Thursday, August 28, 2025

ಸತ್ಯ | ನ್ಯಾಯ |ಧರ್ಮ

ದಸರಾ ಉದ್ಘಾಟನೆ ಆಯ್ಕೆ; ಸರ್ಕಾರದ ನಿರ್ಧಾರ ನಮಗೆ ಬೇಸರ ತಂದಿದೆ: ಪ್ರಮೋದಾ ದೇವಿ

ಈ ವರ್ಷ ಸರ್ಕಾರವು ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು ಮತ್ತು ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯದ ಸುತ್ತ ರಾಜಕೀಯ ನಡೆಯುತ್ತಿರುವುದರಿಂದ ತೀವ್ರ ಬೇಸರ ತಂದಿದೆ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವರ್ಷದ ನಾಡಹಬ್ಬ(ಜನತಾ ದಸರಾ) ಉದ್ಘಾಟನೆಗೆ ಆಹ್ವಾನಿಸಲಾದ ಗಣ್ಯರ ಆಯ್ಕೆಯು ಸಂಘರ್ಷದ ಅಭಿಪ್ರಾಯಗಳಿಗೆ ಕಾರಣವಾಗಿದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳಿಗೆ ಸೇರಿಲ್ಲ ಎನ್ನುವಂತಹ ಅಸಂವೇದನಾಶೀಲ ಹೇಳಿಕೆಗಳು ಅನಗತ್ಯ ಮತ್ತು ತಪ್ಪಿಸಬಹುದಾದವು. ಅದು ಹಿಂದೂ ದೇವಸ್ಥಾನವಲ್ಲದಿದ್ದರೆ ಮುಜರಾಯಿ ಅಡಿಯಲ್ಲಿ ತರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ದಸರಾ ಒಂದು ಸಾಂಸ್ಕೃತಿಕ ಆಚರಣೆ ಎಂಬುದು ನಮ್ಮ ಅಭಿಪ್ರಾಯ. ರಾಜ್ಯವು ಸ್ವಭಾವತಃ ಇಂತಹ ಉತ್ಸವ ನಡೆಸುವಲ್ಲಿ ಧಾರ್ಮಿಕ ಪವಿತ್ರ ಸಂಪ್ರದಾಯ ಅಥವಾ ಪರಂಪರೆಯನ್ನು ಪ್ರತಿಪಾದಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವು ಆಯೋಜಿಸುವ ಆಚರಣೆಗಳು ಧಾರ್ಮಿಕ ಸ್ವರೂಪ ಆಗಿಲ್ಲ. ಅವು ವಿಜಯದಶಮಿ ಸೇರಿ ನವರಾತ್ರಿ ಆಚರಣೆಗಳೊಂದಿಗೆ ಹೊಂದಿಕೆಯಾಗುತ್ತವೆ. ಈ ಧಾರ್ಮಿಕ ಆಚರಣೆಗಳನ್ನು ಖಾಸಗಿಯಾಗಿ ಹಳೆಯ ಧಾರ್ಮಿಕ ಪದ್ಧತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ನಾವು ಆಚರಿಸುತ್ತೇವೆ.

ಸರ್ಕಾರ ಕೂಡ ಸಾಂಸ್ಕೃತಿಕ ಆಚರಣೆಗಳನ್ನು ಅರಮನೆಯ ಮುಂದೆ ಆಚರಿಸುತ್ತದೆ. ಎರಡೂ ಆಚರಣೆಯಿಂದ ಗೊಂದಲ ಆಗದಿರಲಿ ಎಂದು ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ. ಗಣೇಶ ಚತುರ್ಥಿ ಆಚರಣೆಯು ಎಲ್ಲಾ ಅಡೆತಡೆಗಳು ತಪ್ಪು ಕಲ್ಪನೆಗಳು ಮತ್ತು ಸಂಘರ್ಷಗಳನ್ನು ನಿವಾರಿಸುತ್ತದೆ ಎಂದು ಆಶಿಸುತ್ತೇನೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page