Wednesday, October 8, 2025

ಸತ್ಯ | ನ್ಯಾಯ |ಧರ್ಮ

ಹಾಸನ ನಗರದಲ್ಲಿನ ರೈಲ್ವೆ ಇಲಾಖೆಯ ದಬ್ಬಾಳಿಕೆ ಸಹಿಸುವುದಿಲ್ಲ ಪ್ರತಿಭಟನೆಯ ಎಚ್ಚರಿಕೆ

ಗವೇನಹಳ್ಳಿ ನಿವಾಸಿಗಳ ಗರಂ ಎಚ್ಚರಿಕೆ, ಪ್ರತಿಭಟನೆ, ನಮ್ಮ ಹಕ್ಕಿನ ರಸ್ತೆ ಯಾರೂ ಕಸಿದುಕೊಳ್ಳಲು ಬಿಡುವುದಿಲ್ಲ

ಹಾಸನ : ನಗರದ ಪೃಥ್ವಿ ಥಿಯೇಟರ್ ಎದುರು ಇರುವ ಗವೇನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರ ಅಸಮಾಧಾನ ಇದೀಗ ಚರ್ಚೆಗೆ ಗ್ರಾಸವಾಗಿದೆ. ರೈಲ್ವೆ ಇಲಾಖೆ ನಡೆಸುತ್ತಿರುವ ಕೆಲಸಗಳು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿವೆ ಎಂಬ ಆಕ್ರೋಶದಿಂದ ಸ್ಥಳೀಯರು ಉಗ್ರ ಸ್ವರ ಎತ್ತಿದ್ದಾರೆ.ಈ ಭಾಗದಲ್ಲಿ ಹತ್ತಾರು ಹಳ್ಳಿಗಳ ಜನರು ನಿತ್ಯ ಸಂಚರಿಸುವ ಪ್ರಮುಖ ರಸ್ತೆ ಇದೆ. ಶಾಲಾ, ಕಾಲೇಜು ಮಕ್ಕಳಿಂದ ಹಿಡಿದು, ರೈತರು, ಉದ್ಯೋಗಸ್ಥರು ಎಲ್ಲರೂ ಇದೇ ಮಾರ್ಗದ ಮೂಲಕ ಸಂಚಾರ ನಡೆಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೈಲ್ವೆ ಇಲಾಖೆಯವರು ಈ ರಸ್ತೆಯ ಮಧ್ಯೆ ಗುಂಡಿ ತೆಗೆಯುವ ಕೆಲಸ ಆರಂಭಿಸಿದ್ದು, ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ. ಗವೇನಹಳ್ಳಿ ಪ್ರದೇಶದ ಈ ರಸ್ತೆ ವಿವಾದ ಸ್ಥಳೀಯ ಜನಜೀವನಕ್ಕೆ ನೇರ ಸಂಬಂಧ ಹೊಂದಿದ್ದು, ಸಮಸ್ಯೆ ಬಗೆಹರಿಸಲು ಆಡಳಿತ ಮತ್ತು ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಇಲ್ಲದಿದ್ದರೆ ಈ ವಿಷಯ ದೊಡ್ಡ ಹೋರಾಟದ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

ಗವೇನಹಳ್ಳಿ ನಿವಾಸಿ ಹರೀಶ್ ಗೌಡ ಮಾಧ್ಯಮದೊಂದಿಗೆ ಮಾತನಾಡಿ ತಮ್ಮ ತೀವ್ರ ಅಸಮಾಧಾನವನ್ನು ಹಂಚಿಕೊಂಡು, ನಮ್ಮ ಹಳ್ಳಿಯ ಈ ರಸ್ತೆ ಸಾರ್ವಜನಿಕರ ಜೀವನಾಡಿ. ಈ ಭಾಗದಲ್ಲಿ ರೈಲ್ವೆಯ ಗೂಡ್ಸ್ ಶೆಡ್ ಇದ್ದು, ಅದರ ಕಾಟವನ್ನು ಸಹಿಸಿಕೊಂಡು ನಾವು ಬದುಕುತ್ತಿದ್ದೇವೆ. ಆದರೂ ಈಗ ರೈಲ್ವೆ ಇಲಾಖೆಯವರು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಯಾರೂ ನಮ್ಮನ್ನು ಕೇಳದೆ ರಸ್ತೆ ಮೇಲೆ ಗುಂಡಿ ತೆಗೆಯುತ್ತಾರೆ. ಯಾವ ಸರ್ಕಾರ ಈ ರೀತಿಯ ಕೆಲಸಕ್ಕೆ ಅನುಮತಿ ಕೊಟ್ಟಿದೆ ಎಂದು ಪ್ರಶ್ನಿಸಿದರು. ನೀವು ಅಧಿಕಾರದ ಹೆಮ್ಮೆಯಿಂದ ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಿ. ನಿಮ್ಮಲ್ಲಿ ನಿಜವಾದ ಧೈರ್ಯ ಇದ್ದರೆ ಹಾಸನದ ಶಾಸಕರು, ಸಂಸದರು, ಅಥವಾ ಅಧಿಕಾರಿಗಳ ಬಳಿ ಮಾತನಾಡಿ. ಅಮಾಯಕ ಜನರ ಮೇಲೆ ಬಲಪ್ರಯೋಗ ಮಾಡುವುದು ಒಳ್ಳೆಯದಲ್ಲ. ನಮ್ಮ ಹಕ್ಕು ಕಸಿದುಕೊಳ್ಳಲು ಯತ್ನಿಸಿದರೆ ನಾವು ಜೀವಕೊಡಲು ಸಿದ್ದರಿದ್ದೇವೆ. ಹತ್ತಾರು ಹಳ್ಳಿಗಳ ಜನ ಒಟ್ಟಾಗಿ ಹೋರಾಟ ನಡೆಸುತ್ತಾರೆ. ಯಾವುದೇ ಸಂದರ್ಭದಲ್ಲೂ ನಾವು ಈ ರಸ್ತೆಯನ್ನು ಬಿಟ್ಟುಕೊಡುವುದಿಲ್ಲ ಎಂದು ಎಚ್ಚರಿಸಿದರು. ಹರೀಶ್ ಗೌಡ ಮುಂದುವರೆದು ಹೇಳಿದರು, “ಈ ಜಾಗ ಈಗ ರೈಲ್ವೆ ಇಲಾಖೆಗೆ ಸೇರಿದದ್ದು ಅಲ್ಲ. ಅವರು ಈ ಪ್ರದೇಶವನ್ನು ಹಿಂದೆಯೇ ನಗರ ಪಾಲಿಕೆಗೆ ಬಿಟ್ಟುಕೊಟ್ಟಿದ್ದಾರೆ. ಆದ್ದರಿಂದ ಇದು ಹಾಸನ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿದೆ. ರೈಲ್ವೆ ಇಲಾಖೆ ತಕ್ಷಣ ತಮ್ಮ ಕೆಲಸ ನಿಲ್ಲಿಸಬೇಕು. ಇಲ್ಲದಿದ್ದರೆ ಜನರ ಕೋಪಕ್ಕೆ ಕಾರಣರಾಗುತ್ತಾರೆ ಎಂದರು.

ಮಹಾನಗರ ಪಾಲಿಕೆ ಸದಸ್ಯ ರಕ್ಷಿತ್ ರೈಲ್ವೆ ಇಲಾಖೆಯ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಳೆದ ನಾಲ್ಕು-ಐದು ದಶಕಗಳಿಂದ ರೈಲ್ವೆ ಇಲಾಖೆ ಇಲ್ಲಿನ ಜನರನ್ನು ಅಣಕಿಸುತ್ತಾ ಬಂದಿದೆ. ಎಲ್ಲೆ ಹೋದರೂ ‘ಇದು ರೈಲ್ವೆ ಜಾಗ’ ಎಂದು ಹೇಳಿ ದಾರಿ ಬಿಡುವುದಿಲ್ಲ. ಜನರ ಕಷ್ಟ, ಸಂಚಾರದ ತೊಂದರೆ ಯಾರಿಗೂ ಕಾಣುವುದಿಲ್ಲ. ಈಗ ಈ ಪ್ರದೇಶ ನಗರ ಪಾಲಿಕೆಗೆ ಸೇರಿರುವುದರಿಂದ ರೈಲ್ವೆಯವರು ತಮ್ಮ ಗೂಡ್ಸ್ ಶೆಡ್‌ನಿಂದ ವಾಹನಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಬೇಕು ಎಂದು ಹೇಳಿದರು. ನಾವು ಇನ್ನು ಮನವಿ ಮಾಡುವ ಹಂತ ಮುಗಿಸಿದೆವು. ಮುಂದೆ ನಮ್ಮ ಹಕ್ಕಿಗಾಗಿ ಉಗ್ರ ಹೋರಾಟ ನಡೆಸುತ್ತೇವೆ. ರೈಲ್ವೆ ಇಲಾಖೆಯವರು ನಮ್ಮನ್ನು ಕೇಳದೆ ಕೆಲಸ ಮುಂದುವರೆಸಿದರೆ, ಹಳ್ಳಿಯ ಜನರನ್ನು ತಡೆಹಿಡಿಯಲು ಯಾರಿಗೂ ಸಾಧ್ಯವಾಗುವುದಿಲ್ಲ. ರೈಲ್ವೆ ಇಲಾಖೆಗೆ ಈ ಪ್ರದೇಶ ಬೇಕಾದರೆ ಅವರು ಸಂಪೂರ್ಣ ಊರನ್ನೇ ಖರೀದಿ ಮಾಡಲಿ; ಇಲ್ಲದಿದ್ದರೆ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಮಾಡಬಾರದು” ಎಂದರು. ಸ್ಥಳೀಯರು ಮತ್ತೊಂದು ಗಂಭೀರ ಅಂಶವನ್ನೂ ಎತ್ತಿಹಿಡಿದರು. ರೈಲ್ವೆ ದಾಟುವ ಸಂದರ್ಭದಲ್ಲಿ ಅನೇಕರು ಜೀವ ಕಳೆದುಕೊಂಡಿದ್ದು, ಕೆಲವರು ಕೈಕಾಲು ಕಳೆದುಕೊಂಡಿದ್ದಾರೆ. “ರೈಲ್ವೆ ಇಲಾಖೆ ಸುರಕ್ಷತಾ ಕ್ರಮ ಕೈಗೊಳ್ಳದೆ ಜನರ ಜೀವ ಹರಾಜು ಹಾಕುತ್ತಿದೆ. ದರೋಡೆ ನಡೆದರೂ ಕೇಳಿಕೊಳ್ಳುವುದಿಲ್ಲ, ಆದರೆ ಸಾರ್ವಜನಿಕರು ದಾರಿ ಕೇಳಿದರೆ ಧಿಕ್ಕರಿಸುತ್ತಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ವಿವಾದದ ಕುರಿತು ಸ್ಥಳೀಯರು ಹಾಸನದ ಶಾಸಕರು, ಸಂಸದರು ಹಾಗೂ ಜಿಲ್ಲಾಧಿಕಾರಿಗಳ ಹಸ್ತಕ್ಷೇಪವನ್ನು ಒತ್ತಾಯಿಸಿದ್ದಾರೆ. “ಐವತ್ತು ಅಡಿ ರಸ್ತೆ ಬಿಡದಿದ್ದರೆ ಯಾವುದೇ ವಾಹನಗಳನ್ನು ಈ ಭಾಗದಲ್ಲಿ ಓಡಾಡಲು ಬಿಡುವುದಿಲ್ಲ” ಎಂಬ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page