Tuesday, September 30, 2025

ಸತ್ಯ | ನ್ಯಾಯ |ಧರ್ಮ

ಬ್ರೇಕಿಂಗ್: ಜೈಲಿನಲ್ಲಿ ಮೂಲಭೂತ ಸೌಕರ್ಯ ಕೋರಿ ನಟ ದರ್ಶನ್ ಅರ್ಜಿ; ಅಕ್ಟೋಬರ್ 9ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ಕೊಲೆ ಆರೋಪದ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ನಟ ದರ್ಶನ್ ಅವರು, ಜೈಲಿನ ಅಧಿಕಾರಿಗಳು ತಮಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.

ನಟ ದರ್ಶನ್ ಪರ ವಕೀಲರು ಮತ್ತು ಸರ್ಕಾರದ ಪರ ವಕೀಲರ ನಡುವೆ ಸುದೀರ್ಘವಾದ ವಾದ-ಪ್ರತಿವಾದದ ನಂತರ, ನ್ಯಾಯಾಲಯವು ತನ್ನ ಆದೇಶವನ್ನು ಅಕ್ಟೋಬರ್ 9ಕ್ಕೆ ಕಾಯ್ದಿರಿಸಿತು.

ದರ್ಶನ್ ಮನವಿ ಮತ್ತು ಜೈಲು ಅಧೀಕ್ಷಕರ ವರದಿ

ಜೈಲಾಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕೊಲೆ ಆರೋಪಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು. ನ್ಯಾಯಾಲಯಕ್ಕೆ ಖುದ್ದು ಹಾಜರಾದ ಜೈಲು ಅಧೀಕ್ಷಕ ಸುರೇಶ್ ಅವರು ಸಂಪೂರ್ಣ ವರದಿಯನ್ನು ಸಲ್ಲಿಸಿದರು.

ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ದರ್ಶನ್ ಅವರು ಕ್ವಾರಂಟೈನ್ ಸೆಲ್‌ನಿಂದ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಕೋರಿದ್ದಾರೆ ಮತ್ತು ಓಡಾಡಲು ಕಡಿಮೆ ಸಮಯ ಹಾಗೂ ಜಾಗ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ದರ್ಶನ್ ಅವರಿಗೆ ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ ಮತ್ತು ದಿಂಬು ನೀಡುವ ಬಗ್ಗೆ ಸಲ್ಲಿಸಿದ ಅರ್ಜಿ ವಿಚಾರಣೆಯೂ ಆರಂಭವಾಯಿತು. ಜೈಲು ಅಧಿಕಾರಿಗಳ ಪರವಾಗಿ ಎಸ್.ಪಿ.ಪಿ. ಪ್ರಸನ್ನಕುಮಾರ್ ಅವರು ವಾದಿಸಿದರು.

ಸರ್ಕಾರಿ ವಕೀಲರ ಸಮರ್ಥನೆ

ಸರ್ಕಾರಿ ವಕೀಲ ಪ್ರಸನ್ನಕುಮಾರ್, ಜೈಲು ಕೈಪಿಡಿಯ ಪ್ರಕಾರವೇ ಕ್ರಮ ಕೈಗೊಳ್ಳಲಾಗಿದೆ. ದೂರವಾಣಿ ಮತ್ತು ವೀಡಿಯೊ ಕಾನ್ಫರೆನ್ಸ್ ವ್ಯವಸ್ಥೆ ಒದಗಿಸಲಾಗಿದೆ. ಕಂಬಳಿ, ಹಾಸಿಗೆ ಮತ್ತು ದಿಂಬುಗಳನ್ನು ನೀಡಲಾಗಿದೆ. ಆದರೆ ಪಲ್ಲಂಗ ಕೇಳಲು ಅವಕಾಶವಿಲ್ಲ. ಓಡಾಡಲು ಎಷ್ಟೇ ಜಾಗವಿದೆಯೋ ಅಷ್ಟರ ಮಟ್ಟಿಗೆ ಅವಕಾಶ ನೀಡಲಾಗಿದೆ. ದೋಷಾರೋಪಣೆಗೆ ಮುನ್ನ ನೀಡಬೇಕಾದ ವಿವರಣೆಗಳನ್ನು ನೀಡಲಾಗಿದೆ ಮತ್ತು ಕ್ರಮ ಕೈಗೊಳ್ಳಲಾಗಿದೆ ಎಂದು ವಾದಿಸಿದರು.

ದರ್ಶನ್ ಪರ ವಕೀಲ ಸುನಿಲ್ ವಾದ ಆರಂಭಿಸಿ, ಜೈಲಾಧಿಕಾರಿಗಳಿಗೆ ನ್ಯಾಯಾಲಯದ ನಿರ್ದೇಶನ ಅರ್ಥವಾಗಿಲ್ಲ. ಅಧಿಕಾರಿಗಳಿಗೆ ಇಂಗ್ಲಿಷ್ ತಿಳಿದಿಲ್ಲ ಎಂದು ಕಾಣುತ್ತದೆ ಎಂದು ಹೇಳಿದಾಗ, ಎಸ್.ಪಿ.ಪಿ. ಪ್ರಸನ್ನಕುಮಾರ್ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗೌರವಕ್ಕೆ ತಕ್ಕಂತೆ ವಾದಿಸಬೇಕು ಎಂದು ಕೋರಿದರು. ಈ ವೇಳೆ ಸೌಮ್ಯ ಭಾಷೆಯಲ್ಲಿ ವಾದಿಸಲು ನ್ಯಾಯಾಲಯ ಸೂಚಿಸಿತು.

ದರ್ಶನ್ ವಕೀಲರ ಪ್ರಮುಖ ವಾದಾಂಶಗಳು

ವಕೀಲ ಸುನಿಲ್ ಅವರು, ಜೈಲಾಧಿಕಾರಿಗಳು ಕೋರ್ಟ್ ಆದೇಶದ ಪ್ರತಿಯನ್ನು ಎಸೆದಿದ್ದಾರೆ ಎಂದು ಆರೋಪಿಸಿದರು. “ದರ್ಶನ್ ಚಿನ್ನದ ಮಂಚ ಕೇಳಿಲ್ಲ, ಚೊಂಬು, ಲೋಟ ಮತ್ತು ಚಾಪೆ ಕೊಟ್ಟಿದ್ದಾರೆ” ಎಂದರು. ಇದಕ್ಕೆ ನ್ಯಾಯಾಧೀಶರು, “ಸುಮ್ಮನೆ ಆರೋಪ ಮಾಡಬೇಡಿ, ಯಾವ ಆದೇಶ ಪಾಲನೆ ಆಗಿಲ್ಲ ಹೇಳಿ” ಎಂದು ಸೂಚಿಸಿದರು.

ದರ್ಶನ್ ಪರ ವಕೀಲರು:

ಕಾರ್ಪೆಟ್ ಮತ್ತು ಚಾದರ್ ಮೊದಲೇ ಕೊಟ್ಟಿದ್ದರೂ, ಕಂಬಳಿ ಮಾತ್ರ ಕೋರ್ಟ್ ಆದೇಶದ ನಂತರ ನೀಡಿದ್ದಾರೆ.

ಬ್ಯಾರಕ್‌ನ ಒಳಗೆ ಮಾತ್ರ ಅರ್ಧ ಗಂಟೆ ಓಡಾಡಲು ಬಿಟ್ಟಿದ್ದಾರೆ, ಹೊರಗಡೆ ಅವಕಾಶ ನೀಡಿಲ್ಲ.

ದರ್ಶನ್‌ಗೆ ಪ್ರತ್ಯೇಕ ರಿಜಿಸ್ಟರ್ ಇಟ್ಟಿದ್ದಾರೆ; ಯಾರ್ಯಾರು ನೋಡಲು ಬರುತ್ತಾರೆಂದು ನಮೂದಿಸಬೇಕಿದೆ.

ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಬೇರೆ ಯಾರಿಗೂ ಈ ರೀತಿ ಇಟ್ಟಿಲ್ಲ, ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಸೆಲೆಬ್ರಿಟಿ ರಕ್ಷಣೆಯ ಹೆಸರಿನಲ್ಲಿ ಉಗ್ರರನ್ನು ಇರಿಸುವ ಸೆಲ್‌ನಲ್ಲಿ ಇರಿಸಿದ್ದಾರೆ.

ಜೈಲು ಕೈಪಿಡಿಯಲ್ಲಿರುವ ಉತ್ತಮ ಆಹಾರ, ಹಾಸಿಗೆ, ನೀರು ಮತ್ತು ಹೊರಜಗತ್ತಿನ ಸಂಪರ್ಕದ ಮಾರ್ಗಸೂಚಿಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ.

ಅತ್ಯಾಚಾರಿ ಉಮೇಶ್ ರೆಡ್ಡಿಗೆ ಕಲರ್ ಟಿವಿ ನೀಡಿದ್ದಾರೆ, ಆದರೆ ದರ್ಶನ್‌ಗೆ ಯಾವುದೇ ಸೌಲಭ್ಯ ನೀಡಿಲ್ಲ.

ದರ್ಶನ್ ವಕೀಲರು, ನಿಯಮದಲ್ಲಿ ‘ಕ್ವಾರಂಟೈನ್’ ಪದವಿದ್ದರೆ ಅರ್ಜಿ ವಾಪಸ್ ಪಡೆಯುತ್ತೇನೆ ಎಂದಾಗ, ಪ್ರಸನ್ನಕುಮಾರ್ ಅವರು: “ನಿಯಮದಲ್ಲಿ ಕ್ವಾರಂಟೈನ್ ಪದವು 11 ಕಡೆ ಇದೆ ಎಂಬುದನ್ನು ನಾನು ತೋರಿಸುತ್ತೇನೆ. ಕ್ವಾರಂಟೈನ್ ಸೆಲ್ ಕೂಡ ಜೈಲಿನ ಒಂದು ಭಾಗವೇ. ಜೈಲಿನ ಆಡಳಿತಕ್ಕೆ ಅನುಕೂಲವಾಗುವಂತೆ ಕೈದಿಯನ್ನು ಯಾವುದೇ ಸೆಲ್‌ನಲ್ಲಿ ಇರಿಸಬಹುದು. ದರ್ಶನ್ ವಿಚಾರಣಾ ಕೈದಿ, ಜೈಲಿನಲ್ಲಿ ಎಲ್ಲಿ ಬೇಕಾದರೂ ಇಡಬಹುದು” ಎಂದು ವಾದಿಸಿದರು.

ಸರ್ಕಾರದ ಪರ ಪ್ರತಿಕ್ರಿಯೆ:

ಪ್ರಸನ್ನಕುಮಾರ್ ಅವರು ಕರ್ನಾಟಕ ಜೈಲು ನಿಯಮದಲ್ಲಿ ವಿಶೇಷ ಮತ್ತು ಸಾಮಾನ್ಯ ಎಂಬ ಎರಡು ವರ್ಗಗಳಿವೆ. ಅಪರಾಧಿಗಳಿಗೆ ಮಾತ್ರ ಎ, ಬಿ, ಸಿ ವರ್ಗೀಕರಣವಿದೆ. ಕೈದಿಗಳ ಭದ್ರತಾ ಅಪಾಯಗಳನ್ನು (Security Risks) ಗಮನಿಸಿ ಸೆಲ್‌ಗಳನ್ನು ನೀಡಲಾಗುತ್ತದೆ. ಹಿಂದೆ ಜೈಲಿನಲ್ಲಿದ್ದಾಗ ದರ್ಶನ್ ಸೌಲಭ್ಯ ದುರುಪಯೋಗ ಮಾಡಿದ್ದಾರೆ. ಇತರೆ ಕಾರಣಗಳಿಗಾಗಿಯೂ ಪ್ರತ್ಯೇಕ ಸೆಲ್‌ನಲ್ಲಿ ಇಡಲು ಅವಕಾಶವಿದೆ ಎಂದರು.

ದರ್ಶನ್ ಪರ ವಕೀಲರು ಕೊನೆಯಲ್ಲಿ, ಬೇರೆ ವಿಐಪಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಲಾಗಿದೆ. ದರ್ಶನ್ ಅವರನ್ನು ಬೇರೆ ಬ್ಯಾರಕ್‌ಗೆ ವರ್ಗಾಯಿಸಲು ಜೈಲು ಅಧಿಕಾರಿಗಳು ಹೆದರುತ್ತಿದ್ದಾರೆ. ಫೋಟೋ ಲೀಕ್ ಆದರೆ ತಮಗೆ ಸಮಸ್ಯೆ ಎಂದು ಹೆದರುತ್ತಿದ್ದಾರೆ ಎಂದು ವಾದಿಸಿದರು.

ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಅಂತಿಮ ಆದೇಶವನ್ನು ಅಕ್ಟೋಬರ್ 9 ಕ್ಕೆ ಕಾಯ್ದಿರಿಸಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page