Friday, November 7, 2025

ಸತ್ಯ | ನ್ಯಾಯ |ಧರ್ಮ

ರಸ್ತೆಗಳ ದುಸ್ಥಿತಿ ವಿರೋಧಿಸಿ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಅವರ ಬೆಂಗಾವಲು ವಾಹನದ ಮೇಲೆ ದಾಳಿ

ಲಖಿಸರಾಯ್‌ ಎನ್ನುವಲ್ಲಿ ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರಿಗೆ ಕಹಿ ಅನುಭವ; ಗ್ರಾಮಸ್ಥರಿಂದ ಕಲ್ಲು, ಚಪ್ಪಲಿ, ಸಗಣಿ ಎಸೆದು ಪ್ರತಿಭಟನೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಗುರುವಾರ, ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರ ಬೆಂಗಾವಲು ವಾಹನದ ಮೇಲೆ ಲಖಿಸರಾಯ್‌ನ ಗ್ರಾಮಸ್ಥರು ಕಲ್ಲು, ಸಗಣಿ ಮತ್ತು ಚಪ್ಪಲಿಗಳನ್ನು ಎಸೆದು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.

ಹೊಂಡಗಳಿಂದ ತುಂಬಿರುವ ರಸ್ತೆಗಳು ಮತ್ತು ದೀರ್ಘಕಾಲದ ನಿರ್ಲಕ್ಷ್ಯಕ್ಕೆ ಒಳಗಾದ ನಾಗರಿಕ ಸಮಸ್ಯೆಗಳಿಂದ ಬೇಸತ್ತ ಜನರು ತಮ್ಮ ಆಕ್ರೋಶವನ್ನು ಪ್ರತಿಭಟನೆಯ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಮತ್ತು ಸ್ಥಳೀಯ ವರದಿಗಳು ಸೂಚಿಸುತ್ತಿವೆ.

ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ, ನಾಲ್ಕನೇ ಬಾರಿಗೆ ಲಖಿಸರಾಯ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿನ್ಹಾ ಅವರು ಖೋರ್ಜಾರಿ ಗ್ರಾಮದಲ್ಲಿನ ಮತಗಟ್ಟೆಗೆ ಭೇಟಿ ನೀಡಲು ಬಂದಾಗ, ಸ್ಥಳೀಯರು ಅವರ ಬೆಂಗಾವಲು ವಾಹನವನ್ನು ಸುತ್ತುವರೆದು “ಮುರ್ದಾಬಾದ್” ಎಂದು ಘೋಷಣೆಗಳನ್ನು ಕೂಗಿದರು. ವಾಹನವು ಮುಂದೆ ಸಾಗದಂತೆ ತಡೆದರು.

ತಮ್ಮ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಗೆ ಸೇರಿದ ಗೂಂಡಾಗಳು ಎಂದು ಸಿನ್ಹಾ ಆರೋಪಿಸಿದರು. ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಮತ್ತು ಆರ್‌ಜೆಡಿ ಗೂಂಡಾಗಳ ಎದೆಗಳ ಮೇಲೆ ಬುಲ್ಡೋಜರ್‌ಗಳನ್ನು ಏರಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಪೊಲೀಸರು ಈ ಘಟನೆಗೆ ರಾಜಕೀಯ ಆಯಾಮವಿಲ್ಲ ಎಂದು ಸ್ಪಷ್ಟಪಡಿಸಿದರು. ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ನೇರವಾಗಿ ಸಿನ್ಹಾ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಜಿಲ್ಲಾ ಡಿಐಜಿ ರಾಕೇಶ್ ಕುಮಾರ್ ತಿಳಿಸಿದರು. ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page