Sunday, August 17, 2025

ಸತ್ಯ | ನ್ಯಾಯ |ಧರ್ಮ

ದ್ವಿಭಾಷಾ ನೀತಿ : ಸ್ವಾಭಿಮಾನಿ ಮತ್ತು ಕಟ್ಟೆಚ್ಚರದ ತಮಿಳರು ವರ್ಸಸ್ ಜೀವನ್ಮೃತ ಕನ್ನಡಿಗರು

“ಥೋರಟ್ ಆಯೋಗಕ್ಕೆ ಪರರಾಜ್ಯದ ಶಿಕ್ಷಣ ತಜ್ಞರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಸರಿಯಾಗಿರಲಿಲ್ಲ ಎಂದು ಆಗ ಅಮೂರ್ತವಾಗಿ  ಅನ್ನಿಸಹತ್ತಿದ್ದು, ಈಗ ಅದು ಎಂತಹ ಅವಿವೇಕದ ನಿರ್ಧಾರ ಅದು ಎಂಬುದು ದೃಢವಾಗಿಬಿಟ್ಟಿದೆ..” ತ್ರಿಭಾಷಾ ನೀತಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚಿಂತಕರಾದ ಡಾ.ನಟರಾಜ್ ಕೆಪಿ ಅವರ ಬರಹದಲ್ಲಿ

ಪ್ರೊ ಸುಖದೇವ್ ಥೋರಟ್ ಆಯೋಗ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಸರ್ಕಾರಕ್ಕೆ ನೀಡಿದೆ‌. ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ತಿರಸ್ಕರಿಸಿದ ಕರ್ನಾಟಕದ ರಾಜ್ಯ ಸರ್ಕಾರ, ರಾಜ್ಯಕ್ಕೆ ತನ್ನದೇ ಶಿಕ್ಷಣ ನೀತಿ ಇರಬೇಕೆಂಬ ರಾಜಕೀಯ ನಿರ್ಧಾರಕ್ಕೆ ಮುಂದಾದದ್ದೇ ಐತಿಹಾಸಿಕ ಪ್ರಾಮುಖ್ಯತೆ ಉಳ್ಳ ವಿದ್ಯಮಾನ. ನಿರ್ಧಾರವೇನೋ ಮಹತ್ವವಾದದ್ದಾಗಿದ್ದರೂ ಈ ಆಯೋಗಕ್ಕೆ  ಪರ ರಾಜ್ಯದ ಶಿಕ್ಷಣ ತಜ್ಞರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು  ಸರಿಯಾಗಿರಲಿಲ್ಲ ಎಂದು ಆಗ ಅಮೂರ್ತವಾಗಿ  ಅನ್ನಿಸಹತ್ತಿದ್ದು, ಈಗ ಎಂತಹ ಅವಿವೇಕದ ನಿರ್ಧಾರ ಅದು ಎಂಬುದು ದೃಢವಾಗಿಬಿಟ್ಟಿದೆ.

ಅದರೆ ಇದಕ್ಕೆ ವ್ಯತಿರಿಕ್ತವಾಗಿ ತಮಿಳುನಾಡಿನ ಉದಾಹರಣೆ ಯನ್ನು ನೊಡಬಹುದಾಗಿದೆ. 2025 ರ ತಮಿಳುನಾಡು ಶಿಕ್ಷಣ ನೀತಿ ಆಯೋಗದ ಅಧ್ಯಕ್ಷರಾಗಿ ತಮಿಳು ಮೂಲದ ದೆಹಲಿ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಡಿ.ಮುರುಗೇಶನ್ ಅವರನ್ನು ನೇಮಕಮಾಡಿತ್ತು. ಅವರ ನೇತೃತ್ವದ  ಅಯೋಗವೂ ಇತ್ತೀಚೆಗೆ ತನ್ನ ವರದಿಯನ್ನು ನೀಡಿದೆ. ಆ ವರದಿ ದ್ವಿಭಾಷಾ ನೀತಿಯ ತನ್ನ ಪೂರ್ವ ಪರಂಪರೆಯ ಸಾತತ್ಯವನ್ನು ಕಾಪಾಡಿಕೊಂಡಿದೆ.

ವಿದ್ವಾಂಸರಾದರೇನಂತೆ, ಸಂಸ್ಕೃತ, ಹಿಂದಿ, ಮರಾಠಿ ಹಿನ್ನೆಲೆ ಹೊಂದಿರುವ ವ್ಯಕ್ತಿ ಪೂರ್ವಾಗ್ರಹಗಳಿಂದ ನಿಯಂತ್ರಿತನಾಗಿರುವುದಿಲ್ಲ ಎಂದು ಹೇಳಲುಬರುತ್ತದೆಯೆ? ಕನ್ನಡದ, ಕನ್ನಡ ಜನಪದದ ಸಾಮಾಜಿಕ, ಸಾಂಸ್ಕೃತಿಕ ಹಿತಾಸಕ್ತಿಗಳನ್ನು ಪೊರೆಯಲು ಅನ್ಯ ಭಾಷಿಕ ಅಧ್ಯಕ್ಷರಿಂದ ಹೇಗೆ ಸಾಧ್ಯ? ಇಂತಹ ಪರಬಾಷಿಗರನ್ನು ಅದ್ಯಕ್ಷರನ್ನಾಗಿ ಮಾಡಿದಾಗಲೆ ಕನ್ನಡಕ್ಕಾಗಿ ನಡೆಯುತ್ತಿರುವ ದ್ವಿಭಾಷಾ ನೀತಿಯ ಯುದ್ದದಲ್ಲಿ ಅರ್ದ ಯುದ್ದವನ್ನು ಸೋತುಬಿಟ್ಟೆವು ಅನ್ನಿಸಿತ್ತು. ಇನ್ನು ಈ ಸಮಿತಿಯಲ್ಲಿ ಜಾಗ ಗಿಟ್ಟಿಸಿರುವ   ಕನ್ನಡವನ್ನು ಮೇಯುವ ಗೋಮಾಳವನ್ನಾಗಿ ಮಾಡಿಕೊಂಡ ಸ್ವಘೋಷಿತ ಸಾಮಾಜಿಕ ನ್ಯಾಯ-ವಾದಿಗಳು ಯಾವ ಅನಾಹುತ ಮಾಡಿಬಿಡುತ್ತಾರೋ ಎಂಬ ಆತಂಕವಿತ್ತು ಅದೂ ನಿಜವಾಯಿತು. ತಾತ್ವಿಕವಾಗಿ ಸ್ಥಳಿಯತಾವಾದಿಗಳೂ ಪ್ರ್ಯಾಕ್ಟಿಕಲ್ಲಾಗಿ ಇಂಗ್ಲಿಷ್ ವಾದಿಗಳೂ ಆಗಿರುವ ಕರ್ನಾಟಕದ   ವಿದ್ವಾಂಸನಾಮರು, ಕಲಿಯಬೇಕಾದ ಎರಡು ಭಾಷೆಗಳಲ್ಲಿ  ಕನ್ನಡವನ್ನು ಐಚ್ಛಿಕ ಭಾಷೆಯನ್ನಾಗಿ ಮಾಡಿ ಕನ್ನಡವನ್ನು ಆತಂಕದ ಅಂಚಿಗೊಯ್ದು ನಿಲ್ಲಿಸಿಬಿಟ್ಟಿದ್ದಾರೆ.

ಕರ್ನಾಟಕದ್ದೇ ಆದ ಶಿಕ್ಷಣ ನೀತಿಯನ್ನು ನಿರೂಪಿಸುವ ರಾಜಕೀಯ ಕನಸಿನ ಹಿಂದೆ, ನಿರ್ಧಾರದ ಹಿಂದೆ ಕನ್ನಡಿಗರ ಸಂವರ್ಧನೆಯ ಉದ್ದೇಶವಿತ್ತು. ಕನ್ನಡಿಗರ ಸಂವರ್ಧನೆ ಎಂಬ ನುಡಿಗಟ್ಟು ಕನ್ನಡ ಭಾಷೆ, ಶಿಕ್ಷಣ, ರಾಜಕಾರಣ, ಸಮಾಜ,  ಆರ್ಥಿಕತೆ ಹೀಗೆ ಎಲ್ಲ ನೆಲೆಗಳ ಏಳ್ಗೆಯನ್ನು ಸಂಕೇತಿಸುತ್ತದೆ. ಹೀಗಿದ್ದಾಗ ಈ ಆಯೋಗದಿಂದ ದ್ವಿಬಾಷಾ ನೀತಿಯನ್ನು ನಿರೀಕ್ಷಿಸಿದ್ದೆವು

ಆದರೆ ಈ ಆಯೋಗದ ಶಿಪಾರಸುಗಳನ್ನು ನೋಡಿ ಕನ್ನಡಿಗರ ಮನೋ ಕ್ಷಿತಿಜದಲ್ಲಿ ನಿರಾಶೆಯ ಮೋಡ ಕವಿಯಿತು.  ಆಯೋಗ ಕನ್ನಡ ಅಥವಾ ಮಾತೃ ಭಾಷೆ ಮತ್ತು ಇಂಗ್ಲಿಷ್ ಗಳನ್ನೊಳಗೊಂಡ ದ್ವಿಬಾಷಾ ನೀತಿಯನ್ನು ಕರ್ನಾಟಕದ ಮೇಲೆ ಹೇರಿದೆ.

ಈ ನೀತಿ ಕನ್ನಡವನ್ನು ಕಲಿಕೆಗೆ ಕಡ್ಡಾಯ ಮಾಡದ ಕಾರಣ, ಮೊದಲೇ ಅವಕಾಶವಾದಿಗಳಾದ ಕರ್ನಾಟಕದ ಜನ ಕನ್ನಡವನ್ನು ಕೈಬಿಟ್ಟು ಬೇರ್ಯಾವುದೋ ಭಾಷೆಯನ್ನು ಆಯ್ಕೆಮಾಡಲು ಅವಕಾಶಮಾಡಿಕೊಡುತ್ತದೆ.

ಹೀಗೆ, ಕರ್ನಾಟಕವು ಕಂಡ ತನ್ನದೇ ರಾಜ್ಯ ಶಿಕ್ಷಣ ನೀತಿಯ  ಕನಸನ್ನು ನನಸುಮಾಡಲು ಈ ಆಯೋಗ ಸಮರ್ಥವಾಗದೆ  ಸೋತುಹೋಗಿದೆ. 57 ವರ್ಷಗಳ ಹಿಂದೆ 1968 ರಲ್ಲಿ ಕರ್ನಾಟಕದ ಮೇಲೆ ಹೇರಲಾದ ತ್ರಿಬಾಷಾ ನೀತಿಯಂತಹದೇ  ಮತ್ತೊಂದು ದಮನಕಾರಿ ಭಾಷಾ ನೀತಿಯನ್ನು ಈ ವರದಿ ಹೇರಹೊರಟಿದೆ. ಈಗ ಜಾರಿಯಲ್ಲಿರುವ ತ್ರಿಭಾಷಾ ನೀತಿಯಲ್ಲಾದರೂ ಮೂರನೆಯ ಬಾಷೆಯಾಗಿಯಾದರೂ ಕನ್ನಡವನ್ನು ಕಲಿಯುವ ಸಾದ್ಯತೆ ಇತ್ತು. ಈಗ ಕನ್ನಡವನ್ನೇ ಕೈಬಿಟ್ಟುಬಿಡಬಹುದಾದ ಸನ್ನಿವೇಶವನ್ನು ಈ ನೀತಿ ಸೃಷ್ಟಿಸಿಬಿಟ್ಟಿದೆ.

ಈ ಸಂದರ್ಭದಲ್ಲಿ ನಾವು ತಮಿಳುನಾಡು 1968 ರ ಪೂರ್ವದಲ್ಲೇ ತ್ರಿಬಾಷಾ ನೀತಿಯ ಹೇರಿಕೆ ಹಾಗೂ ಹಿಂದಿ ಭಾಷೆಯನ್ನು ಇಂಗ್ಲಿಷ್ ಜೊತೆಗೆ ಅಧಿಕೃತ  ಸಂಪರ್ಕ ಬಾಷೆಯಾಗಿ ಉಳಿಸಿಕೊಂಡಿದ್ದನ್ನು ವಿರೋಧಿಸಿ ತನ್ನದೇ ಆದ ದ್ವಿಬಾಷಾ ನೀತಿಯ ಹಾದಿ ತುಳಿದ ಕತೆಯನ್ನು ನೆನಪಿಸಿಕೊಳ್ಳಬೇಕಾಗಿದೆ.

ಆ ವಿದ್ಯಮಾನಗಳ ಕುರಿತ ಪತ್ರಿಕಾ ವರದಿ ಇಲ್ಲಿದೆ :
“ಮದ್ರಾಸ್ ರಾಜ್ಯದಲ್ಲಿ ದ್ವಿಭಾಷಾ ನೀತಿ ಅಧಿಕೃತವಾಗಿ  ಜಾರಿಗೆ ಬಂದ ಪತ್ರಿಕಾ ವರದಿ ಇಲ್ಲಿದೆ”

“1968 ರಲ್ಲಿ, ಸಂಸತ್ತು ಎಲ್ಲಾ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ಅಧಿಕೃತ ಭಾಷಾ ನಿರ್ಣಯವನ್ನು ಅಂಗೀಕರಿಸಿತು. ಇದು ಮದ್ರಾಸ್‌ನಲ್ಲಿ ವಿದ್ಯಾರ್ಥಿಗಳಿಂದ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಸಿ.ಎನ್. ಅಣ್ಣಾದೊರೈ ನೇತೃತ್ವದ ಮೊದಲ ಡಿಎಂಕೆ ಸರ್ಕಾರವು ಜನವರಿ 26, 1968 ರಂದು ವಿಧಾನಸಭೆಯಲ್ಲಿ ಸೂತ್ರವನ್ನು ತಿರಸ್ಕರಿಸುವ ನಿರ್ಣಯವನ್ನು ಅಂಗೀಕರಿಸಿತು.

ಕೇಂದ್ರದ ತ್ರಿಭಾಷಾ ನೀತಿ ಮತ್ತು ಆ ನೀತಿಯ ವಿರುದ್ಧ ನಿಂತ  ತಮಿಳುನಾಡು
*********************
“1968 ರ ಆರಂಭದಲ್ಲಿ, ಸಂಸತ್ತು 1967 ರ ಅಧಿಕೃತ ಭಾಷೆಗಳ (ತಿದ್ದುಪಡಿ) ಕಾಯ್ದೆಯನ್ನು ಅಂಗೀಕರಿಸಿತು, ಇದು ಹಿಂದಿಯನ್ನು ದೇಶದಲ್ಲಿ ಏಕೈಕ ಅಧಿಕೃತ ಭಾಷೆಯಾಗಿ ಅಳವಡಿಸಿಕೊಳ್ಳುವ ಹಿಂದಿನ ನೀತಿಯನ್ನು ಮುಂದೂಡಿ, ಹಿಂದಿಯ ಜೊತೆಗೆ ಇಂಗ್ಲಿಷ್ ಅನ್ನು ಅಧಿಕೃತ ಸಂವಹನ ಭಾಷೆಯಾಗಿ ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು. ಇದು 1968 ರ ಅಧಿಕೃತ ಭಾಷಾ ನಿರ್ಣಯವನ್ನೂ ಸಹ ಅಂಗೀಕರಿಸಿತು. ಈ ನಿರ್ಣಯವು ಎಲ್ಲಾ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರವನ್ನು ಸಂಪೂರ್ಣವಾಗಿ ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿತು: ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಹೊರತುಪಡಿಸಿ ದಕ್ಷಿಣ ಭಾಷೆಗಳಲ್ಲಿ ಒಂದಾದ ಆಧುನಿಕ ಭಾರತೀಯ ಭಾಷೆಯ ಅಧ್ಯಯನ, ಮತ್ತು ಹಿಂದಿ ಮಾತನಾಡದ ಪ್ರದೇಶಗಳಲ್ಲಿ ಪ್ರಾದೇಶಿಕ ಭಾಷೆಗಳು ಮತ್ತು ಇಂಗ್ಲಿಷ್ ಜೊತೆಗೆ ಹಿಂದಿಯನ್ನು ಅಧ್ಯಯನ ಮಾಡುವುದು.”

“ಇದು ಮದ್ರಾಸ್‌ನಲ್ಲಿ ವಿದ್ಯಾರ್ಥಿಗಳ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು, ಇದು ಸಿ.ಎನ್.ಅಣ್ಣಾದೊರೈ ನೇತೃತ್ವದ ಮೊದಲ ಡಿಎಂಕೆ ಸರ್ಕಾರವು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದಾಗಿ ಘೋಷಿಸಿತು. ಆಗ ಮದ್ರಾಸ್ ಸರ್ಕಾರವು ಜನವರಿ 26, 1968 ರಂದು ವಿಧಾನಸಭೆಯಲ್ಲಿ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸುವ ನಿರ್ಣಯವನ್ನು ಅಂಗೀಕರಿಸಿತು.”

1968 ರಲ್ಲಿ  ದ್ವಿಬಾಷಾ ನೀತಿಯನ್ನು ಜಾರಿಮಾಡಿದ ಅಣ್ಣಾದೊರೈ ಅವರ ಮುಂಗಾಣ್ಕೆ ಮತ್ತು ಧೀಮಂತಿಕೆ

“ಒಂದು ಪ್ರದೇಶದ ಪ್ರಾಬಲ್ಯ,
*****************************
ವಿಭಿನ್ನ ಭಾಷೆಗಳು, ಸಂಸ್ಕೃತಿಗಳು ಮತ್ತು ನಾಗರಿಕತೆಗಳ ಭೂಮಿಯಲ್ಲಿ ಭಾರತದ ಅಧಿಕೃತ ಭಾಷೆಯಾಗಿ ಪ್ರಾದೇಶಿಕ ಭಾಷೆಗಳಲ್ಲಿ ಒಂದನ್ನು ಅಳವಡಿಸಿಕೊಳ್ಳುವುದರಿಂದ, ಒಂದು ಪ್ರದೇಶವು ಇತರ ಪ್ರದೇಶಗಳ ಮೇಲೆ ಪ್ರಾಬಲ್ಯ ಸಾಧಿಸುತ್ತದೆ ಎಂದು ನಿರ್ಣಯವು ವಾದಿಸಿತು. ತಮಿಳು ಮತ್ತು ಇತರ ರಾಷ್ಟ್ರೀಯ ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಅಳವಡಿಸಿಕೊಳ್ಳುವವರೆಗೆ, ಇಂಗ್ಲಿಷ್ ಅಧಿಕೃತ ಭಾಷೆಯಾಗಿ ಮುಂದುವರಿಯಬೇಕು ಮತ್ತು ಸಂವಿಧಾನವನ್ನು ಸೂಕ್ತವಾಗಿ ತಿದ್ದುಪಡಿ ಮಾಡಬೇಕು ಎಂದು ಅದು ಪ್ರಸ್ತಾಪಿಸಿತು.”

“ಸಂಸತ್ತು ಅಂಗೀಕರಿಸಿದ 1967 ರ ಅಧಿಕೃತ ಭಾಷೆಗಳ (ತಿದ್ದುಪಡಿ) ಕಾಯ್ದೆ ಮೇಲಿನ ಉದ್ದೇಶವನ್ನು ಸಾಧಿಸಲು ಸಹಾಯ ಮಾಡುವುದಿಲ್ಲ, ಆದರೆ ಆಡಳಿತಕ್ಕೆ ಸಂಬಂಧಿಸಿದವರಲ್ಲಿ ಪರಸ್ಪರ ದ್ವೇಷ, ಘರ್ಷಣೆ ಮತ್ತು ಅನಿವಾರ್ಯ ಗೊಂದಲದೊಂದಿಗೆ ಎರಡು ವಿಭಜನೆಗಳನ್ನು ಸೃಷ್ಟಿಸುತ್ತದೆ ಎಂದು ಈ ಸದನವು ಅಭಿಪ್ರಾಯಪಟ್ಟಿದ್ದರೂ, ಮೇಲೆ ಹೇಳಿದಂತೆ ಉದ್ದೇಶವನ್ನು ಸಾಧಿಸಲು ನಿರಂತರವಾಗಿ ಶ್ರಮಿಸಲು ಈ ಸದನವು ನಿರ್ಧರಿಸುತ್ತದೆ. ಅಧಿಕೃತ ಭಾಷೆಗಳ (ತಿದ್ದುಪಡಿ) ಕಾಯ್ದೆಯೊಂದಿಗೆ ಅಂಗೀಕರಿಸಲಾದ ಭಾಷಾ ನೀತಿಯ ಕುರಿತಾದ ನಿರ್ಣಯವು ಹಿಂದಿಯೇತರ ಪ್ರದೇಶಗಳ ಜನರಿಗೆ ಅನ್ಯಾಯವಾಗುವುದರಿಂದ, ಅವರನ್ನು ಹೊಸ ಹೊರೆಗಳೊಂದಿಗೆ ಅನಾನುಕೂಲಕ್ಕೆ ಒಳಪಡಿಸುತ್ತದೆ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಈ ನಿರ್ಣಯವನ್ನು ಜಾರಿಗೊಳಿಸಬಾರದು ಎಂದು ಸರ್ವಾನುಮತದಿಂದ ಅಭಿಪ್ರಾಯಪಟ್ಟಿರುವುದರಿಂದ, ಕೇಂದ್ರ ಸರ್ಕಾರವು ಆ ನಿರ್ಣಯದ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಹಿಂದಿಯೇತರ ಪ್ರದೇಶಗಳ ಜನರು ಯಾವುದೇ ಅನಾನುಕೂಲತೆ ಅಥವಾ ಹೆಚ್ಚುವರಿ ಹೊರೆಗೆ ಒಳಗಾಗದಂತೆ ನೋಡಿಕೊಳ್ಳಲು ಮಾರ್ಗಗಳು ಮತ್ತು ವಿಧಾನಗಳನ್ನು ರೂಪಿಸಬೇಕು ಎಂದು ಈ ಸದನವು ನಿರ್ಧರಿಸುತ್ತದೆ,” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಕೆಂದ್ರದ ಅದಿಕೃತ ಭಾಷೆಯಾಗಿ ಹಿಂದಿಯನ್ನು ಉಳಿಸಿಕೊಳ್ಳುವ ಬಗ್ಗೆ ಮತ್ತು ತ್ರಿಬಾಷಾ ನೀತಿಯ ಹೇರಿಕೆಯ ದುಷ್ಪರಿಣಾಮಗಳನ್ನು ಅಣ್ಣಾದೊರೈ ಯವರು ಅಂದೇ ಗುರುತಿಸುತ್ತಾರೆ ಅವರ ತರ್ಕದ ಪ್ರಕಾರ :
“ವಿಭಿನ್ನ ಭಾಷೆಗಳು, ಸಂಸ್ಕೃತಿಗಳು ಮತ್ತು ನಾಗರಿಕತೆಗಳ ಭೂಮಿಯಲ್ಲಿ ಭಾರತದ ಅಧಿಕೃತ ಭಾಷೆಯಾಗಿ ಪ್ರಾದೇಶಿಕ ಭಾಷೆಗಳಲ್ಲಿ ಒಂದನ್ನು ಅಳವಡಿಸಿಕೊಳ್ಳುವುದರಿಂದ, ಒಂದು ಪ್ರದೇಶವು ಇತರ ಪ್ರದೇಶಗಳ ಮೇಲೆ ಪ್ರಾಬಲ್ಯ ಸಾಧಿಸುತ್ತದೆ”

“ಅಧಿಕೃತ ಭಾಷೆಗಳ (ತಿದ್ದುಪಡಿ) ಕಾಯ್ದೆಯೊಂದಿಗೆ ಅಂಗೀಕರಿಸಲಾದ ಭಾಷಾ ನೀತಿಯ ಕುರಿತಾದ ನಿರ್ಣಯವು ಹಿಂದಿಯೇತರ ಪ್ರದೇಶಗಳ ಜನರಿಗೆ ಅನ್ಯಾಯವಾಗುವುದರಿಂದ, ಅವರನ್ನು ಹೊಸ ಹೊರೆಗಳೊಂದಿಗೆ ಅನಾನುಕೂಲಕ್ಕೆ ಒಳಪಡಿಸುತ್ತದೆ”.

ಎನ್ನುವ ಮುಂಗಾಣ್ಕೆಯ ಮೂಲಕ ಹಿಂದಿಯನ್ನು ದೇಶದ ಅಧಿಕ ಭಾಷೆಯಾಗಿ ಒಪ್ಪುವ ಹಾಗೂ ತ್ರಿಬಾಷಾ ನೀತಿಯನ್ನು  ಅಂಗೀಕರಿಸುವ ವಿರುದ್ದ ನಿಲ್ಲುತ್ತದೆ.

ಆಗ ಕರ್ನಾಟಕದಿಂದ ಒಂದೇ ಒಂದು ಏಕಾಂಗಿ ದನಿ , ತ್ರಿಬಾಷಾ ಸೂತ್ರ ಕನ್ನಡದ ಏಳ್ಗೆಗೆ ಬಾಧಕವಾಗುತ್ತದೆ ಎಂಬ   ಆತಂಕವನ್ನು ಕನ್ನಡಿಗರೊಂದಿಗೆ ಹಂಚಿಕೊಂಡಿತ್ತು. ಆ ಏಕಯಕ ದನಿಯೇ ಕವಿ ಕುವೆಂಪು ಅವರದ್ದು. ಕುವೆಂಪು ಒಬ್ಬರೇ ಏಕಾಂಗಿಯಾಗಿ  ತ್ರಿಭಾಷಾ ಸೂತ್ರ ತ್ರಿಶೂಲವಿದ್ದಂತೆ ,  ತ್ರಿಬಾಷಾ ಸೂತ್ರ, ಹಿಂದಿಯನ್ನು ಹಿಂಬಾಗಿಲಿನಿಂದ ಒಳನುಗ್ಗಿಸುವ ಹುನ್ನಾರ. ಹಿಂದಿ, ಇಂಗ್ಲಿಷ್ ಗಿಂತಲೂ ಕನ್ನಡದ ಏಳ್ಗೆಗೆ ಅಪಾಯಕಾರಿ ಎಂದು ಕನ್ನಡಿಗರನ್ನು ಎಚ್ಚರಿಸಿದ್ದರು‌.   ದುರದೃಷ್ಟವಶಾತ್ ಕರ್ನಾಟಕ ಅಂದಿನಿಂದ ಇಂದಿನವರೆಗೂ ಕುವೆಂಪು ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

“ಇಂಗ್ಲಿಷ್‌ಗಿಂತ ಹಿಂದಿ ಹೆಚ್ಚು ಅಪಾಯಕಾರಿ. ನಾವು ಎಂದು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡೆವೋ ಅಂದೇ ಹಿಂದಿಯ ಉರುಳಿಗೆ ಸಿಕ್ಕಿದೆವು. ತ್ರಿಭಾಷಾ ಸೂತ್ರವನ್ನು ತಮಿಳುನಾಡು ಒಪ್ಪಿಲ್ಲ. ಈ ವಿಷಯದಲ್ಲಿ ನಾವು ತಮಿಳರನ್ನು ಅನುಸರಿಸಬೇಕು. ಬಹುಭಾಷೆಗಳಲ್ಲಿ ದ್ವಿಭಾಷೆ’ ಎಂಬುದು ನಮ್ಮ ಸೂತ್ರವಾಗಬೇಕು. ಹಿಂದಿ ಇದುವರೆಗೆ ಪರೀಕ್ಷೆಯ ವಿಷಯವಾಗಿರಲಿಲ್ಲ: ಈಗ ಆಗಿದೆಯಂತೆ. ಇದು ತಪ್ಪು. ಹಳ್ಳಿಗಳಿಗೂ ಹಿಂದಿಯನ್ನು ವಿಸ್ತರಿಸುವುದು ಅವಿವೇಕ. ಇಂತಹುದು ಯಾವ ದೇಶದಲ್ಲೂ ಇಲ್ಲ. ನಾವು ಎಚ್ಚರದಿಂದಿರದ್ದರೆ, ಹಿಂದಿ ಸಮುದ್ರದಲ್ಲಿ ಕನ್ನಡ, ಇಂಗ್ಲಿಷ್ ಎರಡೂ ಮುಳುಗಿಹೋಗುತ್ತವೆ.”

“ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ, ಇಂಗ್ಲಿಷುಗಳು ಬಲಾತ್ಕಾರ ಭಾಷೆಗಳಾಗುತ್ತದೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು.

“ಇಂಗ್ಲಿಷಿನ ಸ್ಥಾನದಲ್ಲಿ ಹಿಂದಿಯನ್ನು ತಂದು ಕೂರಿಸಬೇಕೆಂಬುದು ಹಿಂದಿವಾದಿಗಳ ಸಂಚು. ಇದನ್ನು ಕನ್ನಡಿಗರು ಪ್ರತಿಭಟಿಸಿ ವಿಫಲಗೊಳಿಸಬೇಕು. ಕೇಂದ್ರ ಸರ್ಕಾರವನ್ನು ಮೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರ ಹಿಂದಿ ವಿಶ್ವವಿದ್ಯಾನಿಲಯ ಸ್ಥಾಪನೆಯೇ ಮುಂತಾದ ಅವಿವೇಕದ ಕಾರಗಳಿಗೆ ಕೈಹಾಕಿ ಕನ್ನಡಿಗರ ಹಿತವನ್ನು ಬಲಿಕೊಡಬಾರದು. ಈ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಎಚ್ಚರ ಬೇಕು : ಒಂದು ಕ್ಷಣ ಕಣ್ಣು ಮುಚ್ಚಿಕೊಳ್ಳುವ ತಪ್ಪಿಗೆ ಯುಗ ಯುಗಗಳ ಅಂಧಕಾರ ಫಲವನ್ನು ಅನುಭವಿಸಬೇಕಾದೀತು.”

ದುರದೃಷ್ಟವಶಾತ್ ಕುವೆಂಪು ಅವರು ಕರೆಗೆ ಎಚ್ಚರಕ್ಕೆ, ಕರ್ನಾಟಕ ಕಿವಿಗೊಡದೆ ನಿರ್ಲಕ್ಷ್ಯ ತೋರಿತು ಇವತ್ತಿಗೂ ಅದು ಬದಲಾಗಿಲ್ಲ. ಆದರೆ 1968 ರ ಆ ಕಾಲದಲ್ಲಿ ಹೇಗೋ ಈ ದಿನದವರೆಗೂ ತಮಿಳುನಾಡು ಸಮಾನ ಎಚ್ಚರದಿಂದ ಅದೇ  ಅಭಿಮಾನವನ್ನು ಕಾಯ್ದುಕೊಂಡುಬಂದಿದೆ.

ಈಚೆಗಷ್ಟೇ ರಾಜ್ಯದ ಶಿಕ್ಷಣ ನೀತಿಯ ಕರಡನ್ನು ಬಿಡುಗಡೆ ಮಾಡುತ್ತ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಹೇಳಿದ ಮಾತುಗಳು ಕನ್ನಡಿಗರಿಗೆ ಪಾಠವಾಗಬೇಕಾಗಿದೆ.

“ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಪರ್ಯಾಯವಾಗಿ ತಮಿಳುನಾಡು ಸರ್ಕಾರ ರೂಪಿಸಿರುವ ಶಾಲಾ ಶಿಕ್ಷಣ ನೀತಿ-2025 (ಎಸ್‌ಇಪಿ) ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಮಾತೃಭಾಷೆ ತಮಿಳು ನಮ್ಮ ಅಸ್ಮಿತೆ, ನಮ್ಮ ಹೆಮ್ಮೆ ಎನ್‌ಇಪಿ ಮೂಲಕ ಹಿಂದಿ ಹೇರಿಕೆ ಮಾಡುವ ಪ್ರಯತ್ನಗಳಿಗೆ ನಾವು ಮಣಿಯುವುದಿಲ್ಲ’ ಎಂದು ಹೇಳಿದರು. ‘ತಮಿಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಸಾಮಾಜಿಕ ಪರಂಪರೆ ಶಿಕ್ಷಣ ನೀತಿಯಲ್ಲಿ ಅಡಗಿದೆ. ತಮಿಳುನಾಡು ಎಲ್ಲದರಲ್ಲೂ ವಿಶಿಷ್ಟತೆಯನ್ನು ಹೊಂದಿದೆ. ನಮ್ಮಲ್ಲಿ ಪ್ರಗತಿಪರ ಆಲೋಚನೆಗಳಿವೆ. ಇದೆಲ್ಲದರ ಆಧಾರದ ಮೇಲೆ ಶಿಕ್ಷಣ ನೀತಿ ರಚಿಸಲಾಗಿದೆ’ ಎಂದರು.

ಆದರೆ ಕರ್ನಾಟಕದಲ್ಲೇನಾಗಿದೆ ..? ಇಲ್ಲಿ ಕನ್ನಡದ ಬಗೆಗೆ ದ್ವಿಭಾಷಾ ನೀತಿಯ ಬಗೆಗೆ ದನಿಯೆತ್ತುವವರೇ ಇಲ್ಲವಾಗಿದೆ ಇನ್ನು ಭಾಷಾ ನೀತಿಯ ಬಗೆಗೆ ಸ್ಪಷ್ಟತೆ ತಳೆಯುವ ಮಾತು ದೂರವೇ ಉಳಿಯಿತು.

ದ್ವಿಭಾಷಾ ನೀತಿಯಲ್ಲಿ ಕನ್ನಡವನ್ನೇ ಬಿಟ್ಟುಬಿಡಬಹುದಲ್ಲ ? ಎಂಬ ಆತಂಕದ ಪ್ರಶ್ನೆಯನ್ನು ಪ್ರೊ ಕೆ ಎಸ್ ಭಗವಾನ್ ಅವರು ಅಂದೇ ಕುವೆಂಪು ಅವರ ಎದುರು ಇಟ್ಟಿದ್ದರು.  ಆತಂಕಿತರಾದ ಕುವೆಂಪು ಅಂದೇ ಈ ಉತ್ತರ ಕೊಟ್ಟಿದ್ದರು : ”ಬಹುಭಾಷೆಗಳಲ್ಲಿ ದ್ವಿಭಾಷೆ’ ಸೂತ್ರದಲ್ಲಿ ಕನ್ನಡವನ್ನೇ ಬಿಟ್ಟುಬಿಡಬಹುದಲ್ಲ? ಎಂದು ನನ್ನನ್ನು ಕೆಲವರು ಕೇಳಿದರು, ಬಹುಭಾಷೆಗಳನ್ನಿಟ್ಟಾಗ ದ್ವಿಭಾಷೆ ತೆಗೆದುಕೊಂಡರೆ ಸಾಕು ಅಂದರೆ ಕನ್ನಡವನ್ನೇ ಬಿಡುವುದೇ? ಅದಕ್ಕೆ ನಾನು ಹೇಳಿದೆ  ಸರಕಾರ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕು. ಆಗ ಕನ್ನಡ ತನಗೆ ಬೇಡ ಎಂದು ಯಾರಾದರೂ ಹೇಳಿದರೆ ಅದರ ಅರ್ಥ ಏನೆಂದರೆ ಕನ್ನಡ ಭಾಷೆಯಿಂದ ಬರುವ ಯಾವ ಪ್ರಯೋಜನವನ್ನೂ ಅವನು ಪಡೆಯೋದಿಲ್ಲ ಅಂತ. ಇಂಥ ವ್ಯಕ್ತಿ ರಷ್ಯಕ್ಕೋ ಇನ್ನೆಲ್ಲಿಗೋ ಹೊರಗೆ ಹೋಗುವವನು ಬಹುಭಾಷೆಗಳಲ್ಲಿ ದ್ವಿಭಾಷೆ ಅಂದಾಗ ರಷ್ಯನ್ ಮತ್ತು ಇಂಗ್ಲಿಷ್ ಕಲಿತೀನಿ ಅನ್ನಬಹುದು. ಅಥವಾ ಇಂಗ್ಲಿಷ್ ಮತ್ತು ಇನ್ನೊಂದು ಭಾಷೆ ಕಲಿತೀನಿ ಅನ್ನಬಹುದು. ಅಂದರೆ ಕನ್ನಡಿಗನಾದರೂ ಅವನು ಕರ್ನಾಟಕದಲ್ಲಿ ಇರೋದಿಲ್ಲ. ಕನ್ನಡದಿಂದ ಅವನಿಗೆ ಪ್ರಯೋಜನ ಇಲ್ಲ.

ಆದರೆ ಯಾವಾಗ ಅಧಿಕೃತ ಭಾಷೆ ಆಗಿ ಎಲ್ಲ ವ್ಯವಹಾರ ಕನ್ನಡದಲ್ಲಿ ನಡೆಯುವುದೋ, ಕೆಲಸಕ್ಕೆ ಸೇರಬೇಕಾದರೆ ಕನ್ನಡ ಕಲಿತಿರಲೇಬೇಕು ಎಂದಾಗುವುದೋ ಆಗ ಕರ್ನಾಟಕದಲ್ಲಿ ಇರುವಂಥ ಎಲ್ಲ ಜನರೂ ಕನ್ನಡ ಕಲಿಯಲೇಬೇಕಾಗುತ್ತದೆ. ನಾವು ಬಹುಭಾಷೆಗಳಲ್ಲಿ ದ್ವಿಭಾಷೆ ಅಂದಾಗ ಒಂದು ಭಾಷೆ ಕನ್ನಡ ಎಂದೇ ಅವರು ತಿಳಿದುಕೊಳ್ಳಬೇಕಾಗುತ್ತದೆ. ದೇಶ ಸ್ವತಂತ್ರವಾದ ಮೇಲೆ ಎಂದು ನೀವು ತ್ರಿಭಾಷೆಯನ್ನು ಒಪ್ಪಿಕೊಂಡಿರೋ ಅಂದೇ ನಿಮ್ಮದೆಲ್ಲಾ ಹೋಯಿತು. ತ್ರಿಭಾಷಾ ಸೂತ್ರ ಒಪ್ಪಿಕೊಂಡರೆ ಇಂಗ್ಲಿಷ್ ಮತ್ತು ಹಿಂದಿ ಕಡ್ಡಾಯವಾಗುತ್ತವೆ. ದೇಶಭಾಷೆಗಳು ಕಡ್ಡಾಯ ಆಗುವುದಿಲ್ಲ ಗೊತ್ತಾಯಿತೆ?”

ಇವತ್ತು ಕುವೆಂಪು ಅವರು ಎದುರಿಸಿದ ಆತಂಕ ನಿಜವಾಗಿದೆ  ಕರ್ನಾಟಕ ರಾಜ್ಯ  ಶಿಕ್ಷಣ ನೀತಿ ಆಯೋಗ ಶಿಪಾರಸ್ ಮಾಡಿರುವ ದ್ವಿಭಾಷಾ ನೀತಿಯಲ್ಲಿ ಕನ್ನಡವನ್ನು ಕೈಬಿಟ್ಟುಬಿಡಬಹುದಾದ ಆತಂಕಕ್ಕೆ ಎಡೆಕೊಟ್ಟಿದೆ.

ಹೇಳುವುದಕ್ಕೆ ಮತ್ತು ಕೇಳುವುದಕ್ಕೆ ಮತ್ತು ಮೇಲ್ನೋಟಕ್ಕೆ  ದ್ವಿಭಾಷಾ ನೀತಿ ಎಂಬುದು ಕನ್ನಡದ ಪರವಾಗಿ ಇದ್ದಂತೆ ಕಂಡರೂ ಈ ನೀತಿ ಕನ್ನಡ ಘಾತುಕವಾಗಿರುವುದನ್ನು ಕಂಡುಕೊಂಡು ಕನ್ನಡಿಗರು ಈ ನೀತಿಯನ್ನು ಹೇರದಂತೆ ಪ್ರತಿಭಟಿಸಿ ತಿರಸ್ಕರಿಸಬೇಕಾಗಿದೆ.

ಆಯೋಗದ ಸ್ಪಷ್ಟೀಕರಣ :  
ಪತ್ರಿಕೆಗಳಿಗೆ ನೀಡಿದ ಶಿಪಾರಸು ಪಟ್ಟಿಯನ್ನು ಹಿಂಪಡೆಯಲಿಲ್ಲವೇಕೆ?:

ಈ ನಡುವೆ ಆಯೋಗದ ಶಿಪಾರಸುಗಳು ಪತ್ರಿಕೆಯಲ್ಲಿ  ಪ್ರಕಟವಾದ ನಂತರ ಆಯೋಗದ ಅಧ್ಯಕ್ಷರು ಮತ್ತು ಒಬ್ಬರು ಸದಸ್ಯರು ಕೊಟ್ಟ ಸ್ಪಷ್ಟೀಕರಣಗಳ ಆಧಾರದಲ್ಲಿ ಶೇಕಡಾ ತೊಂಬತ್ತರಷ್ಟು ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಗಳನ್ನೊಳಗೊಂಡ ದ್ವಿಭಾಷಾ ನೀತಿಯನ್ನೇ ಶಿಪಾರಸು ಮಾಡಲಾಗಿದೆಯಂತೆ. ಮಿಕ್ಕುಳಿದ ಭಾಷಾ ಅಲ್ಪ ಸಂಖ್ಯಾತರ ಶಾಲೆಗಳಲ್ಲಿ ತ್ರಿಭಾಷಾ ನೀತಿಯನ್ನು ಶಿಪಾರಸು ಮಾಡಲಾಗಿದೆ ಎಂದಿದ್ದಾರೆ. ಆದರೆ ಪತ್ರಿಕೆಗಳಲ್ಲಿ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಯಾಕೆ “ಕನ್ನಡ ಅಥವಾ ಮಾತೃಭಾಷೆ ಮತ್ತು ಇಂಗ್ಲಿಷ್ ” ಎಂದು ನೀಡಲಾಯಿತು. ಈ ಬಗ್ಗೆ ಆಯೋಗ ಸ್ಪಷ್ಟೀಕರಣ ಕೊಡಬೇಕಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page