Thursday, August 14, 2025

ಸತ್ಯ | ನ್ಯಾಯ |ಧರ್ಮ

ಇಂಡಿಯಾ ಟುಡೇ ವಾಹಿನಿಯ ಜೊತೆ ಮೊಟ್ಟ ಮೊದಲ ಸಂದರ್ಶನ ನೀಡಿದ ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರದ ಸಾಕ್ಷಿ ದೂರುದಾರ

ಧರ್ಮಸ್ಥಳ ಸಾಮೂಹಿಕ ಶವಸಂಸ್ಕಾರ ಪ್ರಕರಣದಲ್ಲಿ ದೂರುದಾರ ವ್ಯಕ್ತಿ ಇಂಡಿಯಾ ಟುಡೇ ವಾಹಿನಿಯ ಜೊತೆಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಅವರ ಮಾಹಿತಿಯಂತೆ 13 ನೇ ಸ್ಥಳ ಒಂದರಲ್ಲಿಯೇ 70-80 ಶವಗಳನ್ನು ಹೂತಿರುವುದಾಗಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಹಾಗೆಯೇ ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವಾರು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಧರ್ಮಸ್ಥಳ ದೇವಸ್ಥಾನದ ಆಡಳಿತ ಮಂಡಳಿಯ ಮೂಲಕ ನೇಮಕಗೊಂಡಿದ್ದ ಪೌರ ಕಾರ್ಮಿಕ, ಅರಣ್ಯ ಪ್ರದೇಶಗಳಲ್ಲಿ ಶವಗಳನ್ನು ಯಾವುದೇ ದಾಖಲೆಗಳಿಲ್ಲದೆ ಅಥವಾ ಅಧಿಕೃತ ಮೇಲ್ವಿಚಾರಣೆಯಿಲ್ಲದೆ ಹೇಗೆ ಹೂಳಲಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಹಲವು ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ ಸಾಕ್ಷಿ ದೂರುದಾರ 70-80 ಶವಗಳನ್ನು 13 ನೇ ಸ್ಥಳದಲ್ಲಿ ಹೂತುಹಾಕಿರುವುದಾಗಿ ಹೇಳಿಕೊಂಡಿದ್ದಾನೆ. “ನಾವು ಶವಗಳನ್ನು ಆಳವಾಗಿ ಹೂತುಹಾಕಿದ್ದೇವೆ. ಇತರ ಶವಗಳನ್ನು ಬೆಟ್ಟಗಳಲ್ಲಿ ಹೂಳಲಾಗಿದೆ” ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಆಡಳಿತ ಅಥವಾ ಗ್ರಾಮ ಪಂಚಾಯತ್ ಅನ್ನು ನಿರ್ಲಕ್ಷಿಸಿ ದೇವಾಲಯದ ಆಡಳಿತ ಮಂಡಳಿಯಿಂದ ನೇರವಾಗಿ ಸೂಚನೆಗಳು ಬಂದ ಹಿನ್ನೆಲೆಯಲ್ಲಿ ಮಾತ್ರ ಆ ಶವಗಳನ್ನು ನಾವು ಹೂತಿದ್ದೇವೆ ಎಂದು ದೂರುದಾರ ಹೇಳಿದ್ದಾರೆ.

ಶವಗಳನ್ನು ಯಾವಾಗಲೂ ಅರಣ್ಯ ಪ್ರದೇಶಗಳಲ್ಲಿ ಅಥವಾ ಹಳೆಯ ರಸ್ತೆಗಳಲ್ಲಿ ಹೂಳಲಾಗುತ್ತಿತ್ತು ಮತ್ತು ಎಂದಿಗೂ ಸ್ಮಶಾನಗಳಲ್ಲಿ ಹೂಳುತ್ತಿರಲಿಲ್ಲ ಎಂದು ಅವರು ಇಂಡಿಯಾ ಟುಡೇ ವಾಹಿನಿಯ ಜೊತೆಗೆ ಹೇಳಿಕೊಂಡಿದ್ದಾರೆ. “ಅವರು ನಮಗೆ ಎಲ್ಲಿ ತೋರಿಸಿದರೂ ನಾವು ಅಲ್ಲಿ ಅಗೆದಿದ್ದೇವೆ” ಎಂದು ದೂರುದಾರ ಹೇಳಿಕೊಂಡಿದ್ದಾರೆ.

ತಾವು ಹೂತು ಹಾಕಿರುವ ಅನೇಕ ದೇಹಗಳು ಲೈಂಗಿಕ ದೌರ್ಜನ್ಯದ ಸ್ಪಷ್ಟ ಚಿಹ್ನೆಗಳನ್ನು ತೋರಿಸಿವೆ ಎಂದು ಅವರು ಹೇಳಿದ್ದಾರೆ. ಅವರ ತಂಡವು ಸುಮಾರು 100 ಶವಗಳನ್ನು ಹೂತಿದ್ದರೆ, ಅದರಲ್ಲಿ 90 ರಷ್ಟು ಮಹಿಳೆಯರದ್ದೇ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯದಲ್ಲಿ ದೇವಾಲಯದ ವ್ಯವಸ್ಥಾಪಕರು ತನಗೆ ನೇರವಾಗಿ ಎಂದಿಗೂ ಕರೆ ಮಾಡಿಲ್ಲ ಮತ್ತು ವಿವರಗಳೊಂದಿಗೆ ರೂಮ್ ಬಾಯ್ ಅನ್ನು ಕಳುಹಿಸಲಾಗುತ್ತಿತ್ತು ಎಂದು ಹೇಳಿದ್ದಾರೆ. ಅವಶೇಷಗಳ ಉತ್ಖನನದಲ್ಲಿ ಈವರೆಗೆ ಒಂದೇ ಸ್ಥಳದಲ್ಲಿ ಮಾನವ ಅವಶೇಷಗಳು ಕಂಡುಬಂದಿವೆ.. ಇನ್ನುಳಿದ ಸ್ಥಳಗಳಲ್ಲಿ ಯಾಕೆ ಇಲ್ಲ ಎಂದು ಕೇಳಿದಾಗ, ನೆಲದ ಸವೆತ, ಅರಣ್ಯ ಬೆಳವಣಿಗೆ ಮತ್ತು ಹಲವು ನಿರ್ಮಾಣ ಕಾರ್ಯಗಳಿಂದಾಗಿ ಕೆಲವು ಸಮಾಧಿ ಸ್ಥಳಗಳು ಕಳೆದುಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಶವಗಳಿಂದ ಆಭರಣಗಳನ್ನು ಕದ್ದಿದ್ದಾರೆ ಮತ್ತು ದೇವಾಲಯದ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಅದನ್ನು ನಿರಾಕರಿಸುತ್ತಾ,  “ದೇವಾಲಯದ ಹೆಸರನ್ನು ಕೆಡಿಸುವುದರಿಂದ ನನಗೇನು ಸಿಗುತ್ತದೆ? ನಾನು ಹಿಂದೂ, ಪರಿಶಿಷ್ಟ ಜಾತಿಗೆ ಸೇರಿದವನು” ಎಂದು ಅವರು ಹೇಳಿದರು.

ಎಸ್‌ಐಟಿ ತಂಡದ ಮೇಲೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ ಅವರು, ಅವಶೇಷಗಳನ್ನು ಮರಳಿ ಪಡೆಯಲು ವಿಶಾಲವಾದ ಪ್ರದೇಶವನ್ನು ಅಗೆಯಬೇಕು ಎಂದು ಹೇಳಿದರು. “ನಾನು ಎಸ್ಐಟಿ ಯನ್ನು ನಂಬುತ್ತೇನೆ, ಆದರೆ ಅವರು ನನ್ನನ್ನು ನಂಬುವಂತೆ ಕಾಣುತ್ತಿಲ್ಲ. ಈಗ ಮಣ್ಣು ವಿಭಿನ್ನವಾಗಿದೆ. ನಾನು ನನ್ನ ನೆನಪಿನ ಮೇಲೆ ಅವಲಂಬಿತನಾಗಿದ್ದೇನೆ” ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page