Monday, September 29, 2025

ಸತ್ಯ | ನ್ಯಾಯ |ಧರ್ಮ

ಈ ಇಂಜಿನಿಯರಿಂಗ್ ಕಾಲೇಜು ಹಾರನಹಳ್ಳಿ ಕುಟುಂಬದ ಆಸ್ತಿಯೇ ? ಆರ್. ವೆಂಕಟೇಶ್ ಮೂರ್ತಿ

ಮಾನವನ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಅತ್ಯುತ್ತಮ ಆವಿಷ್ಕಾರ ಎಂಬುವುದರಲ್ಲಿ ಅನುಮಾನವೇ ಇಲ್ಲ. ಆದರೆ ವಿಶ್ವದ ಎಲ್ಲೆಡೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಅಧಿಕಾರಕ್ಕೆ ಬಂದವರು ಸರ್ವಾಧಿಕಾರಿಗಳಾಗಿದ್ದಾರೆ, ಅಧಿಕಾರವನ್ನು ಭ್ರಷ್ಟಾಚಾರಕ್ಕೆ, ಸ್ವಾರ್ಥಕ್ಕೆ, ಸ್ವಹಿತಕ್ಕೆ ಬಳಸಿಕೊಂಡಿದ್ದಾರೆ, ವಂಶಾಡಳಿತ ಬೆಳೆಸಿದ್ದಾರೆ. ಭಾರತ ಕೂಡ ಇದಕ್ಕೆ ಹೊರತಲ್ಲ. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಇಲ್ಲಿ 500ಕ್ಕೂ ಹೆಚ್ಚು ರಾಜರು ಆಡಳಿತದ ಚುಕ್ಕಾಣಿ ಹಿಡಿದಿದ್ದರೆ, ಈಗ ರಾಜಕಾರಣವು 25 ಕುಟುಂಬಗಳ ಕಪಿಮುಷ್ಠಿಯಲ್ಲಿದೆ, ಸ್ಥಳೀಯವಾಗಿ ಲೆಕ್ಕವಿಲ್ಲದಷ್ಟು ಕುಟುಂಬಗಳು ತಮ್ಮ ವಂಶ ಬೆಳೆಸಲು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿವೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಘೋಷಣೆ ಮಾತ್ರ ಬಹಳ ಸೊಗಸಾಗಿದೆ, ಭಾರತದ ಮಟ್ಟಿಗೆ ಇಂತಹ ಕಲ್ಪನೆಯ ಪ್ರಜಾಪ್ರಭುತ್ವ ವ್ಯವಸ್ಥೆ ಬರಲು ಹಲವು ಶತಮಾನಗಳು ಬೇಕಾಗಬಹುದೇನೋ. ಹಣಬಲ ದೊಂದಿಗೆ, ಜಾತಿ ವ್ಯವಸ್ಥೆ ಕೂಡ ನಿಜವಾದ ಪ್ರಜಾಪ್ರಭುತ್ವ ಅರಳಲು ಅಡ್ಡಿಯಾಗಿದೆ. ಜಾತಿ ವ್ಯವಸ್ಥೆಯು ಭ್ರಷ್ಟರನ್ನು ಪೋಷಿಸುತ್ತಿದೆ ಮತ್ತು ರಕ್ಷಿಸುತ್ತಿದೆ.


ಅಮೇರಿಕಾದಲ್ಲಿ ಒಬ್ಬ ನಾಯಕ ಮೂರನೇ ಅವಧಿಗೂ ಅಧ್ಯಕ್ಷನಾಗಿ ಆಯ್ಕೆಯಾಗಿ ಬಂದಾಗ ಅಲ್ಲಿನ ಪ್ರಜಾಪ್ರಭುತ್ವವಾದಿ ಚಿಂತಕರು ತಮ್ಮ ದೇಶದ ಸಂವಿಧಾನಕ್ಕೆ ತಿದ್ದುಪಡಿ ತಂದು ಒಬ್ಬ ವ್ಯಕ್ತಿ ಅಧ್ಯಕ್ಷ ಸ್ಥಾನಕ್ಕೆ ಗೆದ್ದು ಬರುವ ಅವಕಾಶವನ್ನು ಎರಡು ಅವಧಿಗೆ ಸೀಮಿತಗೊಳಿಸುತ್ತಾರೆ, ಅಲ್ಲಿ ಎರಡು ಅವಧಿಗಳಿಗೆ ಅಧ್ಯಕ್ಷನಾದವನು ಮೂರನೇ ಬಾರಿಗೆ ಸ್ಪರ್ಧಿಸಲು ಅವಕಾಶವೇ ಇಲ್ಲ. ಇಂತಹದೊಂದು ತಿದ್ದುಪಡಿಯನ್ನು ಭಾರತದಲ್ಲಿ ತರಲೇಬೇಕಾದ ಅನಿವಾರ್ಯತೆ ಇದೆ. ರಾಜಕೀಯ ಪಕ್ಷಗಳಲ್ಲಿ, ಸಹಕಾರಿ ಸಂಸ್ಥೆಗಳಲ್ಲಿ ಕೂಡ ಒಬ್ಬನೇ ವ್ಯಕ್ತಿ ಹಲವು ದಶಕಗಳ ಮೂಲಕ ಮುಂದುವರೆಯುವುದನ್ನು ತಡೆಗಟ್ಟಲು ಶಾಸನಗಳನ್ನು ರೂಪಿಸಬೇಕಾಗಿದೆ.
ಹಾಸನ ಜಿಲ್ಲೆಯ ಉದಾರಣೆಯನ್ನೇ ನೋಡಿ. ನಮ್ಮ ದೇವೇಗೌಡರ ಪುತ್ರ ಹೆಚ್. ಡಿ. ರೇವಣ್ಣ ಅವರು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಕೆಲವು ದಶಕಗಳಿಂದ ಭದ್ರವಾಗಿ ಹಿಡಿದಿಟ್ಟುಕೊಂಡಿದ್ದಾರೆ. ಇತ್ತೀಚೆಗೆ ಹೆಚ್ಚು ಸುದ್ದಿ ಮಾಡುತ್ತಿರುವ ಹಾಸನದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಕಥೆ ಕೂಡ ಇದಕ್ಕೆ ಹೊರತಲ್ಲ. ಕಳೆದ ಶತಮಾನದ ಅರವತ್ತರ ದಶಕದಲ್ಲಿ ಹಾಸನದಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕೆಂದು ಕನಸು ಕಂಡ ಹಾಸನದ ಜಿಲ್ಲಾಧಿಕಾರಿಗಳಾಗಿದ್ದ ಚಂದಪ್ಪ ಪಾಟೀಲರು ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಅಂದಿನ ನಾಯಕರನ್ನೆಲ್ಲ ಒಟ್ಟಿಗೆ ಸೇರಿಸಿ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಹುಟ್ಟಿಗೆ ಕಾರಣರಾಗುತ್ತಾರೆ. ಹಾಸನ ಜಿಲ್ಲೆಯ ರೈತರು ನೀಡಿದ ಕಂದಾಯದ ಒಂದಷ್ಟು ಭಾಗವನ್ನು ಈ ಸಂಸ್ಥೆಯ ಮೂಲಧನವಾಗಿಕ್ರೋಢೀಕರಿಸುತ್ತಾರೆ. ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿಗೆ ವೇತನ ನೀಡಲು ಹಣ ಇಲ್ಲದಿದ್ದಾಗ ಜಿಲ್ಲೆಯ ಬಳೇರಕೊಪ್ಪಲು ನಂಜಪ್ಪ ಗೌಡರು, ಬಾಳ್ಳುಗುರಪ್ಪ ಮುಂತಾದ ಕಾಫಿ ಬೆಳೆಗಾರರು ನೆರವಿಗೆ ಮುಂದೆ ಬರುತ್ತಾರೆ. ಸಮಿತಿಯ ರಚನೆ ಆದ ಆರಂಭದಲ್ಲಿ ಜಂಟಿ ಕಾರ್ಯದರ್ಶಿ ಆಗಿದ್ದ ಹಾರನಹಳ್ಳಿ ರಾಮಸ್ವಾಮಿಯವರು, 1974 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏರಿದವರು, ಕಾಲು ಶತಮಾನಗಳ ಕಾಲ ಮುಂದುವರಿದು ತಮ್ಮ ಅಂತ್ಯದ ಕಾಲದಲ್ಲಿ ತಮ್ಮ ಪುತ್ರ ಅಶೋಕ ಹಾರನಹಳ್ಳಿಯವರನ್ನು ಪಟ್ಟಕ್ಕೆ ತರುತ್ತಾರೆ. ಹೀಗೆ ಜನ ಕಟ್ಟಿದ್ದ ಸಂಸ್ಥೆಯ ಗದ್ದುಗೆಗೆ ಹಾರನಹಳ್ಳಿ ರಾಮಸ್ವಾಮಿ ಮತ್ತು ಅಶೋಕ ಅವರು ಅರ್ಧ ಶತಮಾನಗಳ ಕಾಲ ಇತರರು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುತ್ತಾರೆ.


ಇಂಜಿನಿಯರಿಂಗ್ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಪೋಷಕರಿಂದ ಸಮಿತಿಯ ಹತ್ತಿರದವರು ಪ್ರತಿ ವರ್ಷ ಲಕ್ಷ ಲಕ್ಷ ಹಣ ಸಂಪಾದಿಸಿದ್ದು, ಇಲ್ಲಿನ ವಿದ್ಯಾಮಾನಗಳನ್ನು ಬಲ್ಲವರಿಗೆಲ್ಲ ಗೊತ್ತು. ಅಶೋಕ ಹಾರನಹಳ್ಳಿಯವರ ಕಾಲದಲ್ಲಿ ಒಬ್ಬ ವ್ಯಕ್ತಿ ಸೀಟು ಮಾರಾಟದ ದಂಧೆಯ ಮೂಲಕ ಕೋಟ್ಯಾಂತರ ರೂಪಾಯಿ ಗಳಿಸಿದ್ದನೆಂದು ಹೇಳಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಮಲೆನಾಡು ಇಂಜಿನಿಯರಿಂಗ್ ಕಾಲೇಜು ಹಾರನಹಳ್ಳಿ ರಾಮಸ್ವಾಮಿಯವರ ಕುಟುಂಬದ ಸ್ವಂತ ಆಸ್ತಿ ಎಂದು ರಾಜ್ಯಾದ್ಯಂತ ಬಿಂಬಿಸಲ್ಪಟ್ಟಿತು. ಹಾಸನದ ಈಗಿನ ತಲೆಮಾರಿನ ಜನರು ಹಾಗೆಯೇ ನಂಬಿಕೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ, ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯಲ್ಲಿರುವ ಹಲವು ನಿರ್ದೇಶಕರು ಎರಡನೇ ತಲೆಮಾರಿನವರಾದರೆ, ಅಶೋಕ ಮತ್ತು ಗುರುದೇವ್ ಮಕ್ಕಳು ಮೂರನೇ ತಲೆಮಾರಿನವರು. ರಾಜ್ಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿದ್ದ ಅಶೋಕ್ ಹಾರನಹಳ್ಳಿಯ ಅವರ ಕಣ್ಣಿಗೆ ನಿರ್ದೇಶಕ ಸ್ಥಾನಕ್ಕೆ ಅರ್ಹರಾದವರು ತಮ್ಮ ಸಮುದಾಯದ ಯಾವೊಬ್ಬರೂ ಕಾಣದಿದ್ದದು ಆಶ್ಚರ್ಯವಲ್ಲವೇ? ಜಿಲ್ಲಾ ವೀರಶೈವ ಸಂಘದ ಅಧ್ಯಕ್ಷರಾಗಿರುವ ಗುರುದೇವ್ ಅವರಿಗೆ ಕೂಡ ಇದೇ ಪ್ರಶ್ನೆ ಕೇಳಬೇಕಲ್ಲವೇ ?


ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯನ್ನು ಮುನ್ನಡೆಸಲು ಬಿ.ಬಿ. ಶಿವಪ್ಪನವರು, ಜಿ. ಎಲ್. ಮುದ್ದೇಗೌಡರು ಯೋಗ್ಯರಾಗಿರಲಿಲ್ಲವೇ? ನಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಜಿ. ಪುರುಷೋತ್ತಮ್ ಅವರು ಧಾರವಾಡ ಮತ್ತು ಡೆಹರಡೂನ್ ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾಂಶುಪಾಲರಾಗಿ ಬೆಳೆಸಿದರು, ಹೆಚ್. ಎಸ್. ನಿಂಗಪ್ಪನವರು ಚಿಕ್ಕಬಳ್ಳಾಪುರದ ಎಂ. ಜಿ. ವೆಂಕಟೇಶಮೂರ್ತಿ ಅವರು ಕಂದಲಿ, ದೇವಾಲಯದ ಕೆರೆಯ ಪ್ರಭಾಕರ್ ಹಾಗೂ ಜೋಸೆಫ್ ಗೊಸ್ಸಾಲ್ವೆನ್ ಅವರು ಮಂಗಳೂರು ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರಾಗಿ ದುಡಿದಿದ್ದಾರೆ. ಮೋಹನ್ ಕುಮಾರ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾಗಿ ಹೆಸರು ಮಾಡಿದರು. ಕರಿಸಿದ್ದಪ್ಪನವರು ಬೆಳಗಾವಿಯ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ ಉಪಕುಲಪತಿಯಾಗಿ ಸೇವೆ ಸಲ್ಲಿಸಿದರು. ಇಂತಹ ಎತ್ತರದ ಚಿಂತನೆ ಮತ್ತು ಸಾಮರ್ಥ್ಯ ಇರುವವರನ್ನು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಗೆ ತಂದುಕೊಳ್ಳಬೇಕೆಂಬ ಆಲೋಚನೆ ಇಲ್ಲಿನವರಿಗೆ ಬರಲೇ ಇಲ್ಲವಲ್ಲ? ಬಿ. ಬಿ. ಶಿವಪ್ಪನವರು, ಜಿ. ಎಲ್. ಮುದ್ದೇಗೌಡರು,


ಡಿ. ಎ. ಚಂದ್ರೇಗೌಡ, ಅಂಥವರಿಗೂ ಅಧ್ಯಕ್ಷ ಸ್ಥಾನ ನೀಡಬೇಕೆಂದು ಹಾರನಹಳ್ಳಿಯವರ ಕುಟುಂಬದವರಿಗೆ ಅನಿಸಲೇ ಇಲ್ಲವಲ್ಲ. ತಮ್ಮ ಜೊತೆಯಲ್ಲಿ ಕಾರ್ಯದರ್ಶಿ ಆಗಿದ್ದ ಆರ್‌. ಟಿ. ದ್ಯಾವೇಗೌಡರು ಅಧ್ಯಕ್ಷರಾಗಲು ಹೊರಟಾಗ, ಅಶೋಕ್ ಅವರು ಏಕೆ ಬೇಸರ ಮಾಡಿಕೊಳ್ಳಬೇಕು ? ಐದು ದಶಕಗಳ ಅಧಿಕಾರ ಸಾಕೆನಿಸಲಿಲ್ಲವೇ? ಬೇರೆಯವರು ಅಧ್ಯಕ್ಷ ಸ್ಥಾನವನ್ನು ಅಪೇಕ್ಷೆ ಪಡುವುದೇ ಇವರ ಕಣ್ಣಲ್ಲಿ ಅಪರಾಧವಾಗಿ ಹೋಯಿತಲ್ಲ. ಸಂಸ್ಥೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅಶೋಕ್ ಅವರೇ ಮುಂದೆ ನಿಂತು ಮುದ್ದೇಗೌಡರು, ಆರ್. ಟಿ. ದ್ಯಾವೇಗೌಡರು, ಬಿ ಆರ್ ಗುರುದೇವ್ ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದು ಕೊಂಡು ಹೊಸ ಪದಾಧಿಕಾರಿಗಳ ಆಯ್ಕೆಗೆ ಸಹಕಾರ ನೀಡಿದ್ದರೆ, ಸರ್ಕಾರದ ಸಹಕಾರಿ ಇಲಾಖೆಯ ಅಧಿಕಾರಿಗಳ ಬಳಿ ಅಧಿಕಾರಕ್ಕಾಗಿ ಅಂಗಲಾಚಬೇಕಿತ್ತೆ? ರಾಜಕೀಯ ನಾಯಕರ ಮನೆ ಕಾಯಬೇಕಿತ್ತೆ? ನ್ಯಾಯಾಲಯಗಳ ಮುಂದೆ ಕೈಕಟ್ಟಿ ಕುಳಿತುಕೊಳ್ಳಬೇಕಿತ್ತೇ? ಈಗಲೂ ಕಾಲ ಮಿಂಚಿಲ್ಲ, ಮಲೆನಾಡು ತಾಂತ್ರಿಕ ಸಮಿತಿಯ ಆಡಳಿತ ಮಂಡಳಿಯಲ್ಲಿರುವ ಎಲ್ಲರೂ ಮೂರು ಜಿಲ್ಲೆಗಳ ನಾಯಕರು, ಮತ್ತು ರೈತರು ಕಟ್ಟಿದ ಸಂಸ್ಥೆಯ ಘನತೆ ಕಾಪಾಡಲು ಸಾಧ್ಯ ಆಗದಿದ್ದರೆ ಸ್ಥಾನ ಖಾಲಿ ಮಾಡಿ ಹೋಗಬೇಕು. ಈ ಸಂಸ್ಥೆ ಯಾರೊಬ್ಬರ ಖಾಸಗಿ ಆಸ್ತಿಯು ಅಲ್ಲ. ಸಂಸ್ಥೆಯ ನಿಯಮಗಳನ್ನು ತಿದ್ದುಪಡಿಗೆ ತಂದು ಪದಾಧಿಕಾರ ಸ್ಥಾನದ ಅವಧಿಗೆ ಮಿತಿ ಹಾಕಬೇಕು, ಅದು ಸಾಧ್ಯ ಆಗದಿದ್ದರೆ ಒಂದು ಟ್ರಸ್ಟ್ ರಚಿಸಬೇಕು. ಹೊರದೇಶ ಮಾತ್ರವಲ್ಲದೆ ನಮ್ಮ ದೇಶದ ಅನೇಕ ಶಿಕ್ಷಕರ ಸಂಸ್ಥೆಗಳನ್ನು ಟ್ರಸ್ಟ್ ಗಳು ಮುನ್ನಡೆಸುತ್ತಿವೆ. ಅಮೆರಿಕಾದ ಪ್ರಸಿದ್ಧ ಸ್ವಾಂಫರ್ಡ್ ವಿಶ್ವವಿದ್ಯಾಲಯವನ್ನು ಖಾಸಗಿ ವ್ಯಕ್ತಿಯೊಬ್ಬರು ಸ್ಥಾಪನೆ ಮಾಡಿದ್ದಾದರೂ ಅವರ ನಿಧನಕ್ಕೆ ಮುನ್ನ ವಿ.ವಿ.ಯ ಜವಾಬ್ದಾರಿಯನ್ನು ಒಂದು ಟ್ರಸ್ಟ್‌ ಗೆ ಒಪ್ಪಿಸಿ ಹೋದರು. ಈ ಟ್ರಸ್ಟಿಗಳು ಐದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ನಂತರ ಹೊಸ ಟ್ರಸ್ಟಿಗಳನ್ನು ಅವರೇ ನೇಮಿಸಿ ಜವಾಬ್ದಾರಿ ಒಪ್ಪಿಸುತ್ತಾರೆ. ಅಂಥದೊದು ಬದಲಾವಣೆಯನ್ನು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯಲ್ಲಿ ತರಲೇಬೇಕು. ಈ ಬಗ್ಗೆ ಮೂರು ಜಿಲ್ಲೆಗಳ ಜನನಾಯಕರು ಧ್ವನಿ ಎತ್ತ ಬೇಕು. ಅಂದ ಹಾಗೆ ಸ್ವಾಂಫರ್ಡ ವಿ.ವಿ.ಯ ಆವರಣ ಎಷ್ಟಿದೆ ಗೊತ್ತೇ?.. ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಎಂಟು ಸಾವಿರ ಎಕರೆಗಿಂತ ಹೆಚ್ಚು ವಿಸ್ತಾರ ಪ್ರದೇಶದಲ್ಲಿ ಹರಡಿಕೊಂಡಿದೆ.

ಆರ್. ಪಿ. ವೆಂಕಟೇಶಮೂರ್ತಿ, ಹಾಸನ

Related Articles

ಇತ್ತೀಚಿನ ಸುದ್ದಿಗಳು

You cannot copy content of this page