Friday, November 7, 2025

ಸತ್ಯ | ನ್ಯಾಯ |ಧರ್ಮ

ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಕಿಸಾನ್ ಸಂಘದ ಮನವಿ

ಹಾಸನ : ರಾಜ್ಯಾದ್ಯಂತ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲವಾಗಿ, ಹಾಸನ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಸದಸ್ಯರು ಮೆರವಣಿಗೆ ನಡೆಸಿ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಕಬ್ಬಿಗೆ ವೈಜ್ಞಾನಿಕ ಹಾಗೂ ನ್ಯಾಯಸಮ್ಮತ ಬೆಲೆ ನೀಡಬೇಕೆಂದು ಅವರು ಒತ್ತಾಯಿಸಿದರು.

ಜಿಲ್ಲಾ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ಸಣ್ಣೇಗೌಡ ಮಾತನಾಡಿ, “ವರ್ಷಪೂರ್ತಿ ಕಷ್ಟಪಟ್ಟು ಬೆಳೆಯುವ ರೈತರಿಗೆ ಸರಿಯಾದ ದರ ಸಿಗದೆ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈಗಾಗಲೇ ನಡೆಯುತ್ತಿರುವ ಪ್ರತಿಭಟನೆಗಳತ್ತ ಕಣ್ಣು ಮುಚ್ಚಿ ಕುಳಿತಿದೆ, ತಕ್ಷಣ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸುವ ಮೂಲಕ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ ಆದುದರಿಂದ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕವೂ ಸರ್ಕಾರಕ್ಕೆ ಹಾಸನ ಜಿಲ್ಲಾ ಭಾರತೀಯ ಕಿಸಾನ್ ಸಂಘ ಮನವಿ ಪತ್ರ ಸಲ್ಲಿಸುತ್ತಿದೆ ಎಂದರು. ಪ್ರಸ್ತುತ ಪ್ರತಿ ಟನ್ ಕಬ್ಬಿಗೆ 3000 ನೀಡಲಾಗುತ್ತಿದ್ದು, ಬೆಳೆ ವೆಚ್ಚ ಮತ್ತು ಕೂಲಿ ಖರ್ಚುಗಳ ಹಿನ್ನೆಲೆಯಲ್ಲಿ ಇದು ಅತ್ಯಂತ ಕಡಿಮೆ ದರ ಎಂದು ಅವರು ಅಭಿಪ್ರಾಯಪಟ್ಟರು. ಮಹಾರಾಷ್ಟ್ರದಲ್ಲಿ 2900 ನೀಡಲಾಗುತ್ತಿದೆ. ಕರ್ನಾಟಕದಲ್ಲೂ ಕನಿಷ್ಠ 2500(P+SP) ನಿಗದಿಪಡಿಸಬೇಕು ಎಂದು ಕಿಸಾನ್ ಸಂಘದ ಪ್ರತಿನಿಧಿಗಳು ಒತ್ತಾಯಿಸಿದರು. ಸರ್ಕಾರ ಕಬ್ಬು ನಿಯಂತ್ರಣ ಮಂಡಳಿಯ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಸಮಾನ ದರ ನಿಗದಿಪಡಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲಪ್ಪ, ಕುಮಾರಸ್ವಾಮಿ, ರಾಜು, ಚಂದ್ರಗೌಡ, ಸರೋಜಮ್ಮ, ಕೃಷ್ಣ ಕುಮಾರ್ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page