Tuesday, October 28, 2025

ಸತ್ಯ | ನ್ಯಾಯ |ಧರ್ಮ

ಕರ್ನಾಟಕ ಜಾನಪದ ಯುನಿವರ್ಸಿಟಿಗೆ ಅಪಾಯ-ಉಪಾಯ

‘..ಎಲ್ಲದಕ್ಕೂ ತಾಯಿ ಬೇರು ಆಗಿರುವ ಜನಪದವನ್ನು K-SET ಮೂಲಕ ತುಳಿಯುವ ಪ್ರಯತ್ನವಾಗುತ್ತಿದೆ. ಅದರಲ್ಲೂ ಕನ್ನಡ ಜನಪದಕ್ಕೆ ಇದು ಕೊಡಲಿ ಪೆಟ್ಟು..’ ದ್ರಾವಿಡ ಚಳವಳಿ ಮುಂದಾಳು ಅಬಿ ಒಕ್ಕಲಿಗ ಅವರ ಬರಹದಲ್ಲಿ

ಎಲ್ಲದಕ್ಕೂ ತಾಯಿ ಬೇರು ಆಗಿರುವ ಜನಪದವನ್ನು K-SET ಮೂಲಕ ತುಳಿಯುವ ಪ್ರಯತ್ನವಾಗುತ್ತಿದೆ. ಅದರಲ್ಲೂ ಕನ್ನಡ ಜನಪದಕ್ಕೆ ಇದು ಕೊಡಲಿ ಪೆಟ್ಟು. ಏಕೆಂದರೆ ಕರ್ನಾಟಕ ಸರ್ಕಾರ ನಡೆಸುವ K-SET ನಲ್ಲಿ ಇಲ್ಲ ಅಂದರು ಇಂಡಿಯಾ ಸರ್ಕಾರ ನಡೆಸುವ NET ಪರೀಕ್ಷೆಯಲ್ಲಿ ಜನಪದ ಸಾಹಿತ್ಯ ವಿಷಯ ಇದೆ. ಇದರಿಂದ ಬೇರೆ ನುಡಿಯ ಅದರಲ್ಲೂ ಹಿಂದಿ ನುಡಿಯವರು ಹಿಂದಿ ಜನಪದ ಸಾಹಿತ್ಯವನ್ನು ಬೆಳೆಸುತ್ತಾರೆ ಕನ್ನಡ ಜನಪದ ಸಾಹಿತ್ಯ ಮುಳುಗಿ ಹೋಗುತ್ತದೆ. ಏಕೆಂದರೆ ಇಂಡಿಯಾ ಸರ್ಕಾರ ನಡೆಸುವ NET ಪರೀಕ್ಷೆ ಬರೆಯಲು ಅವಕಾಶ ಇರುವುದೇ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ. ನಮ್ಮಲ್ಲಿ ಜನಪದ ಅಧ್ಯಯನ ನಡೆಸುವ ವಿದ್ಯಾರ್ಥಿಗಳೆಲ್ಲರೂ ಬಹುತೇಕ ವಂಚಿತ ಸಮುದಾಯಗಳು ಮತ್ತು ಗ್ರಾಮೀಣ ಭಾಗದವರಾಗಿರುವುದರಿಂದ ಪರೀಕ್ಷೆಯನ್ನು ಅದು ಹೇಗೆ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಬರೆದು ಪಾಸ್ ಮಾಡಲು ಸಾಧ್ಯ?

ಇನ್ನು ಹಿಂದಿ ಜನಪದ ಸಾಹಿತ್ಯ? ಅದು ನಿಜವೇ ಎಂದು ಪರಿಶೀಲನೆ ಮಾಡಿದರೆ ತಿಳಿಯುವುದೇನೆಂದರೆ ಕನ್ನಡ ನುಡಿಯಲ್ಲಿ ಲಿಪಿಯಲ್ಲಿ ಜನಪದವನ್ನು ಬರೆದಿಡುವ ಪರಂಪರೆ ಶುರುವಾದ ಎಷ್ಟೋ ಸಾವಿರ ವರ್ಷಗಳ ನಂತರ ಕನ್ನಡ ಮತ್ತು ಇತರೆ ದ್ರಾವಿಡ ನುಡಿಗಳಿಂದ ಅನುವಾದ ಮಾಡಿಕೊಂಡು ಹುಟ್ಟಿರುವ ನುಡಿಗಳಲ್ಲಿ ಒಂದಾದ ನುಡಿಯೇ ಹಿಂದಿ. ಹಿಂದಿ ಮೂಲ ಈ ರೀತಿ ಇರುವಾಗ ಅದು ಹೇಗೆ ಜನಪದವಾಗುತ್ತದೆ? ಆದ್ದರಿಂದ K-SET ನಲ್ಲಿ 2004 ರಿಂದ 2024 ವರೆಗೆ ಯಾವ ರೀತಿ ಜನಪದ ಸಾಹಿತ್ಯ ವಿಷಯ ಪರೀಕ್ಷೆ ಇತ್ತೋ ಅದು ಮುಂದುವರಿಯಬೇಕು ಜೊತೆಗೆ NET ನಲ್ಲಿ ಕೂಡ ಕನ್ನಡದಲ್ಲೂ ಬರೆಯುವ ಅವಕಾಶ ಕೊಡಿ ಎಂದು ಕರ್ನಾಟಕ ರಾಜ್ಯ ಸರ್ಕಾರ ಇಂಡಿಯಾ ಒಕ್ಕೂಟ ಸರ್ಕಾರಕ್ಕೆ ಆಗ್ರಹಿಸಬೇಕು.

ಬಹುತೇಕರಿಗೆ ಜನಪದ ಎಂದರೆ ಕೇವಲ ಡೊಳ್ಳು ಕುಣಿತ, ಕೋಲಾಟ, ಸೋಬಾನೆ ಪದ, ಗೀಗಿ ಪದ ಮಾತ್ರ ಎಂದುಕೊಂಡಿದ್ದಾರೆ. ಜನಪದ ಎಂದರೆ ಬರೆದಿಡುವ ಪರಂಪರೆಗೂ ಮೊದಲು ಯಾವುದನ್ನೆಲ್ಲ ಒಂದು ತಲಮಾರಿನಿಂದ ಮತ್ತೊಂದು ತಲೆಮಾರಿಗೆ ಬಾಯ್ದೆರೆ ಪರಂಪರೆಯಲ್ಲಿ ಕಲಿಸಿಕೊಡುತ್ತಿದ್ದರು ಅದೆಲ್ಲ ಜನಪದವೇ. ಇದರ ಅಧ್ಯಯನವೆ ಜಾನಪದ. ಜನಪದ ಮತ್ತು ಜಾನಪದ ಪದಗಳ ವ್ಯಾಖ್ಯಾನ ವ್ಯತ್ಯಾಸ ತಿಳಿಯದ ವ್ಯಕ್ತಿಗಳು ಈ ರೀತಿ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆಯೇ ಎಂಬ ಗುಮಾನಿ ಅನುಕಂಪ ಸರಿಯಾದುದ್ದಲ್ಲ. ಇದನ್ನು ಮಾಡುತ್ತಿರುವವರು ಅಧಿಕಾರದ ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ಕುತಂತ್ರವೇ ತಮ್ಮ ಹುಟ್ಟುಗುಣ ಮಾಡಿಕೊಂಡಿರುವ ಸಂಸ್ಕೃತ ಪುತ್ರರಲ್ಲದೆ ಬೇರೆ ಯಾರು ಅಲ್ಲ.

ನಾನು ನೋಡಿರುವ ವಿಶೇಷ ಯುನಿವರ್ಸಿಟಿಗಳೆಂದರೆ ದ್ರಾವಿಡ ಯುನಿವರ್ಸಿಟಿ, ಹಂಪಿ ಕನ್ನಡ ಯುನಿವರ್ಸಿಟಿ ಮತ್ತು ಕರ್ನಾಟಕ ಜಾನಪದ ಯುನಿವರ್ಸಿಟಿ. ಅವರವರ ನುಡಿಗೆ ಒಂದೊಂದು ಯುನಿವರ್ಸಿಟಿ ಅವರವರ ನಾಡಿನಲ್ಲಿ ಇವೆ. ಆದರೆ ದ್ರಾವಿಡ ಯುನಿವರ್ಸಿಟಿ ಒಂದು ಜನಾಂಗದ, ನಡೆ ನುಡಿ ಚರಿತ್ರೆ ಅಧ್ಯಯನ ನಡೆಸಲು ಇಡೀ ಜಗತ್ತಿನಲ್ಲಿಯೆ ಇರುವಂತಹ ಒಂದೇ ಒಂದು ಯುನಿವರ್ಸಿಟಿ. ಅದೇ ರೀತಿ ಇಡೀ ಪ್ರಪಂಚದಲ್ಲಿ ಎಲ್ಲೂ ಕೂಡ ಜನಪದ ಅಧ್ಯಯನಕ್ಕೆ ಯುನಿವರ್ಸಿಟಿ ಇಲ್ಲ. ಅಂತ ಒಂದು ಜಾನಪದ ಯುನಿವರ್ಸಿಟಿ ಇರುವಂತದ್ದು ಕರ್ನಾಟಕದಲ್ಲಿ ಮಾತ್ರ. ಆ ಯುನಿವರ್ಸಿಟಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ.

ನಾವುಗಳು ಇದರ ಬಗ್ಗೆ ಸರ್ಕಾರದ ಗಮನಕ್ಕೆ ತಂದರೆ ಅವರು ಕೊಡುತ್ತಿರುವ ಸಬೂಬು ಏನೆಂದರೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಮತ್ತೆ ಬೆಂಗಳೂರು ಒಂದರಲ್ಲಿ ಮಾತ್ರವೇ ಪರೀಕ್ಷೆ ಬರೆಯುವ ಕೇಂದ್ರ ಕೊಡಲು ಸಾಧ್ಯ ಎಂಬುದಾಗಿದೆ. ಇದು ಮೇಲುನೋಟಕ್ಕೆ ತಾಂತ್ರಿಕ ವಿಚಾರ ಎನಿಸಿದರು ಸ್ವಲ್ಪ ಒಳಹೊಕ್ಕಿ ನೋಡಿದರೆ ಇದೊಂದು ದೊಡ್ಡ ಪಿತೂರಿ. ಆನ್ಲೈನ್ ಕಾಲಘಟ್ಟದಲ್ಲಿ ಆನ್ಲೈನ್ ನಲ್ಲಿ ನಡೆಯುವ ಪರೀಕ್ಷೆಯನ್ನು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಕುಳಿತು ಬರೆಯಬಹುದು ಆದ್ದರಿಂದ ಜನಪದ ಸಾಹಿತ್ಯ ವಿಷಯದ K-SET ಪರೀಕ್ಷೆಯನ್ನು ಇತರೆ ವಿಷಯದಂತೆ ಎಲ್ಲಾ ಜಿಲ್ಲಾ ಕೇಂದ್ರದಲ್ಲೂ ಬರೆಯಲು ಅವಕಾಶ ಮಾಡಿಕೊಡಬೇಕು ಇನ್ನು ವಿದ್ಯಾರ್ಥಿಗಳ ಸಂಖ್ಯೆ ಅದು ಒಂದೇ ಒಂದು ಇದ್ದರೂ ಕೂಡ ಜನಪದ ಸಾಹಿತ್ಯ ತಾಯಿಬೇರಿನ ಮಹತ್ವ ಹೊಂದಿರುವುದರಿಂದ ಕಡ್ಡಾಯವಾಗಿ ಈ ವಿಷಯವನ್ನು ಕೈ ಬಿಡದೆ ಮುಂದುವರಿಸಲೇ ಬೇಕು. ಅಪ್ಪಿ ತಪ್ಪಿ ವಿದ್ಯಾರ್ಥಿಗಳೇ ಇಲ್ಲ ಎಂದರು ಕೂಡ ಉದ್ಯೋಗದಲ್ಲಿ ಜನಪದ ಸಾಹಿತ್ಯ ಓದಿದವರಿಗೆ ಮೊದಲ ಆದ್ಯತೆ ಕೊಡುವುದಾಗಿ ಘೋಷಿಸಿ ಜನಪದ ಸಾಹಿತ್ಯ ಮತ್ತು ಜಾನಪದ ಯೂನಿವರ್ಸಿಟಿ ಬೆಳವಣಿಗೆಗೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಿರಂತರವಾಗಿ ನಿರತವಾಗುವವರೆಗೆ ತಿಳುವಳಿಕೆ ಉಳ್ಳ ವ್ಯಕ್ತಿಗಳು ತಮ್ಮದೇ ಶೈಲಿಯಲ್ಲಿ ಸಂಬಂಧ ಪಟ್ಟವರನ್ನು ಒತ್ತಾಯ ಮಾಡುತ್ತಲೇ ಇರಬೇಕಾಗುತ್ತದೆ. ಇಡೀ ಜನಸಮುದಾಯವನ್ನು ಎಚ್ಚರಗೊಳಿಸುತ್ತಲೆ ಇರಬೇಕಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page