Saturday, August 30, 2025

ಸತ್ಯ | ನ್ಯಾಯ |ಧರ್ಮ

ನಟಿ ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಸಂದೇಶ: ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ 4-5 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಶ್ಲೀಲ ಕಮೆಂಟ್‌ಗಳನ್ನು ಹಾಕಿದವರ ವಿರುದ್ಧ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಮಾನಿಟರಿಂಗ್ ಸೆಲ್‌ನಿಂದ ಸ್ವಯಂಪ್ರೇರಿತವಾಗಿ ಈ ದೂರು ದಾಖಲಿಸಲಾಗಿದೆ.

ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಅಶ್ಲೀಲ ಸಂದೇಶಗಳ ಪ್ರಕರಣದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ. ವಿಜಯಲಕ್ಷ್ಮಿ ದರ್ಶನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್‌ಗಳನ್ನು ಮಾಡಲಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.

ಮಹಿಳಾ ಆಯೋಗದಿಂದ ಪೊಲೀಸ್ ಆಯುಕ್ತರಿಗೆ ಪತ್ರ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ರಮ್ಯಾ ಅವರಿಗೆ ಕಳುಹಿಸಿದ ಅಶ್ಲೀಲ ಸಂದೇಶಗಳಂತೆಯೇ ವಿಜಯಲಕ್ಷ್ಮಿ ಅವರಿಗೂ ಅಸಭ್ಯವಾಗಿ ಮತ್ತು ಕೆಟ್ಟದಾಗಿ ಕಮೆಂಟ್‌ಗಳನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಆ ಪತ್ರದಲ್ಲಿ ತಿಳಿಸಲಾಗಿದೆ.

ಇಂತಹ ಕೃತ್ಯಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, ರಮ್ಯಾ ಅಥವಾ ವಿಜಯಲಕ್ಷ್ಮಿ ಮಾತ್ರವಲ್ಲದೆ ಯಾವುದೇ ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್ ಮಾಡುವುದು ಅಥವಾ ಅವಹೇಳನ ಮಾಡುವುದು ಗಂಭೀರ ಅಪರಾಧ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಅವರಿಗೆ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page