Monday, October 13, 2025

ಸತ್ಯ | ನ್ಯಾಯ |ಧರ್ಮ

ಕರೂರು ಕಾಲ್ತುಳಿತ: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ತಮಿಳುನಾಡಿನ ಕರೂರು ಕಾಲ್ತುಳಿತ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿದೆ. ಸೆಪ್ಟೆಂಬರ್ 27 ರಂದು ನಟ ವಿಜಯ ನೇತೃತ್ವದ ತಮಿಳ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರಾಜಕೀಯ ಸಮಾವೇಶದಲ್ಲಿ ಈ ದುರಂತ ಸಂಭವಿಸಿತ್ತು, ಇದರಲ್ಲಿ 41 ಮಂದಿ ಮೃತಪಟ್ಟಿದ್ದರು. ಈ ಸಂಬಂಧ ತನಿಖೆ ನಡೆಸಲು ಮದ್ರಾಸ್ ಹೈಕೋರ್ಟ್ ಈ ಹಿಂದೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆಗೆ ಆದೇಶಿಸಿತ್ತು. ವಿಜಯ್ ಅವರ ಟಿವಿಕೆ ಪಕ್ಷವು ಈ ಎಸ್‌ಐಟಿ ರಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಮತ್ತು ಎನ್.ವಿ ಅಂಜಾರಿಯಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಸೋಮವಾರ ಈ ಕುರಿತು ತೀರ್ಪು ಪ್ರಕಟಿಸಿತು. “ವಸ್ತುಸ್ಥಿತಿ ಮನಗಂಡ ಬಳಿಕ, ವಿಷಯವು ಪ್ರಜೆಗಳ ಮೂಲಭೂತ ಹಕ್ಕಿಗೆ ಸಂಬಂಧಪಟ್ಟದ್ದಾಗಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ನಿರ್ದೇಶಿಸಲಾಗಿದೆ,” ಎಂದು ನ್ಯಾಯಾಲಯ ಹೇಳಿದೆ. ತನಿಖೆಯು ಸರಿಯಾದ ರೀತಿಯಲ್ಲಿ ಸಾಗಲು, ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ತ್ರಿಸದಸ್ಯ ಪೀಠವು ಇದರ ಮೇಲ್ವಿಚಾರಣೆ ನಡೆಸಲಿದೆ ಎಂದು ಕೋರ್ಟ್ ತಿಳಿಸಿದೆ.

ಈ ಸಮಿತಿಯಲ್ಲಿ ತಮಿಳುನಾಡು ಕೇಡರ್‌ನವರಾಗಿದ್ದರೂ, ತಮಿಳುನಾಡು ಮೂಲದವರಲ್ಲದ ಇಬ್ಬರು ಐಪಿಎಸ್ ಅಧಿಕಾರಿಗಳು (ಐಜಿಪಿ ದರ್ಜೆಗಿಂತ ಕಡಿಮೆ ಇಲ್ಲದವರು) ಭಾಗಿಯಾಗಲಿದ್ದಾರೆ. ಇವರನ್ನು ರಸ್ತೋಗಿಯವರೇ ಆಯ್ಕೆ ಮಾಡಬಹುದು. ರಸ್ತೋಗಿಯವರ ನಿರ್ದೇಶನದಂತೆ ಸಮಿತಿ ತನ್ನದೇ ಪ್ರಕ್ರಿಯೆಗಳನ್ನು ಅನುಸರಿಸಲು ಅವಕಾಶವಿದೆ. ಅಲ್ಲದೆ, ಸಿಬಿಐ ತನ್ನ ತನಿಖಾ ವರದಿಯನ್ನು ಪ್ರತಿ ತಿಂಗಳು ಮೇಲ್ವಿಚಾರಣಾ ಸಮಿತಿಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page