Monday, October 13, 2025

ಸತ್ಯ | ನ್ಯಾಯ |ಧರ್ಮ

ತಾಯಿ ಮಡಿಲು ಸೇರಿದ ಮೂರು ಚಿರತೆ ಮರಿಗಳು, ತಂತ್ರಜ್ಞಾನ ಬಳಸಿ ಅಪರೇಷನ್‌ ಸಕ್ಸಸ್

ಹಾಸನ : ಚನ್ನರಾಯಪಟ್ಟಣ ತಾಲ್ಲೂಕಿನ ಬೇಡಿಗನಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಜನ್ಮ ಪಡೆದ ಮೂರು ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸುರಕ್ಷಿತವಾಗಿ ಸೇರಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕಬ್ಬು ಕಟಾವು ಮಾಡುತ್ತಿದ್ದ ರೈತ ಚೆಲುವೇಗೌಡ ಅವರು ಗದ್ದೆಯಲ್ಲಿ ಮೂರು ಚಿಕ್ಕ ಚಿರತೆ ಮರಿಗಳನ್ನು ಕಂಡು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತಕ್ಷಣವೇ ಡಿಎಫ್‌ಓ ಸೌರಬ್ ಕುಮಾರ್ ಹಾಗೂ ಡಿಆರ್‌ಎಫ್‌ಓ ಶಂಕರ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಧಾವಿಸಿ ಮರಿಗಳನ್ನು ಸುರಕ್ಷಿತವಾಗಿ ಪೆಟ್ಟಿಗೆಯಲ್ಲಿ ಇರಿಸಿದರು.‌ ರಾತ್ರಿ ವೇಳೆ ತಾಯಿ ಚಿರತೆ ಬಂದು ಒಂದೇ ಮರಿಯನ್ನು ಕಚ್ಚಿಕೊಂಡು ಹೋಗಿದ್ದು, ಉಳಿದ ಎರಡು ಮರಿಗಳು ಪೆಟ್ಟಿಗೆಯಲ್ಲಿಯೇ ಉಳಿದುವು. ಇಲಾಖೆಯವರು ಆ ಮರಿಗಳಿಗೆ ಹಾಲುಣಿಸಿ ಆರೈಕೆ ಮಾಡಿ ಮತ್ತೆ ಪೆಟ್ಟಿಗೆಯಲ್ಲಿ ಇರಿಸಿದರು. ಮುಂದಿನ ರಾತ್ರಿ ಮತ್ತೊಂದು ಮರಿಯನ್ನು ತಾಯಿ ಕರೆದುಕೊಂಡು ಹೋದರೂ, ಒಂದು ಮರಿ ಪೆಟ್ಟಿಗೆಯಲ್ಲಿಯೇ ಉಳಿಯಿತು.ತಾಯಿ ಮಡಿಲು ಸೇರಿಸಲು ತೀರ್ಮಾನಿಸಿದ ಡಿಎಫ್‌ಓ ಸೌರಬ್ ಕುಮಾರ್ ಅವರು ಭದ್ರಾ ಅರಣ್ಯದಿಂದ ಶ್ವಾನ ದಳವನ್ನು ಕರೆಸಿ ಚಿರತೆಯ ಹೆಜ್ಜೆ ಗುರುತು ಹುಡುಕಿದರು. ಥರ್ಮಲ್ ಡ್ರೋನ್ ಸಹಾಯದಿಂದ ಚಿರತೆ ಮತ್ತು ಎರಡು ಮರಿಗಳಿರುವ ಸ್ಥಳ ಪತ್ತೆಯಾಯಿತು.

ನಂತರ ಉಳಿದ ಮರಿ ಇರುವ ಪೆಟ್ಟಿಗೆಯನ್ನು ಅದೆ ಭಾಗದಲ್ಲಿ ಇಡಲಾಗಿತ್ತು. ರಾತ್ರಿ ವೇಳೆ ತನ್ನ ಮರಿ ಕೂಗುತ್ತಿರುವ ಶಬ್ದ ಕೇಳಿ ತಾಯಿ ಚಿರತೆ ಸ್ಥಳಕ್ಕೆ ಬಂದು ಪೆಟ್ಟಿಗೆಯ ಮೇಲಿದ್ದ ಮರದ ತುಂಡನ್ನು ಕಾಲಿನಿಂದ ಎಳೆದ ಬಳಿಕ ಮೂರನೇ ಮರಿಯನ್ನು ಸಹ ಕಚ್ಚಿಕೊಂಡು ಹೋಯಿತು. ಅಂತಿಮವಾಗಿ ಎರಡು ಗಂಡು ಹಾಗೂ ಒಂದು ಹೆಣ್ಣು ಮರಿ ಸೇರಿ ಮೂರು ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page