Wednesday, September 17, 2025

ಸತ್ಯ | ನ್ಯಾಯ |ಧರ್ಮ

ದಸರಾ ವಿವಾದ: ‘ಸನಾತನಿಗಳಷ್ಟೇ ಅರ್ಹರು, ದಲಿತ ಮಹಿಳೆಗೂ ಪೂಜೆಯ ಅಧಿಕಾರವಿಲ್ಲ’ ಎಂದು ನಾಲಿಗೆ ಹರಿಯಬಿಟ್ಟ ಯತ್ನಾಳ್

ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರವು ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಬಾನು ಮುಷ್ತಾಕ್‌ ಅವರ ಆಯ್ಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ.

ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ. ಬಾನು ಮುಷ್ತಾಕ್ ಅವರ ಆಯ್ಕೆ ಸನಾತನ ಧರ್ಮಕ್ಕೆ ಮಾಡಿದ ಅಪಮಾನ ಎಂದು ಅವರು ಹೇಳಿದ್ದಾರೆ. ತಾಯಿ ಚಾಮುಂಡೇಶ್ವರಿಗೆ ಕೇವಲ ಸನಾತನ ಧರ್ಮದವರೇ ಹೂ ಹಾಕಿ ಪೂಜೆ ಸಲ್ಲಿಸಬೇಕು ಎಂಬುದು ಅವರ ವಾದ.

ದಲಿತ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ

ಬಾನು ಮುಷ್ತಾಕ್ ಅವರನ್ನು ವಿರೋಧಿಸುವ ಭರದಲ್ಲಿ, ಯತ್ನಾಳ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ದಲಿತ ಮಹಿಳೆಗೂ ಸಹ ಚಾಮುಂಡೇಶ್ವರಿಗೆ ಹೂ ಹಾಕುವ ಅಧಿಕಾರವಿಲ್ಲ” ಎಂದು ಅವರು ಹೇಳುವ ಮೂಲಕ ಹಿಂದೂ ಧರ್ಮದೊಳಗೆ ಜಾತಿ ಆಧಾರಿತ ತಾರತಮ್ಯವನ್ನು ಎತ್ತಿ ಹಿಡಿದಿದ್ದಾರೆ.

ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡಿಯ ಶಾಪ ತಗಲಲಿದೆ ಮತ್ತು ರಾಜಕೀಯದಲ್ಲಿ ನೆಲಕಚ್ಚಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಬಾನು ಮುಷ್ತಾಕ್ ವಿರುದ್ಧ ಕೋಮು ದ್ವೇಷದ ಹೇಳಿಕೆಗಳ ಜೊತೆಗೆ, ಹಿಂದೂ ಧರ್ಮದ ಭಾಗವಾಗಿರುವ ದಲಿತ ಸಮುದಾಯದವರಿಗೂ ಪೂಜೆಯ ಅಧಿಕಾರ ಇಲ್ಲ ಎಂದು ಹೇಳಿರುವ ಯತ್ನಾಳ್ ಅವರ ಮಾತುಗಳು ಇದೀಗ ಜನರ ಕೆಂಗಣ್ಣಿಗೆ ಗುರಿಯಾಗಿವೆ.
https://x.com/SikkuTweets/status/1967960634001391867

Related Articles

ಇತ್ತೀಚಿನ ಸುದ್ದಿಗಳು

You cannot copy content of this page