Thursday, October 2, 2025

ಸತ್ಯ | ನ್ಯಾಯ |ಧರ್ಮ

ಸುಳ್ಳುಗಳೇ ಕಾಳಿಂಗ ಸರ್ಪ ಸಂಶೋಧನೆಯ ಮೂಲ ಬಂಡವಾಳ

“..ಮಲೆನಾಡಿನಲ್ಲಿ ನಾಗರಹಾವು, ಕಾಳಿಂಗ ಸರ್ಪಗಳನ್ನು ಪೂಜಿಸುವ ಸಂಸ್ಕೃತಿ ಇದೆ. ಹೀಗಿರುವಾಗ ಕೊಲ್ಲುವುದು ದೂರದ ಮಾತು. ಆದರೆ ಸರ್ಪ ಸಂಶೋಧಕರ ಸೋಗಿನವರು ಸಂಶೋಧನಾ ಪ್ರಬಂಧಗಳಲ್ಲಿ ಮಂಡಿಸಿದ ವಿಚಾರ ಆಘಾತಕಾರಿಯಾದದ್ದು..” ಪರಿಸರ ಚಿಂತಕರಾದ ನಾಗರಾಜ್ ಕೂವೆ ಅವರ ಬರಹದಲ್ಲಿ

ಕಾಳಿಂಗ ಸರ್ಪ ಸಂಶೋಧಕರು ”ಮಲೆನಾಡಿನ ಜನರು ಕಾಳಿಂಗಗಳನ್ನು ಕೊಲ್ಲುತ್ತಾರೆ, ಕಾಳಿಂಗದ ಗೂಡಿಗೆ ಬೆಂಕಿ ಹಾಕುತ್ತಾರೆ, ಮೊಟ್ಟೆಗಳನ್ನು ನಾಶ ಮಾಡುತ್ತಾರೆ, ಮಾನವ-ಕಾಳಿಂಗ ಸರ್ಪ ಸಂಘರ್ಷವಿದೆ, ಕಾಳಿಂಗನ ಸಂತತಿ ಕುಸಿದಿದೆ, ಇದರಿಂದ ವಿಶೇಷ ಮುತುವರ್ಜಿ ವಹಿಸಿ ಕಾಳಿಂಗ ಸರ್ಪ ಸಂರಕ್ಷಣೆ ಮಾಡಬೇಕಿದೆ, ನಾವು ಜನರಲ್ಲಿ ಆ ಬಗೆಗೆ ಜಾಗೃತಿ ಮೂಡಿಸುತ್ತಿದ್ದೇವೆ, ಹಾಗಾಗಿ ಈಗ ಪರಿಸ್ಥಿತಿ ಬದಲಾಗುತ್ತಿದೆ…” ಮೊದಲಾದ ಹಲವು ಕಥೆಗಳನ್ನು ಸಂಶೋಧನಾ ಪ್ರಬಂಧಗಳಲ್ಲಿ ಹೆಣೆದಿದ್ದಾರೆ, ಆ ಕುರಿತು ಇಂಗ್ಲಿಷ್ ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ.

ಕರ್ನಾಟಕದ ಬಯಲು ಸೀಮೆ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ಹಾವುಗಳನ್ನು ಕಂಡಲ್ಲಿ ಕೊಲ್ಲುತ್ತಾರೆ. ಆದರೆ ಕರ್ನಾಟಕದ ಮಲೆನಾಡಿನಲ್ಲಿ ನಾಗರಹಾವು, ಕಾಳಿಂಗ ಸರ್ಪ ಮೊದಲಾದವುಗಳನ್ನು ಕೊಲ್ಲುವ ಪ್ರವೃತ್ತಿ ಇಲ್ಲ. ಪೂಜಿಸುವ ಸಂಸ್ಕೃತಿ ಇದೆ. ತೋಟದಲ್ಲೋ, ಗದ್ದೆಯಲ್ಲೋ, ಕಾಡಿನಲ್ಲೋ ನಾಗರಹಾವು ಅಪ್ಪಿತಪ್ಪಿ ಕಣ್ಣಿಗೆ ಕಾಣಿಸಿಕೊಂಡರೂ ಮಲೆನಾಡಿನ ಜನರು ‘ನಾಗ ದೋಷ’ವೆಂದು ಬಗೆದು ಹರಕೆ ಹೇಳಿಕೊಳ್ಳುತ್ತಾರೆ. ‘ನಾಗರಿಗೆ ಹಣ್ಣು ಒಪ್ಪಿಸುವುದು’ ಎಂಬ ಧಾರ್ಮಿಕ ಆಚರಣೆ ಇಲ್ಲಿದೆ. ‘ನಾಗಬನ’ವೆಂಬ ಸಮುದಾಯ ಸಂರಕ್ಷಿತ ಪುಟ್ಟ ಕಾಡುಗಳು ಮಲೆನಾಡಿನಲ್ಲಿ ಎಲ್ಲೆಡೆ ಕಂಡುಬರುತ್ತದೆ. ‘ಕಾಳಿಂಗ ಸರ್ಪದ’ದ ಹೆಸರನ್ನು ಕೂಡಾ ಬಾಯಿಯಿಂದ ಉಚ್ಚರಿಸಲು ಜನ ಹೆದರುತ್ತಾರೆ! ಅದರ ಸುತ್ತ ಹತ್ತು ಹಲವು ದಂತಕಥೆಗಳು ಹುಟ್ಟಿಕೊಂಡಿವೆ. ಈ ನಂಬಿಕೆಗಳ ಕಾರಣದಿಂದ ಕಾಳಿಂಗಗಳನ್ನು ಕೊಲ್ಲುವುದು ಹಾಗಿರಲಿ, ಹಾಗೆಂದು ಕಲ್ಪಿಸುವುದು ಕೂಡಾ ಮಲೆನಾಡಿಗರಿಗೆ ಬಹು ದೂರದ ಮಾತು.

ಕಾಳಿಂಗ ನೋಡಲು ದೈತ್ಯಾಕಾರವಾಗಿದ್ದರೂ ಅದು ಮನುಷ್ಯರಿಗೆ ಸಹಜವಾಗಿ ಕಚ್ಚಿ ಜನ ಸತ್ತ ಉದಾಹರಣೆ ಇಲ್ಲವೇ ಇಲ್ಲ. ದಟ್ಟ ಕಾಡುಗಳಲ್ಲಿ ಓಡಾಡಿಕೊಂಡಿದ್ದ ಈ ನಿರುಪದ್ರವಿ ಉರಗಗಳು ಕಚ್ಚುವುದು ಹಾಗಿರಲಿ, ತೀರಾ ಇತ್ತೀಚಿನವರೆಗೂ ಮನುಷ್ಯರ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಿದ್ದೇ ವಿರಳ. ನಾಚಿಕೆ ಸ್ವಭಾವದ ಹಾವುಗಳಾದ ಕಾಳಿಂಗಗಳೊಂದಿಗೆ ಮನುಷ್ಯರದು ಸಹಜೀವನ. ಹೀಗಾಗಿ ಮಲೆನಾಡಿನಲ್ಲಿ ಮಾನವ-ಕಾಳಿಂಗ ಸಂಘರ್ಷವೆಂಬುದು ಇಲ್ಲವೇ ಇಲ್ಲ. ಹಾಗೆ ಇದೇ ಎಂಬುದೇ ಸಂಶೋಧಕರ ಸೃಷ್ಟಿ ಹಾಗೂ ಅದೇ ಅವರ ಚಟುವಟಿಕೆಗಳಿಗೆ ಮೂಲ ಬಂಡವಾಳ.

ಹಿಂದೆಲ್ಲಾ ತೀರಾ ಅಪರೂಪಕ್ಕೆ ಕಾಳಿಂಗ ಸರ್ಪ ಮನೆಯೊಳಗೆ ಬಂದ ಉದಾಹರಣೆ ಇರುತಿತ್ತು. ಅದು, ಒಂದೋ ಆಹಾರವಾದ ಕೆರೆ ಹಾವನ್ನು ಬೆನ್ನಟ್ಟಿ ಬಂದೋ, ಇಲ್ಲವೇ ಸಂಗಾತಿಯ ಹುಡುಕಾಟದ ಸಮಯದಲ್ಲಿ ಮಾತ್ರ ಆಗಿರುತ್ತಿತ್ತು. ಆ ಸಂದರ್ಭದಲ್ಲಿ, ಸ್ವಲ್ಪ ಸಮಯ ಕಾದರೆ ಅದಾಗಿಯೇ ಮನೆಯಿಂದ ಹೊರಟು ಹೋಗುತ್ತಿತ್ತು. ಇಲ್ಲವೇ ಸ್ಥಳೀಯ ತಂತ್ರಗಳನ್ನು ಬಳಸಿ ಅದನ್ನು ಅಲ್ಲಿನ ಜನರೇ ಮನೆಯಿಂದ ಹೊರ ಕಳುಹಿಸುತ್ತಿದ್ದರು. ತೀರಾ ಕಷ್ಟದ ಸಮಯದಲ್ಲಿ ಸ್ಥಳೀಯ ಉರಗ ಸಂರಕ್ಷಕರು ಬರುತ್ತಿದ್ದರು. ಆದರೆ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಆಗುಂಬೆ ಸುತ್ತಮುತ್ತಲಿನ ಪರಿಸರದಲ್ಲಿ ಪರಿಸ್ಥಿತಿ ಬೇರೆಯದೇ ಆಗಿದೆ.

ದಟ್ಟ ಕಾಡುಗಳಲ್ಲಿ ಓಡಾಡಿಕೊಂಡಿದ್ದ ಕಾಳಿಂಗಗಳು ತೋಟದಲ್ಲಿ, ಗದ್ದೆಯಲ್ಲಿ, ಹಾಡ್ಯಗಳಲ್ಲಿ ಎಲ್ಲೆಂದರಲ್ಲಿ ಅಂಡಲೆಯುತ್ತಿವೆ. ಸಂಖ್ಯೆ ವಿಪರೀತವಾಗಿ ಆಹಾರಕ್ಕಾಗಿ ಪರದಾಡುತ್ತಿವೆ. ಆಹಾರ ಅರಸಿಕೊಂಡು ಮನುಷ್ಯ ಆವಾಸ ಸ್ಥಾನಗಳ ಬಳಿಯೂ ಬರುತ್ತಿವೆ. ಆಗ ಮನುಷ್ಯರು ಸಾಕಿದ ನಾಯಿಗಳ ಸದ್ದಿಗೆ ಬೆಚ್ಚಿ ಜಾನುವಾರುಗಳ ಕೊಟ್ಟಿಗೆಗೆ, ಮನೆಯ ಒಳಗೆ ಸೇರಿಕೊಳ್ಳುತ್ತಿವೆ. ಇಂತಹ ಸಂದರ್ಭಗಳು ಆಗುಂಬೆಯ ಸುತ್ತಮುತ್ತ ಈಗ ತೀರಾ ಸಹಜ. ಹೀಗಾದಾಗ ತಕ್ಷಣ ಕಾಳಿಂಗ ಸಂಶೋಧಕರಿಗೆ ಫೋನ್ ಹೋಗುತ್ತದೆ. ಅವರು ಬಂದು ಕಾಳಿಂಗಗಳನ್ನು ಹಿಡಿದು, ಕಾಳಿಂಗ ಸಂರಕ್ಷಣೆ ಬಗೆಗೆ ಪೋಸ್ಟರ್ ಹಂಚಿ, ಭಾಷಣ ಕೊಟ್ಟು, ಫೋಟೋ, ವಿಡಿಯೋ ಮಾಡುತ್ತಾರೆ. ಹೀಗೆ ಹಿಡಿದ ಹಾವನ್ನು ಒಮ್ಮೊಮ್ಮೆ ಸಮೀಪದ ಕಾಡಿಗೆ ಬಿಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅವರ ವಾಹನಗಳಲ್ಲಿ ಅದನ್ನು ಕೊಂಡೊಯ್ಯುತ್ತಾರೆ. ಮುಂದೆ ಏನಾಗುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ.

ಗೂಡು ಮಾಡಿ ಮೊಟ್ಟೆ ಇಡುವ ಏಕೈಕ ಹಾವು ಕಾಳಿಂಗ. ಇದು ಎಲ್ಲೇ ಗೂಡು ಮಾಡಿದ್ದರೂ ಅಲ್ಲಿಗೆ ಸಂಶೋಧಕರು ಬರುತ್ತಾರೆ. ಅವರೊಂದಿಗೆ ಲಕ್ಷಾಂತರ ಬೆಲೆಯ ಕ್ಯಾಮೆರಾ, ಲೆನ್ಸ್ ಹೊತ್ತ ಒಂದಿಬ್ಬರಾದರೂ ಜೊತೆಯಲ್ಲಿರುತ್ತಾರೆ. ಕಾಳಿಂಗ ಗೂಡು ಮಾಡಿದ ಜಾಗದ ಸಮೀಪದಲ್ಲೇ ಟೆಂಟ್ ಹಾಕುತ್ತಾರೆ. ಸಂಶೋಧನೆ, ಸಂರಕ್ಷಣೆ ಹೆಸರಿನಲ್ಲಿ ನಿರಂತರ ಛಾಯಾಗ್ರಹಣ, ವಿಡಿಯೋ ಚಿತ್ರೀಕರಣ ನಡೆಯುತ್ತದೆ. ಜನ ಅದನ್ನೂ ಅಧ್ಯಯನ ಎಂದು ಭಾವಿಸುತ್ತಾರೆ. ಆದರೆ ಮುಂದೆ ಈ ಫೋಟೋಗಳು, ವಿಡಿಯೋ ತುಣುಕುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಕ್ಷಾಂತರ ಹಣಕ್ಕೆ ಮಾರಾಟವಾಗುತ್ತವೆ!

ಒಮ್ಮೊಮ್ಮೆ ಈ ಮೇಲಿನಂತೆ ಆದರೆ ಇನ್ನೂ ಕೆಲವೊಮ್ಮೆ ಕಾಳಿಂಗಗಳು ಸಂಗಾತಿಗಾಗಿ ಕಾದಾಡುವುದನ್ನು, ಗಂಡು-ಹೆಣ್ಣು ಕೂಡುವುದನ್ನು ಚಿತ್ರೀಕರಣ ನಡೆಸುತ್ತಾರೆ. ಮುಂದೆ ಹೆಣ್ಣು ಗೂಡು ಕಟ್ಟಿದಾಗ ‘ಇಲ್ಲಿ ಜನರಿದ್ದಾರೆ, ಮೊಟ್ಟೆಗಳಿಗೆ ಅಪಾಯವಿದೆ, ಕಾಳಿಂಗಕ್ಕೆ ತೊಂದರೆಯಾಗುತ್ತದೆ’ ಎಂದೆಲ್ಲಾ ಹೇಳಿ ಆ ಮೊಟ್ಟೆಗಳನ್ನು ತಮ್ಮ ಸಂಶೋಧನಾ ಕೇಂದ್ರಗಳೆಂಬ ರೆಸಾರ್ಟ್ ಗಳಿಗೆ ತೆಗೆದುಕೊಂಡು ಹೋಗುವುದೂ ಇದೆ. ಮುಂದೆ ಅವುಗಳನ್ನು ಮರಿ ಮಾಡಿ ಕಾಡಿಗೆ ಬಿಡಲಾಗುತ್ತದೆ. ಯಥಾಪ್ರಕಾರ ಫೋಟೋ, ವಿಡಿಯೋ ಚಿತ್ರೀಕರಣ, ಪತ್ರಿಕಾ ಸುದ್ದಿ ಇತ್ಯಾದಿ.

ಯಾವುದೇ ಜೀವಿಯ ಸಂಶೋಧನೆ, ಸಂರಕ್ಷಣೆಗೆ ಹಣ ಬರಬೇಕಾದರೆ ಮೊದಲು ‘ಅದು ಅಪಾಯದಲ್ಲಿದೆ’ ಎಂದು ತೋರಿಸಬೇಕು. ಸಂಶೋಧಕರು ತಮ್ಮ ಸುಳ್ಳುಗಳಿಂದ ಸ್ಥಳೀಯ ಜನರ ಮೇಲೆ ಅಪವಾದ ಹೊರೆಸಿ, ಕೃತಕ ದಾಖಲೆಗಳನ್ನು ಸೃಷ್ಟಿಸಿ ‘ಕಾಳಿಂಗ ಅಪಾಯದಲ್ಲಿದೆ’ ಎಂಬ ಕಥೆಯನ್ನು ವ್ಯವಸ್ಥಿತವಾಗಿ ಹೆಣೆದಿದ್ದಾರೆ.

ಇವರ ಏಕಮುಖವಾದ ಸಂಶೋಧನೆಯ ಮೂಲಕ ‘ಕಾಳಿಂಗ ಸಂತತಿ ಕ್ಷೀಣವಾಗಿದೆ’ ಎಂದು ಪ್ರಬಂಧ ಪ್ರಕಟಿಸಿದ್ದಾರೆ. ಆದರೆ ಇವರು ಕಾರ್ಯ ನಿರ್ವಹಿಸುತ್ತಿರುವ ಆಗುಂಬೆಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ ಎಂದು ಬಹುತೇಕ ರೈತಾಪಿ ಜನರು ಅಭಿಪ್ರಾಯ ಪಡುತ್ತಾರೆ. ಇಲ್ಲಿ ಪರಸ್ಪರ ವೈರುಧ್ಯವಿದೆ. ಇಲ್ಲಿ ಸಂಶೋಧನೆಯ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹ. ತಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ಈ ಸ್ವರೂಪದ ವರದಿಯನ್ನು ಹುಟ್ಟು ಹಾಕಿದ್ದಾರೆ ಎಂದು ಯಾರೇ ಸಂಶಯಪಟ್ಟರೂ ಅಚ್ಚರಿಯಿಲ್ಲ.

ಇವರ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕಾಳಿಂಗದ ಆಹಾರವಾದ ಕೇರೆ ಹಾವು, ನಾಗರಹಾವುಗಳು ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ‘ಕಾಳಿಂಗಗಳನ್ನು ಕೃತಕವಾಗಿ ಮರಿ ಮಾಡಿ ಕಾಡಿಗೆ ಬಿಟ್ಟು ಪರಿಸರ ವ್ಯವಸ್ಥೆಯಲ್ಲಿ ಏರುಪೇರಾಗುತ್ತಿದೆ’ ಎಂಬುದು ಬಹುತೇಕರ ಖಚಿತ ಅಭಿಪ್ರಾಯ.

ಸಂಶೋಧಕರು ‘ಕಾಳಿಂಗದ ಸಂರಕ್ಷಣೆಗೆ ಅವುಗಳ ಗಣತಿ ಅಗತ್ಯ’ ಎಂದು ಪ್ರತಿಪಾದಿಸಿ ಸುಮಾರು 100 ಕ್ಕೂ ಹೆಚ್ಚು ಹಾವುಗಳಿಗೆ ಪಿಟ್ ಟ್ಯಾಗ್ (Passive Integrated Transponder) ಅಳವಡಿಸಿದ್ದಾರೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅಕ್ಕಿ ಕಾಳಿನ ಗಾತ್ರದ ಈ ವಸ್ತುವನ್ನು ಹಾವುಗಳ ದೇಹಕ್ಕೆ ಸಿರಿಂಜ್ ಮೂಲಕ ಸೇರಿಸಲಾಗುತ್ತದೆ. ಇದು ಮನುಷ್ಯರ ಆಧಾರ್ ಕಾರ್ಡ್ ಮಾದರಿಯಲ್ಲಿ ಪ್ರತ್ಯೇಕ ಸಂಖ್ಯೆ ಹೊಂದಿರಲಿದೆ. ಇದರಲ್ಲಿ ಹಾವುಗಳ ತೂಕ, ಗಾತ್ರ, ತಿರುಗಾಟದ ವ್ಯಾಪ್ತಿ ಮೊದಲಾದ ವಿವರಗಳನ್ನು ಸೇರಿಸಲಾಗಿರುತ್ತದೆ. ಈ ಪಿಟ್ ಟ್ಯಾಗ್ ಅಳವಡಿಸಿರುವ ಹಾವು ಎಲ್ಲಿ ಸಿಕ್ಕರೂ ಅದನ್ನು ಹಿಡಿದು ಸ್ಕ್ಯಾನ್ ಮಾಡಿದರೆ ಎಲ್ಲಾ ವಿವರ ಸಿಗುತ್ತದೆ. ತಮ್ಮ ಸಂಶೋಧನೆ ಹೆಸರಿನ ದಂಧೆಯ ನಿರಂತರವಾಗಿ ಮುಂದುವರೆಸಲು ಈ ಪ್ರಯೋಗ ನೆಡೆದಿರುವಂತಿದೆ.

ಕಾಳಿಂಗದ ವಿಷ ಸಂಗ್ರಹಣೆಗಾಗಿ ಅಧಿಕೃತ ಅನುಮತಿ ಪಡೆಯಲು ಸಂಶೋಧನಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ತಮ್ಮ ವ್ಯವಹಾರದ ವಿಸ್ತರಣೆಗಾಗಿ ಆಗುಂಬೆ ಸುತ್ತಮುತ್ತಲಿನ ಕಾಡನ್ನು ‘ಕಾಳಿಂಗ ಧಾಮ’ ಎಂದು ಘೋಷಿಸುವಂತೆ ಸರ್ಕಾರಕ್ಕೆ ಒತ್ತಡ ಹಾಕುವ ಹುನ್ನಾರ ನಡೆಸಿವೆ. ತಮ್ಮ ಸಂಶೋಧನಾ ಕೇಂದ್ರವನ್ನು ಪಶ್ಚಿಮ ಘಟ್ಟದ ಆರು ಜಿಲ್ಲೆಗಳಿಗೆ ವಿಸ್ತರಿಸುವ, ಎಲ್ಲಾ ಕಾಳಿಂಗಗಳಿಗೆ ‘ಪಿಟ್ ಟ್ಯಾಗ್’ ಹಾಕಿ ಅವುಗಳ ಚಲನವಲನಗಳ ಮೇಲೆ ನಿಗಾ ಇಡುವ ಯೋಜನೆ ನಡೆಯುತ್ತಿದೆ. ಮಲೆನಾಡಿನಲ್ಲಿ ಇಲ್ಲದ ಮಾನವ-ಕಾಳಿಂಗ ಸರ್ಪ ಸಂಘರ್ಷವನ್ನು ಸಂಶೋಧಕರು ಸ್ವತಃ ತಾವೇ ಕೃತಕವಾಗಿ ಸೃಷ್ಟಿಸಿ, ಅದಕ್ಕೆ ತಾವೇ ಪರಿಹಾರ ಕೊಡಲು ಹೊರಟಿದ್ದಾರೆ.

ಒಟ್ಟಿನಲ್ಲಿ, ಕಾಳಿಂಗ ಸರ್ಪ ಸಂಶೋಧನೆ ಮತ್ತು ಸಂರಕ್ಷಣೆ ಎಂಬುದು ಇವತ್ತು ಕೇವಲ ಸಂಶೋಧನೆ, ಸಂರಕ್ಷಣೆಯಾಗಿ ಉಳಿದಿಲ್ಲ. ಆಗುಂಬೆಯ ಎರಡೂ ಸಂಶೋಧನಾ ಸಂಸ್ಥೆಗಳು ಅದನ್ನು ಹಣ ಮಾಡುವ ವ್ಯವಸ್ಥಿತ ದಂಧೆಯಾಗಿ ಬದಲಾಯಿಸಿಕೊಂಡಿವೆ. ಸಂಶೋಧನೆ ಹೆಸರಿನಲ್ಲಿ ರೆಸಾರ್ಟ್, ಕಾಡು ಒತ್ತುವರಿ, ಕಾಳಿಂಗಗಳ ಬಂಧನ, ಫೋಟೋ ಶೂಟ್, ಅಕ್ರಮ ಭೂಮಿ ಖರೀದಿ, ಅನಧಿಕೃತ ಕಾಡು ಪ್ರವೇಶ, ರಸ್ತೆ ನಿರ್ಮಾಣ ಮೊದಲಾದ ಹತ್ತು ಹಲವು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿವೆ. ಸಂಶೋಧನಾ ಸಂಸ್ಥೆಗಳು ಪ್ರಾರಂಭವಾಗುವ ಮೊದಲು ಮಳೆಕಾಡುಗಳಲ್ಲಿ ತಣ್ಣಗಿದ್ದ ಕಾಳಿಂಗಗಳು ಅವರ ಅವೈಜ್ಞಾನಿಕ ಹಾಗೂ ಅನೈತಿಕ ಚಟುವಟಿಕೆಗಳಿಗೆ ಸರಕಾಗಿ ನೆಮ್ಮದಿ ಕಳೆದುಕೊಂಡಿವೆ. ಇನ್ನೂ ಹೀಗೇ ಬಿಟ್ಟಲ್ಲಿ ಯಾರೂ ಊಹಿಸಲಾಗದ ಅವಘಡಗಳು ಜರುಗಲಿವೆ. ಈ ಸಂದರ್ಭದಲ್ಲಿ ಕಾಳಿಂಗಗಳ ಶೋಷಣೆಯ ವಿರುದ್ಧ ಜನಜಾಗೃತಿ ಮೂಡಿಸುತ್ತಾ ಆ ಕುರಿತು ಎಲ್ಲರೂ ಧ್ವನಿ ಎತ್ತಬೇಕಾದ ಜರೂರಿದೆ.

  • ನಾಗರಾಜ ಕೂವೆ

(ಫೋಟೋಗಳು – ಗೌರಿಶಂಕರ್, ರೋಮೋಲಸ್ ವಿಟೇಕರ್ ಮೊದಲಾದವರು ಬರೆದ ಸಂಶೋಧನಾ ಪ್ರಬಂಧಗಳು ಹಾಗೂ ಅಜಯ್ ಗಿರಿ ಮೊದಲಾದವರ ಪತ್ರಿಕಾ ಹೇಳಿಕೆಗಳು)

Related Articles

ಇತ್ತೀಚಿನ ಸುದ್ದಿಗಳು

You cannot copy content of this page