Monday, November 10, 2025

ಸತ್ಯ | ನ್ಯಾಯ |ಧರ್ಮ

ಹಿಂದುತ್ವವಾದಿಗಳು ಬಸವಣ್ಣನನ್ನು ವಿಶ್ವಗುರುವಾಗಲು ಬಿಡುತ್ತಿಲ್ಲ: ಜ್ಞಾನಪ್ರಕಾಶ ಸ್ವಾಮೀಜಿ

ಬಸವ-ಅಂಬೇಡ್ಕರ ಅವರ ಬೀಜವನ್ನು ಮನೆ ಮನದಲ್ಲಿ ಭಿತ್ತಿದರೆ ಹಿಂದುತ್ವದ ಬೀಜ ನಾಶವಾಗುವುದು. ಆದರೆ ಹಿಂದುತ್ವವಾದಿಗಳು ಬಸವಣ್ಣನನ್ನು ವಿಶ್ವಗುರುವನ್ನಾಗಿ ಮಾಡಲು ಬಿಡುತ್ತಿಲ್ಲ ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಭಾನುವಾರ ಕೂಡಲಸಂಗಮ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಬಸವ-ಭೀಮ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಂಧುತ್ವಕ್ಕೆ ಬೆಂಕಿ ಹಚ್ಚಿದ ಹಿಂದೂತ್ವ ಬೇಡ, ಬಂಧುತ್ವ ಇಲ್ಲದ ಹಿಂದೂತ್ವ ದೇಶದ ಭೂಪಟವು ಅಪಾಯಕಾರಿ. ಬಂಧುತ್ವದ ಭೂಮಿಯಲ್ಲಿ ಹಿಂದುತ್ವ ಬಿತ್ತಲು ಸಾಧ್ಯವಿಲ್ಲ, ಬಿತ್ತಲು ಬಿಡುವುದಿಲ್ಲ. ಹಿಂದುತ್ವದಲ್ಲಿ ಏನು ಇಲ್ಲ ಅದು ಕೇವಲ ಮತಬ್ಯಾಂಕ ಆಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜ್ಞಾನಪ್ರಕಾಶ ಸ್ವಾಮಿಗಳು ಹೇಳಿದರು.

ಮನುವಾದಕ್ಕೆ ಬೆಂಕಿ ಹಚ್ಚಿ, ಮಟ್ಟಹಾಕಿದ ಕ್ರಾಂತಿ ಭೂಮಿ ಕೂಡಲಸಂಗಮದಲ್ಲಿ ಬಸವ-ಭೀಮ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅರ್ಥಪೂರ್ಣ. ಬಸವ-ಭೀಮರ ಸಂಗಮವಾದರೆ ವಿಧಾನಸೌಧ, ಕೆಂಪುಕೋಟೆ ಬಸವ-ಭೀಮರ ಪಾಲಾಗುವುದು. ರಾಜ್ಯದ ರಾಜಕೀಯ, ಆರ್ಥಿಕ, ಸಾಮಾಜಿಕ ಬದಲಾವಣೆಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಬಸವಣ್ಣನ ಅನುಯಾಯಿಗಳು ಹಿಂದೂತ್ವದ ಬೀಜ ನಾವು ಅಲ್ಲ, ಬಂಧುತ್ವದ ಬೀಜಗಳು ಎಂದು ಪ್ರತಿಜ್ಞೆ ಮಾಡಿ. ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ವಹಿಸಿ ಮಾತನಾಡಿ, ಭೇದರಹಿತ ಸಮಾಜ ಕಟ್ಟುವುದು ಇಂದಿನ ತುರ್ತು ಅಗತ್ಯ. ಧರ್ಮಕ್ಕೆ ಮಾನವೀಯತೆ ಅಗತ್ಯ. ದಯೆ, ಜನಕಾಳಜಿ, ಸಮಾನತೆಯಂಥ ತತ್ವಗಳ ನೆಲೆಗಟ್ಟಿನ ಮೇಲೆ ಬಸವಣ್ಣನ ವಿಚಾರಗಳಿದ್ದು ಅದರ ಅಳವಡಿಕೆಯೆ ಭಾರತದ ಸಂವಿಧಾನ ಎಂದು ಹೇಳಿದರು.

ಬಸವ-ಭೀಮರ ವಿಚಾರಧಾರೆಯ ಬಂಧುತ್ವ ಅನುಕರಣೆ ಇರಲಿ. ಅಂದಾಗ ಸಮಾನತೆಯ ಸೌಖ್ಯ ಸಮಾಜ ನಿರ್ಮಾಣ ಆಗಲು ಸಾಧ್ಯ. ಈ ಅಭಿಯಾನ ರಾಜ್ಯಾದ್ಯಂತ ನಡೆಯುತ್ತದೆ. ಜನಸ್ಪಂದನೆ ಇದ್ದರೆ ಸಾಕು, ಮೂಲಭೂತವಾದಿಗಳ ಮಟ್ಟಹಾಕಲು ಮುಂದಾಗೋಣ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page