Tuesday, September 30, 2025

ಸತ್ಯ | ನ್ಯಾಯ |ಧರ್ಮ

ಸೋನಮ್ ವಾಂಗ್‌ಚುಕ್ ಬಿಡುಗಡೆಯಾಗುವವರೆಗೆ ಕೇಂದ್ರದೊಂದಿಗೆ ಮಾತುಕತೆ ಇಲ್ಲ: ಲೇಹ್ ಅಪೆಕ್ಸ್‌ ಬಾಡಿ

ಲೇಹ್: ಲಡಾಖ್‌ಗೆ ರಾಜ್ಯದ ಸ್ಥಾನಮಾನ ಮತ್ತು ವಿಶೇಷ ರಕ್ಷಣೆಗಳ ಬೇಡಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಸಂಘಟನೆಗಳು ತಮ್ಮ ನಿಲುವಿನಲ್ಲಿ ಮತ್ತಷ್ಟು ಬಿಗಿತವನ್ನು ಪ್ರದರ್ಶಿಸಿವೆ. ಬಂಧಿತರಾಗಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್ ಮತ್ತು ಇತರ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡದ ಹೊರತು ಕೇಂದ್ರ ಸರ್ಕಾರದೊಂದಿಗೆ ಯಾವುದೇ ಮಾತುಕತೆಗಳನ್ನು ಮುಂದುವರಿಸುವುದಿಲ್ಲ ಎಂದು ಲೇಹ್ ಅಪೆಕ್ಸ್ ಬಾಡಿ (ಎಬಿಎಲ್) ಸೋಮವಾರ ಸ್ಪಷ್ಟಪಡಿಸಿದೆ.

ಈ ಮೊದಲು ಕೇಂದ್ರದೊಂದಿಗೆ ಚರ್ಚಿಸಲು ಅಕ್ಟೋಬರ್ 6 ರಂದು ದಿನಾಂಕ ನಿಗದಿಯಾಗಿತ್ತು. ಆದರೆ, 50ಕ್ಕೂ ಹೆಚ್ಚು ಪ್ರದರ್ಶನಕಾರರ ಮೇಲೆ ಹೇರಲಾಗಿರುವ ಪ್ರಕರಣಗಳನ್ನು ಹಿಂಪಡೆಯುವವರೆಗೂ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಎಬಿಎಲ್ ಘೋಷಿಸಿದೆ. ವಾಂಗ್‌ಚುಕ್ ಅವರ ವಿರುದ್ಧ ಕೇಂದ್ರ ಸರ್ಕಾರ ಸುಳ್ಳು ಆರೋಪಗಳನ್ನು ಹೊರಿಸಿದೆ ಎಂದು ಅವರ ಪತ್ನಿ ಹೇಳಿದ್ದು, ಲಡಾಖ್‌ಗೆ ರಾಜ್ಯ ಸ್ಥಾನಮಾನ ಕೋರಿದ ದಿನದಿಂದಲೇ ಕಿರುಕುಳ ಪ್ರಾರಂಭವಾಗಿದೆ ಎಂದಿದ್ದಾರೆ.

ಶಾಂತಿಯುತ ಬೇಡಿಕೆಗಳಿಗೆ ದ್ರೋಹ: ಎಬಿಎಲ್ ಆರೋಪ

ಪ್ರಜಾಸತ್ತಾತ್ಮಕವಾಗಿ ನಡೆಸಲಾಗುತ್ತಿರುವ ಚಳವಳಿಯನ್ನು ‘ಅಪರಾಧ’ ಎಂದು ಬಿಂಬಿಸುತ್ತಿರುವ ಕಾರಣದಿಂದ ಮಾತುಕತೆ ನಡೆಸಲು ಅಸಾಧ್ಯ ಎಂದು ಎಬಿಎಲ್ ಸೋಮವಾರ ಪ್ರತಿಪಾದಿಸಿದೆ. ವಾಂಗ್‌ಚುಕ್ ಅವರ ಬಂಧನ, ಪ್ರತಿಭಟನೆಯನ್ನು ‘ರಾಷ್ಟ್ರವಿರೋಧಿ’ ಎಂದು ಕರೆಯುತ್ತಿರುವುದು ಮತ್ತು ಲೇಹ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಲ್ವರು ಮೃತಪಟ್ಟಿರುವುದನ್ನು ವಿರೋಧಿಸಿ ನಾವು ಮಾತುಕತೆಯಿಂದ ಹಿಂದೆ ಸರಿಯುತ್ತಿದ್ದೇವೆ.

“ಶಾಂತಿಯುತ ಬೇಡಿಕೆಗಳಿಗೆ ಜೈಲು ಮತ್ತು ಗುಂಡುಗಳಿಂದ ಪ್ರತಿಕ್ರಿಯಿಸುವ ಮೂಲಕ ಕೇಂದ್ರ ಸರ್ಕಾರವು ಲಡಾಖ್‌ನ ಜನರ ನಂಬಿಕೆಗೆ ದ್ರೋಹ ಬಗೆದಿದೆ” ಎಂದು ಎಬಿಎಲ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಡಾಖ್‌ಗೆ ರಾಜ್ಯ ಸ್ಥಾನಮಾನಕ್ಕಾಗಿ ನಡೆಯುತ್ತಿದ್ದ ಪ್ರತಿಭಟನೆಯು ಕಳೆದ ಬುಧವಾರ ಹಿಂಸಾಚಾರಕ್ಕೆ ತಿರುಗಿದಾಗ, ಪೊಲೀಸರ ಗುಂಡಿನ ದಾಳಿಯಿಂದ ನಾಲ್ವರು ಜನರು ಮೃತಪಟ್ಟಿದ್ದರು. ಈ ಹಿಂಸಾಚಾರದಲ್ಲಿ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರದಂದು ಪೊಲೀಸರು ವಾಂಗ್‌ಚುಕ್ ಅವರನ್ನು ಬಂಧಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page