Friday, November 21, 2025

ಸತ್ಯ | ನ್ಯಾಯ |ಧರ್ಮ

₹7.11 ಕೋಟಿ ದರೋಡೆ: ಪೊಲೀಸ್ ಕೈವಾಡದ ಶಂಕೆ; ಸಿಎಂಎಸ್‌ ಸಿಬ್ಬಂದಿ ವರ್ತನೆ ಕುರಿತು ಅನುಮಾನ

ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಹಾಡಹಗಲೇ ನಡೆದ ₹7.11 ಕೋಟಿ ದರೋಡೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಈ ಕೃತ್ಯದಲ್ಲಿ ಪೊಲೀಸರ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಗೋವಿಂದಪುರ ಠಾಣೆಯ ಕಾನ್ಸ್‌ಟೆಬಲ್‌ ಅಣ್ಣಪ್ಪ ನಾಯಕ ಎನ್ನುವವನನ್ನು ಗುರುವಾರ ವಶಕ್ಕೆ ಪಡೆದು ತನಿಖಾ ತಂಡ ವಿಚಾರಣೆ ನಡೆಸುತ್ತಿದೆ.

ದರೋಡೆಯಲ್ಲಿ ಭಾಗಿಯಾಗಿರುವ ಸಿಎಂಎಸ್‌ ಏಜೆನ್ಸಿಯ ಮಾಜಿ ಉದ್ಯೋಗಿಯೊಂದಿಗೆ ಕಾನ್ಸ್‌ಟೆಬಲ್‌ ಅಣ್ಣಪ್ಪ ನಾಯಕ ನಿರಂತರ ಸಂಪರ್ಕ ಹೊಂದಿರುವುದು ತನಿಖೆಯಲ್ಲಿ ಬಯಲಾಗಿದೆ. ತಾಂತ್ರಿಕ ಅಂಶಗಳ ಆಧಾರದಲ್ಲಿ ದೂರವಾಣಿ ಕರೆಗಳ ವಿವರ (CDR) ಪರಿಶೀಲಿಸಿದಾಗ ಅನುಮಾನಾಸ್ಪದ ಕರೆಗಳ ವಿವರಗಳು ಲಭ್ಯವಾಗಿದ್ದು, ಈ ಸುಳಿವು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಧನ ಮತ್ತು ಹಣ ವಸೂಲಿ ಸವಾಲು

ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಶಂಕಿತರು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ. ಸಿಕ್ಕಿಬಿದ್ದಿರುವ ಶಂಕಿತರು ಮತ್ತು ತಲೆಮರೆಸಿಕೊಂಡಿರುವವರು ಬೆಂಗಳೂರಿನ ಕಲ್ಯಾಣನಗರ ನಿವಾಸಿಗಳು ಎಂದು ತಿಳಿದುಬಂದಿದೆ. ಸಿಸಿಟಿವಿ ಜಾಡು ಹಿಡಿದು ಹೊರಟ ತಂಡವು ಆಂಧ್ರ ಪ್ರದೇಶದ ಚಿತ್ತೂರಿನ ಗುಡಿಪಾಲಂ ಗ್ರಾಮದ ಸಮೀಪ ಕಾರನ್ನು ವಶಕ್ಕೆ ಪಡೆದಿದೆ. ಆರೋಪಿಗಳು ಕಾರನ್ನು ನಿಲ್ಲಿಸಿ ತಮಿಳುನಾಡಿನ ವೆಲ್ಲೂರು ಮಾರ್ಗವಾಗಿ ಪರಾರಿಯಾಗಿರುವ ಶಂಕೆಯಿದ್ದು, ಶೋಧ ಕಾರ್ಯ ಮುಂದುವರಿದಿದೆ.

ದರೋಡೆಕೋರರು ದೋಚಿರುವ ₹7.11 ಕೋಟಿ ನಗದನ್ನು ಜಪ್ತಿ ಮಾಡುವುದು ಸವಾಲಾಗಿ ಪರಿಣಮಿಸಿದ್ದು, ಹಣದ ಪತ್ತೆಗೆ ಪ್ರತ್ಯೇಕ ತಂಡ ಶೋಧ ಕಾರ್ಯ ನಡೆಸುತ್ತಿದೆ. ಈ ಬಗ್ಗೆ ಪೊಲೀಸರು ಯಾವುದೇ ಖಚಿತ ಮಾಹಿತಿ ನೀಡಿಲ್ಲ.

ಸಿಎಂಎಸ್‌ ಸಿಬ್ಬಂದಿಯ ಮೇಲೆ ಅನುಮಾನ ಏಕೆ?

ದರೋಡೆಕೋರರಿಗೆ ಸಿಎಂಎಸ್‌ ಏಜೆನ್ಸಿಯ ಸಿಬ್ಬಂದಿ ಯಾವುದೇ ಪ್ರತಿರೋಧ ವ್ಯಕ್ತಪಡಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಚಾಲಕ ಬಿನೋದ್‌ ಕುಮಾರ್‌, ಗನ್‌ಮ್ಯಾನ್‌ಗಳಾದ ರಾಜು ಮತ್ತು ತಮ್ಮಯ್ಯ, ಹಾಗೂ ಕಸ್ಟೋಡಿಯನ್‌ ಅಫ್ತಾಬ್‌ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

“ವಾಹನದಲ್ಲಿದ್ದ ರಕ್ಷಣಾ ವ್ಯವಸ್ಥೆ ಹೇಗಿತ್ತು? ದುಷ್ಕರ್ಮಿಗಳನ್ನು ಕಂಡ ನಂತರ ಅನುಮಾನ ಏಕೆ ಬರಲಿಲ್ಲ? ತಕ್ಷಣ ಪೊಲೀಸರಿಗೆ ಏಕೆ ಮಾಹಿತಿ ನೀಡಿಲ್ಲ?” ಎಂಬ ಸರಣಿ ಪ್ರಶ್ನೆಗಳನ್ನು ಮುಂದಿಟ್ಟು ವಿಚಾರಣೆ ನಡೆಸಲಾಗುತ್ತಿದೆ.

ಟೋಲ್‌ ತಪ್ಪಿಸಿ ಪಲಾಯನ ಮತ್ತು ಡಿವಿಆರ್‌ ಕಳವು

ಆರೋಪಿಗಳು ದರೋಡೆ ಮಾಡಿದ ಬಳಿಕ ನಕಲಿ ನಂಬರ್‌ ಪ್ಲೇಟ್‌ ಹೊಂದಿದ್ದ ಕಾರಿನಲ್ಲಿ ಹಳೆಮದ್ರಾಸ್‌ ರಸ್ತೆ ಮೂಲಕ ಭಟ್ಟರಹಳ್ಳಿ ಮಾರ್ಗವಾಗಿ ಸಾಗಿದ್ದಾರೆ.

ಹೊಸಕೋಟೆ ಟೋಲ್‌ ಮೂಲಕ ಸಂಚರಿಸಿದರೆ ಸಿಕ್ಕಿಬೀಳುವ ಭಯದಿಂದ ಟೋಲ್‌ ಗೇಟ್‌ಗಳನ್ನು ತಪ್ಪಿಸಲು ಪರ್ಯಾಯ ರಸ್ತೆ ಮಾರ್ಗಗಳನ್ನು ಬಳಸಿ, ಚಿತ್ತೂರು ಮತ್ತು ತಿರುಪತಿವರೆಗೂ ಮಾರ್ಗ ಬದಲಿಸಿದ್ದಾರೆ.

ಆರೋಪಿಗಳು ಸಿಎಂಎಸ್‌ ವಾಹನದಲ್ಲಿದ್ದ ಸಿಸಿಟಿವಿ ಮತ್ತು ಜಿಪಿಎಸ್‌ ಭದ್ರತೆಯನ್ನು ಅರಿತುಕೊಂಡು, ತಾವು ಸೆರೆಯಾಗಬಾರದೆಂದು ನಿರ್ಧರಿಸಿ, ಡಿವಿಆರ್‌ (DVR) ಸಮೇತ ಪರಾರಿಯಾಗಿದ್ದಾರೆ.

ಪ್ರತ್ಯೇಕ ತಂಡಗಳ ರಚನೆ

ಹಾಡಹಗಲೇ ನಡೆದ ಈ ದರೋಡೆ ಪ್ರಕರಣವನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಬಂಧಿಸಲು ನಗರ ಪೊಲೀಸರಿಗೆ ಗಡುವು ನೀಡಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ನಾಲ್ವರು ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, 50ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಸಿಸಿಬಿ (CCB) ಯ ಪ್ರತ್ಯೇಕ ತಂಡವೂ ನೆರವು ನೀಡುತ್ತಿದೆ.

ನಕಲಿ ನಂಬರ್‌ ಪ್ಲೇಟ್‌ ಮಾಲೀಕನ ಆತಂಕ

ದರೋಡೆಕೋರರು ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರಿಗೆ ಮಾರುತಿ ಕಾರಿನ ನೋಂದಣಿ ಸಂಖ್ಯೆಯಾದ ಕೆಎ 03 ಎನ್‌ಸಿ 8052 ಅನ್ನು ಬಳಸಿದ್ದರು. ಈ ನಂಬರ್‌ನ ಅಸಲಿ ಮಾಲೀಕರಾದ ಇಂದಿರಾನಗರ ನಿವಾಸಿ ಗಂಗಾಧರ್‌ ಅವರು, ತಮ್ಮ ಕಾರಿನ ನಂಬರ್‌ಪ್ಲೇಟ್‌ ದುರ್ಬಳಕೆಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. “ದರೋಡೆಕೋರರು ನನ್ನ ಕಾರಿನ ನಂಬರ್‌ಪ್ಲೇಟ್‌ ಅನ್ನು ಹೇಗೆ ಬಳಸಿದರು ಮತ್ತು ಅದು ಅವರಿಗೆ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page