Saturday, June 15, 2024

ಸತ್ಯ | ನ್ಯಾಯ |ಧರ್ಮ

ನೇಮಕಾತಿಗಳ ಬಗ್ಗೆ ನ್ಯಾಯಾಂಗ ತನಿಖೆ ಆಗಲಿ: ಸಿದ್ದರಾಮಯ್ಯ ಮನವಿ

ಬೆಂಗಳೂರು: ಏಳನೇ ದಿನದ ವಿಧಾನಸಭಾ ಅಧೀವೇಶನದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದ ಅವಧಿ ಸೇರಿದಂತೆ ಈ ವರಗಿನ ನೇಮಕಾತಿಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಈ ಕುರಿತು ಅಧಿವೇಶನದಲ್ಲಿ ಮಾತಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿರುವ ನೇಮಕಾತಿಗಳು ಸೇರಿದಂತೆ ಈ ವರೆಗಿನ ಎಲ್ಲ ನೇಮಕಾತಿಗಳ ಬಗ್ಗೆ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಪಿಎಸ್‌ಐ ಹಗರಣದ ಹಿಂದೆ ಯಾವುದಾದರೂ ರಾಜಕಾರಣಿಗಳ ಕೈವಾಡ ಇದೆಯಾ? ಮಂತ್ರಿಗಳು ಹಾಗೂ ಅವರ ಸಂಬಂಧಿಕರು ಇದರಲ್ಲಿ ಷಾಮೀಲಾಗಿದ್ದಾರೆಯೇ? ಈ ಸತ್ಯಗಳು ಹೊರಬರಬೇಕು. ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರನ್ನು ಕರೆದು ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ 22 ಜನ ಅಧಿಕಾರಿಗಳು ಸೇರಿದಂತೆ ಒಟ್ಟು 97 ಜನರ ಬಂಧನವಾಗಿದೆ. ಇಷ್ಟೊಂದು ದೊಡ್ಡ ಮಟ್ಟದ ಹಗರಣ ಆಗಬೇಕಾದರೆ ರಾಜಕಾರಣಿಗಳ ಕೈವಾಡ ಇಲ್ಲದೆ ಇರುತ್ತದೆಯಾ? ಇದರಲ್ಲಿ 4 ಜನ ಮಂತ್ರಿಗಳು ಷಾಮಿಲಾಗಿದ್ದಾರೆ ಎಂಬ ವಕೀಲರ ಸಂಘದ ರಂಗನಾಥ್ ಆರೋಪದ ಬಗ್ಗೆ ಬಿಜೆಪಿ ಸರ್ಕಾರ ಯಾಕೆ ತನಿಖೆ ನಡೆಸಿಲ್ಲ ? ಎಂದು ಸಿದ್ದರಾಮಯ್ಯ ದೂರಿದರು.

ಬಂಧಿತ ಎಡಿಜಿಪಿ ಅಮೃತ್ ಪೌಲ್ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿ ಆಗಿ ಯಾರು ನೇಮಕ ಮಾಡಿದ್ದು? ಪ್ರಕರಣ ಬೆಳಕಿಗೆ ಬಂದು ಇವರ ಕಚೇರಿ ಮೇಲೆ ದಾಳಿ ನಡೆದ ನಂತರ ಅವರನ್ನು ವಿಚಾರಣೆಗೊಳಪಡಿಸದೆ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲು ಏನು ಕಾರಣ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಡಿಜಿಪಿ ಅಮೃತ್ ಪೌಲ್ ಅವರನ್ನು ಮಂಪರು ಪರೀಕ್ಷೆ ಏಕೆ ಮಾಡಬಾರದು? ಐಪಿಸಿ ಸೆಕ್ಷನ್ 164ರಡಿ ಅವರ ಹೇಳಿಕೆಯನ್ನು ಏಕೆ ರೆಕಾರ್ಡ್ ಮಾಡಿಲ್ಲ? ಖಾಲಿ ಉತ್ತರ ಪತ್ರಿಕೆ ತುಂಬಲು ಎಡಿಜಿಪಿ ಅವರು ಯಾರ ನಿರ್ದೇಶನದ ಮೇಲೆ ಕಾನ್ಸ್‌ಟೆಬಲ್‌ಗಳನ್ನು ಕಳಿಸಿದ್ದರು? ಎಂದು ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 1672 ಸಬ್ ಇನ್ಸ್‌ಪೆಕ್ಟರ್, 30,100 ಜನ ಕಾನ್ಸ್‌ಟೆಬಲ್ ಗಳು, 1102 ಜನ ಜೈಲ್ ವಾರ್ಡನ್‌ಗಳು, 33 ಜನ ಫೊರೆನ್ಸಿಕ್ ಇಲಾಖೆಗೆ ಸೇರಿದ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಆ ಬಗ್ಗೆ ಯಾವ ದೂರುಗಳು ಕೇಳಿಬಂದಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ಸರ್ಕಾರದ ನೇಮಕಾತಿಯನ್ನು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಕೂಡಾ ಗಮನಿಸಿ ಕರ್ನಾಟಕದ ಮಾದರಿಯನ್ನು ಅನುಸರಿಸುವಂತೆ ಬೇರೆ ರಾಜ್ಯಗಳಿಗೆ ಸಲಹೆ ನೀಡಿದ್ದರು. ನೇಮಕಾತಿಯ ಉಸ್ತುವಾರಿ ಹೊತ್ತಿದ್ದ ಪೊಲೀಸ್ ಅಧಿಕಾರಿ ಔರಾದ್ ಕರ್ ಅವರು ಹಲವು ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ ಎಂದರು.
ನಮ್ಮ ಕಾಲದಲ್ಲಿ ಕೂಡಾ ಪೊಲೀಸ್ ನೇಮಕಾತಿಯಲ್ಲಿ ಹಗರಣಗಳಾಗಿವೆ ಎಂದು ಸುಳ್ಳು ಆರೋಪ ಮಾಡುವುದು ಸರಿ ಅಲ್ಲ. ನಾವು ಸಾವಿರಾರು ಪೊಲೀಸ್ ಸಿಬ್ಬಂದಿ ನೇಮಕ ಮಾಡಿದ್ದೇವೆ. ಅಕ್ರಮದ ಬಗ್ಗೆ ಪುರಾವೆಗಳಿದ್ದರೆ ಮೊದಲು ತನಿಖೆ ನಡೆಸಿ ಎಂದು ಹೇಳಿದರು
ಪಿಎಸ್‌ಐ ನೇಮಕಾತಿ ಹಗರಣದ ಸೂತ್ರಧಾರಿ ದಿವ್ಯಾ ಹಾಗರಗಿ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಿದ್ದು ಯಾರು? ಅವರ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಶಿಫಾರಸು ಮಾಡಿದವರು ಯಾರು? ಅವರ ಜೊತೆ ಹಗರಣದಲ್ಲಿ ಷಾಮೀಲಾಗಿದ್ದವರು ಯಾರು? ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಪಿಎಸ್‌ಐ ನೇಮಕಾತಿ ಹಗರಣ ಬಯಲಾದಾಗ ಗೃಹ ಸಚಿವರು ಅದನ್ನು ನಿರಾಕರಿಸಿದ್ದರು. ಅದರ ನಂತರ ಸಚಿವ ಪ್ರಭು ಚೌಹ್ಹಾಣ್ ಅಕ್ರಮದ ಬಗ್ಗೆ ಪತ್ರ ಬರೆದಿದ್ದರು. ಈ ಕುರಿತು ಪತ್ರಿಕೆಗಳಲ್ಲಿ ಸರಣಿ ವರದಿಗಳು ಪ್ರಕಟವಾಗಿವೆ. ಇವೆಲ್ಲವನ್ನೂ ಗಮನಿಸಿದರೆ ಹಗರಣವನ್ನು ಮುಚ್ಚಿಹಾಕಲು ಬಿಜೆಪಿ
ಸರ್ಕಾರ ಪ್ರಯತ್ನಿಸುತ್ತಿರುವ ಅನುಮಾನ ಮೂಡುತ್ತದೆ ಎಂದು ಆರೋಪಿಸಿದರು.
ಕನಕಗಿರಿಯ ಪರಸಪ್ಪ ಎಂಬಾತ ಮಗನ ಉದ್ಯೋಗಕ್ಕಾಗಿ ಶಾಸಕ ಬಸವರಾಜ ದಡೆಸೂಗೂರು ಅವರಿಗೆ ರೂ. 15 ಲಕ್ಷ ನೀಡಿದ್ದೇನೆ ಎಂದು ಹೇಳಿದ್ದ ಅಡಿಯೋ ಮತ್ತು ವಿಡಿಯೋ ಲೀಕ್ ಆಗಿದೆ, ತಾವು ಪಡೆದ ಲಂಚದ ಹಣವನ್ನು ಬಿಜೆಪಿ ಸರ್ಕಾರಕ್ಕೆ ಕೊಟ್ಟಿದ್ದೇನೆಂದು ಶಾಸಕರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿಗಳ ಮಗ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ, ಅವರನ್ನು ಕರೆದು ಯಾಕೆ ವಿಚಾರಣೆ ಮಾಡಿಲ್ಲ? ಶಾಸಕ ಪ್ರಿಯಾಂಕ ಖರ್ಗೆಯವರನ್ನು ಮಾತ್ರ ಮತ್ತೆ ಮತ್ತೆ ವಿಚಾರಣೆಗೆ ಕರೆದು ಪೊಲೀಸರು ಅವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ವಿಚಾರಣೆಗೆ ಬರುವಂತೆ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದಾರೆ. ಅಕ್ರಮದ ಬಗ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದ ಸಚಿವ ಪ್ರಭು ಚೌಹ್ಹಾಣ್ ಅವರನ್ನು ಯಾಕೆ ವಿಚಾರಣೆಗೊಳಪಡಿಸಿಲ್ಲ? ಎಂದು ಸಿದ್ದರಾಮಯ್ಯ ಹೇಳಿದರು.
ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದವರು ಧರಣಿ ನಡೆಸುತ್ತಿದ್ದಾರೆ. ಅವರನ್ನು ನಾನು ಇಂದು ಭೇಟಿ ಮಾಡಿದಾಗ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕಿದರು. ಹೊಸದಾಗಿ ನೇಮಕಾತಿ ಪರೀಕ್ಷೆ ನಡೆಸಿದರೆ ನಮಗೆ ಅನ್ಯಾಯವಾಗುತ್ತದೆ ಎಂದು ಗೋಳು ತೋಡಿಕೊಂಡರು. ಹೀಗಾಗಿ ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮಕ್ಕಾಗಿ ಎಲ್ಲ 545 ಅಭ್ಯರ್ಥಿಗಳ ಆಯ್ಕೆಯನ್ನು ಅನೂರ್ಜಿತಗೊಳಿಸಿರುವುದು ಸರಿಯಲ್ಲ. ಇವರಲ್ಲಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಮಕ್ಕಳನ್ನು ಪ್ರತ್ಯೇಕವಾಗಿ ವಿಂಗಡಿಸಲು ಸಾಧ್ಯ ಇದೆ ಎಂದು ಡಿಜಿಪಿ ಹೇಳಿದ್ದಾರೆ. ಈ ಸಲಹೆಯನ್ನು ಬಿಜೆಪಿ ಕರ್ನಾಟಕ ಸರ್ಕಾರ ಪರಿಶೀಲಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು