Tuesday, October 28, 2025

ಸತ್ಯ | ನ್ಯಾಯ |ಧರ್ಮ

ಟ್ರಂಪ್‌ಗೆ ಮಣಿದ ಮೋದಿ? ರಷ್ಯಾದಿಂದ ಕಚ್ಚಾ ತೈಲ ಆಮದು ಸ್ಥಗಿತ | ಆರ್‌ಟಿಐ ಪ್ರಶ್ನೆಗೆ ಹೆಚ್‌ಪಿಸಿಎಲ್‌ನಿಂದ ಉತ್ತರ; ಇತರ ಕಂಪನಿಗಳಿಂದ ನಿರಾಕರಣೆ

ದೆಹಲಿ: ರಷ್ಯಾದಿಂದ ತೈಲ ಆಮದನ್ನು (Russia Crude Oil) ನಿಲ್ಲಿಸುವಂತೆ ಡೊನಾಲ್ಡ್ ಟ್ರಂಪ್ (Donald Trump) ಸರ್ಕಾರ ಒಡ್ಡುತ್ತಿದ್ದ ಬೆದರಿಕೆಗಳಿಗೆ ಭಾರತ ಮಣಿದಂತೆ ಕಾಣುತ್ತಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸದಿದ್ದರೆ, ಭಾರಿ ಸುಂಕಗಳ ಹೇರಿಕೆ ಮುಂದುವರಿಯಲಿದೆ ಎಂಬ ಟ್ರಂಪ್ ಅವರ ಎಚ್ಚರಿಕೆಗಳಿಗೆ ಕೇಂದ್ರದ ನರೇಂದ್ರ ಮೋದಿ (Narendra Modi) ಸರ್ಕಾರವು ತಲೆಬಾಗಿದಂತೆ ಇತ್ತೀಚಿನ ಬೆಳವಣಿಗೆಗಳು ಸೂಚಿಸುತ್ತಿವೆ.

ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ತಮಗೆ ಭರವಸೆ ನೀಡಿದ್ದಾರೆ ಎಂದು ಟ್ರಂಪ್ ಪದೇ ಪದೇ ಮಾಡಿದ ಹೇಳಿಕೆಗಳನ್ನು ಈ ಹಿಂದೆ ಖಂಡಿಸಿದ್ದರೂ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಟ್ರಂಪ್‌ಗೆ ನೀಡಿದ ಮಾತನ್ನು ಉಳಿಸಿಕೊಂಡಿದೆ ಎಂಬ ಸ್ಪಷ್ಟ ಸಂಕೇತಗಳು ಸಿಗುತ್ತಿವೆ. ರಷ್ಯಾದಿಂದ ಭಾರತವು ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಎಂದು ಸರ್ಕಾರ ಅಧಿಕೃತವಾಗಿ ನೀಡಿದ ಮಾಹಿತಿಗಳು ಬಹಿರಂಗಪಡಿಸಿವೆ.

ರಷ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸಿರುವ ಬಗ್ಗೆ ‘ಫೆಡರಲ್’ ಎಂಬ ಮಾಧ್ಯಮ ಸಂಸ್ಥೆಯು ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಹೆಚ್‌ಪಿಸಿಎಲ್‌) ಉತ್ತರಿಸಿದೆ. ಈ ವರ್ಷದ ಆಗಸ್ಟ್‌ನಲ್ಲಿ ರಷ್ಯಾದಿಂದ ಒಂದು ಹನಿ ತೈಲವನ್ನೂ ಆಮದು ಮಾಡಿಕೊಂಡಿಲ್ಲ ಎಂದು ಹೆಚ್‌ಪಿಸಿಎಲ್ ತಿಳಿಸಿದೆ. ಆದರೆ, ನರೇಂದ್ರ ಮೋದಿ ಸರ್ಕಾರವು ಅಮೆರಿಕದ ಒತ್ತಡಕ್ಕೆ ಮಣಿದಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ನಿರಾಕರಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕಾರಿಗಳ ವಾದಕ್ಕೆ ಮತ್ತು ಆರ್‌ಟಿಐ ಉತ್ತರಕ್ಕೆ ಹೊಂದಾಣಿಕೆಯಾಗುತ್ತಿಲ್ಲ.

2022ರ ಸೆಪ್ಟೆಂಬರ್‌ನಿಂದ 2025ರ ಸೆಪ್ಟೆಂಬರ್‌ವರೆಗೆ ಭಾರತ ಸರ್ಕಾರ ರಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾ ತೈಲದ ಮಾಸಿಕ ವಿವರಗಳನ್ನು ನೀಡುವಂತೆ ಫೆಡರಲ್ ಆರ್‌ಟಿಐ ಅಡಿಯಲ್ಲಿ ಕೋರಿತ್ತು. ಇದಕ್ಕೆ ಹೆಚ್‌ಪಿಸಿಎಲ್ ಮಾತ್ರ ಉತ್ತರಿಸಿದೆ. ಆದರೆ, ಇತರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗೌಪ್ಯತೆ ನಿಯಮಗಳ ಕಾರಣವನ್ನು ನೀಡಿ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದವು.

ಹೆಚ್‌ಪಿಸಿಎಲ್ ನೀಡಿದ ಮಾಹಿತಿಯ ಪ್ರಕಾರ, 2022ರ ಏಪ್ರಿಲ್‌ನಿಂದ 2025ರ ಜುಲೈವರೆಗೆ ಕಂಪನಿಯು ನಿರಂತರವಾಗಿ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. 2025ರ ಫೆಬ್ರವರಿಯಲ್ಲಿ ಅತ್ಯಂತ ಕಡಿಮೆ 131 ಟಿಎಂಟಿ (ಸಾವಿರ ಮೆಟ್ರಿಕ್ ಟನ್‌ಗಳು) ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದರೆ, 2024ರ ಅಕ್ಟೋಬರ್‌ನಲ್ಲಿ ಅತ್ಯಂತ ಹೆಚ್ಚು 1,146 ಟಿಎಂಟಿ ಆಮದು ಮಾಡಿಕೊಂಡಿತ್ತು. ಆದರೆ, 2022ರ ಆಗಸ್ಟ್, 2022ರ ಅಕ್ಟೋಬರ್ ಹಾಗೂ ಪ್ರಸ್ತುತ 2025ರ ಆಗಸ್ಟ್‌ನಲ್ಲಿ ಶೂನ್ಯ ಆಮದು ತೋರಿಸಿದೆ.

ಭಾರತದ ಮೇಲೆ ಅಮೆರಿಕ ಭಾರಿ ಸುಂಕಗಳನ್ನು ವಿಧಿಸಿದ ನಂತರ ಈ ರೀತಿ ಶೂನ್ಯ ಆಮದು ಸಂಭವಿಸಿರುವುದು ಗಮನಾರ್ಹ. ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ 2022ರ ಜನವರಿ-ಮಾರ್ಚ್ ಮೊದಲ ತ್ರೈಮಾಸಿಕದಲ್ಲಿ ರಷ್ಯಾದಿಂದ ಹೆಚ್‌ಪಿಸಿಎಲ್ ತೈಲವನ್ನು ಆಮದು ಮಾಡಿಕೊಂಡಿರಲಿಲ್ಲ. ಆದರೆ, ಆ ನಂತರ ರಷ್ಯಾದ ತೈಲ ಆಮದುಗಳು ಕ್ರಮೇಣ ಹೆಚ್ಚಾಗುತ್ತಾ ಹೋದವು. 2024ರ ಆರ್ಥಿಕ ವರ್ಷದಲ್ಲಿ ಹೆಚ್‌ಪಿಸಿಎಲ್ ಸಂಸ್ಕರಿಸಿದ ಒಟ್ಟು ಕಚ್ಚಾ ತೈಲದಲ್ಲಿ ರಷ್ಯಾದ ಕಚ್ಚಾ ತೈಲದ ಪಾಲು ಶೇ. 13 ರಷ್ಟಿದೆ.

ಆರ್‌ಟಿಐ ಅಡಿಯಲ್ಲಿ ಇತರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಓಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಮತ್ತು ಒಎನ್‌ಜಿಸಿ ಒಡೆತನದ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನಿಂದಲೂ ಫೆಡರಲ್ ರಷ್ಯಾದಿಂದ ನಡೆದ ತೈಲ ಆಮದಿನ ವಿವರಗಳನ್ನು ಕೋರಿತ್ತು. ಆದರೆ, ಆ ಕಂಪನಿಗಳು ಸಹ ಗೌಪ್ಯತೆ ನಿಯಮಗಳ ಕಾರಣ ನೀಡಿ ಮಾಹಿತಿ ನೀಡಲು ನಿರಾಕರಿಸಿದವು. ರಿಲಯನ್ಸ್ ಖಾಸಗಿ ಸಂಸ್ಥೆಯಾಗಿರುವುದರಿಂದ ಆರ್‌ಟಿಐ ವ್ಯಾಪ್ತಿಯಿಂದ ಹೊರತಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page