Friday, October 3, 2025

ಸತ್ಯ | ನ್ಯಾಯ |ಧರ್ಮ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿದ ಸೋನಂ ವಾಂಗ್‌ಚುಕ್ ಪತ್ನಿ

ಪರಿಸರ ಕಾರ್ಯಕರ್ತ ಸೋನಂ ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೊ ಅವರು ತಮ್ಮ ಪತಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಗೀತಾಂಜಲಿ ಆಂಗ್ಮೊ ಅವರು ಗುರುವಾರ ಸಂವಿಧಾನದ ಆರ್ಟಿಕಲ್ 32 ಅಡಿಯಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ದಾಖಲಿಸಿದ್ದು, ತಮ್ಮ ಪತಿಯ ಬಂಧನವು ಅಕ್ರಮ ಎಂದು ಹೇಳಿದ್ದಾರೆ.

ಲಡಾಖ್‌ಗೆ ರಾಜ್ಯ ಸ್ಥಾನಮಾನದ ಬೇಡಿಕೆಗಾಗಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ರಂದು ಸೋನಂ ವಾಂಗ್‌ಚುಕ್ ಅವರನ್ನು ಬಂಧಿಸಲಾಗಿತ್ತು. ಈ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ನಾಲ್ಕು ಜನರ ಸಾವಿಗೆ ಕಾರಣವಾಗಿದ್ದವು. ಪ್ರಸ್ತುತ ದಸರಾ ವಿರಾಮದ ಕಾರಣ ಸುಪ್ರೀಂ ಕೋರ್ಟ್‌ಗೆ ರಜೆ ಇದ್ದು, ನ್ಯಾಯಾಲಯಗಳು ಅಕ್ಟೋಬರ್ 6 ರಂದು ಪುನರಾರಂಭಗೊಳ್ಳಲಿವೆ.

ಅರ್ಜಿಯಲ್ಲಿ, ತಮ್ಮ ಪತಿಯ ಬಂಧನವು “ಅಕ್ರಮ ಮತ್ತು ನಿಯಮಗಳ ಉಲ್ಲಂಘನೆ” ಎಂದು ಆಂಗ್ಮೊ ವಾದಿಸಿದ್ದಾರೆ ಮತ್ತು ಅವರ ವಿರುದ್ಧ ಎನ್‌ಎಸ್‌ಎ (NSA) ಹೇರಿರುವುದನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಬಂಧನದ ನಂತರ ತಮ್ಮ ಪತಿಯೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಅರ್ಜಿಯು ನ್ಯಾಯಾಲಯಗಳು ಪುನರಾರಂಭಗೊಂಡ ನಂತರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page