Wednesday, August 13, 2025

ಸತ್ಯ | ನ್ಯಾಯ |ಧರ್ಮ

ಚುನಾವಣಾ ಆಯೋಗದ “ಮತ ಕಳ್ಳತನ” ಅಕ್ರಮ ಒಪ್ಪಿಕೊಂಡ ಬಿಜೆಪಿ ; ಇನ್ನಷ್ಟು ಕ್ಷೇತ್ರಗಳ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್

ವಿರೋಧ ಪಕ್ಷದ ನಾಯಕರುಗಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಭಿಷೇಕ್ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರುಗಳು ಸ್ಪರ್ಧಿಸಿದ ಚುನಾವಣಾ ಕ್ಷೇತ್ರಗಳಾದ ರಾಯ್ ಬರೇಲಿ, ವಯನಾಡ್, ಡೈಮಂಡ್ ಹಾರ್ಬರ್ ಮತ್ತು ಕನ್ನೌಜ್ ಸಂಸದೀಯ ಕ್ಷೇತ್ರಗಳಲ್ಲಿ ಮತದಾರರ ನೋಂದಣಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.

ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಭಿಷೇಕ್ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರು “ವೋಟ್ ಚೋರಿ” ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ತಮ್ಮ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ.

ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕರು ಪ್ರತಿನಿಧಿಸುವ ಈ ಕ್ಷೇತ್ರಗಳ ಮತದಾರರ ಪಟ್ಟಿಯ ‘ವಿಶ್ಲೇಷಣೆ’ ಕುರಿತು ಸ್ಲೈಡ್-ಶೋ ಮೂಲಕ ಮಾಹಿತಿ ನೀಡಿದ ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ತಮಿಳುನಾಡಿನ ಕೊಲತ್ತೂರು ವಿಧಾನಸಭಾ ಕ್ಷೇತ್ರ ಮತ್ತು ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಮತದಾರರ ನೋಂದಣಿಯಲ್ಲಿನ “ಅಕ್ರಮಗಳನ್ನು” ಎತ್ತಿ ತೋರಿಸಿದರು.

ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಮತ್ತು ಎಸ್‌ಪಿ ನಾಯಕಿ ಡಿಂಪಲ್ ಯಾದವ್ ಅವರನ್ನು “ಚುನಾವಣಾ ಅಕ್ರಮ” ಕಾರಣಕ್ಕಾಗಿ ರಾಜೀನಾಮೆ ನೀಡುವಂತೆ ಅನುರಾಗ್ ಠಾಕೂರ್ ಒತ್ತಾಯಿಸಿದ್ದಾರೆ.

ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ INDIA ಒಕ್ಕೂಟದ ನಾಯಕರುಗಳು ಚುನಾವಣಾ ಆಯೋಗದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಕ್ಕಾಗಿ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಮತ್ತು ಡಿಎಂಕೆ ನಾಯಕರನ್ನು ಅನುರಾಗ್ ಠಾಕೂರ್ ಕಟುವಾಗಿ ಟೀಕಿಸಿದ್ದಾರೆ. ಹಾಗೆಯೇ ಬಿಹಾರದಲ್ಲಿ ನಡೆಯುತ್ತಿರುವ ಮತ್ತು ಇತರ ರಾಜ್ಯಗಳಲ್ಲಿ ಪ್ರಾರಂಭಿಸಲಾಗುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ವಿಪಕ್ಷ ನಾಯಕರು ಕೆಟ್ಟ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಅಷ್ಟೇ ಅಲ್ಲದೆ ಬಾಂಗ್ಲಾದೇಶದಿಂದ ಒಳನುಸುಳುತ್ತಿರುವವರ ಮತ ಬ್ಯಾಂಕ್ ಅನ್ನು ರಕ್ಷಿಸಲು ಅವರು ಈ ಕ್ರಮವನ್ನು  ಅನುಸರಿಸುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಆರೋಪ ಮಾಡಿದ್ದಾರೆ.

ಇತ್ತ ಮಂಗಳವಾರ, ವಿರೋಧ ಪಕ್ಷದ ನಾಯಕರು ಈ ವಿಷಯದ ಬಗ್ಗೆ ಸಂಸತ್ ಭವನದಿಂದ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆದರೆ ಪೊಲೀಸರು ಅವರನ್ನು ತಡೆದು ಸ್ವಲ್ಪ ಸಮಯ ವಶಕ್ಕೆ ಪಡೆದರು.

“ನಕಲಿ ಮತಗಳು” ಹೇಗೆ ಚಲಾವಣೆಯಾಗುತ್ತಿವೆ ಎಂಬುದನ್ನು ಚಿತ್ರಿಸುವ ಹೊಸ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಬುಧವಾರ ‘ವೋಟ್ ಚೋರಿ’ ವಿರುದ್ಧ ತನ್ನ ಅಭಿಯಾನವನ್ನು ತೀವ್ರಗೊಳಿಸಿದೆ. ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಮತ ಕಳ್ಳತನದ ವಿರುದ್ಧ ಜನರು ಧ್ವನಿ ಎತ್ತುವಂತೆ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು “ಬಿಜೆಪಿಯ ಹಿಡಿತದಿಂದ” ರಕ್ಷಿಸುವಂತೆ ಕೇಳಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page