Thursday, October 9, 2025

ಸತ್ಯ | ನ್ಯಾಯ |ಧರ್ಮ

ಛತ್ತೀಸ್‌ಗಢ್ ವಿದ್ಯುತ್ ಸ್ಥಾವರದಲ್ಲಿ ಅಪಘಾತ: ಲಿಫ್ಟ್ ಕುಸಿದು ನಾಲ್ವರ ಸಾವು, ಆರು ಮಂದಿಗೆ ಗಾಯ

ರಾಯ್‌ಪುರ: ಛತ್ತೀಸ್‌ಗಢದ ಶಕ್ತಿ ಜಿಲ್ಲೆಯಲ್ಲಿರುವ ಒಂದು ವಿದ್ಯುತ್ ಸ್ಥಾವರದಲ್ಲಿ (Power Plant) ಲಿಫ್ಟ್ ಕುಸಿದು ಬಿದ್ದ ಭೀಕರ ಅಪಘಾತದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡ ಆರು ಜನರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಶಕ್ತಿ ಜಿಲ್ಲಾ ಪೊಲೀಸ್ ಅಧೀಕ್ಷಕಿ (SP) ಅಂಕಿತಾ ಶರ್ಮಾ ತಿಳಿಸಿದ್ದಾರೆ. ಈ ದುರ್ಘಟನೆಯು ಮಂಗಳವಾರ ರಾತ್ರಿ ಉಚ್ಪಿಂಡಾ ಗ್ರಾಮದ ದಬ್ರಾ ಪ್ರದೇಶದಲ್ಲಿರುವ ಆರ್‌ಕೆಎಂ ಪವರ್‌ಜೆನ್ ಪ್ರೈವೇಟ್ ಲಿಮಿಟೆಡ್ ಸ್ಥಾವರದಲ್ಲಿ ಸಂಭವಿಸಿದೆ. ಒಟ್ಟು ಹತ್ತು ಕಾರ್ಮಿಕರು ಲಿಫ್ಟ್ ಏರಿದ್ದು, ಅದು ಸುಮಾರು ನಲವತ್ತು ಅಡಿ ಎತ್ತರದಲ್ಲಿ ಇದ್ದಾಗ ಏಕಾಏಕಿ ಕುಸಿದು ಬಿದ್ದಿದೆ.

ಪ್ರಮಾdದಲ್ಲಿ ಗಾಯಗೊಂಡ ಹತ್ತು ಮಂದಿಯನ್ನು ತಕ್ಷಣವೇ ರಾಯಗಢ ಜಿಲ್ಲೆಯ ಜಿಂಗಲ್ ಫೋರ್ಟಿಸ್ ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ ನಾಲ್ವರು ಬುಧವಾರ ಬೆಳಿಗ್ಗೆ ಚಿಕಿತ್ಸೆ ಪಡೆಯುತ್ತಿರುವಾಗ ಮೃತಪಟ್ಟಿದ್ದಾರೆ. ಉಳಿದ ಆರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಯ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಪಘಾತಕ್ಕೀಡಾದ ಲಿಫ್ಟ್‌ನ ಸಾಮರ್ಥ್ಯ ಸುಮಾರು 2,000 ಕೆ.ಜಿ ಇತ್ತು ಮತ್ತು ಅದರ ನಿರ್ವಹಣಾ ಕಾರ್ಯಗಳು ಇತ್ತೀಚೆಗೆ ನಡೆದಿವೆ. ನಿರ್ಲಕ್ಷ್ಯದಿಂದಲೇ ಈ ಅಪಘಾತ ಸಂಭವಿಸಿದೆಯೇ ಎಂಬ ಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಅಂಕಿತಾ ಶರ್ಮಾ ತಿಳಿಸಿದ್ದಾರೆ.

ಕೇವಲ ಹದಿನೈದು ದಿನಗಳ ಅಂತರದಲ್ಲಿ ಛತ್ತೀಸ್‌ಗಢದಲ್ಲಿ ನಡೆದ ಎರಡನೇ ಪ್ರಮುಖ ಅಪಘಾತ ಇದಾಗಿದೆ. ಸೆಪ್ಟೆಂಬರ್ 26 ರಂದು ಗೋದಾವರಿ ಪವರ್ ಅಂಡ್ ಇಸ್ಪಾತ್ ಲಿಮಿಟೆಡ್ ಆವರಣದಲ್ಲಿ ಒಂದು ಕಟ್ಟಡ ಕುಸಿದು ಆರು ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page