Saturday, September 13, 2025

ಸತ್ಯ | ನ್ಯಾಯ |ಧರ್ಮ

ಸಂಸತ್ತಿನ ಪೂರ್ವಸೂರಿಗಳು – 8 : ಸಮ ಸಮಾಜಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಿದ ಎಸ್.ಎಂ. ಜೋಶಿ

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಎಂಟನೇ ಲೇಖನ

ಸಮಾಜವಾದಿ ಕಾರ್ಯಕರ್ತ, ರಾಜಕಾರಣಿ ಮತ್ತು ಬರಹಗಾರರಾಗಿದ್ದ ಜೋಶಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದಲ್ಲಿ ವಿವಿಧ ಸಾಮಾಜಿಕ-ರಾಜಕೀಯ ಚಳುವಳಿಗಳಲ್ಲಿ ಭಾಗವಹಿಸಿದವರು..

ಎಸ್.ಎಂ. ಜೋಶಿ ಎಂದೇ ಜನಪ್ರಿಯರಾಗಿದ್ದ ಶ್ರೀಧರ್ ಮಹಾದೇವ್ ಜೋಶಿ, ತಮ್ಮ ಬದುಕಿನುದ್ದಕ್ಕೂ ಅನೇಕ ಹೊಡೆತಗಳನ್ನು ತಿಂದವರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರನ್ನು ಬ್ರಿಟಿಷ್ ಪೊಲೀಸರು ಥಳಿಸಿದ್ದರು. ಜಾತ್ಯಾತೀತತೆ ಮತ್ತು ರಾಷ್ಟ್ರೀಯ ಏಕತೆಯ ವಿಚಾರದಲ್ಲಿ ಹಿಂದುತ್ವ ಶಕ್ತಿಗಳು ಥಳಿಸಿದವು. ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಸರಕಾರಗಳೇ ಅವರನ್ನು ಬಂಧಿಸಿದ್ದವು.

1904 ನವೆಂಬರ್ 12 ರಂದು ಪುಣೆಯ ಜುನ್ನಾರ್ ಎಂಬಲ್ಲಿ ಎಸ್.ಎಂ. ಜೋಶಿ ಅವರ ಜನನ. ಎಸ್.ಎಂ. ಎಂದೇ ಖ್ಯಾತರಾಗಿದ್ದ ಅವರು ಕೆಳ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ತಂದೆ ಮಹಾದೇವ್ ಜನಾರ್ಧನ ಜೋಶಿ ಜುನ್ನಾರ್ ನ್ಯಾಯಾಲಯದಲ್ಲಿ ಗುಮಾಸ್ತರಾಗಿದ್ದರು. 1916 ರಲ್ಲಿ ಅವರ ತಂದೆ ನಿಧನರಾಗುತ್ತಾರೆ. ಅಂದರೆ ಎಸ್.ಎಂ. ಇನ್ನೂ ತನ್ನ ಪ್ರಾಥಮಿಕ ಶಿಕ್ಷಣ ಪೂರ್ತಿಗೊಳಿಸುವ ಮೊದಲೇ.

1924 ರಲ್ಲಿ ಫರ್ಗುಸನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಸ್.ಎಂ. ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಸಿಕೊಳ್ಳುವುದು. 1928 ರಲ್ಲಿ ದೇವಾಲಯಗಳಿಗೆ ದಲಿತರ ಪ್ರವೇಶಕ್ಕಾಗಿ ಅವರು ಹೋರಾಟ ಆರಂಭಿಸುತ್ತಾರೆ. ಪುಣೆಯ ಪಾರ್ವತಿ ದೇವಸ್ಥಾನದಲ್ಲಿ ದಲಿತರ ಪ್ರವೇಶಕ್ಕೆಂದು 1929 ರಲ್ಲಿ ನಡೆದ ಸತ್ಯಾಗ್ರಹದ ನೇತೃತ್ವವನ್ನು ಅವರು ವಹಿಸಿಕೊಂಡಿದ್ದರು. ಆ ಸತ್ಯಾಗ್ರಹದಲ್ಲಿ ಸಂಪ್ರದಾಯಸ್ಥರು ಸತ್ಯಾಗ್ರಹಿಗಳ ಮೇಲೆ ದಾಳಿ ಮಾಡಿ ಅವರನ್ನು ಥಳಿಸಿದ್ದರು. ಆ ಘಟನೆಯಲ್ಲಿ ಜೋಶಿ ಗಾಯಗೊಳ್ಳುತ್ತಾರೆ. ಈ ಮೊದಲು ಪುಣೆಯಲ್ಲಿ ಸೈಮನ್ ಆಯೋಗದ ವಿರುದ್ಧ ನಡೆಸಿದ್ದ ಮೋರ್ಚಾವನ್ನು ಮುನ್ನಡೆಸಿದ ಕಾರಣಕ್ಕೆ ಪೊಲೀಸರಿಂದ ಥಳಿಸಲ್ಪಟ್ಟಿದ್ದರು.

ಮಹಾತ್ಮಾ ಗಾಂಧಿಯವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಜೋಶಿ, 1929 ರಲ್ಲಿ ಸೈಮನ್ ಆಯೋಗದ ವಿರುದ್ಧದ ಪ್ರತಿಭಟನೆಯಲ್ಲಿ ಮತ್ತು 1931 ರ ಉಪ್ಪು ಸತ್ಯಾಗ್ರಹದಲ್ಲೂ ಭಾಗವಹಿಸುತ್ತಾರೆ. ಎರಡು ಪ್ರಕರಣಗಳಲ್ಲೂ ಬಂಧಿತರಾಗಿ ಶಿಕ್ಷೆಗೆ ಗುರಿಯಾಗುತ್ತಾರೆ. ಜೈಲಿನಲ್ಲಿ ಕಳೆದ ಈ ಕಾಲಾವಧಿಯಲ್ಲಿ ಅವರು ಮಾರ್ಕ್ಸ್ವಾದಿ ತತ್ವಶಾಸ್ತ್ರ ಮತ್ತು ಸಮಾಜವಾದಿ ಸಾಹಿತ್ಯಗಳನ್ನು ಅಧ್ಯಯನ ಮಾಡುತ್ತಾರೆ. ಆ ಮೂಲಕ ಗಟ್ಟಿಯಾದ ಸಮಾಜವಾದಿ ಚಿಂತನೆಗಳನ್ನು ಬೆಳೆಸಿಕೊಳ್ಳುತ್ತಾರೆ. 1928 ರಲ್ಲಿ ಪುಣೆಯಲ್ಲಿ ಎನ್.ಜಿ. ಗೋರ್ ಮತ್ತು ಆರ್.ಕೆ. ಖಾದಿಲ್ಕರ್ ಅವರುಗಳ ಜೊತೆಗೆ ಸೇರಿಕೊಂಡು ಜವಾಹರಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ ಎರಡನೇ ಯುವಜನ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸುತ್ತಾರೆ.

1930 ರಲ್ಲಿ ಅಸಹಕಾರ ಚಳುವಳಿಯಲ್ಲಿ ತೊಡಗಿಕೊಳ್ಳುವ ಎಸ್.ಎಂ. ಅದಕ್ಕಾಗಿ ಒಂದು ವರ್ಷ ಕಠಿಣ ಜೈಲು ಶಿಕ್ಷೆಗೂ ಗುರಿಯಾಗುತ್ತಾರೆ. ಆದರೆ ಬಹಳ ಬೇಗನೇ ಮತ್ತೆ ಬಂಧಿತರಾಗುತ್ತಾರೆ. “ರಾಯ್ ದಿನ”ದ ಕಾರ್ಯಕ್ರಮದಲ್ಲಿ ಅವರು ಮಾಡಿದ ಭಾಷಣದ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. ಕಮ್ಯುನಿಸ್ಟ್ ನಾಯಕ ಎಂ.ಎನ್. ರಾಯ್ ಅವರನ್ನು ಬಿಡುಗಡೆ ಮಾಡುವಂತೆ ಬಾಂಬೆಯಲ್ಲಿ ಅವರು ಭಾಷಣ ಮಾಡಿದ್ದರು. ಸೆಕ್ಷನ್ 124A ಅಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಅದಕ್ಕಾಗಿ ಎರಡು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು. 1931-32ರ ಅವಧಿಯಲ್ಲಿ ಅವರು ನಾಸಿಕ್ ಜೈಲಿನಲ್ಲಿದ್ದಾಗ, ಕಾಂಗ್ರೆಸ್ ಒಳಗಡೆ ಸಮಾಜವಾದಿ ಪಕ್ಷವನ್ನು ಕಟ್ಟುವ ಕಲ್ಪನೆಯ ಜೊತೆಗೆ ಅವರು ಆಟವಾಡಲು ಆರಂಭಿಸಿದ್ದರು.

1940 ರಲ್ಲಿ ಮಡಗಾಂವ್ ಶೇತ್ಕರಿ ಸಮ್ಮೇಳನದಲ್ಲಿ ಮಾಡಿದ ಭಾಷಣದ ಕಾರಣಕ್ಕೆ ಮತ್ತೆ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಲಾಗುತ್ತದೆ. ವಿಚಾರಣೆಗೆ ಗುರಿಪಡಿಸಿ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇದಕ್ಕೂ ಮೊದಲು ಅವರನ್ನು ಯುದ್ಧ ವಿರೋಧಿ ಪ್ರಚಾರ ಮಾಡಿದ ಕಾರಣಕ್ಕೆ ಗೋರ್ ಮತ್ತು ಖಾದಿಲ್ಕರ್ ಜೊತೆಗೆ ಒಂದು ತಿಂಗಳಿಗಿಂತ ಮೇಲೆ ಬಂಧನದಲ್ಲಿಡಲಾಗಿತ್ತು.

1934 ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷದ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅದರ ಸ್ಥಾಪಕ ಸದಸ್ಯರಾಗಿದ್ದರು. ಅದರ ರಾಷ್ಟ್ರೀಯ ಕಾರ್ಯಕಾರಿಣಿಗೆ ಬಾಂಬೆಯಿಂದ ಆಯ್ಕೆಯಾಗಿದ್ದರು. ತಮ್ಮ ರಾಜಕೀಯ ಜೀವನದಲ್ಲಿ, ಮಹಾರಾಷ್ಟ್ರ ಯುವ ಸಮ್ಮೇಳನ ಮತ್ತು ಜನ ಸಂಪರ್ಕ ಸಮಿತಿಯ ಕಾರ್ಯದರ್ಶಿಯಾಗಿ ದಣಿವರಿಯದ ಉತ್ಸಾಹದಿಂದ ಕೆಲಸ ಮಾಡಿದವರು. 1936 ರಲ್ಲಿ ಫೈಜ್ಪುರ ಎಐಸಿಸಿ ಕಾಂಗ್ರೆಸ್ ಸಮಾವೇಶ ಮತ್ತು ಸಿಎಸ್ಪಿಯ ರಾಷ್ಟ್ರೀಯ ಸಮ್ಮೇಳನದ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಎಸ್.ಎಂ. ಜಾತ್ಯತೀತತೆಗೆ ಕಟಿಬದ್ಧರಾಗಿದ್ದರು. ಹಿರಿಯ ಸಮಾಜವಾದಿ ನಾಯಕ ಮಧು ಲಿಮಾಯೆ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ, “ನಾನು 1938 ರಲ್ಲಿ ರಾಜಕೀಯ ಜೀವನಕ್ಕೆ ಪ್ರವೇಶಿಸಿದೆ. ಆಗ ನಾನಿನ್ನೂ ಚಿಕ್ಕವನಾಗಿದ್ದೆ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರಿಂದ, ನಾನು ಕೂಡ ಬೇಗನೆ ಕಾಲೇಜ್ ಪ್ರವೇಶಿಸಿದೆ. ಆ ದಿನಗಳಲ್ಲಿ ಪುಣೆಯಲ್ಲಿ ಒಂದು ಕಡೆ ಆರ್ಎಸ್ಎಸ್ ಮತ್ತು ಸಾವರ್ಕರ್ವಾದಿಗಳು ಹಾಗೂ ಮತ್ತೊಂದು ಕಡೆ ರಾಷ್ಟ್ರೀಯವಾದಿ, ಸಮಾಜವಾದಿ ಮತ್ತು ಎಡಪಂಥೀಯ ರಾಜಕೀಯ ಸಂಘಟನೆಗಳು ಸಕ್ರಿಯವಾಗಿದ್ದವು. 1938 ಮೇ 1 ರಂದು ನಾವು ಮೇ ದಿನ ಆಚರಿಸಲು ಮೆರವಣಿಗೆ ನಡೆಸಿದ್ದೆವು. ಪ್ರಸಿದ್ಧ ಕ್ರಾಂತಿಕಾರಿ ಸೇನಾಪತಿ ಬಾಪಟ್ ಮತ್ತು ನಮ್ಮ ಸಮಾಜವಾದಿ ನಾಯಕ ಎಸ್.ಎಂ. ಜೋಶಿ ಸೇರಿದಂತೆ ಇತರರ ಮೇಲೆ ಆರ್ಎಸ್ಎಸ್ ಮತ್ತು ಸಾವರ್ಕರ್ವಾದಿಗಳು ದಾಳಿ ನಡೆಸಿದರು.”

1937 ರಲ್ಲಿ ಕಾಂಗ್ರೆಸ್ ಅಧಿಕಾರ ಸ್ವೀಕರಿಸುವುದನ್ನು ವಿರೋಧಿಸಿದ ಎಸ್.ಎಂ. ಪ್ರಗತಿಪರ ಒಕ್ಕಲು ಕಾನೂನೊಂದನ್ನು ಜಾರಿಗೆ ತರುವಂತೆ ಒತ್ತಾಯಿಸಿ ರೈತ ಮೋರ್ಚಾವನ್ನು ಮುನ್ನಡೆಸಿದ್ದರು. ಅವರು 1937-38 ರಲ್ಲಿ ಪುಣೆ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು. 1939 ರಲ್ಲಿ ಸುಭಾಷ್ ಚಂದ್ರ ಬೋಸರ ನೇತೃತ್ವದಲ್ಲಿ ಕಲ್ಕತ್ತಾದಲ್ಲಿ ನಡೆದ ರ್ಯಾಡಿಕಲ್ ಕಾನ್ಫರೆನ್ಸಲ್ಲಿಯೂ ಎಸ್.ಎಂ. ಭಾಗವಹಿಸಿದ್ದರು.

ಎಂ.ಎಸ್. ಆರಂಭದಲ್ಲಿ ಮದುವೆಗೆ ಸಿದ್ಧರಿರಲಿಲ್ಲ. ಆದರೆ ವಿದ್ಯಾವಂತೆಯಾಗಿದ್ದ ತಾರಾ ಪೆಂಡ್ಸೆ ಅವರ ಮನಸ್ಸು ಬದಲಾಯಿಸುವಲ್ಲಿ ಸಫಲರಾಗುತ್ತಾರೆ. ಆಕೆ ಹೆಣ್ಣು ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಜೋಶಿಯವರ ಬದುಕಿನ ಹಲವು ಕಠಿಣ ಸಂದರ್ಭಗಳಲ್ಲಿ ಬೆಂಬಲವಾಗಿ ನಿಂತಿದ್ದರು.

1942 ರಲ್ಲಿ “ಕ್ವಿಟ್ ಇಂಡಿಯಾ” ಚಳುವಳಿಯ ಸಮಯದಲ್ಲಿ ಒಬ್ಬ ಮುಸ್ಲಿಂ ಮೌಲವಿಯ ವೇಷ ಧರಿಸಿ ಭೂಗತರಾಗಿದ್ದರು. 1943 ರಲ್ಲಿ ತಮ್ಮ ಸಂಗಾತಿಗಳೊಂದಿಗೆ ಬಾಂಬೆಯಲ್ಲಿ ತಲೆಮರೆಸಿಕೊಂಡಿದ್ದಾಗ ಬಂಧಿತರಾಗುತ್ತಾರೆ. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅವರನ್ನು ಗೂಢಾಲೋಚನೆಯ ಆರೋಪದಿಂದ ಖುಲಾಸೆಗೊಳಿಸಲಾಗುತ್ತದೆ. ಆದರೂ ಕೂಡ, 1946 ರವರೆಗೆ ಅವರೆಲ್ಲರನ್ನು ವಿಚಾರಣಾಧೀನ ಖೈದಿಗಳನ್ನಾಗಿ ಬಂಧಿಸಿಡಲಾಗಿತ್ತು.

ಜೋಶಿ 1941-42 ರಲ್ಲಿ ರಾಷ್ಟ್ರ ಸೇವಾ ದಳವನ್ನು ಸ್ಥಾಪಿಸಿದ್ದರು. ಅವರು ಅದರ ಮುಖ್ಯ ಸಂಘಟಕರಲ್ಲಿ ಒಬ್ಬರಾಗಿದ್ದರು. 1941-42 ಮತ್ತು 1947-52 ರ ನಡುವೆ ಅವರು ಗ್ರಾಮ ಕಾರ್ಯಗಳಲ್ಲಿ ಅದರ ಚಟುವಟಿಕೆಗಳನ್ನು ಮುನ್ನಡೆಸಿದ್ದರು. 1947 ರಲ್ಲಿ ಸತಾರಾದಲ್ಲಿ ರಾಷ್ಟ್ರ ಸೇವಾ ದಳದ ದೊಡ್ಡದೊಂದು ರ್ಯಾಲಿಯನ್ನು ಜೋಶಿ ಆಯೋಜಿಸಿಸಿದ್ದರು.

ಸಮಾಜವಾದಿ ಪಕ್ಷವು 1947 ರಲ್ಲಿ ಕಾಂಗ್ರೆಸ್ನಿಂದ ಬೇರ್ಪಟ್ಟಾಗ ಜೋಶಿ ಅದರ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. 1948 ರಲ್ಲಿ ಸಮಾಜವಾದಿ ಪಕ್ಷವು ಸ್ಥಾಪನೆಗೊಂಡಾಗ ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು ಜೋಶಿ. 1952 ರಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ನಿಂದ ಕವಲೊಡೆದಿದ್ದ ಕಿಸಾನ್ ಮಜ್ದೂರ್ ಪ್ರಜಾ ಪಕ್ಷಗಳು ವಿಲೀನಗೊಂಡು ಪ್ರಜಾ ಸಮಾಜವಾದಿ ಪಕ್ಷವನ್ನು ರಚಿಸಲಾಗುತ್ತದೆ. 1964 ರವರೆಗೆ ಜೋಶಿ ಈ ಹೊಸ ಪಕ್ಷದಲ್ಲಿದ್ದರು. ಮತ್ತೊಮ್ಮೆ ಎರಡು ಪಕ್ಷಗಳು ವಿಲೀನಗೊಂಡು “ಸಂಯುಕ್ತ ಸಮಾಜವಾದಿ ಪಕ್ಷ (ಎಸ್ಎಸ್ಪಿ) ರೂಪುಗೊಂಡಾಗ, ಜೋಶಿ 1964 ರಿಂದ 1969 ರವರೆಗೆ ಅದರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಾರೆ.

ಸಂಸದರಾಗಿ
1952 ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರಾದರೂ ಅದರಲ್ಲಿ ಸೋಲುತ್ತಾರೆ. ಆದರೆ 1953 ರಲ್ಲಿ ಬಾಂಬೆ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಗೆಲ್ಲುತ್ತಾರೆ. ಸಂಯುಕ್ತ ಮಹಾರಾಷ್ಟ್ರ ಸಮಿತಿಯನ್ನು ಮುನ್ನಡೆಸುತ್ತಿದ್ದ ಅವರು 1957 ರಲ್ಲಿ ಪುನಹ ಶಾಸಕರಾಗಿ ಆಯ್ಕೆಯಾಗುತ್ತಾರೆ. 1960 ರಲ್ಲಿ ಸಂಯುಕ್ತ ಮಹಾರಾಷ್ಟ್ರ ಹುಟ್ಟುವುದು. ಆದರೆ, 1962 ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಜೋಶಿ ಸೋಲುತ್ತಾರೆ. ನಂತರ ಅವರು 1967 ರಲ್ಲಿ ಸಂಯಕ್ತ ಸಮಾಜವಾದಿ ಪಕ್ಷ ಮತ್ತು ಸಂಪೂರ್ಣ ಮಹಾರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ಲೋಕಸಭೆಗೆ ಚುನಾಯಿತರಾಗುತ್ತಾರೆ. 1971 ರವರೆಗೆ ಅವರು ಸಂಸದರಾಗಿ ಮುಂದುವರಿಯುತ್ತಾರೆ. ಲೋಕಸಭೆಯಲ್ಲಿ ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವು ಪ್ರಮುಖ ವಿಷಯಗಳನ್ನು ಎತ್ತಿದ್ದರು.

ಸಂಯುಕ್ತ ಮಹಾರಾಷ್ಟ್ರ ಚಳುವಳಿ ಅಥವಾ ಸಂಯುಕ್ತ ಮಹಾರಾಷ್ಟ್ರ ಸಮಿತಿಯು 1956 ರಿಂದ 1960 ರವರೆಗೆ ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಮರಾಠಿ ಭಾಷಿಕ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟುಕೊಂಡಿದ್ದ ಒಂದು ಸಂಘಟನೆಯಾಗಿತ್ತು. ಬಾಂಬೆ ರಾಜ್ಯದ ಮರಾಠಿ ಭಾಷಿಕ ಪ್ರದೇಶಗಳನ್ನು ಒಟ್ಟು ಸೇರಿಸಿಕೊಂಡು, ಬಾಂಬೆಯನ್ನು ರಾಜಧಾನಿ ಮಾಡಿಕೊಂಡು ಒಂದು ಹೊಸ ಮರಾಠಿ ಭಾಷಿಕ ರಾಜ್ಯವನ್ನು ರಚಿಸಬೇಕೆಂಬುದು ಈ ಸಂಘಟನೆಯ ಪ್ರತಿಪಾದನೆಯಾಗಿತ್ತು. 1960 ಮೇ 1 ರಂದು ಮರಾಠಿ ಭಾಷಾ ರಾಜ್ಯವಾಗಿ ಮಹಾರಾಷ್ಟ್ರದ ಹುಟ್ಟಿನೊಂದಿಗೆ ಸಂಘಟನೆಯು ತನ್ನ ಗುರಿ ಸಾಧಿಸುತ್ತದೆ.

ಸ್ವಾತಂತ್ರ್ಯಾ ನಂತರ ಎಸ್.ಎಂ. ಅವರು ಟ್ರೇಡ್ ಯೂನಿಯನ್ ಚಳುವಳಿಯಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಆ ಮೂಲಕ ಅವರು ಟ್ರೇಡ್ ಯೂನಿಯನ್ ನಾಯಕರಾಗಿ ಹೊರ ಹೊಮ್ಮುತ್ತಾರೆ. ರಕ್ಷಣಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ. 1960 ರಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರಾಗಿಯೂ, ಟ್ರಾನ್ಸ್ಪೋರ್ಟ್ ಕಾಮ್ಗಾರ್ ಸಭಾದ (ಮಹಾರಾಷ್ಟ್ರ) ಚೇರ್ಮನ್ ಆಗಿಯೂ ಆಯ್ಕೆಯಾಗುತ್ತಾರೆ. ಅವರು ಹಲವು ಕಾರ್ಮಿಕ ಮುಷ್ಕರಗಳಿಗೆ ನೇತೃತ್ವ ವಹಿಸಿದ್ದರು.

ಸಮಾಜವಾದಿ ಕಾರ್ಯಕರ್ತ, ರಾಜಕಾರಣಿ ಮತ್ತು ಬರಹಗಾರರಾದ ಜೋಶಿ, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದಲ್ಲಿ ವಿವಿಧ ಸಾಮಾಜಿಕ-ರಾಜಕೀಯ ಚಳುವಳಿಗಳಲ್ಲಿ ಭಾಗವಹಿಸಿದರು. ಸಾನೆ ಗುರುಗಳ ಪ್ರಭಾವಕ್ಕೆ ಒಳಗಾಗಿದ್ದ ಜೋಶಿ, ಗುರುಗಳ ಹೆಸರಿನಲ್ಲಿ ತನ್ನ ಊರಿನಲ್ಲಿಯೂ 1950 ರಲ್ಲಿ “ಸೇವಾ ಪಥಕ್” ಆರಂಭಿಸುತ್ತಾರೆ. ಅದೇ ವರ್ಷ ಅವರು ಆರು ತಿಂಗಳ ಕಾಲದ ಭೂದಾನ ಪಾದ ಯಾತ್ರೆಯನ್ನು ಕೈಗೊಳ್ಳುತ್ತಾರೆ. 1952 ರಲ್ಲಿ ಉಪವಾಸ ಸತ್ಯಾಗ್ರಹಕ್ಕಾಗಿ ಅವರನ್ನು ಒಂದು ತಿಂಗಳ ಕಾಲ ಬಂಧಿಸಿಡಲಾಗಿತ್ತು.

ಗೋವಾ ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ ಎಸ್.ಎಂ. ಪ್ರಮುಖ ಪಾತ್ರ ವಹಿಸಿದ್ದರು.

ಸಂಯುಕ್ತ ಮಹಾರಾಷ್ಟ್ರ ಚಳುವಳಿಯ ಕಾಲದಲ್ಲಿ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸುವುದು, ಪುಣೆಯಲ್ಲಿ ಕಾರ್ಮಿಕ ಸಂಘಗಳನ್ನು ಕಟ್ಟುವುದು, ದಲಿತ ಚಳುವಳಿಗಳಲ್ಲಿ ಭಾಗವಹಿಸುವುದು, ಮಂಡಲ್ ಆರೋಗದ ಸ್ಥಾಪನೆಯಲ್ಲಿ ಕೆಲಸ ಮಾಡುವುದು ಹೀಗೆ ಎಲ್ಲ ಕಡೆಯೂ ಜೋಶಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮುಂಬೈನಲ್ಲಿ ಭಾಷಾಧಾರಿತ ಗಲಭೆಗಳು ಮತ್ತು ಪುಣೆಯಲ್ಲಿ ಕೋಮು ಗಲಭೆಗಳು ಭುಗಿಲೆದ್ದಾಗ ಅವರು ಶಾಂತಿ ರಕ್ಷಕನಾಗಿ ಅಲ್ಲಿ ಕೆಲಸ ಮಾಡಿದ್ದರು.

1973-74 ರ ಕಾಲಘಟ್ಟದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣ ಕ್ರಾಂತಿ ಚಳುವಳಿಯಲ್ಲಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. 1977 ರಲ್ಲಿ ಜನತಾ ಪಕ್ಷದ ಸ್ಥಾಪಕ ಸದಸ್ಯರೂ, 1977-80 ರವರೆಗೆ ಅದರ ಮಹಾರಾಷ್ಟ್ರ ಘಟಕದ ಅಧ್ಯಕ್ಷರೂ ಆಗಿದ್ದರು.

ಎಸ್.ಎಂ. ಒಬ್ಬ ಉತ್ತಮ ಸಂಘಟಕರಾಗಿದ್ದರು. ಅವರ ವಿರೋಧಿಗಳು ಕೂಡ ಅವರನ್ನು ಒಬ್ಬ ಸಮರ್ಥ ಮತ್ತು ಶ್ರದ್ಧಾವಂತ ಕಾರ್ಯಕರ್ತನೆಂದು ಗುರುತಿಸಿದ್ದರು.

ಜೋಶಿ ಪತ್ರಿಕೋದ್ಯಮ ಕ್ಷೇತ್ರದಲ್ಲೂ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರು ಡೈಲಿ ನ್ಯೂಸ್ ಆಫ್ ಪೂಣಾ (1953) ಮತ್ತು ಬಾಂಬೆಯ ಲೋಕ್ ಮೀರಾ (1958-62) ಪತ್ರಿಕೆಗಳಲ್ಲಿ ಸಂಪಾದಕರಾಗಿ ಕೆಲಸ ಮಾಡಿದ್ದರು. ಅವರೊಬ್ಬ ಅದ್ಭುತ ಭಾಷಣಕಾರರಾಗಿದ್ದರು. ಮರಾಠಿ ಪತ್ರಿಕೆಗಳಲ್ಲಿ ರಾಜಕೀಯ ಮತ್ತು ಸಮಾಜವಾದದ ಕುರಿತು ಬಹಳವೇ ಲೇಖನಗಳನ್ನು ಬರೆಯುತ್ತಿದ್ದರು.

ಹಲವಾರು ಮಾಸ ಪತ್ರಿಕೆಗಳಿಗೂ ಅವರು ಬರೆಯುತ್ತಿದ್ದರು. “ಉರ್ಮಿ” ಅವರ ಕಥಾ ಸಂಕಲನ. ಸಮಾಜವಾದಿ ಚಿಂತನೆಗಳ ಕುರಿತ “ಆಸ್ಪೆಕ್ಟ್ಸ್ ಆಫ್ ಸೋಷಿಯಲಿಸ್ಟ್ ಪಾಲಿಸಿ” (1969) ಸಂಪುಟವನ್ನು ಪ್ರಕಟಿಸಿದ್ದರು.

ಎಸ್.ಎಂ. ಜೋಶಿ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page