Wednesday, August 27, 2025

ಸತ್ಯ | ನ್ಯಾಯ |ಧರ್ಮ

ಜಮ್ಮು ಮತ್ತು ಕಾಶ್ಮೀರ | ಭೀಕರ ಮಳೆಗೆ ಭೂಕುಸಿತ: ಮೃತರ ಸಂಖ್ಯೆ 30ಕ್ಕೆ ಏರಿಕೆ

ಜಮ್ಮು: ಜಮ್ಮು ಮತ್ತು ಕಾಶ್ಮೀರವು ಭಾರಿ ಮಳೆಯಿಂದ ತೀವ್ರವಾಗಿ ಹಾನಿಗೊಳಗಾಗಿದೆ. ಹಲವೆಡೆ ಭೂಕುಸಿತಗಳು ಸಂಭವಿಸಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಕತ್ರಾದಲ್ಲಿರುವ ಸುಪ್ರಸಿದ್ಧ ವೈಷ್ಣೋದೇವಿ ದೇವಾಲಯದ ಮಾರ್ಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ 30ಕ್ಕೆ ಏರಿದೆ.

ಇದಲ್ಲದೆ, 23 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಮುಂಜಾಗ್ರತಾ ಕ್ರಮವಾಗಿ ದೇವಾಲಯಕ್ಕೆ ತೆರಳುವ ಎರಡೂ ಮಾರ್ಗಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಪ್ರವಾಹ ಉಂಟಾಗಿದೆ. ದಕ್ಷಿಣ ಕಾಶ್ಮೀರದ ಝೇಲಂ ನದಿಯು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಪ್ರವಾಹದ ಎಚ್ಚರಿಕೆಗಳನ್ನು ನೀಡಲಾಗಿದೆ. ಈಗಾಗಲೇ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಪ್ರವಾಹದ ಅಪಾಯದಿಂದಾಗಿ 3,500 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಲೇಹ್ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಇನ್ನೊಂದೆಡೆ, ಉತ್ತರ ಭಾರತದ ಹಲವು ರಾಜ್ಯಗಳಲ್ಲಿಯೂ ಮಳೆಯಾಗುತ್ತಿದೆ. ಪಂಜಾಬ್‌ನ ಒಂದು ಗ್ರಾಮದಲ್ಲಿ ಪ್ರವಾಹ ಉಂಟಾಗಿ 22 ಸಿಆರ್‌ಪಿಎಫ್ ಯೋಧರು ಅಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಸೇನೆ ಸ್ಥಳಕ್ಕೆ ಧಾವಿಸಿದ್ದು, ಬುಧವಾರ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಅವರನ್ನು ರಕ್ಷಿಸಲಾಗಿದೆ. ಪಂಜಾಬ್‌ನ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ರೌದ್ರಾವತಾರ ತಾಳಿವೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಲವು ನದಿಗಳು ಅಪಾಯದ ಮಟ್ಟದಲ್ಲಿ ರಭಸದಿಂದ ಹರಿಯುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page