Thursday, September 25, 2025

ಸತ್ಯ | ನ್ಯಾಯ |ಧರ್ಮ

ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವಕ್ಕೆ ಮಾರಕ: ಕಾಂಗ್ರೆಸ್ ವಾಗ್ದಾಳಿ

ಪಟ್ನಾ: ಬಿಹಾರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ನಿರ್ಣಯಗಳಲ್ಲಿ, ವಿಶೇಷ ಮತಪಟ್ಟಿ ಪರಿಷ್ಕರಣೆ (Special Abbreviated Revision – SIR) ಒಂದು ದೊಡ್ಡ ಪಿತೂರಿಯಾಗಿದ್ದು, ಇದು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಹೇಳಲಾಗಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದು ಮತ್ತು ಮತ ಕಳ್ಳತನದ ವಿಚಾರವಾಗಿ ಬಿಜೆಪಿ ಮೇಲೆ ಒತ್ತಡ ಹೆಚ್ಚಿಸುವುದು ಈ ಸಭೆಯ ಮುಖ್ಯ ಉದ್ದೇಶಗಳಾಗಿದ್ದವು.

ಸಂವಿಧಾನದ ಮೇಲೆ ದಾಳಿ: ಬಿಜೆಪಿ ಮತ್ತು ಆರ್‌ಎಸ್‌ಎಸ್ ನಿರಂತರವಾಗಿ ಸಂವಿಧಾನದ ಮೇಲೆ ದಾಳಿ ನಡೆಸುತ್ತಿವೆ. ಪ್ರಜಾಪ್ರಭುತ್ವದ ಮೂಲಭೂತ ತತ್ವಗಳನ್ನು ಹಂತ-ಹಂತವಾಗಿ ನಾಶಪಡಿಸಲಾಗುತ್ತಿದೆ. ಖಾಸಗೀಕರಣದ ಹೆಸರಿನಲ್ಲಿ ಮೀಸಲಾತಿಗಳು ಕಡಿಮೆಯಾಗುತ್ತಿವೆ.

“ಮತಗಳ್ಳತನ” ಆರೋಪ: “ಮತಗಳ್ಳತನ” ಎಂಬ ಅಕ್ರಮವು ದೇಶದ ಜನರ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯ ಅಡಿಪಾಯವನ್ನೇ ಅಲುಗಾಡಿಸಿದೆ. ಅಧಿಕಾರದಲ್ಲಿ ಉಳಿಯಲು ಮತ್ತು ಚುನಾವಣಾ ಅಕ್ರಮಗಳನ್ನು ಮರೆಮಾಚಲು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಎಂಬುದು ಬಿಜೆಪಿಯ ಮತ್ತೊಂದು ಕುತಂತ್ರವಾಗಿದೆ.

ಗಾಝಾ ನರಮೇಧದ ಬಗ್ಗೆ ಕಳವಳ: ಗಾಝಾದಲ್ಲಿ ನಡೆಯುತ್ತಿರುವ ಅಮಾಯಕ ಜನರ ನರಮೇಧದ ಬಗ್ಗೆಯೂ ಕಾಂಗ್ರೆಸ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್‌ ಸರ್ಕಾರವು ಎಚ್‌1ಬಿ ವೀಸಾ ಶುಲ್ಕ ಹೆಚ್ಚಿಸಿದ್ದನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದರು. “ಮೋದಿ ಸ್ನೇಹಿತ ಎಂದು ಹೇಳಿಕೊಳ್ಳುತ್ತಿರುವವರಿಂದಲೇ ಭಾರತಕ್ಕೆ ಹೆಚ್ಚು ಸಮಸ್ಯೆಗಳು ಎದುರಾಗುತ್ತಿವೆ,” ಎಂದು ಅವರು ಹೇಳಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಎದುರಿಸುತ್ತಿರುವ ಸಮಸ್ಯೆಗಳಿಗೆ ಮೋದಿಯವರ ರಾಜತಾಂತ್ರಿಕ ವೈಫಲ್ಯವೇ ಮೂಲ ಕಾರಣ ಎಂದು ಖರ್ಗೆ ಟೀಕಿಸಿದರು. ಬಿಹಾರ ಚುನಾವಣೆಯೇ ಮೋದಿ ಸರ್ಕಾರದ ಭ್ರಷ್ಟಾಚಾರ ಆಡಳಿತಕ್ಕೆ ನಾಂದಿ ಹಾಡಲಿದೆ ಎಂದು ಅವರು ಇದೇ ವೇಳೆ ಘೋಷಿಸಿದರು.

ಕಾರ್ಯಕಾರಿಣಿ ಸಭೆಗೆ ಮೊದಲು ಅತಿ ಹಿಂದುಳಿದ ವರ್ಗಗಳ ಜನರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಮಾದರಿಯಲ್ಲಿಯೇ ಅತಿ ಹಿಂದುಳಿದವರಿಗೆ ರಕ್ಷಣೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಹಿಂದುಳಿದವರಿಗೆ ಮೀಸಲಾತಿಯ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿದರು. ನಂತರ, ಸಿಡಬ್ಲ್ಯೂಸಿ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಿದೇಶಾಂಗ ನೀತಿಗಳನ್ನು ವೈಯಕ್ತಿಕ ಸ್ನೇಹದ ಆಧಾರದಲ್ಲಿ ನಡೆಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಮೋದಿ, ಅಮಿತ್ ಶಾ ಮತ್ತು ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ಮಾಡುತ್ತಿದ್ದು, ಸಂವಿಧಾನದ ಕತ್ತು ಹಿಸುಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. “ಬಿಜೆಪಿ ದೇಶಾದ್ಯಂತ ಮತ ಕಳ್ಳತನದಲ್ಲಿ ತೊಡಗಿದೆ, ಶಾಸಕರನ್ನು ಖರೀದಿಸುತ್ತಿದೆ ಮತ್ತು ಜನರ ಧ್ವನಿಯನ್ನು ಹತ್ತಿಕ್ಕುತ್ತಿದೆ,” ಎಂದು ಅವರು ಹೇಳಿದರು. ಬಿಜೆಪಿ, ಆರ್‌ಎಸ್‌ಎಸ್, ಮೋದಿ, ಅಮಿತ್ ಶಾ ಎಲ್ಲರೂ ಸೇರಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದಂತಹ ಸಂವಿಧಾನದ ಆತ್ಮಗಳನ್ನು ಹಿಸುಕುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರು ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಸಿಡಬ್ಲ್ಯೂಸಿ ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಪವನ್ ಖೇಡಾ, “ಸೂರ್ಯ ಆಕಾಶದಲ್ಲಿ ಹೊಳೆಯುತ್ತಿರುವಾಗ ಅದನ್ನು ಘೋಷಿಸುವ ಅಗತ್ಯವಿಲ್ಲ,” ಎಂದು ಹೇಳುವ ಮೂಲಕ ಪರೋಕ್ಷವಾಗಿ ತೇಜಸ್ವಿಯಾದವ್ ಅವರ ಅಭ್ಯರ್ಥಿತನವನ್ನು ದೃಢಪಡಿಸಿದರು. ಈ ಹಿಂದೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಸಿಎಂ ಅಭ್ಯರ್ಥಿ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಲಾಗುತ್ತಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page