Thursday, July 10, 2025

ಸತ್ಯ | ನ್ಯಾಯ |ಧರ್ಮ

ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳ ಜಾರಿ ನಿಲ್ಲಿಸಲು ಆಗ್ರಹಿಸಿ ಕಾರ್ಮಿಕರ ಸಾರ್ವತ್ರಿಕ ಮುಷ್ಕರ

ಪ್ರತಿಭಟನಗಾರರ ಅನೇಕರನ್ನ ಬಂಧಿಸಿದ ಪೊಲೀಸರು, ನಂತರ ಬಿಡುಗಡೆ

ಹಾಸನ : ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳ ಜಾರಿ ನಿಲ್ಲಿಸಿ, ದುಡಿಯುವ ಜನರ ಸ್ವಾಯತ್ತತೆ ಕೆಣಕದಿರಿ ಎಂದು ಬೇಡಿಕೆಗಳನ್ನಿಟ್ಟುಕೊಂಡು ಅಖಿಲ ಭಾರತ ಕಾರ್ಮಿಕರ ಸಾರ್ವತ್ರಿಕ ಮುಷ್ಕರದಲ್ಲಿ ಎನ್.ಆರ್. ವೃತ್ತದಲ್ಲಿ ರಸ್ತೆ ತಡೆದು ಹೋರಾಟ ಮಾಡುವಾಗ ಪ್ರತಿಭಟನಾಗಾರರನ್ನು ಸಾಮೂಹಿಕವಾಗಿ ಬಂಧಿಸಿದ ನಂತರ ಬಿಡುಗಡೆಗೊಳಿಸಿದ ಘಟನೆ ಬುಧವಾರದಂದು ನಡೆಯಿತು.

 ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತಕ್ಕೆ ಬಂದಾಗ ಮಾನವ ಸರಪಳಿ ನಿರ್ಮಿಸಿದರು. ತುಂಬ ಸಮಯ ರಸ್ತೆ ಮಧ್ಯೆ ಕುಳಿತಿದ್ದರಿಂದ ಪೊಲೀಸರು ಸಂಘಟನೆಯ ಕೆಲವರನ್ನ ಮಾತ್ರ ಬಂಧಿಸಿ ನಂತರ ಬಿಡುಗಡೆಗೊಳಿಸಿದರು.
ಇದೆ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು ವೇತನ ಸಂಹಿತೆಯಲ್ಲಿ ೪ ಕಾನೂನು, ಕೈಗಾರಿಕಾ ಬಾಂದವ್ಯ ಸಂಹಿತೆಯಲ್ಲಿ ೩ ಕಾನೂನು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಲ್ಲಿ ೧೩ ಕಾನೂನು ಮತ್ತು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ೯ ಕಾನೂನು ಸೇರಿದಂತೆ ಒಟ್ಟು ೨೯ ಕಾನೂನುಗಳನ್ನು ೪ ಸಂಹಿತೆಗಳಲ್ಲಿ ರೂಪೀಕರಿಸಲಾಗಿದೆ. ದೇಶದಲ್ಲಿ ಅತಿಹೆಚ್ಚು ಅಸಂಘಟಿತ, ಸ್ವೀಂ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳಡಿಯಲ್ಲಿ ತರಬೇಕು ಮತ್ತು ೬೦೦ ರೂ ಒಂದು ದಿನದ ವೇತನ ನಿಗದಿ ಮಾಡಬೇಕೆಂಬ ಕೇಂದ್ರ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ವೇತನ ಸಂಹಿತೆಯಲ್ಲಿ ೧೫ನೇ Iಐಅ ಯ ಕನಿಷ್ಠ ವೇತನ, ನ್ಯಾಯ ಸಮ್ಮತ ಮತ್ತು ಜೀವಿತ ವೇತನಗಳನ್ನು ನಿಗದಿ ಮಾಡುವ ಅಂಶಗಳನ್ನು ಒಳಗೊಳ್ಳುವ ಬದಲಿಗೆ ೧೮೭ ರೂ. ನೆಲಮಟ್ಟದ ಕೂಲಿಯನ್ನು ನಿರ್ದಿಷ್ಟಗೊಳಿಸಿದ್ದರಿಂದ ಇನ್ನು ಮುಂದೆ ಕನಿಷ್ಟ ವೇತನ ಹೆಚ್ಚಳಗಳಿಗೆ ಪೆಟ್ಟು ಬೀಳುತ್ತದೆ. ಇನ್ನು ಮುಂದೆ ೧೮ ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವವರು ಸೂಪರ್‌ವೈಸರ್‌ಗಳು, ಅಪ್ರೆಂಟೀಸ್‌ಗಳು, ೪೦ ಕಾರ್ಮಿಕರಿದ್ದು ವಿದ್ಯುತ್‌ರಹಿತ ಉದ್ಯಮಗಳಲ್ಲಿರುವ ಕಾರ್ಮಿಕರು ೫೦ಕ್ಕಿಂತ ಕಡಿಮೆ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಗುತ್ತಿಗೆದಾರರು ಲೈಸೆನ್ಸ್ ತೆಗೆದುಕೊಳ್ಳಬೇಕಿಲ್ಲ. ಇದರಿಂದಾಗಿ ಭಾರತದ ೭೦% ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ ಎಂದರು. ೧೦೦ಕ್ಕಿಂತ ಹೆಚ್ಚು ಕಾರ್ಮಿಕರಿದ್ದರೆ ಕಾರ್ಖಾನೆಗಳ ಲೇಆಫ್, ರಿಟ್ರಿಂಚ್ಮೆಂಟ್ ಮತ್ತು ಕಾರ್ಖಾನೆ ಮುಚ್ಚುವಿಕೆಗೆ ಸರ್ಕಾರದ ಪೂರ್ವನುಮತಿ ಪಡೆಯಬೇಕಿತ್ತು. ಈಗ ೩೦೦ ಕಾರ್ಮಿಕರಿಗೆ ಹೆಚ್ಚಿಸಲಾಗಿದೆ. ಇದರಿಂದ ಯಾವಾಗ ಬೇಕಾದರೂ ಕಾರ್ಖಾನೆ ತೆರೆಯಬಹುದು. ಬೇಡದಿದ್ದರೆ ಮುಚ್ಚಬಹುದಾದ ಸ್ವಾತಂತ್ರ್ಯವನ್ನು ಮಾಲೀಕರಿಗೆ ಕೊಡಲಾಗಿದೆ. ಬೇಡಿಕೆಗಳ ಪಟ್ಟಿ, ಮುಷ್ಕರ ನೋಟಿಸ್ ನೀಡಿದ ಕೂಡಲೇ ಸಂಧಾನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ರಾಜೀ ಸಂಧಾನ ನಡೆಯುವಾಗ ಬೇಡಿಕೆಗಳು ಈಡೇರದಿದ್ದರೂ ಮುಷ್ಕರ ಮಾಡುವ ಹಾಗಿಲ್ಲ, ಮಾಡಿದರೆ ಅದನ್ನು ಕಾನೂನು ಬಾಹಿರ ಮುಷ್ಕರ ಎಂದು ಪರಿಗಣಿಸಿ ಮುಷ್ಕರ ಮಾಡಿದವರನ್ನು, ಮುಷ್ಕರಕ್ಕೆ ಬೆಂಬಲಿಸಿದವರಿಗೂ ಜೈಲು, ಜಾಮೀನುರಹಿತ ಕೇಸುಗಳು, ದಂಡ, ಕೆಲಸದ ನಿರಾಕರಣೆ ಮಾಡುವ ಹಕ್ಕನ್ನು ಮತ್ತು ಕಾರ್ಮಿಕ ಸಂಘದ ನೊಂದಾವಣಿಯನ್ನು ರದ್ದುಗೊಳಿಸುವ ಅಂಶಗಳನ್ನು ಈ ಸಂಹಿತೆಗಳಲ್ಲಿ ತರಲಾಗಿದೆ ಎಂದು ಹೇಳಿದರು.
ಒಡಂಬಡಿಕೆಗಳಿಗೂ ತಿಲಾಂಜಲಿ ನೀಡಿ ಎಲ್.ಐ.ಸಿ. ಯನ್ನು ಕಡೆಗಣಿಸುವ ಮುಖಾಂತರ ಮೋದಿ ಸರ್ಕಾರ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸುತ್ತಿದೆ. ಕಾರ್ಮಿಕರು ಮಾಡುವ ಮುಷ್ಕರವನ್ನು ಸಂಘಟಿತ ಅಪರಾಧ ಎನ್ನುವ ಸರ್ಕಾರ ಫ಼್ಯಾಕ್ಟರಿ ಮತ್ತು ಬಾಯ್ಲರ್ ಕಾಯ್ದೆ, ಅರಣ್ಯ ಕಾಯ್ದೆ, ಚಹಾ ಕಾಯ್ದೆ, ರಬ್ಬರ್ ಕಾಯ್ದೆ ಹಲವಾರು ಔಷಧವಲಯಗಳಿಗೆ ಸಂಬಂಧಿಸಿದ ೪೧ ಕಾನೂನುಗಳಡಿಯಲ್ಲಿ ೧೮೦ ಅಪರಾಧಗಳಿಂದ ಜನಾವಶ್ಯಕ ಕಾಯ್ದೆಯ ನಿಬಂಧನೆಗಳ ಪ್ರಕಾರ ಮಾಲಿಕರನ್ನು ಮುಕ್ತಗೊಳಿಸಿದೆ.      ಸರ್ಕಾರದ ಒಡೆತನದಲ್ಲಿದ್ದ ರಸ್ತೆಯ ಖಾಸಗೀಕರಣ, ವಿದ್ಯುಚ್ಛಕ್ತಿ, ಪೆಟ್ರೋಲ್, ಡೀಸಲ್, ಗ್ಯಾಸ್‌ನ್ನು ಉತ್ಪಾದಿಸುವ ಘಟಕಗಳು, ಮಿಲಿಟರಿಗೆ ಅಗತ್ಯ ಪರಿಕರಣಗಳನ್ನು ಉತ್ಪಾದಿಸುವ ಕಾರ್ಖಾನೆಗಳು, ವಿಮಾನ, ರೈಲ್ವೆ, ಬಸ್‌ಗಳ ಉಪಕರಣಗಳನ್ನು ಉತ್ಪಾದಿಸುವ ಎಲ್ಲಾ ಸಾರ್ವಜನಿಕ ಕೈಗಾರಿಕೆಗಳು, ಸ್ಟೀಲ್, ಉಕ್ಕು, ಕಲ್ಲಿದ್ದಲನ್ನು ಉತ್ಪಾದಿಸುವ ಕಾರ್ಖಾನೆಗಳು, ಬ್ಯಾಂಕ್, ಐIಅ ಯಂತಹ ಆರ್ಥಿಕ ಸೇವೆಗಳನ್ನು ಖಾಸಗೀಕರಿಸಲು, ವಿದೇಶಿ ಬಂಡವಾಳಕ್ಕೆ ಅವಕಾಶ ನೀಡಿದ್ದರ ಪರಿಣಾಮ ಒಟ್ಟು ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರಲಾಗುತ್ತಿದೆ. ಈ ವಲಯಗಳಲ್ಲಿರುವ ಕಾರ್ಪೊರೇಟ್ ಬಂಡವಾಳಗಾರರ ಮಿಗುತಾಯ ಮೌಲ್ಯವನ್ನು ಹೆಚ್ಚಿಸಲು ಕಾರ್ಮಿಕರ ಬೆನ್ನಮೂಳೆಯನ್ನು ೪ ಸಂಹಿತೆಗಳ ಮುಖಾಂತರ ಮುರಿಯಲಾಗುತ್ತಿದೆ. ಮತ್ತೊಂದೆಡೆ ತೆರಿಗೆಗಳ ಭಾರ ಮತ್ತು ಬೆಲೆಯೇರಿಕೆಯಿಂದ ಭಾರತದ ಜನತೆ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು. 
ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎಂ.ಸಿ. ಡೋಂಗ್ರೆ. ಮಧು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಎಸ್.ಎನ್. ಲಕ್ಷ್ಮಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಅರವಿಂದ್, ಎಐಟಿಯುಸಿ ಮುಖಂಡರಾದ ನಾಗರತ್ನ, ಪ್ಲಾಂಟೇಷನ್ ಕಾರ್ಮಿಕರ ಸಂಘದ ಕಾರ್ಯದರ್ಶಿ ಸೌಮ್ಯ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page