Wednesday, September 17, 2025

ಸತ್ಯ | ನ್ಯಾಯ |ಧರ್ಮ

ಉತ್ತರಾಖಂಡದಲ್ಲಿ ಭಾರೀ ಮಳೆ, 15 ಸಾವು, 16 ನಾಪತ್ತೆ, 900 ಮಂದಿ ಸಂಕಷ್ಟದಲ್ಲಿ

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಮೇಘಸ್ಫೋಟದಿಂದಾಗಿ ರಾಜಧಾನಿ ಡೆಹ್ರಾಡೂನ್ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಹಾನಿಯಾಗಿದೆ. ಉಕ್ಕಿ ಹರಿಯುವ ನದಿಗಳು ಕಟ್ಟಡಗಳು, ರಸ್ತೆಗಳು ಮತ್ತು ಸೇತುವೆಗಳನ್ನು ಕೊಚ್ಚಿಕೊಂಡು ಹೋಗಿದ್ದು, 15 ಜನರು ಸಾವನ್ನಪ್ಪಿದ್ದಾರೆ, 16 ಮಂದಿ ನಾಪತ್ತೆಯಾಗಿದ್ದಾರೆ ಮತ್ತು ಸುಮಾರು 900 ಜನರು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ.

ಸಾವಿಗೀಡಾದವರಲ್ಲಿ ಡೆಹ್ರಾಡೂನ್ ಜಿಲ್ಲೆಯಲ್ಲಿ 13, ನೈನಿತಾಲ್ ಮತ್ತು ಪಿಥೋರಗಢದ ತಲಾ ಒಬ್ಬರು ಸೇರಿದ್ದಾರೆ.

ವಿಕಾಸ್‌ ನಗರ ತಹಸಿಲ್‌ನಲ್ಲಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಟೋನ್ಸ್ ನದಿ ದಾಟುತ್ತಿದ್ದ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಎಂಟು ಜನರು ಮೃತಪಟ್ಟವರಲ್ಲಿ ಸೇರಿದ್ದಾರೆ. ನಾಪತ್ತೆಯಾದವರ ಹುಡುಕಾಟ ತೀವ್ರಗೊಂಡಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SEOC) ಪ್ರಕಾರ, NDRF, SDRF ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 900 ಜನರನ್ನು ಸುರಕ್ಷಿತ ಸ್ಥಳಗಳಿಗೆ ರಕ್ಷಿಸಿದ್ದಾರೆ. ತಮ್ಸಾ (ಟೋನ್ಸ್) ನದಿಯು ಉಕ್ಕಿ ಹರಿದು ಪ್ರಸಿದ್ಧ ತಪಕೇಶ್ವರ ದೇವಸ್ಥಾನದ ಗರ್ಭಗುಡಿಯನ್ನು ಮುಳುಗಿಸಿದೆ.

ಭಾರೀ ಮಳೆಯಿಂದಾಗಿ ಡೆಹ್ರಾಡೂನ್-ಮಸ್ಸೌರಿ ರಸ್ತೆಯು ಹಲವು ಕಡೆ ಕೊಚ್ಚಿಹೋಗಿದೆ. ಸಹಸ್ರಧಾರಾ, ಮಾಲ್ದೇವತಾ ಮತ್ತು ಸಂತಲಾ ದೇವಿ ಪ್ರದೇಶಗಳಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಸುಮಾರು 400-500 ವಿದ್ಯಾರ್ಥಿಗಳು ಸಿಲುಕಿದ್ದ ದೇವಭೂಮಿ ಇನ್‌ಸ್ಟಿಟ್ಯೂಟ್‌ನಿಂದ ಎಸ್‌ಡಿಆರ್‌ಎಫ್ ತಂಡವು ವಿದ್ಯಾರ್ಥಿಗಳನ್ನು ರಕ್ಷಿಸಿದೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಳೆ ಪೀಡಿತ ಮಾಲ್ದೇವತಾ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಯುದ್ಧೋಪಾದಿಯಲ್ಲಿ ನಡೆಸಲು ಧಾಮಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page