Thursday, September 18, 2025

ಸತ್ಯ | ನ್ಯಾಯ |ಧರ್ಮ

ಸೈಬರ್ ವಂಚನೆ: ಮಾಜಿ ಸಿಎಂ ಡಿ.ವಿ. ಸದಾನಂದಗೌಡರ ಖಾತೆಯಿಂದ 3 ಲಕ್ಷ ರೂ. ಕಳವು

ಬೆಂಗಳೂರು: ನಟ ಉಪೇಂದ್ರ ದಂಪತಿಯ ಮೊಬೈಲ್ ಹ್ಯಾಕ್ ಮಾಡಿ ಹಣ ಕಳುವಾದ ಘಟನೆ ಇನ್ನೂ ಮಾಸದಾಗಲೇ, ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ ಅವರು ಹಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಈ ವಿಚಾರವನ್ನು ಸ್ವತಃ ಸದಾನಂದಗೌಡರೇ ದೃಢಪಡಿಸಿದ್ದು, ತಮ್ಮ ಮೂರು ಬ್ಯಾಂಕ್ ಖಾತೆಗಳಿಂದ ತಲಾ 1 ಲಕ್ಷ ರೂ.ನಂತೆ ಒಟ್ಟು 3 ಲಕ್ಷ ರೂ.ಗಳನ್ನು ಕಳೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಇಂದು ಬೆಳಿಗ್ಗೆ ನಾನು ಮೊಬೈಲ್ ಪರಿಶೀಲಿಸಿದಾಗ, ನನ್ನ ಮೂರು ಬ್ಯಾಂಕ್ ಖಾತೆಗಳಿಂದ ತಲಾ ಒಂದೊಂದು ಲಕ್ಷ ರೂಪಾಯಿ ಕಡಿತಗೊಂಡಿರುವುದು ಕಂಡುಬಂತು. ನಿನ್ನೆಯೇ ಯುಪಿಐ ಮೂಲಕ ಹಣ ವರ್ಗಾವಣೆ ಆಗಿದೆ. ಕೂಡಲೇ ನನ್ನ ಖಾತೆಗಳಿರುವ ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಆಕ್ಸಿಸ್ ಬ್ಯಾಂಕ್‌ಗಳಿಗೆ ವಿಷಯ ತಿಳಿಸಿದ್ದೇನೆ. ಈ ಕುರಿತು ಸೈಬರ್ ಪೊಲೀಸರಿಗೂ ದೂರು ಸಲ್ಲಿಸುತ್ತೇನೆ” ಎಂದು ಹೇಳಿದರು.

ಸಾಮಾನ್ಯ ನಾಗರಿಕರು ನಿತ್ಯವೂ ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮದ್ದೂರು ಗಲಭೆ ಮತ್ತು ಹಿಂದುತ್ವದ ವ್ಯಾಖ್ಯಾನ

ಮದ್ದೂರಿನಲ್ಲಿ ನಡೆದ ಗಲಭೆ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿದ ಸದಾನಂದಗೌಡರು, ಶಾಸಕ ಉದಯ್ ರವಿ ಅವರು ವಿದೇಶದಲ್ಲಿ ಕುಳಿತು ರಿಮೋಟ್ ಕಂಟ್ರೋಲ್ ಮೂಲಕ ಇದನ್ನು ನಿರ್ದೇಶಿಸಿದ್ದಾರೆ ಎಂದು ನೇರವಾಗಿ ಆಪಾದಿಸಿದರು. “ಒಂದು ಮೊಬೈಲ್ ಇದ್ದರೆ ಏನೆಲ್ಲಾ ಕೃತ್ಯಗಳನ್ನು ಎಸಗಬಹುದು ಎಂಬ ಅರಿವಿದೆಯೇ?” ಎಂದು ಪ್ರಶ್ನಿಸಿದ ಅವರು, ತಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿದ ಘಟನೆಯನ್ನು ವಿವರಿಸಿದರು.

ಇದೇ ವೇಳೆ, ಮದ್ದೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬೆಂಬಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದನ್ನು ಕುರಿತು ಮಾತನಾಡಿದ ಸದಾನಂದಗೌಡರು, “ಹಿಂದುತ್ವ ಎಂಬುದು ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ. ಈ ದೇಶದಲ್ಲಿ ಬದುಕುವವರೆಲ್ಲರೂ ಹಿಂದುಗಳೇ. ಇದು ನನ್ನ ವ್ಯಾಖ್ಯಾನ. ಇದು ಹಿಂದೂ ರಾಷ್ಟ್ರ. ಈ ದೇಶದ ವಾಯು, ಜಲ ಮತ್ತು ಆಹಾರವನ್ನು ಸೇವಿಸುವ ಪ್ರತಿಯೊಬ್ಬರೂ ಹಿಂದೂಗಳೇ. ಕೆಲವು ಪ್ರದೇಶಗಳಲ್ಲಿ ಜನರು ಸ್ವಯಂಪ್ರೇರಿತವಾಗಿ ಒಗ್ಗೂಡುತ್ತಾರೆ, ಮತ್ತು ಇನ್ನು ಕೆಲವೆಡೆ ಜನರನ್ನು ಸೇರಿಸುವ ಕಾರ್ಯ ನಡೆಯುತ್ತದೆ” ಎಂದು ಅಭಿಪ್ರಾಯಪಟ್ಟರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page