Friday, October 3, 2025

ಸತ್ಯ | ನ್ಯಾಯ |ಧರ್ಮ

ಕೋಲಾರದಲ್ಲಿ ನಕಲಿ ವೈದ್ಯರ ಎಡವಟ್ಟಿಗೆ 8 ವರ್ಷದ ಬಾಲಕಿ ಬಲಿ

ಕೋಲಾರ: ಇತ್ತೀಚೆಗೆ ಕೋಲಾರ(kolar) ಪ್ರದೇಶದಲ್ಲಿ ನಕಲಿ ವೈದ್ಯರ (Fake doctor) ಹಾವಳಿ ಸಂಖ್ಯೆ ಹೆಚ್ಚಾಗುತ್ತಿದೆ. ಕೋಲಾರದ ಮಾಲೂರು ತಾಲ್ಲೂಕು ದೊಡ್ಡಿಗ್ಗಲೂರು ಗ್ರಾಮದ 8 ವರ್ಷದ ಬಾಲಕಿ ಈ ನಕಲಿ ವೈದ್ಯರ ಕಾಟಕ್ಕೆ ಬಲಿಯಾಗಿದ್ದಾಳೆ.

ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ನಕಲಿ ವೈದ್ಯರ ಕಾಟ ಹೆಚ್ಚುತ್ತಿದೆ. ಯಾವುದೇ ವೈದ್ಯಕೀಯ ಪದವಿಯಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ರೋಗಿಗಳ ಜೀವದ ಜೊತೆ ಆಟವಾಡುತ್ತಿದ್ದಾರೆ. ಜ್ವರ ಎಂದು ಆಸ್ಪತ್ರೆಗೆ ಹೋದ ಮಗುವಿಗೆ ನೀಡಿದ ಇಂಜೆಕ್ಷನ್ನಿಂದಲೇ ಮಗು ಸಾವನ್ನಪ್ಪಿದ್ದು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಜ್ವರ ಎಂದು ಅನಾರೋಗ್ಯದಿಂದ ಆಸ್ಪತ್ರೆಗೆ ಹೋದಾಗ ಆಕೆಗೆ ಚಿಕಿತ್ಸೆ ನೀಡಿದವರು ನಕಲಿ ವೈದ್ಯರೆಂದು ಹೇಳಲಾಗುತ್ತಿದೆ.

ಇಂಜೆಕ್ಷನ್‌ ನಿಂದ ಜ್ವರ ಉಲ್ಬಣ
ದೊಡ್ಡಿಗಲ್ಲೂರು ಗ್ರಾಮದ 8 ವರ್ಷದ ಬಾಲಕಿಯೊಬ್ಬಳು ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ಸಂತೆಹಳ್ಳಿ ಗ್ರಾಮದ ಆಸ್ಪತ್ರೆಗೆ ದಾಖಲಿಸಿದ್ದರು. ಕ್ಲಿನಿಕ್ನಲ್ಲಿ ಮಗುವಿಗೆ ನೀಡಿದ ಇಂಜೆಕ್ಷನ್ನಿಂದ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದಳು. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಬಾಲಕಿಗೆ ಚಿಕಿತ್ಸೆ ಮಾಡಿದವರು ನಕಲಿ ವೈದ್ಯರೆಂದು ತಿಳಿದುಬಂದಿದ್ದು, ಅವರು ಕೊಟ್ಟ ಇಂಜೆಕ್ಷನ್ ಪರಿಣಾಮವಾಗಿಯೇ ಬಾಲಕಿ ಸಾವನ್ನಪ್ಪಿದ್ದಾಳೆಂದು ಆರೋಪ ಕೇಳಿಬಂದಿದೆ.

ನಕಲಿ ವೈದ್ಯರ ಕ್ಲೀನಿಕ್‌ ಗಳಿಗೆ ಬೀಗ
ಕೋಲಾರ ಜಿಲ್ಲೆಯಲ್ಲಿ 3 ಕ್ಲಿನಿಕ್ಗಳ ಮೇಲೆ   ಹಿಂದೆ ತಹಶೀಲ್ದಾರರು ದಾಳಿ ಮಾಡಿದ್ದರು. ಸೂಕ್ತ ದಾಖಲೆಗಳಿಲ್ಲದ ಕಾರಣ ನಕಲಿ ವೈದ್ಯರ 3 ಕ್ಲಿನಿಕ್ಗಳನ್ನೂ ಮುಚ್ಚಲಾಗಿತ್ತು. ಬೆಂಗಳೂರಿನಲ್ಲಿಯೂ ಕೋರಮಂಗಲದಲ್ಲಿ ಆಯುರ್ವೇದ ಓದಿಕೊಂಡಿದ್ದ ವೈದ್ಯರೊಬ್ಬರು ಕಳೆದ 10 ವರ್ಷಗಳಿಂದಲೂ ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಬಯಲಾಗಿತ್ತು. ಅದರೊಂದಿಗೆ ಚರ್ಮ ಶಾಸ್ತ್ರದ ಬಗ್ಗೆ ಓದದೇ ಇರುವವರೂ ಬ್ಯೂಟಿ ಟ್ರೀಟ್ಮೆಂಟ್ ನೀಡುತ್ತಿದ್ದರು.ಹೀಗೆ ಬೆಂಗಳೂರು, ಕಲಬುರಗಿ, ಬೆಳಗಾವಿ ಸೇರಿದಂತೆ 100 ಕ್ಕೂ ಹೆಚ್ಚು ನಕಲಿ ವೈದ್ಯರ ಹೆಸರು ಬೆಳಕಿಗೆ ಬಂದಿತ್ತು. ಇವೆಲ್ಲರ ಕ್ಲೀನಿಕ್‌ ಗಳ ಮೇಲೆ ಕ್ರಮ ಕೂಡ ಕೈಗೊಂಡಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ, ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ 256 ನಕಲಿ ವೈದ್ಯರನ್ನು ಪತ್ತೆಹಚ್ಚಲಾಗಿದೆ. ಮಾರ್ಚ್ 2024 ರಲ್ಲಿ, ರಾಜ್ಯದಲ್ಲಿ ಒಟ್ಟು 1,775 ನಕಲಿ ವೈದ್ಯರಿದ್ದ ಬಗ್ಗೆ ವರದಿಯಾಗಿತ್ತು.

ನಕಲಿ ವೈದ್ಯರು ಹೆಚ್ಚಿರುವ ಜೆಲ್ಲೆ ಯಾವುದು…?
89 ಕ್ಲಿನಿಕ್‌ಗಳನ್ನು ಮುಚ್ಚಲಾಗಿದೆ ಮತ್ತು 154 ನಕಲಿ ವೈದ್ಯರಿಗೆ ದಂಡ ವಿಧಿಸಲಾಗಿದೆ. ಆಯುಷ್ ಇಲಾಖೆಯಲ್ಲೂ 833 ಪ್ರಕರಣಗಳು ವರದಿಯಾಗಿವೆ. ಬೀದರ್‌, ಕೋಲಾರ ಮತ್ತು ತುಮಕೂರುಗಳಲ್ಲಿ ಅತಿ ಹೆಚ್ಚು ನಕಲಿ ವೈದ್ಯರಿದ್ದಾರೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅದಕ್ಕೆ ಕಡಿವಾಣ ಬಿದ್ದಿಲ್ಲ.ಯಾವುದೇ ವೈದ್ಯಕೀಯ ಡಿಗ್ರಿ ಇಲ್ಲದೆ ಅವರು ತಮ್ಮನ್ನು ತಾವು ವೈದ್ಯರೆಂದು ಕರೆಸಿಕೊಳ್ಳುತ್ತಿದ್ದಾರೆ. ಇಂತಹ ನಕಲಿ ವೈದ್ಯರಿಂದ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ.ಅಸಲಿ ವೈದ್ಯರ ಹೆಸರಿಗೆ ಕಳಂಕ ತರುವ ನಕಲಿ ವೈದ್ಯರು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಇದರಿಂದ ಸಾಮಾನ್ಯ ರೋಗಿಗಳು ಸಮಸ್ಯೆಯನ್ನು ಅನುಭವಿಸುವಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page