Thursday, November 20, 2025

ಸತ್ಯ | ನ್ಯಾಯ |ಧರ್ಮ

ಮಸೂದೆಗಳ ಅನುಮೋದನೆಗೆ ರಾಷ್ಟ್ರಪತಿ, ರಾಜ್ಯಪಾಲರಿಗೆ ಗಡುವು ವಿಧಿಸಲಾಗದು: ಸುಪ್ರೀಂ ಕೋರ್ಟ್

ರಾಜ್ಯ ವಿಧಾನಸಭೆಗಳು ಅನುಮೋದಿಸಿದ ಮಸೂದೆಗಳಿಗೆ ಒಪ್ಪಿಗೆ (Clear Bills) ನೀಡಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ (Governors) ಗಡುವು ವಿಧಿಸಬಹುದೇ ಎಂಬುದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಯವರು ಕೇಳಿದ್ದ 14 ಪ್ರಶ್ನೆಗಳ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತನ್ನ ಅಭಿಪ್ರಾಯವನ್ನು ಬಹಿರಂಗಪಡಿಸಿದೆ.

ಬಾಕಿ ಉಳಿದಿರುವ ಮಸೂದೆಗಳ ಅನುಮೋದನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವು ವಿಧಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಎ.ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು ರಾಷ್ಟ್ರಪತಿಯವರ ನಿವೇದನೆಯ ಕುರಿತು ಸೆಪ್ಟೆಂಬರ್ 11 ರಿಂದ 10 ದಿನಗಳ ಕಾಲ ವಿಚಾರಣೆ ನಡೆಸಿ ತನ್ನ ಅಭಿಪ್ರಾಯವನ್ನು ಕಾಯ್ದಿರಿಸಿತ್ತು. ಅದರಂತೆ ಇಂದು ತೀರ್ಪು ಪ್ರಕಟಿಸಿದೆ.

ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವು ವಿಧಿಸುವುದು ಎಂದರೆ ಸಂವಿಧಾನಾತ್ಮಕ ಅಧಿಕಾರಗಳನ್ನು ಧಿಕ್ಕರಿಸಿದಂತಾಗುತ್ತದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಮಸೂದೆಗಳನ್ನು ದೀರ್ಘಕಾಲದವರೆಗೆ ಬಾಕಿ ಇಡುವುದು ಸರಿಯಲ್ಲ ಎಂದೂ ಅಭಿಪ್ರಾಯಪಟ್ಟಿದೆ.

ಕಾರಣ ನೀಡದೆ ರಾಜ್ಯಪಾಲರು ಮಸೂದೆಗಳನ್ನು ಮರಳಿ ಕಳುಹಿಸಲು ಸಾಧ್ಯವಿಲ್ಲ ಎಂದು ತಿಳಿಸಿತು. ರಾಜ್ಯಪಾಲರು ಮಸೂದೆಗಳನ್ನು ಅನುಮೋದಿಸುವುದು, ರಾಷ್ಟ್ರಪತಿಗೆ ಕಳುಹಿಸುವುದು ಅಥವಾ ವಿಧಾನಸಭೆಗೆ ಮರಳಿ ಕಳುಹಿಸುವುದು ಮಾತ್ರ ಮಾಡಬೇಕು ಎಂದು ವಿವರಿಸಿದೆ. ರಾಜ್ಯಪಾಲರು ಅನಿಯಮಿತ ಅಧಿಕಾರಗಳನ್ನು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ರಾಜ್ಯಪಾಲರು ಕಳುಹಿಸುವ ಮಸೂದೆಗಳ ಕುರಿತು ರಾಷ್ಟ್ರಪತಿಯವರಿಗೆ ನಿರ್ದಿಷ್ಟ ಸಮಯದ ಗಡುವು ವಿಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಸಂಚಲನ ಮೂಡಿಸುವ ತೀರ್ಪು ನೀಡಿತ್ತು. ರಾಜ್ಯಪಾಲರು ಕಳುಹಿಸುವ ಮಸೂದೆಗಳ ಮೇಲೆ ರಾಷ್ಟ್ರಪತಿಯವರು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಇಲ್ಲದಿದ್ದರೆ, ವಿಳಂಬಕ್ಕೆ ಕಾರಣವನ್ನು ರಾಜ್ಯಕ್ಕೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಆದೇಶಿಸಿತ್ತು.

ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಕ್ರಿಯಿಸಿ, ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ? ಎಂದು ಪ್ರಶ್ನಿಸಿದ್ದರು. ಸಂವಿಧಾನದಲ್ಲಿ ಅಂತಹ ನಿಯಮವೇ ಇಲ್ಲದಿರುವಾಗ ಕೋರ್ಟ್ ಹೇಗೆ ತೀರ್ಪು ನೀಡಿತು? ಎಂದು ಪ್ರಶ್ನಿಸಿದ್ದರು.

“ಸಂವಿಧಾನದ ಆರ್ಟಿಕಲ್ 142 ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನ್ನದೇ ಆದ ಅಧಿಕಾರದಿಂದ ರಾಷ್ಟ್ರಪತಿ ಅಥವಾ ರಾಜ್ಯಪಾಲರ ಅಧಿಕಾರಗಳನ್ನು ಹೇಗೆ ಬದಲಾಯಿಸಬಹುದು? ಸುಪ್ರೀಂ ಕೋರ್ಟ್‌ಗೆ ಇರುವ ಸಂಪೂರ್ಣ ಅಧಿಕಾರಗಳನ್ನು (Plenary Powers) ರಾಜ್ಯಗಳು ಕೇಂದ್ರದ ವಿರುದ್ಧ ದುರುಪಯೋಗಪಡಿಸಿಕೊಳ್ಳುತ್ತಿವೆಯೇ?” ಇಂತಹ ಹಲವು ಸಂವಿಧಾನದ ಆರ್ಟಿಕಲ್ 143(1) ರ ಅಡಿಯಲ್ಲಿ ಪ್ರಶ್ನೆಗಳನ್ನು ಕೇಳಿ, ಈ ಪ್ರಶ್ನೆಗಳ ಬಗ್ಗೆ ನ್ಯಾಯಾಲಯವು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಕೋರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page