Friday, November 14, 2025

ಸತ್ಯ | ನ್ಯಾಯ |ಧರ್ಮ

ಮಕ್ಕಳಿಗೆ ಮಾರ್ಗದರ್ಶಕರಾಗಬೇಕು: ಡಾ. ಫಾ. ಜೈಸ್ ವಿ. ಥಾಮಸ್

“ಮಕ್ಕಳು ಭವಿಷ್ಯವನ್ನು ಬೆಳಗುವ ಪ್ರಜಾದೀಪಗಳು. ಅವರ ಕನಸುಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆ ಹೊರತು ಬಲವಂತದ ನಿಯಂತ್ರಣ ಮಾಡಬಾರದು” ಎಂದು ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಹಣಕಾಸು ಅಧಿಕಾರಿ (ಪ್ರಭಾರ) ಡಾ. ಫಾ. ಜೈಸ್ ವಿ. ಥಾಮಸ್ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಜಯಂತಿಯನ್ ವಿಸ್ತರಣಾ ಸೇವೆಗಳ ಅಡಿಯಲ್ಲಿ ‘ಸಾಮಾಜಿಕ ಚಟುವಟಿಕೆಗಳ ಸಮಿತಿ’(ಸಿಎಸ್ಎ) ವತಿಯಿಂದ ಬೆಂಗಳೂರಿನ ವಲಸೆ ಕಾರ್ಮಿಕರ ಮಕ್ಕಳಿಗಾಗಿ ಆಯೋಜಿಸಲಾಗಿದ್ದ “ಬಾಲೋತ್ಸವ-2025”ರ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಅನೇಕ ಪ್ರಾಜ್ಞರು ತಿಳಿಸಿರುವಂತೆ, ಮಕ್ಕಳು ಮುಕ್ತ ಮನಸುಳ್ಳ ಕ್ರಿಯಾಶೀಲರು ಹಾಗೂ ಕನಸುಗಾರರು. ಅವರನ್ನು ತಂದೆತಾಯಿಗಳು ಹಾಗೂ ಶಿಕ್ಷಕರು ತಮ್ಮದೇ ಕನಸುಗಳನ್ನು ಬಲವಂತವಾಗಿ ಹೇರುವುದಕ್ಕಿಂತ, ಮಕ್ಕಳೊಳಗೆ ಇರುವ ಆಸಕ್ತಿ ಹಾಗೂ ಅಭಿರುಚಿಯನ್ನು ಗುರ್ತಿಸಿ ಪ್ರೋತ್ಸಾಹಿಸಬೇಕಾಗಿದೆ. ಮಕ್ಕಳು ಹಾರುವ ಹಕ್ಕಿಗಳಂತೆ ಆಕಾಶದೆತ್ತರಕ್ಕೆ ಏರಬಲ್ಲ ಶಕ್ತಿಯುಳ್ಳವರಾಗಿದ್ದು, ಅವರನ್ನು ಬಲವಂತರ ಪಂಜರಗಳಲ್ಲಿ ಬಂಧಿಸಬಾರದು. ಮಕ್ಕಳ ಕನಸುಗಳೆಂಬ ಸಸಿಗಳಿಗೆ ನೀರು-ಗೊಬ್ಬರ ಹಾಕಿ ಮಾರ್ಗದರ್ಶನ ಮಾಡಿದರೆ ಇಡೀ ಜಗತ್ತಿಗೆ ಅವರು ಬಹುದೊಡ್ಡ ಕಾಣಿಕೆಯಾಗುತ್ತಾರೆ ಎಂದರು.

ಎಲ್ಲಾ ಪ್ರದೇಶದ ಮಕ್ಕಳೂ ಸಮಾನರೇ. ದೊಡ್ಡವರಾದ ನಾವು ಮಾಡಿಕೊಂಡಿರುವ ಸಣ್ಣತನದ ಭಿನ್ನಭೇದಗಳನ್ನು ಅವರೊಳಗೆ ಬಿತ್ತಬಾರದು. ಪ್ರತೀ ಮಕ್ಕಳನ್ನೂ ಅವರಂತೆ ಆಗಲು ಅವಕಾಶ ಮಾಡಿಕೊಡಬೇಕು. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡಬೇಕು. ಮಕ್ಕಳು ಕಷ್ಟದಿಂದ ಕಲಿಯಬಾರದು. ಆಟವಾಡುತ್ತಾ, ಕುಣಿದಾಡುತ್ತಾ, ನಲಿಯುತ್ತಾ ಕಲಿಯಬೇಕು. ಇದರಿಂದ ಅವರ ದೇಹ ಮತ್ತು ಮನಸುಗಳೆರಡೂ ವಿಕಾಸವಾಗುತ್ತಾ ಹೋಗುತ್ತವೆ ಎಂದು ತಿಳಿಸಿದರು.

ವಿವಿಯ ಸಾಮಾಜಿಕ ಚಟುವಟಿಕೆಗಳ ಸಮಿತಿ’(ಸಿಎಸ್ಎ)ಯು ‘ಸಮುದಾಯ ಶಿಕ್ಷಣ ಕಾರ್ಯಕ್ರಮ’ದ ಭಾಗವಾಗಿ ಸಮೀಪದ ನಾರಾಯಣಪುರ ಸರ್ಕಾರಿ ಶಾಲೆ, ಕೊತ್ತನೂರು ಸರ್ಕಾರಿ ಶಾಲೆಯ ಮಕ್ಕಳು ಹಾಗೂ ವಲಸೆ ಕಾರ್ಮಿಕರ ಮಕ್ಕಳಿಗಾಗಿ ಹಲವು ತಿಂಗಳುಗಳಿಂದ ‘ಕೌಶಲ್ಯ ಶೋಧನೆ-ಬೋಧನೆ-ಸಾಧನೆ’ ಕುರಿತು ಶೈಕ್ಷಣಿಕ ಸಂವಾದ ಹಾಗೂ ಪ್ರಾಯೋಗಿಕ ತರಬೇತಿಯನ್ನು ಆಯೋಜಿಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ.
ಮಕ್ಕಳ ದಿನಾಚರಣೆ ಕಾರ್ಯಕ್ರಮದ ಭಾಗವಾಗಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನೂ ಆಯೊಜಿಸಿ, ವಿಜೇತರರಿಗೆ ಬಹುಮಾನವನ್ನು ನೀಡಲಾಯಿತು.
ಬಹುಮಾನ ವಿಜೇತರು:ಬಾಲ್ ಪಾಸಿಂಗ್: 1ನೇ ಬಹು – ಆದಿತ್ಯ; 2ನೇ – ಚಂದ್ರಿಕಾ; 3ನೇ – ಚೇತನ್; ಬಲೂನ್ ರೇಸ್: 1ನೇ – ಭವಾನಿ; 2ನೇ – ಕುಶಾಲ್; 3ನೇ – ಕಾಜಲ್; ಕಪ್ ಕ್ಯಾಸಲ್: 1ನೇ – ಭವಾನಿ; 2ನೇ – ಸೌಮ್ಯ; 3ನೇ – ಇರ್ಫಾನ್; ನಿಂಬೆ ಮತ್ತು ಚಮಚ (ಹಿರಿಯರು): 1ನೇ – ಸಮರ್ಥ; 2ನೇ – ಕೆ. ವರ್ಷಿಣಿ; 3ನೇ – ಚಂದನ; ನಿಂಬೆ ಮತ್ತು ಚಮಚ (ಕಿರಿಯರು): 1ನೇ – ಕೀರ್ತನಾ; 2ನೇ – ವಿ. ವರ್ಷಿಣಿ; 3ನೇ – ತ್ರಿವೇಣಿ.

ಕಾರ್ಯಕ್ರಮದ  ಸಂಯೋಜಕರಾದ ಡಾ. ಸರಸ್ವತಿ ಮತ್ತು ಡಾ. ಸೋನಾ ಕೆ. ವಿ., ಸಾಮಾಜಿಕ ಚಟುವಟಿಕೆಗಳ ಸಮಿತಿ’(ಸಿಎಸ್ಎ) ಸಂಯೋಜಕರಾದ ಶ್ರೀಮತಿ ಅಶ್ವಿತಾ, ಡಾ. ವಿನೋದ್ ಬಾಬುರಾವ್ ಎಂ, ಮತ್ತು ಡಾ. ಬೈರಪ್ಪ ಎಂ. ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಮಿತಿಯ ವಿದ್ಯಾರ್ಥಿ ಸಂಚಾಲಕರಾದ ಹರ್ಷಿತ್, ಪ್ರಿಯಾಂಕ ಹಾಗೂ ಸಮಿತಿಯ ಸ್ವಯಂಸೇವಕರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page