Saturday, October 18, 2025

ಸತ್ಯ | ನ್ಯಾಯ |ಧರ್ಮ

ಆಳಂದ ಮತಗಳವು ಪ್ರಕರಣಕ್ಕೆ ದೊಡ್ಡ ತಿರುವು: ಅಪಾರ ಪ್ರಮಾಣದ ಕಾಗದ ಪತ್ರಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೆ ಯತ್ನ

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತ ಕಳವು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು, ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರ ನಿವಾಸ ಸೇರಿದಂತೆ ಶುಕ್ರವಾರ ಕಲಬುರಗಿಯ ಹಲವು ಸ್ಥಳಗಳಲ್ಲಿ ಶೋಧ ಕಾರ್ಯವನ್ನು ನಡೆಸಿದ್ದಾರೆ.

ಮಾಜಿ ಶಾಸಕರ ಮನೆ ಮುಂದೆ ಕಾಗದ ಸುಡುವ ಯತ್ನ:

ಆಳಂದದಲ್ಲಿರುವ ಸುಭಾಷ್ ಗುತ್ತೇದಾರ ಅವರ ಮನೆಯ ಎದುರು ಅಪಾರ ಸಂಖ್ಯೆಯ ಮತದಾರರ ಪಟ್ಟಿ ಮತ್ತು ಮತದಾರರ ಚೀಟಿಗಳನ್ನು ಸುಟ್ಟಿರುವುದು ತನಿಖಾ ವೇಳೆ ಪತ್ತೆಯಾಗಿದೆ. ಆಳಂದದ ಆರ್‌ಎಸ್‌ಕೆ ಕಾಲೋನಿಯಲ್ಲಿರುವ ಗುತ್ತೇದಾರ ಅವರ ಮನೆಯ ಮುಂಭಾಗದಲ್ಲಿ ದೊಡ್ಡ ಪ್ರಮಾಣದ ಕಾಗದ ಪತ್ರಗಳ ರಾಶಿಗೆ ಬೆಂಕಿ ಹಚ್ಚಿ ಸುಡಲಾಗಿತ್ತು.

ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ, ಎಸ್‌ಐಟಿ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಅರೆಬರೆ ಸುಟ್ಟ ಈ ಕಾಗದ ಪತ್ರಗಳನ್ನು ಮಿನಿ ಟ್ರಕ್‌ನಲ್ಲಿ ತುಂಬಿಸಿ ಶಕಾಪುರ ಸೇತುವೆ ಸಮೀಪದ ಅಮರ್ಜಾ ನದಿಗೆ ಎಸೆಯಲಾಗಿದೆ.

ಚಾಲಕನ ಬಂಧನ ಹಾಗೂ ಸಾಕ್ಷ್ಯ ವಶ:

ಮಿನಿ ಟ್ರಕ್ ಅನ್ನು ಬೆನ್ನಟ್ಟಿದ ಎಸ್‌ಐಟಿ ಅಧಿಕಾರಿಗಳು ಮತ್ತು ಪೊಲೀಸರು ಅದರ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ನದಿಗೆ ಎಸೆಯಲಾಗಿದ್ದ ಸುಟ್ಟ ಕಾಗದ ಪತ್ರಗಳನ್ನು ಸಹ ತಕ್ಷಣವೇ ಪರಿಶೀಲನೆ ನಡೆಸಿ ವಶಕ್ಕೆ ಪಡೆಯಲಾಗಿದೆ. ಮತ ಕಳವು ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸುವ ಪ್ರಯತ್ನ ಇದಾಗಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page