Friday, October 10, 2025

ಸತ್ಯ | ನ್ಯಾಯ |ಧರ್ಮ

ಚೀಫ್ ಜಸ್ಟೀಸ್ ಗವಾಯಿ ಅವರತ್ತ ವಕೀಲನೊಬ್ಬ  ಶೂ ತೂರಿದ್ದನ್ನು  ನೋಡುವ ಬಗೆ ಹೇಗೆ?

“..ಈಗ ಏನಾಗುತ್ತಿದೆಯೆಂದರೆ CJI ಅವರ  ಮೇಲಿನ ದಾಳಿಯನ್ನು ನೋಡುತ್ತಿರುವ ವೈಚಾರಿಕ ವಲಯ, ಇದು ದಲಿತ ಅಸ್ತಿತ್ವ ಮತ್ತು ಅಸ್ಮಿತೆಯ ಮೇಲಿನ ದಾಳಿ ಎಂಬಂತೆ isolation ನಲ್ಲಿ ನೋಡುತ್ತಿದೆ ಇದು ಸಮಗ್ರ ದೃಷ್ಟಿ ಅಲ್ಲ‌.‌.” ಚಿಂತಕರಾದ ಡಾ.ನಟರಾಜ ಕೆ.ಪಿ ಬರಹದಲ್ಲಿ

ಈ ಎಪ್ಪತ್ತು ವರ್ಷದ ವಯೋವೃದ್ಧ ರಾಕೇಶ್ ಕಿಶೋರ್, ವಾಸ್ತವವಾಗಿ ಲೋಕ ಜೀವನದಿಂದಲೇ ನಿವೃತ್ತನಾಗಬೇಕಾದ; ಹಿಂದೂ  ಸಂಪ್ರದಾಯಗಳ ಪ್ರಕಾರ ವಾನಪ್ರಸ್ತಕ್ಕೋ ಸನ್ಯಾಸಾಶ್ರಮಕ್ಕೋ ಮುಖ ಮಾಡಿ ಲೌಕಿಕ ಬದುಕಿಗೇ ಬೆನ್ನು ತಿರುಗಿಸಬೇಕಾದವನು ಅದೂ ಈ ವ್ಯಕ್ತಿ  ನಾಗರಿಕ ಸಮಾಜಕ್ಕೆ ಸೇರಿದವನು, ಸೇವೆ ಸಲ್ಲಿಸಿದವನು. ದೇಶದ ಪರಮೋಚ್ಚ ನ್ಯಾಯಾಲಯದ ಅಡ್ವೊಕೇಟ್, ವಿಶ್ವಸಂಸ್ತೆಯ ಸಲಹೆಗಾರ ಇತ್ಯಾದಿ ಏನೇನೋ ಈತನ ಹೆಸರಿನ ಮುಂದೆ ತಗಲುಗಟ್ಟುತ್ತವೆ. ಈ ‘ನಿವೃತ್ತ’ ಇಷ್ಟೊಂದು ವ್ಯಗ್ರನಾಗಿ ಕ್ರುದ್ದನಾಗಿ ಲೌಕಿಕ ಜೀವನದಲ್ಲಿ ‘ಪ್ರವೃತ್ತ’ನಾಗಿ  ನ್ಯಾಯಮೂರ್ತಿಗಳತ್ತ ಶೂ ಎಸೆಯುತ್ತಾನೆ ಅಂದರೆ, ಈ  ಘಟನೆಯನ್ನು ಹೇಗೆ ನೋಡಬೇಕು? ಸಾಂವಿದಾನಿಕ  ತತ್ವಗಳಿಗನುಸಾರವಾಗಿ ನ್ಯಾಯವನ್ನು ಕಾಣಬಲ್ಲ, ವಿಶ್ಳೇಷಿಸಬಲ್ಲ, ವಿತರಿಸಬಲ್ಲ ತರಬೇತಿ ಪಡೆದ ಒಬ್ಬ ಪರಿಣತ ಲಾಯರ್ ಹೀಗೆ ಸರ್ವೋಚ್ಚ ನ್ಯಾಯಾಲಯದ ಚೀಫ್ ಜಸ್ಟೀಸ್ ಅವರತ್ತ ಶೂ ತೂರುವಷ್ಟು ವ್ಯಗ್ರ, ಕ್ರುದ್ಧ, ಪಶ್ಚಾತ್ತಾಪಹೀನ ಹಿಂಸಾವಾದಿಯಾಗಿ ಬದಲಾಗಲು ಕಾರಣವೇನು? ಈ ದೇಶದ ಬುದ್ದಿಜೀವಿ ವರ್ಗ ಗಂಭೀರವಾಗಿ  ಚಿಂತಿಸಬೇಕಾದ ಗಂಭೀರ ವಿಷಯ ಇದಾಗಿದೆ.

ಪ್ರಜಾಪ್ರಭುತ್ವದ ತಾತ್ವಿಕ ತರಬೇತಿಯಿಂದ ಪರಿಷ್ಕರಿತನಾದ   ಲಾಯರ್ ಒಬ್ಬ ಈ ಪ್ರಮಾಣದ ಗೋಡ್ಸೀಕರಣಕ್ಕೊಳಗಾಗಿ ಕೋಮುವ್ಯಾಧಿ ಪೀಡಿತನಾದರೆ ಈ ದೇಶದ ಹಿಂದೂ ಜನ ಸಾಮಾನ್ಯ ಅದೆಷ್ಟೊಂದು ಕೋಮುವ್ಯಾದಿ ಪೀಡಿತನಾಗಿದ್ದಾನೆ ಎಂಬುದನ್ನು ಅಂದಾಜು ಮಾಡಬಹುದು.

ಆರೆಸ್ಸೆಸ್‌ಗೆ ನೂರು ತುಂಬಿದ ಈ ವರ್ಷದಲ್ಲಿ ನಡೆದ ಈ ಘಟನೆಯನ್ನು ಸವಿಯುತ್ತ ಆರೆಸ್ಸೆಸ್‌ನ ಬಾಗವತಾದಿ ಬ್ರಾಹ್ಮಣ ಪದಾದಿಕಾರಿಗಳು ತಮ್ಮ ಶತಮಾನದ ಸಾದನೆಗಾಗಿ  ಪಾರ್ಟಿ ಮಾಡುತ್ತಿರಬಹುದು.

ಆರೆಸ್ಸೆಸ್, ಮನಸ್ತಿತಿಯಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಒಂದು organized crime entity. ಅದು ತನ್ನ ಎದುರುಬಿದ್ದ ಯಾವುದನ್ನೂ ಬಿಡಲ್ಲ ..l ಅದು ಶುದ್ದಾಂಗವಾಗಿ ಲೌಕಿಕ.. ಮತ್ತು ತನ್ನ ಲೌಕಿಕಾಧಿಕಾರವನ್ನು  ರಕ್ಷಿಸಿಕೊಳ್ಳಲು ಯಾವ ನೀಚತನಕ್ಕೂ ಯಾವ ಕಾಂಪ್ರಮೈಸ್‌ಗೂ ಇಳಿಯುತ್ತದೆ.‌ ಅದಕ್ಕೆ ಧರ್ಮ ಕರ್ಮ  ಅದ್ಯಾತ್ಮಗಳ ಸರಹದ್ದುಗಳಿಲ್ಲ‌, ಹಂಗಿಲ್ಲ.

ಗಾಂಧಿಯಂತಹ ( ವೈಶ್ಯ )ನನ್ನೂ ಅವನು ಮಹಾತ್ಮನೆಂಬುದನ್ನೂ ಲೆಕ್ಕಿಸದೆ ನಿರ್ದಯೆಯಿಂದ ಕೊಲ್ಲುತ್ತದೆ, ಕೊಲೆಯನ್ನು ಸಮರ್ಥಿಸುವ ನೆರೆಟಿವ್ ಸೃಷ್ಟಿಸುತ್ತದೆ. ಮತ್ತೆ ಮತ್ತೆ ಕಗ್ಗೊಲೆಯ ಡೆಮೋಗಳನ್ನು ಪ್ರದರ್ಶಿಸುತ್ತದೆ.. ಗಾಂಧಿ ಹೇಗೆ ಡೆವಿಲ್ ಎಂಬ ಬಗ್ಗೆ ಕತೆಗಳನ್ನೇ ಹೆಣೆಯುತ್ತದೆ.. ಹೆಣೆದು ದೇಶವ್ಯಾಪಿಯಾಗಿ ಹರಡುತ್ತದೆ.. ಮದ್ಯೆ ಮದ್ಯೆ  (ಜನ ಮೆಚ್ಚಿಸಲು) ಮೋದಿಯಂತಹ ತನ್ನ ಗುಲಾಮರ ಬಾಯಲ್ಲಿ ಗಾಂದಿ ಹೆಂಗೆ ದೊಡ್ಡವನು ಎಂಬ ಮಾತುಗಳನ್ನೂ ಆಡಿಸುತ್ತದೆ. ರಾಜಘಾಟ್‌ನಲ್ಲಿ ನಾಟಕೀಯವಾಗಿ ತಗ್ಗಿ ಬಗ್ಗಿ ಗಾಂದಿಗೆ ಪುಷ್ಪಾರ್ಚನೆಯನ್ನೂ ಮಾಡುತ್ತದೆ.

ಅದರ ಜೊತೆಗೆ ತನ್ನ ವಿರೋದಿಗಳ ನೆಲೆಗಳನ್ನು ಗುರುತಿಸುತ್ತ ಹಿಟ್‌ಲಿಸ್ಟ್ ಅನ್ನೂ ರೆಡಿಮಾಡಿಕೊಳ್ಳುತ್ತದೆ. ಪನ್ಸಾರೆ, ದಾಬೋಲ್ಕರ್ ಕಲ್ಬುರ್ಗಿ ಗೌರಿ‌ಲಂಕೇಶ್.. ಮುಂತಾದವರನ್ನೂ ಹೊಡೆದುರುಳಿಸುತ್ತದೆ.

ಸಂಜೀವ್ ಬಟ್ ತರದ ಬ್ರಾಹ್ಮಣರೂ ಅದಕ್ಕೆ ತಮ್ಮ ಬಾಳನ್ನು ಬಲಿಗೊಡಬೇಕಾಗಿ ಬರುತ್ತದೆ.

ಅಂಬೇಡ್ಕರ್ ಅವರು ಹಿಂದೂ ಬಿಲ್ ತರಹೊರಟಾಗ ಅವರು ತರಲಾಗದಂತಹ ಉಸಿರುಕಟ್ಟುವ ವಾತಾವರಣ ಸೃಷ್ಟಿಸುತ್ತದೆ.  ರಾಜೀನಾಮೆ ಕೊಟ್ಟು ಹೊರಬರುವಂತೆ ಮಾಡುತ್ತದೆ. (ನಮ್ಮ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಂತಹ ದೊಡ್ಡ ಜನಗಳೂ ಅಂಬೇಡ್ಕರ್ ಅವರ ಬಗ್ಗೆ ಕ್ರುದ್ದರಾಗಿ ಬರೆಯುತ್ತಾರೆ).

ಕೊನೆಗೆ ತಾನು ಬಾಬ್ರಿ ಮಸೀದಿ ಒಡೆಯಲು ಅಂಬೇಡ್ಕರ್ ಪರಿನಿರ್ವಾಣ ದಿನವನ್ನೇ ನಿಗದಿಮಾಡಿ ಅವತ್ತೇ ಹೊಡೆದುರುಳಿಸಿ ತನ್ನ ಹೊಟ್ಟೆ ಉರಿಯನ್ನು ತಣಿಸಿಕೊಳ್ಳುತ್ತದೆ.

ಕೊನೆಗೆ, ಅಂಬೇಡ್ಕರ್ ಅವರು ನೀಡಿದ ಮೀಸಲು ಶಾಸನಾಧಿಕಾರವನ್ನು ರಾಜ್ಯ ಶಾಸನ ಸಭೆಗಳಲ್ಲಿರಲಿ ಕೇಂದ್ರ ಸಂಸತ್‌ನಲ್ಲಿರಲಿ ತನ್ನ ಊಳಿಗ ಮಾಡುವಂತೆ ನೋಡಿಕೊಳ್ಳುತ್ತದೆ‌. ತಾತ್ವಿಕ ಸಹಚರಿಗಳೂ ಗುಲಾಮರೂ ಪಶುಬಲವೂ ಅದ ಪರಿಶಿಷ್ಟರು ಅಲ್ಲಿ ಈ ಇವರಿಗೆ ಅಸ್ಪೃಶ್ಯರಾಗುವುದೇ ಇಲ್ಲ. ಮೋದಿಯ ಮೊದಲ ಅವದಿ ಯಲ್ಲಿ 77 ಜನ ಎರಡನೆ ಅವದಿಗೆ 66 ಮತ್ತು ಈಗ 56 ಜನ ಮೀಸಲು ಸಂಸದರು ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದಾರೆ.

ಈಗ ಗವಾಯಿ ಅವರ ಮೇಲೆ ಎಸೆದ ಶೂ ಸಾಂಕೇತಿಕ ಅಷ್ಟೆ. ಅದರ ತಾತ್ವಿಕತೆಯ ವಿರೋದಿಗಳ ಮೇಲೆ ಅದು ಬ್ರಾಹ್ಮಣ ಅಸ್ಪೃಶ್ಯ ಅನ್ನದೆ ನೈಚ್ಯತನವನ್ನು ಪ್ರದರ್ಶಿಸುತ್ತಲೇ ಬಂದಿದೆ.

ಕರ್ನಾಟಕದಲ್ಲೆ ಗೌರಿ, ಕಲ್ಬುರ್ಗಿ ಎಂಬ ಲಿಂಗಾಯತರ ಹತ್ಯೆ ಮಾಡಿದೆ.

ಪ್ರೊ ಭಗವಾನ್ ಅವರ ಮುಕಕ್ಕೆ ಮಸಿ ಬಳಿದು ಕೋರ್ಟ್ ಅಂಗಳದಲ್ಲೇ ಅವರನ್ನು ವಿರೂಪ ಮಾಡಿದೆ.

ಕನ್ನಯ್ಯ ಕುಮಾರ್ ಎಂಬ ದಂಗೆಕೋರ ಯುವ ಚಿಂತಕ   ಬ್ರಾಹ್ಮಣ ಹುಡುಗನನ್ನೂ ತುಕ್ಡೆ ಗ್ಯಾಂಗ್ ಎಂಬ false  ನೆರೆಟಿವ್ ಸೃಷ್ಟಿಸಿ ನ್ಯಾಯಾಲಯದಲ್ಲೇ ತಾನು ನ್ಯಾಯವಾದಿ ಎಂಬುದನ್ನೂ ಲೆಕ್ಕಿಸದೆ ಗೂಂಡಾ ಅಗಿ ಪರಿವರ್ತನೆಗೊಂಡು ಹಲ್ಲೆ ಮಾಡಿದೆ.

ಈ ಸನ್ನಿವೇಶವನ್ನು ಹೀಗೆ ಆವೃತವಾಗಿ, ಸಮಗ್ರವಾಗಿ  ನೋಡಬೇಕಾಗಿದೆ. ಗವಾಯಿಯವರ ಮೇಲಿನ ಆಕ್ರಮಣನ್ನು   ದಲಿತರ ಮೇಲಿನ ಅಕ್ರಮಣದ ಭಾಗವಾಗಿ ನೋಡುವ ದೃಷ್ಟಿ  ಸಾಲದಾಗುತ್ತದೆ.

ಈ ರಾಕೇಶ್ ಕಿಶೋರ್ ಎಂಬ ‘ಸಾಮಾನ್ಯ ಹಿಂದೂ’ – ನೆನಪಿಡಿ ಅಥವಾ ಕಣ್ಣುಬಿಟ್ಟು ನೋಡಿ – ಇವನಂತಹವನು ನಮ್ಮ ನಿಮ್ಮ ಮನೆಯೊಳಗೂ, ನೆಂಟರಿಷ್ಟರೊಳಗೂ, ಜಾತಿಗಳೊಳಗೂ ಇರಬಹುದು, ಇದ್ದಾನೆ. ಯಾಕೆ ಹೀಗೆ ಗೋಡ್ಸೆ ರಕ್ತ ಜನ ಸಾಮಾನ್ಯ ಹಿಂದೂವಿನ ದಮನಿಗಳೊಳಗೆ ಆವೇಗದಿಂದ ಹರಿಯುತ್ತಿದೆ? ಇದನ್ನು ಹಿಂದೂ ಸಮಾಜದ ಪ್ರಾಜ್ಞರು ತಿಳಿಯುವ ಪ್ರಯತ್ನ ಮಾಡಬೇಕಾಗಿದೆ.

ಇಂತಹ ಕ್ಷುದ್ರ ಹಿಂದೂವನ್ನು ತಯಾರು ಮಾಡುತ್ತಿರುವವರ್ಯಾರು? ಎಂಬುದನ್ನು ನಾವು ತಿಳಿಯುವ ಪ್ರಯತ್ನ ಮಾಡದೆ ಬರೀ ಬಲವಂತೀಯರ ಕಗ್ಗಲ್ಲ ಕೋಟೆಯತ್ತ ಕಲ್ಲು ಹೊಡೆದರೆ ಅಥವಾ ಹೊಡೆಯುತ್ತ ಕೂತರೆ ನಮ್ಮ ಕೈಯ ಕಲ್ಲು ಕರಗಬಹುದು, ಕೈಯಿ ಸೋಲಬಹುದು, ಎದೆಯ ಭಾವಾವೇಗ ಮಾತ್ರ ತಗ್ಗದು. ಬಲಪಂಥೀಯರ ಶಕ್ತಿಯೂ ದಮನವಾಗದು ಬದಲಿಗೆ ಅದು ಬಲಿಯುತ್ತ ಹೋಗುತ್ತದೆ.

ಹಿಂದೆ ಕಳೆದ ಶತಮಾನದಾದ್ಯಂತವೂ ಆಧುನಿಕ ಕನ್ನಡದ ಕುಲಗುರುವಾದ ಕುವೆಂಪು ಅವರು ಪುರೋಹಿತ ಶಾಹಿಯ  ರಾಕ್ಷಸೀ ಶಕ್ತಿಯ ಬಗ್ಗೆ ನಮ್ಮನ್ನು ಎಚ್ಚರಿಸಿದ್ದರು: “ಪುರೋಹಿತಶಾಹಿ ಹೆಬ್ಬುಲಿಯಿದ್ದಂತೆ, ಅದರತ್ತ ಕೆಲವರು ಕಲ್ಲು ತೂರಿದರೆ ಅದು ಇನ್ನಷ್ಟು ರೇಗಿ ಮೇಲೆ ಬೀಳಲು ಧಾವಿಸಿ ಬರುತ್ತದೆ. ಅದನ್ನು ಜೋಡುನಳಿಗೆಯ ಬಂದೂಕಿನಲ್ಲಿ ಉಡಾಯಿಸಿ ಕೆಡವಬೇಕು, ಆದರೆ ಅದು ಹೊರಗಿಲ್ಲ, ನಿಮ್ಮ ತಲೆಯಲ್ಲಿ ವಸ್ತಿ ಮಾಡಿರುತ್ತದೆ. ಮೊದಲ ಗುಂಡು ಬೀಳಬೇಕಾದ್ದು ನಿಮ್ಮ ತಲೆಗೇ.. ತಲೆ ತಲೆ ..” ಎಂದು  ನಮ್ಮ ನಮ್ಮ ತಲೆಗಳನ್ನು ಅಡರಿಕೊಂಡಿರುವ ಪುರೋಹಿತ ಶಾಹಿ ಹೆಬ್ಬುಲಿಯಿಂದ ಮುಕ್ತಗೊಳಿಸುವ ಹೊಣೆಹೊರಬೇಕಾದ ಜಟಿಲ, ಸಂಕೀರ್ಣ ಪರಿಸ್ತಿತಿಯತ್ತ ನಮ್ಮ ಗಮನ ಸೆಳೆದಿದ್ದರು .. 

ದುರದೃಷ್ಟಕರ ಸಂಗತಿ ಅಂದರೆ  ಕರ್ನಾಟಕದ ಬುದ್ದಿಜೀವಿಗಳು ಈ ಬಗ್ಗೆ ಈಗಲೂ ಗಂಭೀರವಾಗಿ ಯೋಚಿಸಲು ಆರಂಭಮಾಡಿಲ್ಲ.

ಸಾಮಾನ್ಯ ಹಿಂದೂವಿನ ಮನಸ್ಸಿನಲ್ಲಿ ಮನೆ ಮಾಡಿರುವ  ಗೋಡ್ಸೆ, ಸಾವರ್ಕರ್, ಹೆಡ್ಗೆವಾರ್, ಗೋಳ್ವಾಲ್ಕರ್‌ಗಳು ಸಪ್ರಾಣಿಸಿದ ಅರೆಸ್ಸೆಸ್ ಎಂಬ ಆತ್ಮಘಾತುಕ ಹೆಬ್ಬುಲಿಯನ್ನು ಉಪವಾಸ ಕೆಡವಿ ದಮನಿಸಿ ನಶಿಸುವಂತೆ ಮಾಡುವ ಕಾರ್ಯಸಾಧ್ಯ ಮಾರ್ಗಗಳ ಬಗ್ಗೆ ಕನ್ನಡದ ಸೋ ಕಾಲ್ಡ್   ಪರಗತಿಪರ ಜಗತ್ತು ಅತ್ತಿತ್ತ ಅಲುಗದೆ. ಅರೆಸ್ಸೆಸ್ ಪರಿವಾರದತ್ತ ಏಕಮುಖವಾಗಿ ಕಲ್ಲುತೂರುತ್ತ ಕಾಲ ಕಳೆಯುತ್ತ, ತಾನು ಬೌದ್ದಿಕ ಪರಾಕಾಷ್ಟೆಯಲ್ಲಿ ಬಲಪಂಥೀಯ ರನ್ನು ಬಗ್ಗುಬಡಿಯುವ ಮಾರ್ಗ ಕಂಡುಕೊಂಡಿದ್ದೇನೆಂಬಂತೆ ಭ್ರಮೆಯಲ್ಲಿ ಬೀಗುತ್ತಿದೆ.

ಆ ಭ್ರಮೆಯ ಬೀಗಿನಲ್ಲಿ ಬರೆಯಲಾದವೇ ‘ಅರೆಸ್ಸೆಸ್ ಆಳ ಅಗಲ’ ದಂತಹ ಪುಸ್ತಕ ಮತ್ತು, ‘ಆರೆಸ್ಸೆಸ್ ಗೆ ನೂರು ವರ್ಷವಂತೆ ಹೌದೆ? ಎಂಬಂತಹ ಬರಹಗಳು.. ಇವೆರಡು ಬರಹಗಳೂ ಇತ್ತೀಚಿನ ಕರುನಾಡಿನ ಪ್ರಗತಿಪರರ  ಬಲಪಂಥೀಯ ಆರೆಸ್ಸೆಸ್ ಪರಿವಾರವಾದದ ಕುರಿತ ದೃಷ್ಟಿಯನ್ನು ಸಂಕೇತಿಸುವ ಕಾರಣ ಇಲ್ಲಿ ಉಲ್ಲೇಖಿಸಿದ್ದೇನೆ.

ಈ ಬರಹಗಳು ಬಾರತದ ಹಿಂದೂ ಸಾಮಾಜಿಕ ಮನಶ್ಶಾಸ್ತ್ರವನ್ನು ಕಟ್ಟಿ ಆಳುವ ವೈದಿಕ ಶಾಹಿಯ ಭೂಗತ ಕಾರ್ಯಾಚರಣೆಯನ್ನು ಒಳನೋಟದಿಂದ ಕಂಡರಿಸುತ್ತವಾದರೂ ಈ ಪರಿಸ್ತಿತಿ ಯನ್ನು ಹಿಮ್ಮೆಟ್ಟಿಸುವ  ಪರಿಸ್ತಿತಿ ನಿರ್ಮಾಣದತ್ತ ನಮಗೆ ದಾರಿ ತೋರುವುದಿಲ್ಲ‌.

ಕುವೆಂಪು ಅವರು ಎಚ್ಚರಿಸಿದಂತೆ ನಮ್ಮನ್ನಾಳುವ ಎಲ್ಲ ಬಗೆಯ ಪುರೋಹಿತ ಶಾಹಿಯತ್ತ ಗಮನಹರಿಸುವಂತೆ ಮಾಡಲಾಗಲಿ ಅಥವಾ ಪೂರ್ಣಚಂದ್ರ ತೇಜಸ್ವಿಯವರು ಹಿಂದೊಮ್ಮೆ ಎಚ್ಚರಿಸದಂತೆ ಮುಸ್ಲಿಂ ಪುರೋಹಿತ ಪ್ರಾಯೋಜಿತ ಮತಾಂಧತೆ ಹಿಂದೂ ಬಲಪಂಥೀಯತೆಯನ್ನು  ಬೆಳೆಸುತ್ತಿದೆಯೆಂಬ ಮಾರ್ಗದರ್ಶಿ ಒಳನೋಟವನ್ನಾಗಲಿ  ತೋರುವುದಿಲ್ಲ.

ಈಗ ಏನಾಗುತ್ತಿದೆಯೆಂದರೆ CJI ಅವರ  ಮೇಲಿನ ದಾಳಿಯನ್ನು ನೋಡುತ್ತಿರುವ ವೈಚಾರಿಕ ವಲಯ, ಇದು ದಲಿತ ಅಸ್ತಿತ್ವ ಮತ್ತು ಅಸ್ಮಿತೆಯ ಮೇಲಿನ ದಾಳಿ ಎಂಬಂತೆ isolation ನಲ್ಲಿ ನೋಡುತ್ತಿದೆ. ಇದು ಸಮಗ್ರ ದೃಷ್ಟಿ ಅಲ್ಲ‌.‌

ದಲಿತ ವಲಯ ದಲಿತರ ಮೇಲೆ ನಡೆಯುತ್ತಿರುವ ದಾಳಿಯ ಭಾಗವಾಗಿ ಆತ್ಮ ಮರುಕದಲ್ಲೂ, ತಮ್ಮನ್ನಷ್ಟೆ ಗುರಿಮಾಡಿ ನಡೆದ ದಾಳಿಯಾಗಿ ಇದನ್ನು ನೋಡುತ್ತಿದೆ. ಥ್ರಿಲ್ಲರ್.. ಅದು ನಿಜವಿದ್ದರೂ, ಅದಷ್ಟೆ ದೃಷ್ಟಿ ವರ್ತಮಾನದ ಕೋಮುವ್ಯಾದಿಪೀಡಿತ ಭಾರತವನ್ನು ನೋಡಲು ಸಾಲದು.

ಹಾಗಿದ್ದರೆ, ಈ ಹಲ್ಲೆ, ಆಕ್ರಮಣ, ಕೊಲೆಗಳಂತಹ ವಿದ್ಯಮಾನಗಳ ಬೇರು‌ ಕೊಳೆಯುವಂತೆ ಮಾಡಲು   ನಮಗಿರುವ ಪರಿಹಾರ ಮಾರ್ಗಗಳು ಯಾವುವು? ವಾಸ್ತವವಾಗಿ ಪ್ರಜಾಪ್ರಭುತ್ವದ ಭಾಗಿದಾರ ಸಮುದಾಯಗಳ ಆತ್ಮ ವಿಮರ್ಶೆಯನ್ನು ಈ ಸಂದರ್ಭ ಬಹುವಾಗಿ ಬೇಡುತ್ತದೆ.

ಮೊದಲನೆಯದಾಗಿ,
ನಮ್ಮ ಹಿಂದೂ ವಿಚಾರವಾದಿಗಳು ಹಿಂದೂ ಸಿಂಬಲ್‌ಗಳನ್ನು ವಿರೋದಿಸುವುದನ್ನು ನಿಲ್ಲಿಸಬೇಕು.
ರಾಮ, ಕೃಷ್ಣ, ರಾಮಾಯಣ ಮಹಾಭಾರತ.. ಪುರಾಣಗಳು   ಗಣಪತಿ ಇತ್ಯಾದಿ ದೇವಾನುದೇವತೆಗಳು ಹಿಂದೂ ನಂಬಿಕೆ ಶ್ರದ್ದೆ ಹಬ್ಬ ಹರಿದಿನಗಳು ಇತ್ಯಾದಿಗಳ ಸಾರ್ವಜನಿಕ ಟೀಕೆಗಳನ್ನು ನಿಲ್ಲಿಸಬೇಕು.

ಎರಡನೆಯದಾಗಿ,
ಮುಸ್ಲಿಮರು ತಮ್ಮ ಮತೀಯ ಕೂಪಗಳಿಂದ ಹೊರಬಂದು  ಕಾಮನ್ ಸ್ಕೂಲು, ಕಾಮನ್ ಸಿವಿಲ್ ಕೋಡ್, ಕಾಮನ್ ಲಾಗಳ ಸರಹದ್ದುಗಳೊಳಗೆ ಬರಬೇಕು.

ಮೂರನೆಯದಾಗಿ,
ಸಂಸತ್ ಮತ್ತು ರಾಜ್ಯ ಶಾಸನ ಸಬೆಗಳಲ್ಲಿ 25% ಪರ್ಮನೆಂಟ್ ಶಾಸನಾಧಿಕಾರ ಮೀಸಲಾತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ನಾಯಕತ್ವ ಕನಿಷ್ಟ ಪಕ್ಷ ಬಿಜೆಪಿಯ ಶರತ್ತು ಬದ್ದ ಬೆಂಬಲಿಗರಾಗಬೇಕು. ಇದರ ಬದಲಾಗಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಮೀಸಲು ಸಂಸದರು ಬಿಜೆಪಿಯ  ಕಳೆದ ಮೂರು ಅವದಿಗಳುದ್ದಕ್ಕೂ ಆರೆಸ್ಸೆಸ್ ಪರಿವಾರದ ತಾತ್ವಿಕ ಸಹಚರಿಗಳಾಗಿಬಿಟ್ಟಿದ್ದಾರೆ.

ಈ ಪರಿಹಾರ ಮಾರ್ಗಗಳು ನಮ್ಮೊಳಗೇ ಇವೆ. ನಮ್ಮ  ಅಂತರಾವಲೋಕನ, ಆತ್ಮ ವಿಮರ್ಶೆ ಮತ್ತು  ನಮ್ಮ‌ ಕಟ್ಟುನಿಟ್ಟಾದ ನಡೆ ನುಡಿಯಲ್ಲಿವೆ. ಕುವೆಂಪು ಅವರ  ಎಚ್ಚರಿಕೆಯೊಳಗಿನ ನಮ್ಮ ತಲೆಗಳೊಳಗೆ ವಸ್ತಿ ಮಾಡಿರುವ ಪುರೋಹಿತಶಾಹಿ ಹೆಬ್ಬುಲಿಯನ್ನು ಉಪವಾಸ ಕೆಡವಿ ಸೊರಗಿಸಿ ನಿರ್ನಾಮ ಮಾಡುವ ವಿವೇಕದ ಮಾರ್ಗ ಇದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page