Monday, September 22, 2025

ಸತ್ಯ | ನ್ಯಾಯ |ಧರ್ಮ

ಭಾರತ-ಪಾಕ್ ಸೇರಿ 7 ಯುದ್ಧ ನಿಲ್ಲಿಸಿದ್ದೇನೆ, ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು: ಡೊನಾಲ್ಡ್ ಟ್ರಂಪ್ ಹೇಳಿಕೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕಿಸ್ತಾನದ ಸಂಘರ್ಷ ಸೇರಿದಂತೆ ವಿಶ್ವದ ಏಳು ಯುದ್ಧಗಳನ್ನು ನಿಲ್ಲಿಸಿದ್ದಕ್ಕಾಗಿ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಸಲ್ಲಬೇಕು ಎಂದು ಪುನರುಚ್ಚರಿಸಿದ್ದಾರೆ.

ಅಮೆರಿಕದ ಕಾರ್ನರ್‌ಸ್ಟೋನ್ ಸಂಸ್ಥೆಯ ಸಂಸ್ಥಾಪಕರ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಭಾವ್ಯ ಅಣು ಯುದ್ಧವನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಇದರ ಜೊತೆಗೆ, ಥೈಲ್ಯಾಂಡ್-ಕಾಂಬೋಡಿಯಾ, ಅರ್ಮೇನಿಯಾ-ಅಜರ್‌ಬೈಜಾನ್, ಕೊಸೊವೊ-ಸರ್ಬಿಯಾ, ಇಸ್ರೇಲ್-ಇರಾನ್, ಈಜಿಪ್ಟ್-ಇಥಿಯೋಪಿಯಾ, ಮತ್ತು ರುವಾಂಡಾ-ಕಾಂಗೋ ನಡುವಿನ ಸಂಘರ್ಷಗಳನ್ನೂ ತಾವು ತಡೆದಿದ್ದಾಗಿ ಹೇಳಿದ್ದಾರೆ.

ಈ ಪೈಕಿ ಶೇಕಡಾ 60ರಷ್ಟು ಯುದ್ಧಗಳನ್ನು ವ್ಯಾಪಾರ ಒತ್ತಡದ ಮೂಲಕ ನಿಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ವ್ಯಾಪಾರದ ಮೂಲಕ ಭಾರತ-ಪಾಕ್ ಸಂಘರ್ಷಕ್ಕೆ ತೆರೆ

ಭಾರತ ಮತ್ತು ಪಾಕಿಸ್ತಾನದ ಸಂಘರ್ಷವನ್ನು ಹೇಗೆ ನಿಲ್ಲಿಸಿದೆ ಎಂಬುದನ್ನು ವಿವರಿಸಿದ ಟ್ರಂಪ್, “ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಮುಖಂಡರನ್ನು ನಾನು ಗೌರವಿಸುತ್ತೇನೆ. ಈ ಎರಡೂ ದೇಶಗಳಿಗೆ ಮುಖ್ಯವಾಗಿ ವ್ಯಾಪಾರ ಬೇಕಾಗಿದೆ. ನಾನು ವ್ಯಾಪಾರದ ಮೂಲಕವೇ ಎರಡು ದೇಶಗಳ ನಡುವಿನ ಸಂಘರ್ಷಕ್ಕೆ ತೆರೆ ಎಳೆದೆ,” ಎಂದರು.

“ನೋಡಿ, ಪಾಕಿಸ್ತಾನದ ಬಳಿ ಅಣ್ವಸ್ತ್ರ ಇದೆ. ‘ನೀವು ಅವರೊಂದಿಗೆ ಯುದ್ಧ ಮಾಡಲು ಹೋದರೆ, ನಾನು ನಿಮ್ಮೊಂದಿಗೆ ವ್ಯಾಪಾರ ಮಾಡುವುದಿಲ್ಲ’ ಎಂದು ನಾನು ಭಾರತಕ್ಕೆ ಹೇಳಿದೆ. ತಕ್ಷಣವೇ ಭಾರತ ಕದನ ವಿರಾಮ ಘೋಷಿಸಿತು,” ಎಂದು ಟ್ರಂಪ್ ಹೇಳಿದ್ದಾರೆ.

ಜಾಗತಿಕ ವೇದಿಕೆಯಲ್ಲಿ ಅಮೆರಿಕಕ್ಕೆ ಹಿಂದೆಂದಿಗಿಂತಲೂ ಅತ್ಯುನ್ನತ ಗೌರವ ಲಭಿಸುತ್ತಿದೆ, ಈ ಕಾರಣಕ್ಕಾಗಿಯೇ ಯುದ್ಧಗಳನ್ನು ಕೊನೆಗಾಣಿಸಲು ಶಾಂತಿ ಮಾತುಕತೆಗಳಿಗೆ ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಭಾರತದ ನಿರಾಕರಣೆ

ಮೇ 10 ರಿಂದ ಇದುವರೆಗೆ ಟ್ರಂಪ್ ಅವರು ಭಾರತ-ಪಾಕ್ ಕದನ ವಿರಾಮ ಘೋಷಣೆಗೆ ತಾವೇ ಕಾರಣ ಎಂದು 40 ಬಾರಿ ಹೇಳಿಕೊಂಡಿದ್ದಾರೆ. ಆದರೆ, ಕದನ ವಿರಾಮ ಘೋಷಣೆಯಲ್ಲಿ ಯಾವುದೇ ಮೂರನೇ ವ್ಯಕ್ತಿ/ದೇಶದ ಮಧ್ಯಸ್ಥಿಕೆಯನ್ನು ಭಾರತವು ಸತತವಾಗಿ ಅಲ್ಲಗಳೆಯುತ್ತಾ ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page