Saturday, October 18, 2025

ಸತ್ಯ | ನ್ಯಾಯ |ಧರ್ಮ

‘ರಾಜಕೀಯ ಬಂಡವಾಳಕ್ಕಾಗಿ ಸಂಘರ್ಷ ಸೃಷ್ಟಿಸುತ್ತಿರುವ ಸರ್ಕಾರ’: ಆರ್‌ಎಸ್‌ಎಸ್‌ ನಿಷೇಧ ಅಸಾಧ್ಯವೆಂದ ಎಚ್‌ಡಿ ಕುಮಾರಸ್ವಾಮಿ

ಹಾಸನ: ‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನಿಷೇಧಿಸಲು ಸಾಧ್ಯವಿಲ್ಲ. ಸಂಘ-ಸಂಸ್ಥೆಗಳು ಸರ್ಕಾರಿ ಜಾಗಗಳಲ್ಲಿ ಸಭೆ, ಸಮಾರಂಭ ಮತ್ತು ಪರೇಡ್‌ಗಳನ್ನು ನಡೆಸಬಾರದು ಎಂದು ಸರ್ಕಾರ ಕೇವಲ ಹೇಳಿದೆ. ಆದರೆ, ರಾಜಕೀಯ ಲಾಭಕ್ಕಾಗಿ ಇಂತಹ ವಿಷಯಗಳನ್ನು ಅನಗತ್ಯವಾಗಿ ಎಳೆದು ತರಲಾಗುತ್ತಿದೆ. ಈ ಸರ್ಕಾರಕ್ಕೆ ಅಭಿವೃದ್ಧಿ ಬೇಕಾಗಿಲ್ಲ,’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಾಂಧೀಜಿಯವರ ಹತ್ಯೆಯಾದಾಗ ಪಂಡಿತ್ ಜವಾಹರಲಾಲ್ ನೆಹರು ಅವರು ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು. ಆದರೆ ಬಳಿಕ ಆ ಆದೇಶವನ್ನು ವಾಪಸ್ ಪಡೆದರು. ಅವರಿಗಿಂತ (ನೆಹರು) ಖರ್ಗೆ, ಸಿದ್ದರಾಮಯ್ಯ ದೊಡ್ಡವರೇ? ಸರ್ಕಾರವು ಸಮಾಜದಲ್ಲಿ ಅನಗತ್ಯ ಸಂಘರ್ಷ ಸೃಷ್ಟಿಸುತ್ತಿದೆ,’ ಎಂದು ದೂರಿದರು.

‘ಧರ್ಮಸ್ಥಳದ ವಿಷಯದಲ್ಲಿಯೂ ಸರ್ಕಾರ ಇದೇ ರೀತಿಯ ನಡೆಯನ್ನು ಅನುಸರಿಸಿದೆ. ಅರ್ಜಿ ಕೊಟ್ಟವರನ್ನು ಬಿಟ್ಟು, ಚಿನ್ನಯ್ಯ ಎಂಬುವವನನ್ನು ಸೃಷ್ಟಿಸಿ ನಾಟಕವಾಡಿದರು. ಎಸ್‌ಐಟಿ ರಚಿಸಿ ಆತನನ್ನು ಹಿಡಿದಿಟ್ಟುಕೊಂಡು, ಉಳಿದವರನ್ನು ಸುಮ್ಮನೆ ಬಿಟ್ಟಿದ್ದಾರೆ. ಅವರೆಲ್ಲ ರಾಜಾರೋಷವಾಗಿ ಓಡಾಡುತ್ತಿದ್ದು, ಈ ನಡುವೆ ಎಸ್‌ಐಟಿಗೆ ಬಹುಮಾನ ನೀಡಲು ಹೊರಟಿರುವುದು ಎಷ್ಟು ಸರಿ?’ ಎಂದು ಅವರು ಪ್ರಶ್ನಿಸಿದರು.

‘ಇವರೇ ದೊಡ್ಡ ದರೋಡೆಕೋರರು. ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲೇ ಕಾಂಗ್ರೆಸ್‌ಗೆ 136 ಸ್ಥಾನಗಳು ಬರಲಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಹಾಗಾದರೆ, ಮತ ಕಳವು ಮಾಡಿಯೇ ಅಷ್ಟು ಸ್ಥಾನಗಳನ್ನು ಗೆದ್ದರಾ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಆಳಂದ ಕ್ಷೇತ್ರದಲ್ಲಿ ಮತ ಕಳ್ಳತನವಾಗಿದೆ ಎಂದು ಆರೋಪಿಸುತ್ತಾರೆ. ಆದರೆ, ಅಲ್ಲಿ ಗೆದ್ದಿರುವುದು ಕಾಂಗ್ರೆಸ್ ಪಕ್ಷ. ಮತಗಳ್ಳತನ ನಡೆದಿದ್ದರೆ ಬಿಜೆಪಿ ಗೆಲ್ಲಬೇಕಿತ್ತಲ್ಲವೇ? ಜನರ ಕಷ್ಟಗಳಿಗೆ ಸ್ಪಂದಿಸುವುದು ಈ ಸರ್ಕಾರಕ್ಕೆ ಬೇಕಾಗಿಲ್ಲ. ಇಂತಹ ಹೇಳಿಕೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ,’ ಎಂದು ಅವರು ಟೀಕಿಸಿದರು.

‘ದೀಪಾವಳಿ ಹಬ್ಬ ಮುಗಿದ ನಂತರ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಒಳಗೊಂಡಂತೆ ರಾಜ್ಯದಾದ್ಯಂತ ‘ಜನರೊಂದಿಗೆ ಜನತಾದಳ’ ಎಂಬ ಘೋಷಣೆಯೊಂದಿಗೆ ಪ್ರವಾಸ ಹಮ್ಮಿಕೊಳ್ಳಲಾಗುವುದು,’ ಎಂದು ಕುಮಾರಸ್ವಾಮಿ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page