Monday, August 25, 2025

ಸತ್ಯ | ನ್ಯಾಯ |ಧರ್ಮ

ಎರಡು ಹಿಂದುತ್ವವಾದಿಗಳ ಒಳಜಗಳವೇ ಧರ್ಮಸ್ಥಳ ವಿವಾದಕ್ಕೆ ಮೂಲ ಕಾರಣ: ಬಿಕೆ ಹರಿಪ್ರಸಾದ್

“ಎರಡು ಹಿಂದುತ್ವವಾದಿ ಗುಂಪಿನ ನಡುವಿನ ಕಿತ್ತಾಟವೇ ಧರ್ಮಸ್ಥಳ ಪ್ರಕರಣಕ್ಕೆ ಮೂಲ ಕಾರಣ, ಈ ವಿಚಾರದಲ್ಲಿ ಕಾಂಗ್ರೆಸ್ ಅಥವಾ ಸರ್ಕಾರದ ಪಾತ್ರವೇನೂ ಇಲ್ಲ. ಆ ಎರಡು ಗುಂಪುಗಳಷ್ಟೇ ಈ ಬಗ್ಗೆ ನಿರ್ಧರಿಸಬೇಕಿದೆ” ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಯಾವುದೋ ಬುರುಡೆಯನ್ನು ತೆಗೆದುಕೊಂಡು ಬಂದು, ನೂರಾರು ಶವವನ್ನು ಹೂತಿದ್ದೇನೆ ಎಂದು ಮುಸುಕುಧಾರಿ ಹೇಳಿದ್ದ. ಅವನು ಆರಂಭದಲ್ಲಿ ತೋರಿಸಿದ್ದಕ್ಕಿಂತ ಹೆಚ್ಚಿನ ಕಡೆ ಅಗೆಯಲಾಯಿತಾದರೂ, ಏನೂ ಸಿಗಲಿಲ್ಲ. ಎಸ್‌ಐಟಿ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದಾನೆ. ಇದೇ ಕಾರಣಕ್ಕೆ ಈತ ಬಂಧಿತನಾಗಿದ್ದಾನೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಮತ್ತು ಕೆಪಿಸಿಸಿ ಚುನಾವಣಾ ಸಮಿತಿಯ ಅಧ್ಯಕ್ಷರೂ ಆದ ವಿನಯ್ ಕುಮಾರ್ ಸೊರಕೆ, ಧರ್ಮಸ್ಥಳದ ವಿಚಾರದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೆಸರನ್ನು ಎಳೆದು ತಂದಿದ್ದರು. ಬಿಜೆಪಿಯ ನಾಯಕರು, ಧರ್ಮಸ್ಥಳಕ್ಕೆ ಬಂದಾಗ, ಕಲ್ಲಡ್ಕ ಪ್ರಭಾಕರ ಭಟ್ ಯಾಕೆ ಹೋಗಿರಲಿಲ್ಲ. ಇದು ಧರ್ಮಸ್ಥಳದ ಬಗ್ಗೆ ಪ್ರಭಾಕರ್ ಭಟ್ ಅವರಿಗಿರುವ ಅಸಮಾಧಾನ ಎಂದು ವಿನಯ್ ಕುಮಾರ್ ಸೊರಕೆ ಹೇಳಿದ್ದರು.

ಸೊರಕೆ ಅವರ ಮಾತಿಗೆ ಇಂಬು ಕೊಟ್ಟಂತೆ ಬಿಕೆ ಹರಿಪ್ರಸಾದ್ ಕೂಡ ‘ಈ ವಿಚಾರದಲ್ಲಿ ಕಾಂಗ್ರೆಸ್ ಅಥವಾ ಸರ್ಕಾರದ ಪಾತ್ರವೇನೂ ಇಲ್ಲ. ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಬಿಜೆಪಿ ನಾಯಕ ಬಿಎಲ್ ಸಂತೋಷ್ ಗುಂಪುಗಳ ನಡುವಿನ ಮುಸುಕಿನ ಗುದ್ದಾಟವೇ ಧರ್ಮಸ್ಥಳ ವಿವಾದವನ್ನು ಇಷ್ಟು ದೊಡ್ಡದಾಗಿ ಮಾಡಿದೆ. ಈ ಗುಂಪುಗಳೇ ಈ ಬಗ್ಗೆ ನಿರ್ಧರಿಸಬೇಕಿದೆ. ಎಸ್‌ಐಟಿ ತಂಡ ತನಿಖೆಯನ್ನು ನಡೆಸುತ್ತಿದೆ, ಅಂತಿಮ ರಿಪೋರ್ಟ್ ನೀಡಲು ಅವರಿಗೆ ಸಮಯಾವಕಾಶ ಬೇಕಾಗುತ್ತದೆ ಎಂದು ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಸತ್ಯ ಆದಷ್ಟು ಬೇಗ ಹೊರಬರಲಿ ಎಂಬುದು ನಮ್ಮ ಆಶಯ ಕೂಡ. ಈ ಬೆಳವಣಿಗೆ ಭಕ್ತಾದಿಗಳ ಭಾವನೆಗೆ ಘಾಸಿಯಾಗಬಾರದು, ಹಾಗಾಗಿ, ಆದಷ್ಟು ಬೇಗ ಎಸ್‌ಐಟಿ ತನ್ನ ವರದಿಯನ್ನು ನೀಡಿದರೆ ಎಲ್ಲಾ ಗೊಂದಲಗಳು ದೂರವಾಗುತ್ತದೆ. ಇದರ ಜೊತೆಗೆ, ಕಲ್ಲಡ ಭಟ್ರ ಮತ್ತು ಸಂತೋಷ್ ಅವರ ಬಣ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page