Friday, September 19, 2025

ಸತ್ಯ | ನ್ಯಾಯ |ಧರ್ಮ

ಪ್ರತಾಪ್ ಸಿಂಹನಿಗೆ ಸಿಂಹ ಬದಲು, ನಾಯಿ ಎಂದು ಹೆಸರಿಡಬೇಕಿತ್ತು: ಶಾಸಕ ಕೆ.ಎಂ. ಉದಯ್ ತೀವ್ರ ವಾಗ್ದಾಳಿ

ಮದ್ದೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಮದ್ದೂರು ಶಾಸಕ ಕೆ.ಎಂ. ಉದಯ್ ಅವರು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. “ಅವನಿಗೆ ಅಪ್ಪಿತಪ್ಪಿ ಸಿಂಹ ಎಂದು ಹೆಸರಿಟ್ಟಿದ್ದಾರೆ, ಅದಕ್ಕೆ ಬದಲು ‘ನಾಯಿ’ ಎಂದು ಹೆಸರಿಡಬೇಕಿತ್ತು. ಅವನೊಬ್ಬ ಕಚ್ಚೆಹರುಕ,” ಎಂದು ಉದಯ್ ಏಕವಚನದಲ್ಲಿ ಟೀಕಿಸಿದ್ದಾರೆ. ಅವನ ನಡತೆ ಸರಿಯಿಲ್ಲದ ಕಾರಣಕ್ಕೆ ಸ್ವತಃ ಬಿಜೆಪಿಯವರೇ ಟಿಕೆಟ್ ನೀಡದೆ ಮನೆಯಲ್ಲಿ ಕೂರಿಸಿದ್ದಾರೆ ಎಂದೂ ಅವರು ಆಪಾದಿಸಿದರು.

ಮದ್ದೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಉದಯ್, ಬಿಜೆಪಿ ನಾಯಕರಾದ ಪ್ರತಾಪ್ ಸಿಂಹ, ಬಿ.ವೈ. ವಿಜಯೇಂದ್ರ ಮತ್ತು ಸಿ.ಟಿ. ರವಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಮಂಡ್ಯವನ್ನು ಮಂಗಳೂರು ಮಾಡಲು ಸಂಚು’

ಪ್ರತಾಪ್ ಸಿಂಹನ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಆತನ ಪತ್ನಿಯೇ ಆತನ ಕಾಟ ಸಹಿಸಲಾಗದೆ ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆದಿದ್ದರು. ಇಂತಹ ವ್ಯಕ್ತಿ ಮಂಡ್ಯದ ಜನರಿಗೆ ತಿಳಿವಳಿಕೆ ಹೇಳಲು ಬರುತ್ತಾನೆ. “ಇವರು ಮಂಡ್ಯವನ್ನು ಮಂಗಳೂರು ಮಾಡಲು ಹೊರಟಿದ್ದಾರೆ. ಪ್ರಚೋದನೆಯ ಮೂಲಕ ಅಮಾಯಕ ಯುವಕರನ್ನು ಬಲಿ ಕೊಡುವ ವಾತಾವರಣ ಸೃಷ್ಟಿಸಲು ನೋಡುತ್ತಿದ್ದಾರೆ,” ಎಂದು ಉದಯ್ ಕಿಡಿಕಾರಿದರು.

ಗಣೇಶಮೂರ್ತಿ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಖಚಿತ. ಆದರೆ, ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು ಎಂದು ಅವರು ಎಚ್ಚರಿಕೆ ನೀಡಿದರು.

ವಿಜಯೇಂದ್ರ ಮತ್ತು ಸಿ.ಟಿ. ರವಿಗೆ ತಿರುಗೇಟು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಉದಯ್, “ನಾನು ಮೋಜು ಮಾಡಲು ವಿದೇಶಕ್ಕೆ ಹೋಗಿದ್ದೆ ಎನ್ನುತ್ತಾನೆ. ಲಂಚ, ಪೋಕ್ಸೋ, ಅತ್ಯಾಚಾರ ಪ್ರಕರಣಗಳಲ್ಲಿ ಜೈಲಿಗೆ ಹೋದವರು ಯಾರು?” ಎಂದು ಪ್ರಶ್ನಿಸಿದರು.

ಇದೇ ವೇಳೆ, “ತೊಡೆ ಮುರಿಯುತ್ತೇನೆ, ಕತ್ತು ತೆಗೆಯುತ್ತೇನೆ ಎಂದು ಹೇಳುವ ಸಿ.ಟಿ. ರವಿ ಮೊದಲು ತಮ್ಮ ಮನೆಯ ತೂತನ್ನು ಸರಿಪಡಿಸಿಕೊಳ್ಳಲಿ. ಇಂತಹ ಆಟಗಳನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಲಿ,” ಎಂದು ಉದಯ್ ಸವಾಲು ಹಾಕಿ, ತಮ್ಮ ಸರ್ಕಾರದಲ್ಲಿ 1,500 ಕೋಟಿ ರೂ. ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page