಾರ

ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಮತ್ತು ಅವರಿಗೆ ಪರಿಹಾರ ನೀಡುವಲ್ಲಿ ಭಾರಿ ವಿಳಂಬವಾಗುತ್ತಿದೆ ಎಂದು ವಿರೋಧ ಪಕ್ಷದ ಎಂಎಲ್‌ಸಿಗಳಾದ ಪ್ರಜ್ಞಾ ರಾಜೀವ್ ಸತವ್, ಸತೇಜ್ ಪಾಟೀಲ್ ಮತ್ತು ಭಾಯಿ ಜಗನ್ ಪ್ರತಾಪ್ ವಿಧಾನ ಪರಿಷತ್ತಿನಲ್ಲಿ ಆಕ್ಷೇಪಿಸಿದರು.

ಈ ವರ್ಷದ ಜನವರಿಯಿಂದ ಮಾರ್ಚ್ ತನಕ ರಾಜ್ಯದಲ್ಲಿ 767 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವ ಮಕರಂದ್ ಜಾಧವ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಈ ಪೈಕಿ 373 ಕುಟುಂಬಗಳು ಆರ್ಥಿಕ ಸಹಾಯಕ್ಕೆ ಅರ್ಹರಾಗಿದ್ದರೆ, 200 ಕುಟುಂಬಗಳು ಅರ್ಹರಲ್ಲ. ಉಳಿದ 194 ಕುಟುಂಬಗಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದರು. ಅರ್ಹ ಕುಟುಂಬಗಳಲ್ಲಿ 327 ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡಲಾಗಿದೆ.

‘ರೈತರ ಆತ್ಮಹತ್ಯೆಗಳು ಕೃಷಿ ಬಿಕ್ಕಟ್ಟಿಗೆ ಕಾರಣವಲ್ಲ. ಕೃಷಿ ಬಿಕ್ಕಟ್ಟಿನ ಪರಿಣಾಮವೇ ಈ ಸಾವುಗಳು’ ಎಂದು ಕೃಷಿ ತಜ್ಞ ಮತ್ತು ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಹೇಳಿದರು. ಕೃಷಿ ಸಾಲಗಳನ್ನು ರೈತರಲ್ಲದವರಿಗೆ ನೀಡುವುದು, ಕೃಷಿ ಒಳಸುರಿ ವೆಚ್ಚಗಳಲ್ಲಿನ ಅತಿಯಾದ ಹೆಚ್ಚಳ ಮತ್ತು ಕೃಷಿಗಳ ನಿಯಂತ್ರಣವನ್ನು ಕುಟುಂಬಗಳಿಂದ ಕಾರ್ಪೊರೇಟ್ ನಿಯಂತ್ರಣಕ್ಕೆ ಬದಲಾಯಿಸಿರುವುದು ಕೃಷಿ ಬಿಕ್ಕಟ್ಟಿಗೆ ಕಾರಣಗಳಾಗಿವೆ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page