Wednesday, September 17, 2025

ಸತ್ಯ | ನ್ಯಾಯ |ಧರ್ಮ

ಬಸವನಗೌಡ ಪಾಟೀಲ್ ಯತ್ನಾಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಭೀಮ್ ಆರ್ಮಿ ಪ್ರತಿಭಟನೆ

ಹಾಸನ : ಬಿಜಾಪುರದ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ ಅವರ ಅಸಂವಿಧಾನಿಕ ಹಾಗೂ ಮಹಿಳಾ-ವಿರೋಧಿ, ದಲಿತ-ವಿರೋಧಿ ಹೇಳಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಇದೆ ವೇಳೆ ಭೀಮ್ ಆರ್ಮಿ ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ, ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮುಸ್ಲಿಂ ಮಹಿಳೆಗೂ ದಲಿತ ಮಹಿಳೆಗೂ ಉದ್ಘಾಟನೆ ಮಾಡುವ ಅರ್ಹತೆ ಇಲ್ಲ, ಕೇವಲ ಸನಾತನ ಧರ್ಮದ ಮಹಿಳೆಯರು ಮಾತ್ರ ಅರ್ಹರು ಎಂದು ಸಾರ್ವಜನಿಕವಾಗಿ ಮಾಧ್ಯಮದ ಮೂಲಕ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಹಾಗೂ ದಲಿತ ಮಹಿಳೆಯರ ಗೌರವವನ್ನು ಹಾಳು ಮಾಡುತ್ತವೆ. ಜಾತಿ ಮತ್ತು ಧಾರ್ಮಿಕ ಭೇದಭಾವವನ್ನು ಪ್ರೋತ್ಸಾಹಿಸುತ್ತವೆ, ಇದು ಸಂವಿಧಾನದ ಜಾತ್ಯಾತೀತ ಮತ್ತು ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ದೂರಿದರು. ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳೆಯರ ಅವಹೇಳನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸುತ್ತವೆ. ಇದೇ ಸಂದರ್ಭದಲ್ಲಿ, ಬಸವಣ್ಣನವರ ಸಮಾನತೆ ಮತ್ತು ಜಾತಿ ವಿರೋಧಿ ವಿಚಾರಧಾರೆಯನ್ನು ತೊರೆದು, ಅವರ ಧರ್ಮವಾದ ಲಿಂಗಾಯತ ಧರ್ಮದ ಮೂಲ ಮೌಲ್ಯಗಳಿಗೂ ವಿರೋಧವಾಗಿ ಇಂತಹ ಹೇಳಿಕೆ ನೀಡಿದ್ದಾರೆ. ೧೨ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತಿಯತೆಯನ್ನು ಹೋಗಲಾಡಿಸಲು ಅಂತರಜಾತಿ ವಿವಾಹ ಹಾಗೂ ಸಮಾನತೆಯ ಹೋರಾಟ ಮಾಡಿದ್ದರು ಎಂಬುದು ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದರು.

ಜಿಲ್ಲೆ ಪೊಲೀಸ್ ಅಧೀಕ್ಷಕರವರು ಮೂಲಕ ತಕ್ಷಣವೇ ಬಸವನಗೌಡ ಪಾಟೀಲ್ ಯತ್ನಾಳರ ವಿರುದ್ಧ ಎಸ್.ಸಿ.,ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಮತ್ತು ಮಹಿಳೆಯರ ಗೌರವ ದಕ್ಕೆಗೊಳಿಸುವ ಕಾನೂನುಗಳಡಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ಇಂತಹ ಅಸಂವಿಧಾನಿಕ ಹೇಳಿಕೆಗಳು ಮತ್ತೆ ಮರುಕಳಿಸದಂತೆ ತಡೆಗಟ್ಟ ಬೇಕು. ನಮ್ಮ ಸಂವಿಧಾನದಲ್ಲಿ ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಸಮಾನತೆ, ಜಾತ್ಯಾತೀತತೆ ಮತ್ತು ಗೌರವದ ಮೌಲ್ಯಗಳನ್ನು ಕಾಯುವಂತೆ ಕ್ರಮ ಕೈಗೊಳ್ಳಬೇಕು. ಭಾರತ ಒಂದು ಜಾತ್ಯಾತೀತ ದೇಶ ಎಂದು ಹೇಳಿದರು. ಇಲ್ಲಿ ನಡೆಯುವುದು ಅಂಬೇಡ್ಕರ್ ಬರೆದಿರುವ ಕಾನೂನು ಮಾತ್ರ; ಮನುಸ್ಮತಿ ಅಥವಾ ಸನಾತನ ಧರ್ಮದ ನಿಯಮಗಳಲ್ಲ. ನಾವು ಭೀಮ್ ಆರ್ಮಿ ಕರ್ನಾಟಕ ಪರವಾಗಿ ನಿಮ್ಮ ತಕ್ಷಣದ ಹಸ್ತಕ್ಷೇಪ ಮತ್ತು ನ್ಯಾಯಯುತ ಕ್ರಮವನ್ನು ವಿನಂತಿಸುತ್ತೇವೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಪ್ರಸನ್ನ, ಕಾರ್ಯಾಧ್ಯಕ್ಷ ದೊರೆರಾಜು, ಪ್ರದಾನ ಕಾರ್ಯದರ್ಶಿ ವೆಂಕಟೇಶ್, ತಾಲೂಕು ಅಧ್ಯಕ್ಷ ಚೇತನ್, ಅರಸೀಕೆರೆ ತಾಲೂಕು ಅಧ್ಯಕ್ಷ ಸ್ವಾಮಿ ಜಾಜೂರು, ಹೊಳೆನರಸೀಪುರ ತಾಲೂಕು ಅಧ್ಯಕ್ಷ ವಾಸು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ ಶಿವಮ್ಮ, ಭಾಗ್ಯ ಕಲಿವೀರ್, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಮುಬಾಶೀರ್ ಅಹಮದ್, ಎಸ್.ಡಿ.ಪಿ.ಐ. ತಾಲೂಕು ಅಧ್ಯಕ್ಷ ಶಜೇಲ್ ಅಹಮದ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page