Friday, July 11, 2025

ಸತ್ಯ | ನ್ಯಾಯ |ಧರ್ಮ

ದ್ವೇಷ ಭಾಷಣ ಮಾಡುವಂತಿಲ್ಲ, ಅಪರಾಧ ಪುನರಾವರ್ತಿಸುವಂತಿಲ್ಲ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ಆದೇಶ

  • ಇನ್ಮುಂದೆ ದ್ವೇಷ ಭಾಷಣ ಮಾಡುವಂತಿಲ್ಲ, ಈಗಾಗಲೇ ದಾಖಲಾಗಿರುವ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ ಎಂದು ಹೈಕೋರ್ಟ್ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಇಂದು ಆದೇಶ ನೀಡಿದೆ.

ಕೋಮುಗಲಭೆಗಳಿಗೆ ಪ್ರಚೋದನೆ ನೀಡುವ, ಮುಸ್ಲೀಮ್ ಸಮುದಾಯವನ್ನು ತುಚ್ಚೀಕರಿಸುವ ಭಾಷಣ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಾಖಲಾಗಿರುವ ಎಫ್ಐಆರ್ ಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ದೂರುದಾರು ಇಬ್ರಾಹಿಂ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು‌. ಇಂದು ಹೈಕೋರ್ಟ್ ನಲ್ಲಿ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂತು.

ಸರ್ಕಾರದ ಪರ ವಕೀಲರು (HCGP) ಮತ್ತು ಹರೀಶ್ ಪೂಂಜಾ ಪರ ವಕೀಲರು ಸಮಯಾವಕಾಶ ಕೇಳಿದರು. ಆದರೆ ಇಬ್ರಾಹಿಂ ಪರ ವಕೀಲ ಎಸ್ ಬಾಲನ್ ಅವರು ಸಮಯಾವಕಾಶ ನೀಡುವುದನ್ನು ವಿರೋಧಿಸಿ ವಾದ ಪ್ರಾರಂಭಿಸಿದರು.

ಹರೀಶ್ ಪೂಂಜಾ ವಿರುದ್ದ ದಾಖಲಾಗಿರುವ ಎಫ್ಐಆರ್ ಗೆ ನೀಡಿರುವ ತಡೆಯಾಜ್ಞೆ ತೆರವುಗೊಳಿಸದೇ ಇದ್ದರೆ ಅವರು ಅಪರಾಧವನ್ನು ಪುನರಾವರ್ತಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಿ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಪಡೆಯುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದು ಎಸ್ ಬಾಲನ್ ವಾದಿಸಿದರು.

ಈ ರೀತಿಯ ದ್ವೇಷ ಭಾಷಣಗಳಿಂದ ಜನರು ಸಮೂಹ ಸನ್ನಿಗೆ ಒಳಗಾಗಿ ಮಾಬ್ ಲಿಂಚಿಂಗ್ ನಲ್ಲಿ ತೊಡಗುತ್ತಾರೆ. ಮಂಗಳೂರಿನ ಮಾಬ್ ಲಿಂಚಿಂಗ್ ನಿಂದ ಒಂದು ಹತ್ಯೆಯಾಗಿದೆ. ಇತ್ತಿಚೆಗೆ ಮಂಗಳೂರಿನಲ್ಲಿ ಮೂರು ಕೊಲೆಗಳಾಗಿವೆ. ಅಪರಾಧಿಕಾರಣ, ಸಮುದಾಯ ದ್ವೇಷ ಹರಡಲು ತಡೆಯಾಜ್ಞೆ ಆದೇಶಗಳು ಬಳಕೆಯಾಗುತ್ತಿದೆ ಎಂದು ಎಸ್ ಬಾಲನ್ ವಾದ ಮಂಡಿಸಿದರು.

ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಆಗಸ್ಟ್ 0 7ರವರೆಗೆ ತಡೆಯಾಜ್ಞೆ ಮುಂದುವರೆಸಿ “ಅರ್ಜಿದಾರ ಹರೀಶ್ ಪೂಂಜಾ ಯಾವುದೇ ದ್ವೇಷ ಭಾಷಣ, ಈಗಾಗಲೇ ಆತನ ವಿರುದ್ದ ದಾಖಲಾಗಿರುವ ಅಪರಾಧಿಕ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ” ಎಂದು ಆದೇಶ ನೀಡಿದ್ದಾರೆ‌.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ‘ಕಂತ್ರಿ ಮುಸ್ಲೀಮರನ್ನು ದೇವಸ್ಥಾನದ ಬ್ರಹ್ಮಕಲಶೋತ್ಸವದಿಂದ ದೂರ ಇಡಬೇಕು. ಹಿಂದೂಗಳ ನಡುವೆ ಏಕತೆ ಇರಬೇಕು. ಮುಸ್ಲೀಮರ ಜೊತೆ ಸೌಹಾರ್ದತೆ ಅಲ್ಲ’ ಎಂದು ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಷಣ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದು ಕೋಮು ಉದ್ವಿಗ್ನತೆ ಇದ್ದು, ಸೆಕ್ಷನ್ ಜಾರಿಯಲ್ಲಿದ್ದ ದಿನಗಳಲ್ಲೇ ಹರೀಶ್ ಪೂಂಜಾ ಧ್ವೇಷ ಭಾಷಣ ಮಾಡಿ ಗಲಭೆಯನ್ನು ಪ್ರಚೋದಿಸಿದ್ದರು.

‘ನಾನು ಯಾವ ನ್ಯಾಯಾಲಯಕ್ಕೂ ಹೆದರುವುದಿಲ್ಲ’ ಎಂದು ಹೇಳಿದ್ದ ಶಾಸಕ ಹರೀಶ್ ಪೂಂಜಾ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ರದ್ದುಕೋರಿ ಅರ್ಜಿ ಸಲ್ಲಿಸಿ, ಪ್ರಕರಣಕ್ಕೆ ತಕ್ಷಣ ತಡೆಯಾಜ್ಞೆ ನೀಡುವಂತೆ 2025 ಮೇ 04 ರಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠವು, 2025 ಮೇ 22 ರಂದು ಪ್ರಕರಣಕ್ಕೆ ತಡೆಯಾಜ್ಞೆ ನೀಡಿತ್ತು.

ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಮಸೀದಿ ಅಧ್ಯಕ್ಷ ಇಬ್ರಾಹಿಂ ಪರವಾಗಿ ಹಿರಿಯ ವಕೀಲ ಎಸ್ ಬಾಲನ್ ‘ವೆಕೇಟಿಂಗ್ ಸ್ಟೇ’ ಅರ್ಜಿಯನ್ನು ಸಲ್ಲಿಸಿದ್ದರು. ಹರೀಶ್ ಪೂಂಜಾ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ 39/2023(IPC 153, 153-A, 505(1)(3)(c), 505(2), ಧರ್ಮಸ್ಥಳ ಠಾಣೆಯಲ್ಲಿ ಕ್ರೈಂ ನಂ 57/2024 (IPC 504, 353), ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ 58/2024(IPC 143, 147, 341, 504, 506 r/w 149), ಬಜ್ಪೆ ಠಾಣೆಯಲ್ಲಿ ಕ್ರೈಂ ನಂ 239/2016 (IPC 143, 147, 290, 160, 504 r/w 149), ಬಂಟ್ವಾಳ ಠಾಣೆಯಲ್ಲಿ ಕ್ರೈಂ ನಂ 117/2017(IPC 142, 143, 188 r/w 149), ಧರ್ಮಸ್ಥಳ ಠಾಣೆಯಲ್ಲಿ ಕ್ರೈಂ ನಂ 77/2023(IPC 143, 353, 504 r/w 149), ಬೆಳ್ತಂಗಡಿ ಠಾಣೆಯಲ್ಲಿ ಕ್ರೈಂ ನಂ 105/2023 (IPC 504, 505(2) ಎಫ್ಐಆರ್ ಗಳು ದಾಖಲಾಗಿದೆ. ಹೀಗಿದ್ದರೂ ಪುನರಾವರ್ತಿತ ಅಪರಾಧ ಮಾಡುವ ಹರೀಶ್ ಪೂಂಜಾ ತಡೆಯಾಜ್ಞೆಯ ಅವಕಾಶಕ್ಕೆ ಅನರ್ಹರಾಗಿದ್ದು, ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಎಸ್ ಬಾಲನ್ ವಾದಿಸಿದ್ದಾರೆ. ಆದರೆ, ತಡೆಯಾಜ್ಞೆ ಮುಂದುವರೆಸಿರುವ ಹೈಕೋರ್ಟ್ ಬೆಳ್ತಂಗಡಿ ಶಾಸಕರಿಗೆ ಷರತ್ತುಗಳನ್ನು ವಿಧಿಸಿದೆ.

ಇಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಯಾವುದೇ ದ್ವೇಷ ಭಾಷಣ, ಈಗಾಗಲೇ ಆತನ ವಿರುದ್ದ ದಾಖಲಾಗಿರುವ ಅಪರಾಧಿಕ ಸೆಕ್ಷನ್ ಗಳ ಅಪರಾಧವನ್ನು ಪುನರಾವರ್ತಿಸುವಂತಿಲ್ಲ ಎಂದು ತಾಕೀತು ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page