Friday, June 14, 2024

ಸತ್ಯ | ನ್ಯಾಯ |ಧರ್ಮ

ಬಿಲ್ಕಿಸ್ ಬಾನು ಪ್ರಕರಣದ ಸಾಕ್ಷಿಗೆ ಜೀವ ಬೆದರಿಕೆ ; ಆತಂಕ ವ್ಯಕ್ತಪಡಿಸಿದ ಇಮ್ತಿಯಾಜ್ ಘಾಂಚಿ

ಬಿಲ್ಕಿಸ್ ಬಾನು ಪ್ರಕರಣದ ಏಕೈಕ ಸಾಕ್ಷಿ 45 ವರ್ಷದ ಇಮ್ತಿಯಾಜ್ ಘಾಂಚಿ ಅವರಿಗೆ ಜೀವ ಬೆದರಿಕೆಯ ಧಮಕಿ ಹಾಕಿದ್ದಾರೆ. ಆಘಾತಕಾರಿ ವಿಚಾರ ಎಂದರೆ ಧಮಕಿ ಹಾಕಿದ್ದು ಬೇರೆ ಯಾರೂ ಅಲ್ಲ, “ಸನ್ನಡತೆ” ಅಡಿಯಲ್ಲಿ ಗುಜರಾತ್ ಸರ್ಕಾರ ಬಿಡುಗಡೆ ಮಾಡಿರುವ ಬಿಲ್ಕಿಸ್ ಬಾನು ಪ್ರಕರಣದ ಪ್ರಮುಖ ಅಪರಾಧಿ ರಾಧೇಶ್ಯಾಮ್ ಶಾ.

ಹೌದು.. 2002 ರ ಗುಜರಾತ್ ಕೋಮು ಗಲಭೆಯಲ್ಲಿ 3 ವರ್ಷದ ಪುಟ್ಟ ಮಗು ಸೇರಿದಂತೆ 14 ಜನರನ್ನು ಕೊಂದು, ಬಿಲ್ಕಿಸ್ ಬಾನು ಎಂಬ ಗರ್ಭಿಣಿ ಹೆಣ್ಣನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ 11 ಮಂದಿ ಅಪರಾಧಿಗಳೆಂದು ಕೋರ್ಟ್ ಸಾಭೀತುಪಡಿಸಿತ್ತು. ಇವರನ್ನು ಜೀವಾವಧಿ ಶಿಕ್ಷೆಗೂ ಆದೇಶಿಸಿತ್ತು. ಆದರೆ ಗುಜರಾತ್ ಸರ್ಕಾರ ಇಂತಹ ನರಹಂತಕರಿಗೆ “ಸನ್ನಡತೆ” ಆಧಾರದಲ್ಲಿ ಆಗಸ್ಟ್ 16 ರಂದು ಅಷ್ಟೂ 11 ಮಂದಿಯನ್ನು ಬಿಡುಗಡೆ ಮಾಡುವ ಆದೇಶ ಹೊರಡಿಸಿತ್ತು. ಈ ಸುದ್ದಿ ಈಗಲೂ ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಟೀಕೆಗೆ ಕಾರಣವಾಗಿದೆ. ಜೊತೆಗೆ ಇವರ ಬಿಡುಗಡೆ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಆದೇಶ ಹಿಂಪಡೆಯಲು ಅರ್ಜಿ ಹಾಕಲಾಗಿದೆ.

ಸಧ್ಯ ಈ ಪ್ರಕರಣದ ಅಡಿಯಲ್ಲಿ ಅಪರಾಧಿ ಸ್ಥಾನದಲ್ಲಿ ಇರುವ ರಾಧೇಶ್ಯಾಮ್ ಶಾ ಎಂಬ ವ್ಯಕ್ತಿ ಬಿಲ್ಕಿಸ್ ಬಾನು ಪ್ರಕರಣದ ಏಕೈಕ ಸಾಕ್ಷಿ ಇಮ್ತಿಯಾಜ್ ಘಾಂಚಿ ಅವರಿಗೆ ಬೆದರಿಕೆ ಹಾಕಿರುವ ಬಗ್ಗೆ ಆರೋಪಿಸಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರಿಗೆ ಪತ್ರ ಬರೆದು ಇಂತಹ ವ್ಯಕ್ತಿಯಿಂದ ತನಗೆ ಜೀವ ಬೆದರಿಕೆ ಇದೆ.. ಈ ಮನವಿಯನ್ನು ತುರ್ತು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಇಂಗ್ಲಿಷ್ ನಿಯತಕಾಲಿಕೆ The Quint ವರದಿ ಮಾಡಿದ್ದು, ಅಪರಾಧಿ ರಾಧೇಶ್ಯಾಮ್ ಶಾ “ನಿಮ್ಮನ್ನು ಊರು ಬಿಡಿಸುವ ವರೆಗೂ ನಾವು ಬಿಡುವುದಿಲ್ಲ. ರಕ್ತ ಹೆಪ್ಪುಗಟ್ಟುವಂತೆ ಹೊಡೆಯುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಇಮ್ತಿಯಾಜ್ ಘಾಂಚಿ The Quint ಗೆ ಮಾಹಿತಿ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ “ಅಪರಾಧಿಗಳ ಬಿಡುಗಡೆ ದಿನದಿಂದಲೂ ಇದು ನಡೆಯುತ್ತಲೇ ಇದೆ. ನಮ್ಮ ಮೇಲೆ ಮತ್ತು ನಮ್ಮ ಕುಟುಂಬದ ಮೇಲೆ ಯಾವ ಸಂದರ್ಭದಲ್ಲಾದರೂ ದಾಳಿ ನಡೆಯಬಹುದು ಎಂಬ ಆತಂಕ ಮನೆ ಮಾಡಿದೆ” ಎಂದು ತಮ್ಮೊಳಗಿನ ಆತಂಕ ಹೊರಹಾಕಿದ್ದಾರೆ.

ಕಳೆದ ಸೆ.15 ರಂದು ಸಿಂಗ್ವಾಡ್ ಗ್ರಾಮದಿಂದ ದೇವಗಡ್ ಬರಿಯಾದಲ್ಲಿರುವ ತಮ್ಮ ನಿವಾಸಕ್ಕೆ ಪ್ರಯಾಣ ಮಾಡುತ್ತಿದ್ದಾಗ ಮತ್ತೆ ಘಾಂಚಿ ಅವರಿಗೆ ಅಪರಾಧಿ ರಾಧೇಶ್ಯಾಮ್ ಷಾ ಬೆದರಿಕೆ ಹಾಕಿದ ಬಗ್ಗೆ ಉಲ್ಲೇಖಿಸಿ ಹೇಳಿದ್ದಾರೆ. ಇನ್ನೊಂದು ಬಾರಿ ರೈಲ್ವೆ ನಿಲ್ದಾಣದಲ್ಲಿ ಅಪರಾಧಿ ರಾಧೇಶ್ಯಾಮ್ ಎದುರಾಗಿ, ಹತ್ತಿರ ಬರಲು ಸನ್ನೆ ಮಾಡಿದ್ದಾನೆ. ಆಗ ಹತ್ತಿರ ಹೋದ ಘಾಂಚಿಯವರಿಗೆ “ನಾವೀಗ ಸ್ವತಂತ್ರರಾಗಿದ್ದೇವೆ. ನಮ್ಮನ್ನು ಯಾರಿಂದಲೂ ತಡೆಯಲಾಗದು. ನಿಮ್ಮ ರಕ್ತ ಹೆಪ್ಪುಗಟ್ಟುವಂತೆ ನಿಮ್ಮನ್ನು ಥಳಿಸಲಿದ್ದೆವೆ” ಎಂದು ಧಮಕಿ ಹಾಕಿದ್ದಾರೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

“2002 ರ ಗಲಭೆ ನಂತರ ನಾವು ಮೂಲದಿಂದ ಇದ್ದ ರಣಧೀಕ್ ಪುರವನ್ನು ತೊರೆದಿದ್ದೇವೆ. ಆ ಗ್ರಾಮಕ್ಕೆ ಮತ್ತೆ ಹಿಂತಿರುಗುವ ಧೈರ್ಯ ಇಲ್ಲ. ಆದರೆ ನಾನು ದಿನಗೂಲಿ ನೌಕರ ಆಗಿದ್ದರಿಂದ ಕೆಲಸ ಹುಡುಕಿ ಪ್ರತಿದಿನ ಹೊರಗೆ ಓಡಾಡಲೇಬೇಕು. ಈ ಸಂದರ್ಭದಲ್ಲಿ ನನಗೆ ಕೆಲವು ದಿನಗಳಿಂದ ಎದುರಾಗುತ್ತಿರುವ ರಾಧೇಶ್ಯಾಮ್ ಷಾ ಇಂದ ಪದೇ ಪದೇ ಜೀವ ಬೆದರಿಕೆ ಬರುತ್ತಿದೆ. ಶುರುವಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಜೀವಬೆದರಿಗೆ ಜಾಸ್ತಿ ಆಗಿದ್ದರಿಂದ ನಾವು ಜೀವ ಉಳಿಸಿಕೊಳ್ಳಲೇಬೇಕು” ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ರಕ್ಷಣೆ ಮನವಿ ಕೋರಿದ ಇಮ್ತಿಯಾಜ್ ಘಾಂಚಿ ಭಯವನ್ನು ತೋಡಿಕೊಂಡಿದ್ದಾರೆ.

ಘಾಂಚಿಯವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ಬರೆದ ಪತ್ರದ ಪ್ರತಿಯನ್ನು ಗುಜರಾತ್ ರಾಜ್ಯದ ಗೃಹ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ತಲುಪಿಸಿದ್ದಾರೆ.

ಬಿಲ್ಕಿಸ್ ಬಾನು ಪ್ರಕರಣದ ಸಾಕ್ಷಿ ಆದ ಇಮ್ತಿಯಾಜ್ ಘಾಂಚಿ ಅವರು ಮುಂಬೈ ಸಿಬಿಐ ನ್ಯಾಯಾಲಯಕ್ಕೆ ವಿಚಾರಣೆಯ ಸಂದರ್ಭದಲ್ಲಿ, ಗೋದ್ರಾ ರೈಲು ಸುಟ್ಟ ಘಟನೆಯ ಮರುದಿನ, ಆರೋಪಿಗಳಲ್ಲಿ ಒಬ್ಬರಾದ ಈಗ ಮೃತರಾಗಿರುವ ನರೇಶ್ ಮೋಧಿಯಾ ಕೈಯಲ್ಲಿ ರಾಂಪುರಿ ಚಾಕು ಹಿಡಿದಿರುವುದನ್ನು ನೋಡಿದ್ದೇನೆ ಎಂದು ಮತ್ತೊಬ್ಬ ಆರೋಪಿ ಪ್ರದೀಪ್ ಮೋಧಿಯಾ ಗುಜರಾತ್‌ನ ರಂಧಿಕ್‌ಪುರದಲ್ಲಿರುವ ತನ್ನ ನಿವಾಸದ ಬಳಿ ಕಲ್ಲು ತೂರಾಟ ಮತ್ತು ಘೋಷಣೆಗಳನ್ನು ಕೂಗುವುದನ್ನು ನಾನು ನೋಡಿದ್ದೇನೆ ಎಂದು ಸಾಕ್ಷ್ಯ ನುಡಿದಿದ್ದರು.

ಸಧ್ಯ ಈ ಅಪರಾಧಿಗಳ ಬಿಡುಗಡೆ ಬಗ್ಗೆ ದೇಶಾಧ್ಯಂತ ಆಕ್ರೋಶ ಬುಗಿಲೆದ್ದಿದ್ದು, ಇದೇ ಸಂದರ್ಭದಲ್ಲಿ ಅಪರಾಧಿ ರಾಧೇಶ್ಯಾಮ್ ಕಡೆಯಿಂದ ಪ್ರಮುಖ ಸಾಕ್ಷಿ ಇಮ್ತಿಯಾಜ್ ಘಾಂಚಿಯವರಿಗೆ ನಿರಂತರ ಬೆದರಿಕೆ ಬರುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಜೊತೆಗೆ ರಾಧೇಶ್ಯಾಮ್ ನಡತೆ ಮತ್ತು ಅಲ್ಲಿನ ಬೆಳವಣಿಗೆ ನೋಡಿದರೆ ಯಾವ ಸಮಯದಲ್ಲಿ ಬೇಕಾದರೂ ಹಿಂದಿನ ದಾಳಿ ಮರುಕಳಿಸಬಹುದು ಎಂದೇ ಅಂದಾಜಿಸಬಹುದು. ಈ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ, ಗುಜರಾತ್ ಸರ್ಕಾರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಯಾವ ರೀತಿಯಲ್ಲಿ ಪ್ರಕರಣ ಸ್ವೀಕರಿಸಲಿದೆ ಮತ್ತು ಇದನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು