Sunday, October 19, 2025

ಸತ್ಯ | ನ್ಯಾಯ |ಧರ್ಮ

‘ಆರೆಸ್ಸೆಸ್ ಬಾವುಟವೇನು ರಾಷ್ಟ್ರಧ್ವಜವಾ?’: ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು

ಬೆಂಗಳೂರು: “ಆರೆಸ್ಸೆಸ್ ಧ್ವಜವೇನು ರಾಷ್ಟ್ರಧ್ವಜವೇ?” ಎಂದು ಪ್ರಶ್ನಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಚಿತ್ತಾಪುರದಲ್ಲಿ ಅನಧಿಕೃತವಾಗಿ ಅಳವಡಿಸಿದ್ದನ್ನು ತೆರವು ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, “ಮನೆಗೆ ನುಗ್ಗಿ ಹೊಡೆಯುವುದಾಗಿ” ಬೆದರಿಕೆ ಹಾಕಿರುವ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.

ಚಿತ್ತಾಪುರದಲ್ಲಿ ಆರೆಸ್ಸೆಸ್ ಧ್ವಜ ಮತ್ತು ಬಂಟಿಂಗ್ಸ್ (ಸಣ್ಣ ಧ್ವಜಗಳ ಹಾರ) ತೆರವುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಯಾರೇ ಆಗಲಿ ಕಾನೂನು ಪಾಲಿಸಬೇಕು. ನಾನು ಮಾಡಿರುವ ಕಾನೂನಲ್ಲ, ಇದು ಸರ್ಕಾರಿ ನಿಯಮ. ಅನುಮತಿ ಪಡೆಯದೆ ಹಾಕಿದ್ದರು. ಅದಕ್ಕಾಗಿಯೇ ತೆಗೆಯಲಾಗಿದೆ. ಅದೇನು ರಾಷ್ಟ್ರಧ್ವಜವಾ?” ಎಂದು ಪ್ರಶ್ನಿಸಿದ್ದಾರೆ.

“ನಾನು ಮೊದಲ ಬಾರಿ ಸಚಿವನಾದಾಗ ಕಾರ್ಯಕರ್ತರು ನನ್ನ ಬ್ಯಾನರ್, ಪೋಸ್ಟರ್ ಅಳವಡಿಸಿದ್ದಕ್ಕೆ ಪಾಲಿಕೆ ಆಯುಕ್ತರು ನಮಗೂ ದಂಡ ಹಾಕಿದ್ದರು. ಹುಟ್ಟುಹಬ್ಬಕ್ಕೆ ಹಾಕಿದ್ದ ಪೋಸ್ಟರ್‌ಗಳನ್ನು ಸಹ ತೆರವುಗೊಳಿಸಿದ್ದರು. ಅದೇ ರೀತಿ ಇದು ಕೂಡ. ಯಾರೇ ಆಗಲಿ, ಕಾನೂನು ಎಲ್ಲರಿಗೂ ಒಂದೇ. ಅವರು ಪಥಸಂಚಲನ ಮಾಡುವುದಾಗಿ ‘ಮಾಹಿತಿಗಾಗಿ’ ಎಂದು ಪತ್ರ ಕೊಟ್ಟಿದ್ದಾರೆಯೇ ಹೊರತು, ಅನುಮತಿ ಕೇಳಿಲ್ಲ. ಎರಡಕ್ಕೂ ವ್ಯತ್ಯಾಸ ಇದೆ,” ಎಂದು ವಿವರಿಸಿದರು.

‘ನಮಾಜ್‌ಗೆ ಅನುಮತಿ ಬೇಕೆಂದಿರುವ ಯತ್ನಾಳ್ ಪತ್ರ ಸಮರ್ಥನೀಯ’

ನಮಾಜ್ ಮಾಡುವುದಕ್ಕೂ ಅನುಮತಿ ಪಡೆಯಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿರುವುದು ಸಮರ್ಥನೀಯ. ನಾನೂ ಅದನ್ನು ಒಪ್ಪುತ್ತೇನೆ. “ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ, ಎಸ್‌ಡಿಪಿಐ ಯಾರೇ ಆಗಲಿ ಅನುಮತಿ ಪಡೆಯಬೇಕು. ಎಲ್ಲರೂ ಪಡೆಯುತ್ತಾರೆ. ಒಂದು ಸಂಘಟನೆ ಮಾತ್ರ ಅನುಮತಿ ಪಡೆಯುವುದಿಲ್ಲ ಎಂದರೆ ಹೇಗಾಗುತ್ತದೆ?” ಎಂದು ಖರ್ಗೆ ಪ್ರಶ್ನಿಸಿದರು.

ಮನೆಗೆ ನುಗ್ಗಿ ಹೊಡೆಯುವ ಬೆದರಿಕೆ: ರಾಥೋಡ್ ವಿರುದ್ಧ ದೂರು

“ಆರೆಸ್ಸೆಸ್ಸಿನವರು ಸುಸಂಸ್ಕೃತರು ಎಂದುಕೊಂಡಿದ್ದೆವು. ಇತ್ತೀಚೆಗೆ ಕಾನೂನು ಪಾಲಿಸಿ ಎಂದಿದ್ದಕ್ಕೆ ಕಾರ್ಯಕರ್ತರು ನನಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಮನೆಗೆ ನುಗ್ಗಿ ಹೊಡೆಯುವುದಾಗಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಹೇಳಿದ್ದಾರೆ. ಅವರ ವಿರುದ್ಧ ಪೊಲೀಸ್ ಮಹಾನಿರ್ದೇಶಕರಿಗೂ ದೂರು ಕೊಡುತ್ತೇನೆ. ಬಿಜೆಪಿಯಲ್ಲಿ ನನ್ನನ್ನು ಬೈಯ್ಯಲೆಂದೇ ಛಲವಾದಿ ನಾರಾಯಣಸ್ವಾಮಿಯವರನ್ನು ಇಟ್ಟುಕೊಂಡಿದ್ದಾರೆ. ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ,” ಎಂದು ಟೀಕಿಸಿದರು.

‘ಗಣವೇಷ ಹಾಕಿದ್ದಕ್ಕೆ ಪಿಡಿಒ ಅಮಾನತು ಮಾಡಲಾಗಿದೆ’

ಪಿಡಿಒ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಅಮಾನತು ಕುರಿತು ಸಮರ್ಥಿಸಿಕೊಂಡ ಸಚಿವರು, “ಯಾರದ್ದೋ ಪಿಎ ಎಂಬ ಕಾರಣಕ್ಕೆ ಅಮಾನತು ಮಾಡಿಲ್ಲ. ನನ್ನ ಪಿಎ ಆದರೂ ಸರಿ, ಸಿಎಂ ಪಿಎ ಆದರೂ ಸರಿ. ಸರ್ಕಾರಿ ನೌಕರ ಆದವರು ಆ ಕೆಲಸ ಮಾಡಬೇಕು. ಯಾರನ್ನೂ ಗುರಿ ಮಾಡಿ ಕ್ರಮ ಜರುಗಿಸಿಲ್ಲ. ಅವರಿಗೆ ಗಣವೇಷ ಹಾಕಲು ಅನುಮತಿ ಇದೆಯೇ? ಅವರ ಬಗ್ಗೆ ವರದಿ ತರಿಸಿಕೊಂಡೇ ಅಮಾನತು ಮಾಡಿದ್ದೇವೆ. ನಿಯಮ ಪಾಲಿಸಬೇಕಾದವರೇ ಉಲ್ಲಂಘನೆ ಮಾಡಿದ್ದರಿಂದ ಕ್ರಮ ಆಗಿದೆ,” ಎಂದು ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page