Wednesday, October 1, 2025

ಸತ್ಯ | ನ್ಯಾಯ |ಧರ್ಮ

ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಪ್ರಧಾನಿ ಮೋದಿ-ಅಮಿತ್ ಶಾ ಮೌನ ಏಕೆ? – ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ವಕ್ತಾರರೊಬ್ಬರು ಬಹಿರಂಗವಾಗಿ ಜೀವ ಬೆದರಿಕೆ ಒಡ್ಡಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಜೀವ ಬೆದರಿಕೆಯ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮೌನ ವಹಿಸಿರುವುದನ್ನು ಪ್ರಶ್ನಿಸಿರುವ ಸಿಎಂ, ಈ ಹೇಳಿಕೆಗೆ ಅವರಿಗೂ ಸಮ್ಮತಿ ಇದೆಯೇ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ಮತ್ತು ಸಂಘಪರಿವಾರದವರು ಸೈದ್ಧಾಂತಿಕ ವಿರೋಧಿಗಳ ಧ್ವನಿಯನ್ನು ಬೆದರಿಕೆಯಿಂದ ಅಡಗಿಸುವುದು ಮತ್ತು ಅದಕ್ಕೆ ಬಗ್ಗದಿದ್ದಾಗ ಇಲ್ಲವಾಗಿಸುವುದು ಹೊಸದೇನಲ್ಲ ಎಂದಿದ್ದಾರೆ.

“ಮೊದಲೆಲ್ಲ ತೆರೆಮರೆಯಲ್ಲಿ ನಿಂತು ತಮ್ಮ ವಿರೋಧಿಗಳ ಹತ್ಯೆಗಳಿಗೆ ಬೆಂಬಲ ನೀಡುತ್ತಾ ಬಂದವರು, ಈಗ ನೇರಾ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಎದುರಾಳಿಗಳನ್ನು ಸಂವಾದ, ಚರ್ಚೆಗಳ ಮೂಲಕ ಸೈದ್ಧಾಂತಿಕವಾಗಿ ಎದುರಿಸಲಾಗದವರು ದೈಹಿಕವಾಗಿ ಮುಗಿಸಲು ಹೊರಟಿರುವುದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಸಿಎಂ ಟೀಕಿಸಿದ್ದಾರೆ.

ಗಾಂಧಿಯಿಂದ ಗೌರಿವರೆಗೆ ಹತ್ಯಾ ಸರಣಿ

ಸಂಘಪರಿವಾರದ ದುರುಳರಿಂದ ಪ್ರಾಣ ಕಳೆದುಕೊಂಡ ಮಹನೀಯರ ಪಟ್ಟಿಯನ್ನು ಸಿಎಂ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. “ಮಹಾತ್ಮ ಗಾಂಧಿಯವರಿಂದ ಆರಂಭಗೊಂಡ ಈ ಹತ್ಯಾ ಸರಣಿ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಹೀಗೆ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರ ಕೊಲೆಗಾರರಿಗೂ ತಮಗೂ ಸಂಬಂಧವಿಲ್ಲವೆಂದು ಸಂಘಪರಿವಾರದ ನಾಯಕರು ಸುಲಭದಲ್ಲಿ ತಲೆತೊಳೆದುಕೊಂಡರೂ, ಅವರ ಕೈಗಳಿಗಂಟಿದ ರಕ್ತದ ಕಲೆಗಳನ್ನು ತೊಳೆಯಲಾಗಲಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆದರಿಕೆಗಳಿಗೆ ಹೆದರುವ ಜಾಯಮಾನ ನನ್ನದಲ್ಲ

ತಮ್ಮ ಮೇಲೆಯೂ ಹಿಂದೆ ಕೊಲೆ ಬೆದರಿಕೆಗಳು ಬಂದಿದ್ದನ್ನು ಸಿಎಂ ಸಿದ್ದರಾಮಯ್ಯ ನೆನಪಿಸಿಕೊಂಡರು. “ಈ ಹಿಂದೆ ನನಗೆ ಮಾತ್ರವಲ್ಲ ನಾಡಿನ ಅನೇಕ ಸಾಹಿತಿಗಳು, ಚಿಂತಕರು ಮತ್ತು ಹೋರಾಟಗಾರರಿಗೂ ಕೊಲೆ ಬೆದರಿಕೆ ಒಡ್ಡಿ ಪತ್ರಗಳನ್ನು ಬರೆಯಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ” ಎಂದು ಹೇಳಿದರು.

“ಇಂತಹ ಬೆದರಿಕೆಗಳಿಗೆ ಹೆದರಿ ನಂಬಿದ ಸಿದ್ಧಾಂತಕ್ಕೆ ಬೆನ್ನು ಹಾಕುವ ಜಾಯಮಾನ ನನ್ನದಲ್ಲ. ಒಂದಲ್ಲಾ ಒಂದು ದಿನ ನ್ಯಾಯದ ಎದುರು ಈ ಎಲ್ಲಾ ದುಷ್ಟರು ಮಂಡಿಯೂರುತ್ತಾರೆಂಬ ಭರವಸೆ ನನಗಿದೆ” ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಈಗ ಒಂಟಿಯಲ್ಲ

ರಾಹುಲ್ ಗಾಂಧಿ ಕುಟುಂಬಕ್ಕೆ ಪ್ರಾಣ ಬೆದರಿಕೆ ಹೊಸದಲ್ಲ ಎಂದು ಹೇಳಿದ ಸಿಎಂ, ರಾಹುಲ್ ಅವರು ಇಂತಹ ಕೊಲೆಗಡುಕರಿಂದಲೇ ತಮ್ಮ ಅಜ್ಜಿ (ಇಂದಿರಾ ಗಾಂಧಿ) ಮತ್ತು ಅಪ್ಪನನ್ನು (ರಾಜೀವ್ ಗಾಂಧಿ) ಕಳೆದುಕೊಂಡವರು ಎಂದರು.

“ರಾಹುಲ್ ಗಾಂಧಿ ಈಗ ಒಬ್ಬಂಟಿ ಅಲ್ಲ, ಅವರ ಬೆಂಬಲಕ್ಕೆ ಕೋಟ್ಯಂತರ ಸಂಖ್ಯೆಯ ಕಾರ್ಯಕರ್ತರಿದ್ದಾರೆ ಎನ್ನುವುದು ಬಿಜೆಪಿಯ ಕೊಲೆಗಡುಕ ಮನಸ್ಸುಗಳಿಗೆ ತಿಳಿದಿರಲಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page