Friday, November 21, 2025

ಸತ್ಯ | ನ್ಯಾಯ |ಧರ್ಮ

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ; ಟೆಸ್ಟ್ ಪಂದ್ಯಕ್ಕೆ ಅಡಚಣೆ, ಭಾರತದಲ್ಲೂ ಕಂಪನ

ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ (Bangladesh) ಪ್ರಬಲ ಭೂಕಂಪ (Earthquake) ಸಂಭವಿಸಿದೆ. ರಾಜಧಾನಿ ಢಾಕಾದಲ್ಲಿ (Dhaka) ಶುಕ್ರವಾರ ಬೆಳಿಗ್ಗೆ 10:08 ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 5.5 ರಷ್ಟಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (US Geological Survey) ತಿಳಿಸಿದೆ.

ಢಾಕಾದಿಂದ 50 ಕಿಲೋಮೀಟರ್ ದೂರದಲ್ಲಿರುವ ನರ್ಸಿಂಗ್ಡಿಯಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಗುರುತಿಸಲಾಗಿದ್ದು, ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿ ಹೇಳಿದೆ.

ಈ ಭೂಕಂಪನದ ಕಾರಣದಿಂದಾಗಿ ಢಾಕಾದಲ್ಲಿ ನಡೆಯುತ್ತಿದ್ದ ಬಾಂಗ್ಲಾದೇಶ ಮತ್ತು ಐರ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಅಡಚಣೆಯಾಯಿತು. ಕಂಪನದ ಕಾರಣ ಕೆಲವು ನಿಮಿಷಗಳ ಕಾಲ ಪಂದ್ಯವನ್ನು ನಿಲ್ಲಿಸಲಾಗಿತ್ತು. ನಂತರ ಪುನರಾರಂಭಗೊಂಡಿತು. ಆದಾಗ್ಯೂ, ಈ ಪ್ರಾಕೃತಿಕ ವಿಕೋಪದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇದೇ ವೇಳೆ, ಈ ಭೂಕಂಪನದ ಕಂಪನಗಳು ಭಾರತದಲ್ಲಿಯೂ (India) ಅನುಭವಕ್ಕೆ ಬಂದಿವೆ. ಕೋಲ್ಕತ್ತಾ (Kolkata) ಸೇರಿದಂತೆ ಈಶಾನ್ಯ ಭಾರತದ (Northeast India) ಹಲವು ಭಾಗಗಳಲ್ಲಿ ಕಂಪನಗಳು ದಾಖಲಾಗಿವೆ. ಕೋಲ್ಕತ್ತಾದಲ್ಲಿ ಬೆಳಿಗ್ಗೆ 10:10 ರ ಸುಮಾರಿಗೆ ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಬಂಗಾಳದ ಕೂಚ್‌ಬೆಹಾರ್, ದಕ್ಷಿಣ ಮತ್ತು ಉತ್ತರ ದಿನಾಜ್‌ಪುರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಂಪನಗಳು ಸಂಭವಿಸಿವೆ. ಗುವಾಹಟಿ, ಅಗರ್ತಲಾ ಮತ್ತು ಶಿಲ್ಲಾಂಗ್‌ನಂತಹ ನಗರಗಳಲ್ಲಿಯೂ ಭೂಮಿ ಕಂಪಿಸಿದೆ. ಈ ಭೂಕಂಪನದಿಂದಾಗಿ ಜನರು ತೀವ್ರ ಭಯಭೀತರಾಗಿ, ತಕ್ಷಣವೇ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page